Site icon Vistara News

OMG 2 Film: ಹೀರೋ ಅಕ್ಷಯ್‌ ಕುಮಾರ್‌ ಕೆನ್ನೆಗೆ ಬಾರಿಸಿದವರಿಗೆ 10 ಲಕ್ಷ ರೂ. ಸಿಗುತ್ತಂತೆ!

Akshay Kumar

ಆಗ್ರಾ: ಬಾಲಿವುಡ್ ನಟ (bollywod actor) ಅಕ್ಷಯ್ ಕುಮಾರ್‌ಗೆ (akshay kumar) ಯಾರಾದರೂ ಕಪಾಳಮೋಕ್ಷ ಮಾಡಿದರೆ, ಅಥವಾ ಉಗುಳಿದರೆ, ಅಂಥವರಿಗೆ ಆಗ್ರಾದ ಹಿಂದೂ ಸಂಘಟನೆಯೊಂದು ರೂ. 10 ಲಕ್ಷ ʼಬಹುಮಾನʼ ಘೋಷಿಸಿದೆ.

ಆಗ್ರಾದ ರಾಷ್ಟ್ರೀಯ ಹಿಂದೂ ಪರಿಷತ್ ಭಾರತ್ ಸಂಘಟನೆಯ ಅಧ್ಯಕ್ಷ ಗೋವಿಂದ್ ಪರಾಶರ್ ಈ ಬಹುಮಾನ ಘೋಷಿಸಿದರು. ಇತ್ತೀಚಿನ ಬಿಡುಗಡೆಯಾದ ʼಓಹ್ ಮೈ ಗಾಡ್ 2ʼ (Oh My God 2) ಚಿತ್ರದಲ್ಲಿ ಭಗವಾನ್ ಶಿವನ ಸಂದೇಶವಾಹಕನ ಹಾಸ್ಯಾಸ್ಪದ ಪಾತ್ರದ ಮೂಲಕ ಅಕ್ಷಯ್‌ ಕುಮಾರ್‌ ಹಿಂದೂ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ. ಇದರಲ್ಲಿ ಕೆಲವು ದೃಶ್ಯಗಳು ಭಗವಾನ್ ಶಿವನನ್ನು ಕೀಳಾಗಿ ತೋರಿಸುತ್ತವೆ ಎಂದು ಅವರು ವಾದಿಸಿದರು.

ಗುರುವಾರ ಈ ಸಂಘಟನೆ ನಟನ ಪ್ರತಿಕೃತಿ ಮತ್ತು ಚಿತ್ರದ ಪೋಸ್ಟರ್‌ಗಳನ್ನು ದಹಿಸಿತು. ಚಿತ್ರಮಂದಿರಗಳ ಮುಂದೆ ಪ್ರತಿಭಟನೆ ನಡೆಸುವುದಾಗಿ ಘೋಷಿಸಿತು. ಭೋಲೆನಾಥ್‌ನ ದೂತ ಅಥವಾ ಸಂದೇಶವಾಹಕನಾಗಿ ಅಕ್ಷಯ್ ಕುಮಾರ್ ಹಾಸ್ಯಾಸ್ಪದವಾಗಿ ಕಾಣಿಸಿದ್ದಾರೆ. ಕೊಳಕು ಕೊಳದ ನೀರಿನಲ್ಲಿ ಸ್ನಾನ ಮಾಡುತ್ತಾರೆ. ಇವು ದೇವರ ಪಾವಿತ್ರ್ರಕ್ಕೆ ಕಳಂಕ ತರುತ್ತವೆ. ಸೆನ್ಸಾರ್ ಮಂಡಳಿ ಹಾಗೂ ಕೇಂದ್ರ ಸರ್ಕಾರ ಸಿನಿಮಾವನ್ನು ನಿಷೇಧಿಸಬೇಕು. ಇಲ್ಲದಿದ್ದರೆ ನಿರಂತರ ಪ್ರತಿಭಟನೆ ನಡೆಸುವುದಾಗಿ ಪರಾಶರ್‌ ಎಚ್ಚರಿಕೆ ನೀಡಿದರು.

ಇತರ ನಗರಗಳಲ್ಲಿಯೂ ಚಿತ್ರದ ವಿರುದ್ಧ ಒಂದು ವರ್ಗದಿಂದ ಆಕ್ರೋಶ ವ್ಯಕ್ತವಾಗಿದೆ. ಚಿತ್ರವನ್ನು ದುರ್ಗಾ ವಾಹಿನಿಯ ಸಂಸ್ಥಾಪಕಿ ವೃಂದಾವನದ ಸಾಧ್ವಿ ಋತಂಬರ ಕೂಡ ಟೀಕಿಸಿದ್ದಾರೆ. “ಹಿಂದೂ ಧರ್ಮದ ಮೃದುತ್ವವು ಬಾಲಿವುಡ್ ಅನ್ನು ಮತ್ತೆ ಮತ್ತೆ ಇಂತಹ ಧೈರ್ಯ ಮಾಡಲು ಪ್ರೇರೇಪಿಸುತ್ತದೆ. ಬಾಲಿವುಡ್‌ ಹಿಂದೂ ಧರ್ಮವನ್ನು ಬಿಟ್ಟು ಬೇರೆ ಯಾವುದೇ ಧರ್ಮವನ್ನೂ ಟೀಕಿಸುವುದಿಲ್ಲ. ಈ ಹಿಂದೆಯೂ ಬೆಳ್ಳಿತೆರೆಯಲ್ಲಿ ಹಿಂದೂ ದೇವರು ಮತ್ತು ದೇವತೆಗಳನ್ನು ಅವಮಾನಿಸಲಾಗಿದೆ. ಹಿಂದೂಗಳ ನಂಬಿಕೆಯೊಂದಿಗೆ ಆಟವಾಡಬಾರದು” ಎಂದಿದ್ದಾರೆ.

ಈ ಚಿತ್ರ 201ರಲ್ಲಿ ಬಿಡುಗಡೆಯಾದ ʼಓಹ್‌ ಮೈ ಗಾಡ್‌ʼನ ಮುಂದುವರಿದ ಭಾಗವಾಗಿದೆ. ಸೆನ್ಸಾರ್‌ ಮಂಡಳಿ ಈ ಚಿತ್ರಕ್ಕೆ ʼಎʼ ಪ್ರಮಾಣ ಪತ್ರ ನೀಡಿದೆ. ಅದಕ್ಕೂ ಮುನ್ನ ಚಿತ್ರ 12 ನಿಮಿಷಗಳನ್ನು ಕಾಲದ ಫೂಟೇಜ್‌ ಅನ್ನು ಕತ್ತರಿಸಲು ನಿರ್ದೇಶಿಸಿತ್ತು.

Exit mobile version