Site icon Vistara News

ವಿಸ್ತಾರ Explainer | ಅಯ್ಯೋ ದೇವರೇ, ಇನ್ನೂ ಬಿಡುಗಡೆ ಆಗದ Thank God ಸಿನಿಮಾ ಬ್ಯಾನ್ ಮಾಡ್ಬೇಕಂತೆ!

Thank God

ಬಾಯ್ಕಾಟ್ ಟ್ರೆಂಡ್‍‌ನಿಂದ ಬಾಲಿವುಡ್ ಕಂಗೆಟ್ಟಿದೆ. ಚಿತ್ರದಲ್ಲಿ ಕೊಂಚವೇ ದೋಷವಿದ್ದರೆ ಇಲ್ಲವೇ ಕಲಾವಿದರು ಏನಾದರೂ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರೆ, ಕತೆ ಮುಗೀತು. ಟ್ವೀಟರ್ ಸೇರಿದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಬಾಯ್ಕಾಟ್ ಟ್ರೆಂಡ್ (Boycott Trend) ಶುರು ಮಾಡುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬಾಯ್ಕಾಟ್‌ಗೆ ಬಾಯಿ ಬಾಯಿ ಬಿಡುತ್ತಿರುವ ಬಾಲಿವುಡ್‌ ಮೇಲೆ ಮಧ್ಯ ಪ್ರದೇಶದ ಶಿಕ್ಷಣ ಸಚಿವರೊಬ್ಬರು ಬ್ಯಾನ್ ಬಾಂಬ್ ಎಸೆದಿದ್ದಾರೆ! ಮೊನ್ನೆಯಷ್ಟೇ ಟ್ರೇಲರ್ ಬಿಡುಗಡೆ ಕಂಡಿರುವ ಥ್ಯಾಂಕ್‌ ಗಾಡ್‌ (Thank God)ಗೆ ಈಗ ವಿಘ್ನ ಎದುರಾಗಿದೆ. ವಿಸ್ತಾರ Explainer ಈ ವಿವಾದದ ಬಗ್ಗೆ ಚರ್ಚಿಸಿದೆ.

ಅಜಯ್ ದೇವಗನ್, ಸಿದ್ಧಾರ್ಥ ಮಲ್ಹೋತ್ರಾ ಮತ್ತು ರಕುಲ್ ಪ್ರೀತ್ ಸಿಂಗ್, ನೋರಾ ಫತೇಹಿ ತಾರಾಗಣದ ಥ್ಯಾಂಕ್ ಗಾಡ್ ಚಿತ್ರವನ್ನು ಇಂದ್ರ ಕುಮಾರ್ ನಿರ್ದೇಶನ ಮಾಡಿದ್ದಾರೆ. ಆನಂದ್ ಪಂಡಿತ್, ಭೂಷಣ್ ಕುಮಾರ್, ಅಶೋಕ್ ಥಕೇರಿಯಾ, ಕೃಷ್ಣ ಕುಮಾರ್, ಸುನೀಲ್ ಖೇತ್ರಪಾಲ್, ದೀಪಕ್ ಮುಕುತ್, ಮರ್ಕಂದ್ ಅಧಿಕಾರಿ ನಿರ್ಮಾಪಕರು. ಥ್ಯಾಂಕ್ ಗಾಡ್ ಚಿತ್ರವು ಅಕ್ಟೋಬರ್ 25ಕ್ಕೆ ದೇಶಾದ್ಯಂತ ಬಿಡುಗಡೆ ಕಾಣಲಿದೆ. ಆದರೆ, ಬಿಡುಗಡೆಯ ಮುಂಚೆಯೇ ಬ್ಯಾನ್ ಬೆದರಿಕೆಯನ್ನು ಎದುರಿಸುತ್ತಿದೆ.

ಏನಿದು ವಿವಾದ?
ಎರಡು ವಾರದ ಹಿಂದೆ ಥ್ಯಾಂಕ್ ಗಾಡ್ ಚಿತ್ರದ ಟ್ರೇಲರ್ ಬಿಡುಗಡೆಯಾಯಿತು. ಪ್ರೇಕ್ಷಕರು, ಸಿನಿ ವಿಮರ್ಶಕರಿಂದ ಈ ಟ್ರೇಲರ್‌ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಈ ಟ್ರೇಲರ್‌ಗೆ 44 ಮಿಲಿಯನ್ ವೀವ್ಸ್ ದೊರೆತಿದೆ. ಆದರೆ, ಒಬ್ಬರಿಗೆ ಮಾತ್ರ ಈ ಸಿನಿಮಾದಲ್ಲಿ ಹಿಂದೂ ದೇವತೆಗಳನ್ನು ಅವಮಾನ ಮಾಡಲಾಗಿದೆ ಎಂದೆನಿಸಿದೆ ಮತ್ತು ಅವರು ಸಿನಿಮಾವನ್ನು ಬ್ಯಾನ್ ಮಾಡಬೇಕೆಂದು ಕೇಂದ್ರ ವಾರ್ತಾ ಸಚಿವರಿಗೆ ಪತ್ರ ಬರೆದಿದ್ದಾರೆ.

ಪತ್ರ ಬರೆದವರು ಯಾರು?
ಮಧ್ಯಪ್ರದೇಶದ ಶಿಕ್ಷಣ ಸಚಿವ ವಿಶ್ವಾಸ ಸಾರಂಗ್ ಅವರಿಗೆ ಮಾತ್ರ ಟ್ರೇಲರ್ ಇಷ್ಟವಾಗಿಲ್ಲ. ಅವರ ಪ್ರಕಾರ, ಥ್ಯಾಂಕ್ ಗಾಡ್ ಸಿನಿಮಾದಲ್ಲಿ ಹಿಂದೂ ದೇವತೆಗಳಿಗೆ ಅವಮಾನ ಮಾಡಲಾಗಿದೆ. ಹಿಂದೂ ದೇವರು ಸುತ್ತ ಅರೆ ಬೆತ್ತಲೆಯಲ್ಲಿ ಹೆಂಗಸರಿದ್ದಾರೆ. ಇದು ಹಿಂದೂ ದೇವರು ಮತ್ತು ಧರ್ಮಕ್ಕೆ ಬಾಲಿವುಡ್ ಜನರು ಮಾಡುತ್ತಿರುವ ಅವಮಾನ. ಹಾಗಾಗಿ ಈ ಕೂಡಲೇ ಸಿನಿಮಾದ ಮೇಲೆ ನಿಷೇಧ ಹೇರಬೇಕು ಎಂದು ಅವರು ಕೇಂದ್ರ ವಾರ್ತಾ ಸಚಿವ ಅನುರಾಗ್ ಠಾಕೂರ್ ಅವರಿಗೆ ಪತ್ರ ಬರೆದಿದ್ದಾರೆ. ಆದರೆ, ಈ ಪತ್ರಕ್ಕೆ ಕೇಂದ್ರ ಸರ್ಕಾರ ಇನ್ನೂ ಉತ್ತರ ನೀಡಿಲ್ಲ.

ಏನಿದೆ ಟ್ರೇಲರ್‌ನಲ್ಲಿ?
ನಾಯಕ (ಸಿದ್ಧಾರ್ಥ ಮಲ್ಹೋತ್ರಾ) ಆಕ್ಸಿಡೆಂಟ್ ಆಗಿ ಅತ್ತ ಸಾಯದ ಹಾಗೂ ಇತ್ತ ಬದುಕಲಾರದ ಸ್ಥಿತಿಯಲ್ಲಿರುತ್ತಾನೆ. ಆಗ ಚಿತ್ರಗುಪ್ತ(ಅಜಯ್ ದೇವಗನ್) ಎದುರಾಗುತ್ತಾನೆ. ಯಮಲೋಕದಲ್ಲಿ ಇಬ್ಬರ ಮಧ್ಯೆ ಮಾತುಕತೆ ನಡೆಯುತ್ತದೆ. ಯಮಲೋಕದಲ್ಲಿ ತುಂಡು ಬಟ್ಟೆ ತೊಟ್ಟ ಮಹಿಳೆಯರು ಕಾಣುತ್ತಾರೆ. ನಾಯಕ ನಟ ಮತ್ತು ಚಿತ್ರಗುಪ್ತ ನಡುವಿನ ಸಂಭಾಷಣೆಯನ್ನು ಈ ಟ್ರೇಲರ್‌ನಲ್ಲಿ ಕಾಣಬಹುದು. ಮನುಷ್ಯನ ಪಾಪ, ಪುಣ್ಯಗಳನ್ನು ಲೆಕ್ಕ ಹಾಕುತ್ತಲೇ ಗೇಮ್ ಆಫ್ ಲೈಫ್ ಬಗ್ಗೆ ಹೇಳುತ್ತಾನೆ ಚಿತ್ರಗುಪ್ತ ಪಾತ್ರಧಾರಿ ಅಜಯ್ ದೇವಗನ್. ಸದ್ಯಕ್ಕೆ ಟ್ರೇಲರ್‌ನಲ್ಲಿರುವುದು ಇಷ್ಟೇ. ಸಿನಿಮಾ ಹೇಗಿದೆಯೋ ಗೊತ್ತಿಲ್ಲ. ಯಾಕೆಂದರೆ, ಈ ಸಿನಿಮಾ ಇನ್ನೂ ರಿಲೀಸ್ ಆಗಿಲ್ಲ. ಅಕ್ಟೋಬರ್ 25ಕ್ಕೆ ದೇಶಾದ್ಯಂತ ಬಿಡುಗಡೆಯಾಗಲಿದೆ.

ಸಚಿವ ಸಾರಂಗ್ ಹೇಳುವುದೇನು?
ಕಳೆದ ಕೆಲವು ವರ್ಷಗಳಿಂದಲೂ ಬಾಲಿವುಡ್‌ನ ಚಿತ್ರ ನಿರ್ಮಾಪಕರು, ಕಲಾವಿದರು ಹಿಂದೂ ದೇವತೆಗಳನ್ನು ಟೀಕೆ ಮಾಡುತ್ತಲೇ ಬಂದಿದ್ದಾರೆ. ತಮ್ಮ ಸಿನಿಮಾಗಳಲ್ಲಿ ಆಕ್ಷೇಪಾರ್ಹ ದೃಶ್ಯಗಳನ್ನು ಬಳಸಿದ್ದಾರೆ. ಇತ್ತೀಚೆಗಷ್ಟೇ ರಿಲೀಸ್ ಆದ ಥ್ಯಾಂಕ್ ಗಾಡ್ ಟ್ರೇಲರ್‌ನಲ್ಲೂ ಅರೆ ಬೆತ್ತಲೆ ಹೆಂಗಸರ ಮಧ್ಯೆ ಚಿತ್ರಗುಪ್ತ ಅವರನ್ನು ತೋರಿಸಲಾಗಿದೆ. ಚಿತ್ರಗುಪ್ತ ಪಾತ್ರಧಾರಿ ದೇವಗನ್ ಕೆಲವು ಆಕ್ಷೇಪಾರ್ಹ ಸಂಭಾಷಣೆ ಕೂಡ ಹೇಳಿದ್ದಾರೆ. ಇದರಿಂದಾಗಿ ಕಾಯಸ್ಥ ಸಮಾಜದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ಈ ಚಿತ್ರದ ಪ್ರಸಾರವನ್ನು ತಕ್ಷಣವೇ ನಿಲ್ಲಿಸಲು ನಿರ್ದೇಶನಗಳನ್ನು ನೀಡುವ ಮೂಲಕ ಇಡೀ ಕಾಯಸ್ಥ ಹಾಗೂ ಹಿಂದೂ ಸಮಾಜದ ಭಾವನೆಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕೆಂದು ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಬಾಯ್ಕಾಟ್, ಬ್ಯಾನ್‌ಗೆ ಬಾಲಿವುಡ್ ಸುಸ್ತು
ಕಳೆದ ಎರಡು ವರ್ಷದಿಂದ ಬಾಲಿವುಡ್ ಈ ಬ್ಯಾನ್ ಮತ್ತ ಬಾಯ್ಕಾಟ್‌ ಎಂಬ ಪದಗಳನ್ನು ಕೇಳಿದರೆ ಬೆಚ್ಚಿ ಬೀಳುತ್ತಿದೆ. ಆಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಛಡ್ಡಾ ಸಿನಿಮಾ ಬಿಡುಗಡೆ ಮುಂಚೆಯೇ ಸೋಷಿಯಲ್ ಮೀಡಿಯಾಗಳಲ್ಲಿ ಬಾಯ್ಕಾಟ್ ಅಭಿಯಾನ ಆರಂಭಿಸಲಾಗಿತ್ತು. ಚಿತ್ರ ಬಿಡುಗಡೆಯಾದ ಬಳಿಕವೂ ಇದು ಮುಂದುವರಿಯಿತು ಮತ್ತು ಸಿನಿಮಾ ಸಕ್ಸೆಸ್ ಆಗಲಿಲ್ಲ. ಆಮೀರ್ ಖಾನ್ ಚಿತ್ರಗಳ ಪೈಕಿ ಅತಿ ಕಳಪೆ ಓಪನಿಂಗ್ ಪಡೆಯಿತು. ಇದು ಬಾಯ್ಕಾಟ್ ಎಫೆಕ್ಟ್ ಎಂದು ಚಪ್ಪರಿಸಲಾಯಿತು. ಅಕ್ಷಯ್ ಕುಮಾರ್ ಅಭಿನಯದ ರಕ್ಷಾಬಂಧನ್ ಚಿತ್ರಕ್ಕೂ ಬಾಯ್ಕಾಟ್ ಬಿಸಿ ತಟ್ಟಿತು. ಈ ಎರಡೂ ಸಿನಿಮಾಗಳು ಫೇಲ್ ಆದವು.

ರಣಬೀರ್ ಕಪೂರ್, ಆಲಿಯಾ ಭಟ್ ಅಭಿನಯದ ಬ್ರಹ್ಮಾಸ್ತ್ರಕ್ಕೂ ಬಾಯ್ಕಾಟ್ ಭಯ ಎದುರಾಯಿತು. ಆದರೆ, ಈ ಚಿತ್ರವು ನಿಧಾನವಾಗಿ ದುಡ್ಡು ಸಂಪಾದಿಸುತ್ತಿದೆ. ಬಿಡುಗಡೆಯಾದ 10 ದಿನಗಳಲ್ಲಿ 360 ಕೋಟಿಗೂ ಹೆಚ್ಚು ಹಣ ಸಂಪಾದಿಸಿದೆ ಯಶಸ್ವಿಯಾಗಿ ಪ್ರದರ್ಶವಾಗುತ್ತಿದೆ. ಈ ಸಿನಿಮಾ ನಿರ್ಮಾಣಕ್ಕೆ 400 ಕೋಟಿ ರೂ. ವ್ಯಯಿಸಲಾಗಿದೆ.

ಸೋಷಿಯಲ್ ಮೀಡಿಯಾಗಳಲ್ಲಿ ಬಾಯ್ಕಾಟ್ ಟ್ರೆಂಡ್ ಮಾಡಿದ ಕೂಡಲೇ ಸಿನಿಮಾ ತೋಪೆದ್ದುಹೋಗುತ್ತದೆ ಎಂದು ಹೇಳುವಂತಿಲ್ಲ ಎನ್ನುತ್ತಾರೆ ಕೆಲ ಸಿನಿ ವಿಮರ್ಶಕರು. ಸಿನಿಮಾ ಕಟೆಂಟ್ ಚೆನ್ನಾಗಿದ್ದರೆ ಖಂಡಿತವಾಗಿಯೂ ಜನರು ಥಿಯೇಟರ್‌‌ಗಳಿಗೆ ಬಂದು ನೋಡುತ್ತಾರೆ. ಇಲ್ಲದಿದ್ದರೆ, ಬಾಯ್ಕಾಟ್ ಮಾಡುವುದೇ ಅಗತ್ಯವಿಲ್ಲ, ಅದು ತಾನಾಗಿಯೇ ಫೇಲ್ ಆಗುತ್ತದೆ ಎಂಬುದು ಅವರ ವಾದ.

ಏಕೆ ಬಾಯ್ಕಾಟ್ ಭಯ?
ಸಿನಿಮಾ ಕತೆ, ಸಿನಿಮಾದಲ್ಲಿ ನಟಿಸಿರುವ ಕಲಾವಿದರು ಮಾಡಿಕೊಂಡ ವಿವಾದಗಳು, ಹೇಳಿಕೆಗಳೇ ಬಾಯ್ಕಾಟ್‌ಗೆ ಕರೆ ಕೊಡಲು ಕಾರಣ. ಸಮಾಜದ ಒಂದು ವರ್ಗಕ್ಕೆ ಬಾಲಿವುಡ್ ನಿರಂತರವಾಗಿ ಹಿಂದೂ ದೇವತೆಗಳು, ಹಿಂದೂ ಧರ್ಮವನ್ನು ಸಿನಿಮಾದಲ್ಲಿ ಹೀಯಾಳಿಸಿಕೊಂಡ ಬರಲಾಗುತ್ತಿದೆ ಎಂಬ ಆಕ್ರೋಶವಿದೆ. ಕೆಲವು ನಟ, ನಟಿಯರು ದೇಶದ ವಿರುದ್ಧ ಹೇಳಿಕೆಯನ್ನು ಕೊಡುತ್ತಾರೆಂಬ ಕಾರಣವನ್ನು ಬಾಯ್ಕಾಟ್‌ವಾದಿಗಳು ನೀಡುತ್ತಾರೆ.

ಇದನ್ನೂ ಓದಿ | ವಿಸ್ತಾರ Explainer | ಬುಡಕಟ್ಟು ಮತದಾರರನ್ನು ಸೆಳೆಯಲು ಬಿಜೆಪಿ ಹಾಕಿದ ಪಟ್ಟು ಯಾವುದು?

Exit mobile version