ಬೆಂಗಳೂರು: ಯಾವುದೇ ಹಬ್ಬ ಇರಲಿ ರಾಕಿಂಗ್ ಸ್ಟಾರ್ ಯಶ್-ರಾಧಿಕಾ ಪಂಡಿತ್ ದಂಪತಿ ಮನೆಯಲ್ಲಿ ತುಂಬ ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ. ಇವರಿಬ್ಬರೂ ಹೊಸ ಉಡುಗೆ ತೊಟ್ಟು, ತಮ್ಮ ಇಬ್ಬರು ಮುದ್ದಾದ ಮಕ್ಕಳಿಗೂ ಚೆಂದನೆಯ ಸಾಂಪ್ರದಾಯಿಕ ಉಡುಪು ತೊಡಿಸಿ, ಎಲ್ಲರೂ ಒಟ್ಟಾಗಿ ಹಬ್ಬ ಆಚರಣೆ ಮಾಡುತ್ತಾರೆ. ಹಾಗೇ ಸೋಷಿಯಲ್ ಮೀಡಿಯಾಗಳಲ್ಲಿ ಫೋಟೋಗಳನ್ನೂ ಪೋಸ್ಟ್ ಮಾಡುತ್ತಾರೆ.
ಅದರಂತೆ ಈಗ ನಟ ಯಶ್ ಮನೆಯಲ್ಲಿ ದೀಪಾವಳಿ ಹಬ್ಬವನ್ನೂ ಅದ್ದೂರಿಯಾಗಿ ಆಚರಿಸಲಾಗಿದೆ. ಈ ಫೋಟೋಗಳನ್ನು ಯಶ್ ಮತ್ತು ರಾಧಿಕಾ ಇಬ್ಬರೂ ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮಕ್ಕಳಾದ ಯಥರ್ವ ಮತ್ತು ಐರಾ ಜತೆ ಸೇರಿ ಪಟಾಕಿ ಹೊಡೆಯುತ್ತಿರುವ ಫೋಟೋ ಶೇರ್ ಮಾಡಿದ ನಟ ಯಶ್ ‘ಈ ಕ್ಷಣಗಳೆಲ್ಲ ಅತ್ಯಂತ ಮುಖ್ಯವಾದವು’ ಎಂದು ಕ್ಯಾಪ್ಷನ್ ಬರೆದಿದ್ದಾರೆ. ಹಾಗೇ, ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದಾರೆ. ಇನ್ನು ರಾಧಿಕಾ ಪಂಡಿತ್ ಕೂಡ ಇನ್ಸ್ಟಾಗ್ರಾಂನಲ್ಲಿ ದೀಪಾವಳಿ ಆಚರಣೆಯ ನಾಲ್ಕು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು ‘ಮುಂಬರುವ ದಿನಗಳು ಎಲ್ಲರಲ್ಲೂ ಸಂತೋಷ ಮತ್ತು ಸುಖ ತರಲಿ. ಹ್ಯಾಪಿ ದೀಪಾವಳಿ’ ಎಂದಿದ್ದಾರೆ.
ರಾಧಿಕಾ ಪಂಡಿತ್-ಯಶ್ ಮನೆಯಲ್ಲಿ ಗಣೇಶ ಚತುರ್ಥಿ, ವರಮಹಾಲಕ್ಷ್ಮೀ ಹಬ್ಬಗಳನ್ನೂ ಸಂಭ್ರಮದಿಂದ ಆಚರಣೆ ಮಾಡಲಾಗಿತ್ತು. ಆ ಫೋಟೋಗಳನ್ನೂ ನಟಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು.
ಇದನ್ನೂ ಓದಿ: Rocking Star Yash | 10 ಕೋಟಿ ನಷ್ಟ ಕಂಡಿದ್ದ ಯಶ್ ಸಿನಿಮಾ ತೆಲುಗಿನಲ್ಲಿ ರಿಲೀಸ್: ಮನಗೆಲ್ಲುತ್ತಾ ʻರಾರಾಜುʼ!