Site icon Vistara News

Golden Star Ganesh : ಬಂಡೀಪುರದಲ್ಲಿ ಕಟ್ಟಿದ ಮನೆಗೆ ಅರಣ್ಯ ಇಲಾಖೆ ತಡೆ; ನಟ ಗಣೇಶ್‌ಗೆ ಹೈಕೋರ್ಟಲ್ಲೂ ಹಿನ್ನಡೆ

Golden star Ganesh

ಚಾಮರಾಜನಗರ/ಬೆಂಗಳೂರು: ಬಂಡೀಪುರ ಪರಿಸರ ಸೂಕ್ಷ್ಮ ವಲಯಕ್ಕೆ (Bandipur Eco sensitive zone) ಸೇರಿರುವ ಗುಂಡ್ಲುಪೇಟೆ ತಾಲೂಕಿನ ಜಕ್ಕಳ್ಳಿಯಲ್ಲಿ ಮನೆ ನಿರ್ಮಿಸುವ (House Construction) ಕೆಲಸ ಆರಂಭಿಸಿ ವಿವಾದಕ್ಕೆ ಸಿಲುಕಿದ್ದ ಚಿತ್ರ ನಟ ಗೋಲ್ಡನ್‌ ಸ್ಟಾರ್‌ ಗಣೇಶ್‌ (Golden Star Ganesh) ಅವರಿಗೆ ರಾಜ್ಯ ಹೈಕೋರ್ಟ್‌ನಲ್ಲೂ (Karnataka High court) ಹಿನ್ನಡೆಯಾಗಿದೆ.

ಗುಂಡ್ಲುಪೇಟೆ ತಾಲೂಕಿನ ಜಕ್ಕಳ್ಳಿಯಲ್ಲಿ 1.24 ಎಕರೆ ಭೂಮಿ ಹೊಂದಿರುವ ಗಣೇಶ್ ಅವರು ಅಲ್ಲಿ ಮನೆ ಕಟ್ಟಲು ಆರಂಭಿಸಿದ್ದರು. ಈ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಅರಣ್ಯ ಇಲಾಖೆ (Forest Department) ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಗಣೇಶ್‌ ಅವರು ಹೈಕೋರ್ಟ್‌ ಮೊರೆ ಹೊಕ್ಕಿದ್ದರು. ಆದರೆ, ಹೈಕೋರ್ಟ್‌ ಇದರಲ್ಲಿ ಮಧ್ಯಪ್ರವೇಶ ಮಾಡದಿರಲು ನಿರ್ಧರಿಸಿದೆ. ಅರಣ್ಯ ಇಲಾಖೆ ಹಾಗೂ ಬಂಡೀಪುರ ಪರಿಸರ ಸೂಕ್ಷ್ಮ ವಲಯದ ಮಾನಿಟರಿಂಗ್ ಕಮಿಟಿ ಸಲಹೆ ಪಡೆಯುವಂತೆ ಸೂಚಿಸಿದ ಹೈಕೋರ್ಟ್‌ ಗಣೇಶ್‌ ಅವರಿಗೆ ಸೂಚಿಸಿದೆ.

ಹೈಕೋರ್ಟ್‌ ಮೊರೆ ಹೋಗಿದ್ದ ಗಣೇಶ್‌

ಗುಂಡ್ಲುಪೇಟೆ ತಾಲೂಕಿನ ಹಂಗಾಳ ಹೋಬಳಿಯ ಜಕ್ಕಳ್ಳಿಯಲ್ಲಿ ಮನೆ ನಿರ್ಮಿಸುತ್ತಿರುವುದನ್ನು ನಿಲ್ಲಿಸುವಂತೆ ಅರಣ್ಯ ಇಲಾಖೆ ಸೂಚನೆ ನೀಡಿತ್ತು. ಇದು ಪರಿಸರ ಸೂಕ್ಷ್ಮ ವಲಯ ವ್ಯಾಪ್ತಿಗೆ ಬರುವುದರಿಂದ ಇಲ್ಲಿ ಯಾವುದೇ ಶಾಶ್ವತ ಕಟ್ಟಡ ನಿರ್ಮಾಣಕ್ಕೆ ಅವಕಾಶವಿಲ್ಲ. ಹೀಗಾಗಿ ಕಟ್ಟಡ ನಿರ್ಮಾಣವನ್ನು ನಿಲ್ಲಿಸಬೇಕು ಎಂದು ಅರಣ್ಯ ಇಲಾಖೆ ಚಿತ್ರ ನಟ ಗಣೇಶ್‌ ಅವರಿಗೆ ನೋಟಿಸ್‌ ನೀಡಿತ್ತು. ಇದನ್ನು ಪ್ರಶ್ನಿಸಿ ಗಣೇಶ್‌ ಅವರು ಹೈಕೋರ್ಟ್‌ ಮೊರೆ ಹೊಕ್ಕಿದ್ದರು. ಗಣೇಶ್‌ ಅವರ ಪರವಾಗಿ ವಕೀಲ ಸಿ.ಕೆ. ನಂದಕುಮಾರ್ ಅವರು ಹೈಕೋರ್ಟ್​ನಲ್ಲಿ ದಾವೆ ಸಲ್ಲಿಸಿದ್ದರು.

ಬಂಡೀಪುರದಲ್ಲಿ ಮನೆ ನಿರ್ಮಾಣ ಪ್ರಗತಿಯಲ್ಲಿದೆ

ಕೋರ್ಟ್‌ನಲ್ಲಿ ಗಣೇಶ್‌ ಪರ ವಕೀಲರ ವಾದವೇನಾಗಿತ್ತು?

  1. ಗಣೇಶ್ ಅವರು ಅರಣ್ಯ ಪ್ರದೇಶದಲ್ಲಿ ಯಾವುದೇ ಕಟ್ಟಡ ನಿರ್ಮಿಸುತ್ತಿಲ್ಲ.
  2. ಪರಿಸರ ಸೂಕ್ಷ್ಮ ವಲಯದಲ್ಲಿ ಕಟ್ಟಡ ನಿರ್ಮಿಸಬಾರದೆಂಬ ಸುಪ್ರೀಂ ಕೋರ್ಟ್ ತೀರ್ಪು ಈಗ ಮಾರ್ಪಾಟಾಗಿದೆ.
  3. ಕೇವಲ ಭೂಮಿ ಸಮತಟ್ಟು ಮಾಡಿ ಸ್ಥಳಾಂತರಿಸಬಹುದಾದ ಸ್ಟೀಲ್ ಕಟ್ಟಡವನ್ನಷ್ಟೇ ನಿರ್ಮಿಸಲಾಗುತ್ತಿದೆ.
  4. ಹೀಗಾಗಿ ಅರಣ್ಯ ಇಲಾಖೆ ನೋಟೀಸ್​ಗೆ ತಡೆಯಾಜ್ಞೆ ನೀಡಬೇಕು.

ಕಾಂಕ್ರೀಟ್‌ ಹಾಕಿದ್ದೀರಲ್ಲಾ ಎಂದು ಕೇಳಿದ ಕೋರ್ಟ್‌

ಈ ಪ್ರಕರಣದ ವಿಚಾರಣೆ ನಡೆದಿದ್ದು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಹೈಕೋರ್ಟ್ ಪೀಠದಲ್ಲಿ. ಚಿತ್ರ ನಟ ಗಣೇಶ್ ಅವರ ವಕೀಲರು ಸಲ್ಲಿಸಿದ ಕಟ್ಟಡ ನಿರ್ಮಾಣ ಕಾಮಗಾರಿ ಫೋಟೊಗಳನ್ನು ಪರಿಶೀಲಿಸಿದ ಅವರು,. ಕಾಂಕ್ರಿಟ್ ತಳಪಾಯದ ಮೇಲೆ ಕಟ್ಟಡದ ಕಾಮಗಾರಿ ನಡೆಸಲಾಗುತ್ತಿದೆಯಲ್ಲಾ ಎಂದು ಪ್ರಶ್ನಿಸಿದರು.

ಶಾಶ್ವತ ಕಟ್ಟಡಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲವೆಂಬ ಅರಣ್ಯ ಇಲಾಖೆ ಅಭಿಪ್ರಾಯವನ್ನು ಅವರು ಮೌಖಿಕವಾಗಿ ಪ್ರತಿಪಾದಿಸಿದರು. ಜತೆಗೆ ಅರಣ್ಯ ಇಲಾಖೆ ನೀಡಿರುವ ನೋಟೀಸ್​ಗೆ 1 ವಾರದಲ್ಲಿ ಪ್ರತಿಕ್ರಿಯೆ ನೀಡುವಂತೆ ನಟ ಗಣೇಶ್​ಗೆ ಸೂಚಿಸಿದರು.

ಇದನ್ನೂ ಓದಿ: ​Golden Star Ganesh: ಜನುಮದಿನ ಸ್ಟೈಲ್​ ಆಗಿ ಪೊರಕೆ, ಬಕೆಟ್‌ ಹಿಡಿದು ಪೋಸ್‌ ಕೊಟ್ಟ ಗೋಲ್ಡನ್ ಸ್ಟಾರ್!

ಮತ್ತೆ ಅರಣ್ಯ ಇಲಾಖೆ ಸುಪರ್ದಿಗೆ ವಿಚಾರ

ಹೈಕೋರ್ಟ್‌ ಈಗ ವಿವಾದವನ್ನು ಮತ್ತೆ ಅರಣ್ಯ ಇಲಾಖೆಯ ಸುಪರ್ದಿಗೆ ಒಪ್ಪಿಸಿದೆ. ಒಂದು ವಾರದಲ್ಲಿ ಅರಣ್ಯ ಇಲಾಖೆ ನೋಟಿಸ್‌ಗೆ ಉತ್ತರಿಸಲು ಕಾಲಾವಕಾಶ ನೀಡಿದ ಕೋರ್ಟ್‌, ನಾಲ್ಕು ವಾರದಲ್ಲಿ ವಿಚಾರಣಾ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಅರಣ್ಯ ಇಲಾಖೆಗೆ ನಿರ್ದೇಶನ ನೀಡಿದೆ.

Exit mobile version