ಬೆಂಗಳೂರು: ಡಾ.ರಾಜ್‌ಕುಮಾರ್ ಅವರ ಕುಟುಂಬದ ಕುಡಿ, ಸ್ಯಾಂಡಲ್‌ವುಡ್ ನಟ ಯುವ ರಾಜ್‌ಕುಮಾರ್ ಅವರು ಪತ್ನಿ ಶ್ರೀದೇವಿ ಭೈರಪ್ಪ ಅವರಿಗೆ ಡಿವೋರ್ಸ್ ನೋಟಿಸ್ ನೀಡಿರುವ ಪ್ರಕರಣ ಭಾರಿ ಸುದ್ದಿಯಾಗಿದೆ. ಇದರ ಬೆನ್ನಲ್ಲೇ, ಡಿವೋರ್ಸ್ ನೋಟಿಸ್ ಕುರಿತು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. “ನನಗೆ ವಿಚ್ಛೇದನದ ಕುರಿತು ನೋಟಿಸ್ ಸಿಕ್ಕಿಲ್ಲ. ನೋಟಿಸ್ ಸಿಕ್ಕ ಬಳಿಕ ಉತ್ತರಿಸುವೆ” ಎಂಬುದಾಗಿ ಶ್ರೀದೇವಿ ಭೈರಪ್ಪ ಪ್ರತಿಕ್ರಿಯಿಸಿದ್ದಾರೆ.
“ವಿಷಯ ಏನೆಂದು ಚಿತ್ರರಂಗ ಹಾಗೂ ಮಾಧ್ಯಮದಲ್ಲಿ ಅನೇಕರಿಗೆ ತಿಳಿದಿದೆ. ನಾನು ಈಗಾಗಲೇ ಲೀಗಲ್ ನೋಟಿಸ್‌ಗೆ ಉತ್ತರ ನೀಡಿದ್ದೇನೆ. ವಿಚ್ಛೇದನ ಅರ್ಜಿಯು ಇನ್ನೂ ನನಗೆ ತಲುಪಿಲ್ಲ. ಸಿಕ್ಕಾಗ ನ್ಯಾಯಾಲಯಕ್ಕೆ ಉತ್ತರಿಸುತ್ತೇನೆ. ಸದ್ಯಕ್ಕೆ ನಾನು ಬೇರೇನೂ ಮಾತನಾಡುವ ಪರಿಸ್ಥಿತಿಯಲ್ಲಿ ಇಲ್ಲ. ನೀವೆಲ್ಲರೂ ಇದನ್ನು ಅರ್ಥ ಮಾಡಿಕೊಂಡು ನನ್ನ ಹಾಗೂ ನನ್ನ ಕುಟುಂಬದ ಖಾಸಗಿತನವನ್ನು ಗೌರವಿಸುತ್ತೀರಿ ಎಂದು ಭಾವಿಸಿದ್ದೇನೆ” ಎಂಬುದಾಗಿ ಶ್ರೀದೇವಿ ಬೈರಪ್ಪ ಅವರು ಡಿವೋರ್ಸ್ ನೋಟಿಸ್ ಕುರಿತು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯ, ಅವರು ಅಮೆರಿಕದಲ್ಲಿದ್ದಾರೆ ಎಂದು ತಿಳಿದುಬಂದಿದೆ.
ಶ್ರೀದೇವಿ ತಂದೆ ಭೈರಪ್ಪ ಹೇಳಿದ್ದಿಷ್ಟು
ಮೈಸೂರಿನಲ್ಲಿ ಬಿ. ಭೈರಪ್ಪ ಅವರು ವಿಸ್ತಾರ ನ್ಯೂಸ್ ಜತೆ ಮಾತನಾಡಿದರು. “ಯುವ ರಾಜ್‌ಕುಮಾರ್ ಹಾಗೂ ಶ್ರೀದೇವಿ ಪ್ರೀತಿಸಿ ಮದುವೆಯಾಗಿದ್ದರು. ನನ್ನ ಮಗಳನ್ನು ಅವರೇ ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಕಳುಹಿಸಿದ್ದರು. ವಿದ್ಯಾಭ್ಯಾಸ ಮುಗಿಸಿ ಬಂದ ಬಳಿಕ ಇಬ್ಬರೂ ವಿಚ್ಛೇದನ ಪಡೆಯಲಿದ್ದಾರೆ. ವಿಚ್ಛೇದನದ ಬಗ್ಗೆ ನಮಗೆ ಮೊದಲೇ ಗೊತ್ತಿತ್ತು” ಎಂಬುದಾಗಿ ಯುವ ರಾಜ್‌ಕುಮಾರ್ ಅವರ ಮಾವ ಬಿ.ಭೈರಪ್ಪ ತಿಳಿಸಿದ್ದಾರೆ.
“ಯುವ ರಾಜ್‌ಕುಮಾರ್ ಮೈಸೂರಿಗೆ ಬಂದಿದ್ದ. ಆದರೆ, ಇದರ ಬಗ್ಗೆ ಆತ ಯಾವುದೇ ಮಾತನಾಡಿರಲಿಲ್ಲ. ಶ್ರೀದೇವಿ, ವಿಚ್ಛೇದನದ ಕುರಿತು ಮಾತನಾಡಿರಲಿಲ್ಲ. ಈಗ ಡಿವೋರ್ಸ್ ನೋಟಿಸ್ ಕಳುಹಿಸಿದ್ದಾನೆ. ನಾವು ಕೂಡ ಕಾನೂನಿನ ಮೂಲಕ ಉತ್ತರ ನೀಡುತ್ತೇವೆ” ಎಂದು ಭೈರಪ್ಪ ಹೇಳಿದ್ದಾರೆ.
ಯುವ ರಾಜ್‌ಕುಮಾರ್ ಅವರು ಪತ್ನಿ ಶ್ರೀದೇವಿಯಿಂದ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ. ರಾಘವೇಂದ್ರ ರಾಜಕುಮಾರ್ ಅವರ ಪುತ್ರ ಯುವ ರಾಜ್‌ಕುಮಾರ್ ಭಾರತೀಯ ವಿವಾಹ ಕಾಯ್ದೆ 13(1)ಅಡಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಜೂನ್ 6ರಂದು ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು ಎಂದು ವರದಿಯಾಗಿದೆ. ಹೆಂಡತಿಯಿಂದ ಅಗೌರವ ಹಾಗೂ ಮಾನಸಿಕ ಕ್ರೌರ್ಯ ಎದುರಿಸುತ್ತಿದ್ದೆ ಎಂದು ಯುವ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಪತ್ನಿ ಮಾನಸಿಕವಾಗಿ ಟಾರ್ಚರ್ ಕೊಡುತ್ತಿದ್ದಾರೆ ಎಂದು ಆರೋಪ ಮಾಡಿ ಯುವ ಕೇಸ್ ಕೂಡ ದಾಖಲು ಮಾಡಿದ್ದಾರೆ. ನೋಟಿಸ್ ಜಾರಿ ಮಾಡಿರುವ ನ್ಯಾಯಾಲಯವು ಜುಲೈ 4ಕ್ಕೆ ವಿಚಾರಣೆ ಮುಂದೂಡಿದೆ.
ಇದನ್ನೂ ಓದಿ: Yuva Rajkumar: ಯುವ-ಶ್ರೀದೇವಿ ಡಿವೋರ್ಸ್ ಬಗ್ಗೆ ಮೊದಲೇ ಗೊತ್ತಿತ್ತು; ಶ್ರೀದೇವಿ ತಂದೆ ಭೈರಪ್ಪ ಹೇಳಿಕೆ