Site icon Vistara News

Movies on Israel: ಪ್ಯಾಲೇಸ್ತಿನ್‌ ಉಗ್ರರ ವಿರುದ್ಧ ಇಸ್ರೇಲ್ ಸೇಡು! ಮೈನವಿರೇಳಿಸುವ ಈ ಸಿನೆಮಾಗಳನ್ನು ನೋಡಲೇಬೇಕು!

Movies on Israel

ಇಸ್ರೇಲ್-ಪ್ಯಾಲೇಸ್ತಿನ್‌ ಸಂಘರ್ಷ (Israel-Palestine Conflict) ಕೆಲವು ತಿಂಗಳುಗಳಿಂದ (Movies on Israel) ಉಲ್ಬಣಗೊಂಡಿದೆ. ಇದರಲ್ಲಿ ಸಾವಿರಾರು ಜನರು ಸಾವನ್ನಪ್ಪಿದ್ದಾರೆ. ಲಕ್ಷಾಂತರ ಮಂದಿ ವಸತಿ ಕಳೆದುಕೊಂಡು ಬೇರೆ ಸ್ಥಳಗಳಿಗೆ ವಲಸೆ ಹೋಗಿದ್ದಾರೆ. ಯುದ್ಧದ (war) ಸನ್ನಿವೇಶವನ್ನು ಹಲವಾರು ಚಲನಚಿತ್ರಗಳು (film) ಸೆರೆ ಹಿಡಿದಿದ್ದರೂ ಅದು ಜನಸಾಮಾನ್ಯರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವುದು ಕಡಿಮೆ. ಆದರೆ ಈ ಐದು ಚಲನಚಿತ್ರಗಳು ಮಾತ್ರ ಯುದ್ಧದ ಚಿತ್ರಣವನ್ನು ಮನಮುಟ್ಟುವಂತೆ ಕಟ್ಟಿ ಕೊಟ್ಟಿದೆ.

ಮ್ಯೂನಿಚ್

2005ರ ಈ ಚಲನಚಿತ್ರವು ಪಶ್ಚಿಮ ಜರ್ಮನಿಯ ಮ್ಯೂನಿಚ್‌ನಲ್ಲಿ 1972ರ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ 11 ಇಸ್ರೇಲ್ ಕ್ರೀಡಾಪಟುಗಳು ಮತ್ತು ಅಧಿಕಾರಿಗಳ ಅಪಹರಣ-ಹತ್ಯೆಯನ್ನು ಆಧರಿಸಿದೆ.


ಹೆಸರಾಂತ ನಿರ್ದೇಶಕ ಸ್ಟೀವನ್ ಸ್ಪೀಲ್ಬರ್ಗ್ ನಿರ್ದೇಶನದ ಈ ಚಲನಚಿತ್ರವು ‘ಬ್ಲ್ಯಾಕ್ ಸೆಪ್ಟೆಂಬರ್’ ಎಂಬ ಪ್ಯಾಲೆಸ್ತೀನಿಯನ್ ಭಯೋತ್ಪಾದಕ ಸಂಘಟನೆ ನಡೆಸಿದ ಭೀಕರ ಹತ್ಯೆಯ ಅನಂತರದ ಪರಿಣಾಮಗಳನ್ನು ಬಿಂಬಿಸಿದೆ. ಸೇಡಿನ ಕಥೆಯನ್ನು ಆಧರಿಸಿರುವ ಈ ಚಿತ್ರವು ಮುಯ್ಯಿಗೆ ಮುಯ್ಯಿ ಎಂಬಂತೆ ‘ಕಣ್ಣಿಗೆ ಕಣ್ಣು’ ಎಂಬುದನ್ನು ಉಲ್ಲೇಖಿಸುತ್ತದೆ. ತನ್ನ ದೇಶದ ಕ್ರೀಡಾಪಟುಗಳ ಬರ್ಬರ ಹತ್ಯೆ ನಡೆಸಿದ ಉಗ್ರರನ್ನು ಇಸ್ರೇಲ್‌ ಬೇಹುಗಾರಿಕೆ ಪಡೆ ಹುಡುಕಿ ಹುಡುಕಿ ಕೊಲ್ಲುವ ಸನ್ನಿವೇಶಗಳು ರೋಮಾಂಚನಗೊಳಿಸುತ್ತವೆ.

ರೈಡ್ ಆನ್ ಎಂಟೆಬ್ಬೆ

1977ರ ಈ ಚಲನಚಿತ್ರವು ʼಆಪರೇಷನ್ ಎಂಟೆಬ್ಬೆʼ ಮೇಲೆ ಆಧರಿತವಾಗಿದೆ. ನಾಲ್ವರು ಪ್ಯಾಲೇಸ್ತಿನಿಯನ್‌ ಭಯೋತ್ಪಾದಕರು ಹಲವಾರು ಇಸ್ರೇಲಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಏರ್ ಫ್ರಾನ್ಸ್ ಏರ್‌ಬಸ್ ಎ300 ಅನ್ನು ಹೈಜಾಕ್ ಮಾಡಿದ ಅನಂತರ ಇಸ್ರೇಲ್ ಸರ್ಕಾರವು ಯೋಜಿಸಿದ ರಕ್ಷಣಾ ಕಾರ್ಯಾಚರಣೆ ಇದಾಗಿದೆ.


ಚಿತ್ರವು ಉಗಾಂಡಾದ ಎಂಟೆಬ್ಬೆ ವಿಮಾನ ನಿಲ್ದಾಣದಿಂದ ಡೇರ್‌ಡೆವಿಲ್ ರಕ್ಷಣಾ ಕಾರ್ಯಾಚರಣೆಗಳ ಮೇಲೆ ಕೇಂದ್ರೀಕರಿಸುತ್ತದೆ. ‘ಆಪರೇಷನ್ ಥಂಡರ್ಬೋಲ್ಟ್’ ಶೀರ್ಷಿಕೆಯ ಕಾರ್ಯಾಚರಣೆಯು ಅತ್ಯಂತ ಕಷ್ಟಕರವಾಗಿತ್ತು. ಯಾಕೆಂದರೆ ಭಯೋತ್ಪಾದಕರು ಉಗಾಂಡಾದ ಅಧ್ಯಕ್ಷ ಇದಿ ಅಬಿನ್ ಅವರ ಬೆಂಬಲವನ್ನು ಹೊಂದಿದ್ದರು. ಆದರೂ ಇಸ್ರೇಲ್‌ ಯೋಧರು ಭಾರಿ ಸಾಹಸದಿಂದ ಮೇಲುಗೈ ಸಾಧಿಸಿದರು. ಈ ಚಿತ್ರವು ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಪಡೆದಿದೆ.

ಅಜಾಮಿ

ಈ ಚಲನಚಿತ್ರದ ಕತೆಯನ್ನು ಪ್ಯಾಲೇಸ್ತಿನಿಯನ್ ಸ್ಕ್ಯಾಂಡರ್ ಕಾಪ್ಟಿ ಮತ್ತು ಇಸ್ರೇಲ್ ಯಹೂದಿ ಯಾರೋನ್ ಶಾನಿ ಬರೆದಿದ್ದಾರೆ. ಇದು ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ಜೀವನದ ಸುತ್ತ ಸುತ್ತುತ್ತದೆ.


ಇಸ್ರೇಲ್‌ನ ಟೆಲ್ ಅವಿವ್‌ನಲ್ಲಿರುವ ಜಾಫಾ ಚಿತ್ರದ ಕೇಂದ್ರ ಬಿಂದು. ಇಲ್ಲಿ ಹಲವಾರು ಪಾತ್ರಗಳಿವೆ. ಅವರೆಲ್ಲರೂ ಬಡವರು ಮತ್ತು ಸಾಕಷ್ಟು ಸಂಘರ್ಷವನ್ನು ಎದುರಿಸುತ್ತಾರೆ. ಇಸ್ರೇಲ್ – ಅರಬ್ ಜಗತ್ತಿನಲ್ಲಿ ಜೀವನದ ಸಂಪೂರ್ಣ ವಾಸ್ತವ, ಹಿಂಸೆ, ಪ್ರೀತಿ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಈ ಚಿತ್ರದಲ್ಲಿ ಚಿತ್ರಿಸಲಾಗಿದೆ.

ಪ್ಯಾರಡೈಸ್ ನೌ

ಈ ಚಿತ್ರವು ಟೆಲ್ ಅವೀವ್‌ನ ಮಿಲಿಟರಿ ಚೆಕ್‌ಪಾಯಿಂಟ್‌ನಲ್ಲಿ ಬಾಂಬ್‌ಗಳನ್ನು ಸ್ಫೋಟಿಸುವ ಕಾರ್ಯವನ್ನು ವಹಿಸಿಕೊಂಡಿರುವ ಇಬ್ಬರು ಪ್ಯಾಲೇಸ್ತಿನಿಯನ್ ಆತ್ಮಹತ್ಯಾ ಬಾಂಬರ್‌ಗಳನ್ನು ಆಧರಿಸಿದೆ. ಮದುವೆಯಲ್ಲಿ ಪಾಲ್ಗೊಳ್ಳುವ ನೆಪದಲ್ಲಿ ಇಬ್ಬರು ಇಸ್ರೇಲ್ ಪ್ರಜೆಗಳಂತೆ ವೇಷ ಧರಿಸಿ ಸ್ಫೋಟಕ್ಕೆ ಮುಂದಾಗಿದ್ದರು.


ಇಸ್ರೇಲ್ ಗಡಿ ದಾಟುವಾಗ ನಡೆಯುವ ಘಟನೆಗಳು, ಆತ್ಮಹತ್ಯಾ ಬಾಂಬರ್‌ಗಳಾಗಲು ಕಾರಣವಾಗುವ ಭಾವನಾತ್ಮಕ ಮತ್ತು ಮಾನಸಿಕ ಅಂಶಗಳನ್ನು ಸೂಕ್ಷ್ಮವಾಗಿ ಸಿನೆಮಾದಲ್ಲಿ ಮನೋಜ್ಞವಾಗಿ ಚಿತ್ರಿಸಲಾಗಿದೆ. ಇದು ಅತ್ಯುತ್ತಮ ವಿದೇಶಿ ಚಿತ್ರ ಎಂಬ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪಡೆದಿದೆ.

ಲೆಮನ್ ಟ್ರೀ

ಪ್ಯಾಲೇಸ್ತಿನಿಯನ್ ಮಹಿಳೆಯ ಹೋರಾಟದ ಕಟುವಾದ ಮತ್ತು ಸುಂದರವಾದ ಕಥೆಯನ್ನು ಈ ಚಿತ್ರ ಒಳಗೊಂಡಿದೆ. ಇಸ್ರೇಲ್ ಅಧಿಕಾರಿಗಳು ತನ್ನ ನಿಂಬೆ ತೋಟದಲ್ಲಿನ ಮರಗಳನ್ನು ಕಿತ್ತು ಹಾಕುವುದನ್ನು ತಡೆಯುವುದು ಈ ಚಿತ್ರದ ಸಾರ. ಪ್ರಪಂಚದಾದ್ಯಂತದ ವಿವಿಧ ಚಲನಚಿತ್ರೋತ್ಸವಗಳಲ್ಲಿ ಈ ಚಿತ್ರವನ್ನು ಪ್ರದರ್ಶಿಸಲಾಗಿದೆ. ಇಸ್ರೇಲಿ ರಕ್ಷಣಾ ಸಚಿವ ಇಸ್ರೇಲ್ ನವೊನ್ ಅವರು ಪ್ಯಾಲೇಸ್ತಿನಿಯನ್ ಮಹಿಳೆ ಸಲ್ಮಾ ಅವರ ಮನೆಯ ಪಕ್ಕದಲ್ಲಿ ವಾಸಿಸುತ್ತಿದ್ದರು.


ಇದನ್ನೂ ಓದಿ: Pushpa 2: ಪುಷ್ಪ 2 ಕ್ಲೈ ಮ್ಯಾಕ್ಸ್‌ ದೃಶ್ಯ ಲೀಕ್‌; ಕೋಪ ಹೊರ ಹಾಕಿದ ಅರ್ಜುನ್‌ ಫ್ಯಾನ್ಸ್‌!

ಸಲ್ಮಾ ಅವರ ನಿಂಬೆ ತೋಟ ಅವರಿಗೆ ರಹಸ್ಯವಾಗಿ ಕಾಣುತ್ತದೆ ಮತ್ತು ಬೆದರಿಕೆಯನ್ನು ಒಡ್ಡಿದಂತೆ ಭಾಸವಾಗುತ್ತದೆ. ಹೀಗಾಗಿ ಅಧಿಕಾರಿಗಳು ಎಲ್ಲಾ ಮರಗಳನ್ನು ಕಿತ್ತುಹಾಕಲು ಯೋಜಿಸುತ್ತಾರೆ. ಆದರೆ ಸಲ್ಮಾ ಮತ್ತು ಅವರ ವಕೀಲರು ಪ್ರಕರಣವನ್ನು ಸುಪ್ರೀಂ ಕೋರ್ಟ್‌ಗೆ ತೆಗೆದುಕೊಳ್ಳಲು ನಿರ್ಧರಿಸುತ್ತಾರೆ. ಚಲನಚಿತ್ರವು ವಿವಿಧ ವಿಷಯಗಳ ಮೇಲೆ ನೆಲೆಸಿದೆ. ಮಾನವ ಸಹಾನುಭೂತಿ ಮತ್ತು ಭಾವನೆಯ ಮೇಲೂ ಬೆಳಕು ಚೆಲ್ಲಿದೆ.

Exit mobile version