Site icon Vistara News

ದಕ್ಷಿಣ ಭಾರತದ ಮೊದಲ ಕೌಬಾಯ್‌, ಜೇಮ್ಸ್‌ ಬಾಂಡ್ ಸಿನೆಮಾ ಮಾಡಿದ ಸೂಪರ್‌ಸ್ಟಾರ್‌ ಕೃಷ್ಣ

superstar krishna

ಹೈದರಾಬಾದ್:‌ ಸೋಮವಾರ ಹೃದಯಾಘಾತದಿಂದ ಮೃತಪಟ್ಟ ತೆಲುಗಿನ ಸೂಪರ್‌ಸ್ಟಾರ್‌ ಕೃಷ್ಣ ಘಟ್ಟಮನೇನಿ, ದಕ್ಷಿಣ ಭಾರತದಲ್ಲಿ ಜೇಮ್ಸ್‌ ಬಾಂಡ್‌ ಮಾದರಿಯ ಸಿನೆಮಾ ಹಾಗೂ ಕೌಬಾಯ್‌ ಮಾದರಿಯ ಸಿನೆಮಾಗಳಲ್ಲಿ ಪರಿಚಯಿಸಿದ ಮೊದಲಿಗರಲ್ಲಿ ಒಬ್ಬರಾಗಿದ್ದಾರೆ.

350 ಸಿನೆಮಾಗಳಲ್ಲಿ ನಟಿಸಿದ ಕೃಷ್ಣ ಅವರನ್ನು ತೆಲುಗಿನ ಸಿನಿ ಅಭಿಮಾನಿಗಳು ಸೂಪರ್‌ಸ್ಟಾರ್‌ ಎಂದೇ ಗುರುತಿಸುತ್ತಾರೆ. ಇವರ ಕೊಡುಗೆಗಾಗಿ ಪದ್ಮಭೂಷಣ ಪ್ರಶಸ್ತಿ ನೀಡಲಾಗಿತ್ತು. ʼಅಲ್ಲೂರಿ ಸೀತಾರಾಮ ರಾಜುʼ ಫಿಲಂನ ನಾಯಕ ನಟನ ಪಾತ್ರ ನಿರ್ವಹಣೆಗಾಗಿ ಇಂದು ಕೂಡ ಅವರನ್ನು ನೆನೆಯಲಾಗುತ್ತದೆ. ಇದು ದಿಟ್ಟ ಸ್ವಾತಂತ್ರ್ಯ ಹೋರಾಟಗಾರನೊಬ್ಬನ ಜೀವನ ಕತೆಯಾಗಿದೆ. ಇದು ಕೃಷ್ಣ ಅವರಿಗೆ ಭಾರಿ ಖ್ಯಾತಿ ತಂದುಕೊಟ್ಟಿತು.

ತೆಲುಗಿನ ಮೊತ್ತ ಮೊದಲ 70 ಎಂಎಂ ಸಿನೆಮಾ ʼಸಿಂಹಾಸನಂʼ ಅನ್ನು ನಿರ್ಮಿಸಿ, ನಿರ್ದೇಶಿಸಿದವರು ಕೃಷ್ಣ. 1986ರಲ್ಲಿ ಬಂದ ಇದು ಐತಿಹಾಸಿಕ ಸಿನೆಮಾ ಆಗಿದ್ದು, ಇದರಲ್ಲಿ ಜಯಪ್ರದಾ, ರಾಧಾ, ಮಂದಾಕಿನಿ ಮುಂತಾದ ದೊಡ್ಡ ನಟ ನಟಿಯರು ನಟಿಸಿದ್ದರು. ಇದೇ ವೇಳೆಗೆ ಹಿಂದಿಯಲ್ಲೂ ಈ ಚಿತ್ರವನ್ನು ನಿರ್ಮಿಸಲಾಗಿತ್ತು.

ಇದನ್ನೂ ಓದಿ | ಮಹೇಶ್‌ ಬಾಬು ತಂದೆ ನಟ ಕೃಷ್ಣ ಹೃದಯಸ್ತಂಭನದಿಂದ ನಿಧನ

1965ರಲ್ಲಿ ಕೃಷ್ಣ ಮೊದಲ ಚಿತ್ರ ʼತೇನೆ ಮನಸುಲು; ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟವರು. 1971ರಲ್ಲಿ ಕೌಬಾಯ್‌ ಮಾದರಿಯ ʼಮೋಸಗಾಳ್ಳುಕು ಮೋಸಗಾಡುʼ ಎಂಬ ಸಿನೆಮಾವನ್ನು ಮಾಡಿದರು. ಇದು ಹಾಲಿವುಡ್‌ನ ʻದಿ ಗುಡ್‌ ಬ್ಯಾಡ್‌ ಅಗ್ಲಿʼ ʼಫಾರ್‌ ಎ ಫ್ಯೂ ಡಾಲರ್ಸ್‌ ಮೋರ್‌ʼ ಮುಂತಾದ ವೆಸ್ಟರ್ನ್‌ ಕೌಬಾಯ್‌ ಮಾದರಿಯ ಚಿತ್ರವಾಗಿತ್ತು.

1966ರಲ್ಲಿ ಇವರು ʼಗೂಢಚಾರಿ 116′ ಎಂಬ ಸಿನಿಮಾದಲ್ಲಿ ಏಜೆಂಟ್‌ ಗೋಪಿ ಎಂಬ ನಾಯಕನ ಪಾತ್ರವನ್ನು ನಿರ್ವಹಿಸಿದರು. ಅದು ಹಾಲಿವುಡ್‌ನ ಜೇಮ್ಸ್‌ ಬಾಂಡ್‌ 007 ಮಾದರಿಯ ಸಿನಿಮಾ ಆಗಿತ್ತು. ಇದರಲ್ಲಿ ಜಯಲಲಿತಾ ಕೂಡ ನಟಿಸಿದ್ದರು. ದಕ್ಷಿಣ ಭಾರತದಲ್ಲಿ ಜೇಮ್ಸ್‌ ಬಾಂಡ್‌ ಮಾದರಿಯ ಸಿನಿಮಾಗಳನ್ನು ತರಲು ಕೆಲವರು ಯೋಚಿಸುತ್ತಿದ್ದಾಗ ಈ ಫಿಲಂ ಬಂದಿತ್ತು. ಮುಂದಿನ ವರ್ಷವೇ ಕನ್ನಡದಲ್ಲಿ ಡಾ.ರಾಜ್‌ಕುಮಾರ್‌ ಅವರ ‘ಜೇಡರ ಬಲೆʼ ಫಿಲಂ ಬಂತು. ‌ಇದಾದ ಬಳಿಕ ಕೃಷ್ಣ ಅವರೂ, ರಾಜ್‌ಕುಮಾರ್‌ ಅವರೂ ಹಲವಾರು ಇಂಥ ಚಿತ್ರಗಳನ್ನು ಮಾಡಿದರು.

ತಮ್ಮ ಕಾಲದ ಬಹುತೇಕ ದೊಡ್ಡ ನಟ- ನಟಿಯರ ಜತೆಗೆ ಕೃಷ್ಣ ನಟಿಸಿದ್ದಾರೆ. ಎನ್‌ಟಿಆರ್‌, ಅಕ್ಕಿನೇನಿ ನಾಗೇಶ್ವರ ರಾವ್‌ ಮುಂತಾದವರ ಜತೆ ನಟಿಸಿದ್ದರು. ಕೃಷ್ಣ ಅವರು ತೆಲುಗಿನ ಈಗಿನ ಸೂಪರ್‌ ಸ್ಟಾರ್‌ ಮಹೇಶ್‌ ಬಾಬು ಅವರ ತಂದೆ. ಮಹೇಶ್‌ ಬಾಬು ಈ ವರ್ಷ ತಮ್ಮ ಕುಟುಂಬದ ಮೂವರನ್ನು ಕಳೆದುಕೊಂಡಿದ್ದಾರೆ. ತಂದೆ ಕೃಷ್ಣ, ತಾಯಿ ಇಂದಿರಾ ದೇವಿ (ಸೆಪ್ಟೆಂಬರ್)‌ ಹಾಗೂ ಅಣ್ಣ ರಮೇಶ್‌ ಬಾಬು (ಜನವರಿ).

ಇದನ್ನೂ ಓದಿ | Niranjan Sudhindra | ʻಸೂಪರ್‌ ಸ್ಟಾರ್‌ʼ ನಿರ್ದೇಶಕರ ಮೇಲೆ ಕೇಸ್‌: ನಟ ಉಪೇಂದ್ರ ಕುಟುಂಬದ ಕುಡಿ ಈ ಸಿನಿಮಾ ಹೀರೊ!

Exit mobile version