Site icon Vistara News

Jetlog Pub: ನಟ ದರ್ಶನ್‌ ಅವರೇ ಟಾರ್ಗೆಟ್‌ ಯಾಕೆ? ರಾಕ್‌ಲೈನ್‌ ವೆಂಕಟೇಶ್‌ ಕಿಡಿ

Actor Darshan

ಬೆಂಗಳೂರು: ಜೆಟ್​ಲಾಗ್ ಪಬ್​ನಲ್ಲಿ (Jetlog Pub) ಕಾಟೇರ ಸಿನಿಮಾದ (Kaatera Movie) ಸಕ್ಸಸ್ ಪಾರ್ಟಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ದರ್ಶನ್, ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ (Rockline Venkatesh) ಸೇರಿ ಹಲವು ನಟರು ಸುಬ್ರಮಣ್ಯ ನಗರ ಪೊಲೀಸ್‌ ಠಾಣೆಗೆ ಖುದ್ದು ಹಾಜರಾಗಿದ್ದಾರೆ. ಈ ವೇಳೆ ಒಂದು ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆದಿದ್ದು, ಅಂದಿನ ಪಾರ್ಟಿ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಆದರೆ, ಈ ವೇಳೆ ರಾಕ್‌ಲೈನ್‌ ವೆಂಕಟೇಶ್‌ ಮಾತನಾಡಿ, ನಟ ದರ್ಶನ್‌ (Actor Darshan) ಅವರನ್ನು ಏಕೆ ಟಾರ್ಗೆಟ್‌ ಮಾಡಲಾಗುತ್ತಿದೆ? ಇದರ ಹಿಂದೆ ಇರುವ ಷಡ್ಯಂತ್ರ ನನಗೆ ಗೊತ್ತಿದೆ ಎಂದು ಕಿಡಿಕಾರಿದ್ದಾರೆ.

ಸುಬ್ರಮಣ್ಯ ನಗರ ಠಾಣೆ ಇನ್ಸ್‌ಪೆಕ್ಟರ್ ಸುರೇಶ್‌ ವಿಚಾರಣೆ ನಡೆಸಿದ್ದಾರೆ. ನಾಲ್ಕು ನಾಲ್ಕು ಜನರಂತೆ ಎರಡು ಹಂತದಲ್ಲಿ ವಿಚಾರಣೆ ನಡೆಸಿದ್ದಾರೆ. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.

ಬಳಿಕ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ರಾಕ್‌ಲೈನ್‌ ವೆಂಕಟೇಶ್‌, ಗ್ರಾಹಕರಿಗೆ ನೋಟಿಸ್ ನೀಡಿದ್ದು ಇದೇ ಮೊದಲು. ದರ್ಶನ್‌ ಅವರ ಸಿನಿಮಾ ಕಾಟೇರ ಚಿತ್ರ ಯಶಸ್ವಿಯಾಗಿದ್ದಕ್ಕೆ ಈ ರೀತಿ ಮಾಡಿದ್ದಾರೆ. ಇದರ ಹಿಂದೆ ಷಡ್ಯಂತ್ರ ಇದೆ ಎಂಬ ಮಾಹಿತಿ ನನಗೆ ಇದೆ ಎಂದು ಕಿಡಿಕಾರಿದ್ದಾರೆ.

ನಮ್ಮನ್ನು ಯಾಕೆ ಟಾರ್ಗೆಟ್‌ ಮಾಡಲಾಗುತ್ತಿದೆ?

ಅಂದು ಸಕ್ಸಸ್‌ ಪಾರ್ಟಿ ಮಾಡಿದೆವು. ಊಟ ಮಾಡಿ ಹೊರಡುವುದು ಸ್ವಲ್ಪ ತಡವಾಯಿತು. ಆದರೆ, ಅಲ್ಲೇನೂ ಗಲಾಟೆ ಆಗಿಲ್ಲ. ನಮಗೆ ಸೌಂದರ್ಯ ಜಗದೀಶ್ ಸಹ ಆಹ್ವಾನ ನೀಡಿದ್ದರು. ಆದರೆ, ನಮ್ಮನ್ನು ಯಾಕೆ ಟಾರ್ಗೆಟ್‌ ಮಾಡಲಾಗುತ್ತಿದೆ? ಹಾಗಂತ ನಾವು ಇದರ ವಿರುದ್ಧ ಕಾನೂನು ಹೋರಾಟ ಮಾಡಲು ಹೋಗುವುದಿಲ್ಲ. ಮುಂದೆ ಏನಾದರೂ ನಮ್ಮ ಮೇಲೆ ಕ್ರಮ ಕೈಗೊಳ್ಳಲು ಮುಂದಾದರೆ ಕಾನೂನು ಹೋರಾಟವನ್ನು ಮಾಡುತ್ತೇವೆ ಎಂದು ರಾಕ್‌ಲೈನ್‌ ವೆಂಕಟೇಶ್‌ ಹೇಳಿದರು.

ಒಂದು ಗಂಟೆ ಬಳಿಕವೂ ಹಲವು ಬಾರ್‌ ಓಪನ್

ಎಷ್ಟೋ ಬಾರ್‌ಗಳು ರಾತ್ರಿ ಒಂದು ಗಂಟೆ ಬಳಿಕ ಓಪನ್ ಆಗಿವೆ. ಅದನ್ನು ಯಾಕೆ ಪ್ರಶ್ನೆ ಮಾಡಿಲ್ಲ? ನಮಗೆ ಒಂದ್ ರೂಲ್ಸ್, ಕಾಮನ್ ಮ್ಯಾನ್‌ಗೆ ಒಂದ್ ರೂಲ್ಸ್ ಅಂತಿಲ್ಲ. ನಾವೇನು ಒಂದು ಗಂಟೆ ನಂತರ ಪಾರ್ಟಿ ಮಾಡಿಲ್ಲ. ಊಟ ಮಾಡಿ ಹೊರಡಲು ತಡವಾಯಿತು. ನಮ್ಮನ್ನು ಯಾರೂ ಕೇಳಿಲ್ಲ, ಅಲ್ಲದೆ ನಾವು ಅಭಿಮಾನಿಗಳನ್ನಾರನ್ನೂ ಒಳಗೆ ಬಿಟ್ಟಿಲ್ಲ. ಅಲ್ಲಿಗೆ ಅಂದು ಪೊಲೀಸರೂ ಬಂದಿರಲಿಲ್ಲ ಎಂದು ರಾಕ್‌ಲೈನ್‌ ವೆಂಕಟೇಶ್‌ ಹೇಳಿದರು.

ನಾವು ಪ್ಲ್ಯಾನ್ ಮಾಡಿ ಏನು ಪಾರ್ಟಿ ಮಾಡಿಲ್ಲ

ನಾವು ಅಲ್ಲೇನು ಪ್ಲ್ಯಾನ್‌ ಮಾಡಿ ಪಾರ್ಟಿ ಮಾಡಿಲ್ಲ. ಊಟ ಮಾಡಿ ಹೊರಟಿದ್ದೆವು. ಒಂದು ವೇಳೆ ನಿಯಮ ಉಲ್ಲಂಘನೆ ಮಾಡಿದ್ದರೆ ತಲೆ ಬಾಗಲೇಬೇಕು. ಆದರೆ, ನಾವು ನಿಯಮವನ್ನು ಉಲ್ಲಂಘನೆ ಮಾಡಿಲ್ಲ. ಒಂದು ಸಿನೆಮಾ ಹಿಟ್ ಆದ ಮೇಲೆ ಮಸಿ ಬಳಿಯುವ ಪ್ರಯತ್ನ ಆಗುತ್ತಲಿದೆ. ದರ್ಶನ್ ಮೇಲೆ ಯಾಕೆ ಟಾರ್ಗೆಟ್ ಮಾಡ್ತಾ ಇದ್ದಾರೋ ಗೊತ್ತಿಲ್ಲ ಎಂದು ರಾಕ್‌ಲೈನ್‌ ವೆಂಕಟೇಶ್‌ ಮತ್ತೊಮ್ಮೆ ದರ್ಶನ್‌ ವಿಚಾರವನ್ನು ಪ್ರಸ್ತಾಪಿಸಿದರು.

ಇದನ್ನೂ ಓದಿ: Captain Miller: ಶಿವಣ್ಣ-ಧನುಷ್‌ ಕಾಂಬಿನೇಶನ್‌ನ ʻಕ್ಯಾಪ್ಟನ್‌ ಮಿಲ್ಲರ್‌ʼ ರಿಲೀಸ್‌ ಡೇಟ್‌ ಅನೌನ್ಸ್‌!

ಊಟ ಮಾಡಿ ಹೊರಡಲು ತಡವಾಯಿತು: ದರ್ಶನ್

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ನಟ ದರ್ಶನ್‌, ಕಾಟೇರ ಸಿನಿಮಾ ಸಕ್ಸಸ್‌ ಪಾರ್ಟಿಗೆ ನನ್ನನ್ನು ನಮ್ಮ ನಿರ್ಮಾಪಕರು ಕರೆದಿದ್ದರು. ನಾನು ನನ್ನ ಸ್ನೇಹಿತ ಚಿಕ್ಕಣ್ಣ, ನೀನಾಸಂ ಸತೀಶ್ ಹಾಗೂ ತರುಣ್ ಎಲ್ಲರೂ ಜೆಟ್‌ಲಾಗ್‌ಗೆ ಹೋಗಿದ್ದೆವು. ಸಿನಿಮಾ ಸಕ್ಸಸ್ ಸಂಬಂಧ ಕೇಕ್ ಕತ್ತರಿಸಿ ಸಿಹಿ ಹಂಚಿಕೊಂಡೆವು. ಬಳಿಕ ಮಾಮೂಲಿ‌ ಪಾರ್ಟಿ ಮಾಡಿದೆವು. ಪಾರ್ಟಿಗೆ ಬಂದವರು ಎಲ್ಲರೂ ಹೊರಟು ಹೋಗಿದ್ದರು. ಊಟ ಮಾಡಿಕೊಂಡು ಹೋಗುವಂತೆ ನಿರ್ಮಾಪಕರು, ಜೆಟ್‌ಲಾಗ್ ಮಾಲೀಕರು ಹೇಳಿದರು. ಅವರೂ ನನಗೆ ಸ್ನೇಹಿತರೇ ಆಗಿದ್ದಾರೆ. ಹಾಗಾಗಿ ನಾನು ಊಟ ಮುಗಿಸಿ ಹೊರಟೆ. ಹಾಗಾಗಿ ಲೇಟ್‌ ಆಯಿತು. ಅದು ಬಿಟ್ಟು ನಾವು ರಾತ್ರಿ ಒಂದು ಗಂಟೆವರೆಗೂ ಪಾರ್ಟಿ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.

Exit mobile version