Site icon Vistara News

Sandalwood : ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನೂತನ ಅಧ್ಯಕ್ಷರ ಆಯ್ಕೆ; ಗೆದ್ದವರ ವಿವರ ಇಲ್ಲಿದೆ

karnataka film chamber

ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (karnataka film chamber of commerce) ಚುನಾವಣಾ (Sandalwood) ಫಲಿತಾಂಶ ಶನಿವಾರ ಸಂಜೆಯ ವೇಳೆಗೆ ಪ್ರಕಟಗೊಂಡಿದೆ. ನಿರ್ಮಾಪಕ ಎನ್​ ಎಂ ಸುರೇಶ್ ಅವರು ಅತ್ಯಧಿಕ ಮತಗಳನ್ನು (337) ಪಡೆಯುವ ಮೂಲಕ ಅಧ್ಯಕ್ಷ ಗದ್ದುಗೆಗೆ ಏರಿದ್ದಾರೆ. ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಶಿಲ್ಪಾ ಸುರೇಶ್​ (217 ಮತ) ಅವರಿಗಿಂತ 120 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ವಿತರಕ ಏ ಗಣೇಶ್ ಅವರು 204 ಮತಗಳನ್ನು ಪಡೆದಿದ್ದರೆ, ಮಾರ್ಸ್ ಸುರೇಶ್ ಅವರ 181 ಮತಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಒಟ್ಟಾರೆ 1599 ಮತಗಳಲ್ಲಿ 967 ಮತಗಳು ಚಲಾವಣೆಯಾಗಿದ್ದವು. ಸೆಪ್ಟೆಂಬರ್​ 23ರಂದು ಚುನಾವಣೆ ನಡೆದು ಅಂದು ಸಂಜೆಯ ವೇಳೆಗೆ ಫಲಿತಾಂಶ ಪ್ರಕಟಿಸಲಾಯಿತು.

ಕೌತುಕ ಮೂಡಿಸಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳ ಆಯ್ಕೆ ಚುನಾವಣೆಯ ಸಂಜೆಯ ತನಕ ನಡೆಯಿತು. ಮತದಾನ ಪ್ರಕ್ರಿಯೆಯಲ್ಲಿ ಸ್ಟಾರ್ ನಟರು, ನಿರ್ಮಾಪಕರು ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು. ನಿರ್ಮಾಪಕ, ಹಂಚಿಕೆದಾರ, ಪ್ರದರ್ಶಕ ಸೇರಿದಂತೆ ಹಲವು ವಲಯಗಳ 93 ಸ್ಥಾನಗಳಿಗೆ ಮತದಾನ ನಡೆಯಿತು. ಇಷ್ಟೊಂದು ಸ್ಥಾನಗಳಿಗೆ ಒಟ್ಟು 158 ಅಭ್ಯರ್ಥಿಗಳು ಕಣದಲ್ಲಿದ್ದರು.

ಅಧ್ಯಕ್ಷರ ಹುದ್ದೆಗೆ ಈ ಬಾರಿ ಪೈಪೋಟಿ ಏರ್ಪಟ್ಟಿತ್ತು. ಎನ್​ಎಂ ಸುರೇಶ್, ವಿತರಕ ಮಾರ್ಸ್ ಸುರೇಶ್, ನಿರ್ಮಾಪಕ ಶಿಲ್ಪ ಶ್ರೀನಿವಾಸ್, ವಿತರಕ ಏ ಗಣೇಶ್ ಅವರುಗಳು ಅಧ್ಯಕ್ಷ ಸ್ಥಾನಕ್ಕಾಗಿ ಭರ್ಜರಿ ಪೈಪೋಟಿ ಒಡ್ಡಿದ್ದರು. ಆದರೆ, ಸುರೇಶ್​ ಅವರಿಗೆ ಸಾರಾ ಗೋವಿಂದು ಸೇರಿದಂತೆ ಮಂಡಳಿಯ ಕೆಲವು ಪ್ರಮುಖರ ಬೆಂಬಲ ಸಿಕ್ಕಿತ್ತು. ಹೀಗಾಗಿ ಅವರೇ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಿದ್ದಾರೆ.

ಇದನ್ನೂ ಓದಿ : Head Bush Movie | ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರಿತ್ತ ವೀರಗಾಸೆ ಕಲಾವಿದರು, ವೀರಶೈವ ಪುರೋಹಿತರು; ಪ್ರದರ್ಶನ ಸ್ಥಗಿತಕ್ಕೆ ಆಗ್ರಹ

ಹಾಲಿ ಅಧ್ಯಕ್ಷರಾಗಿರುವ ಭಾಮಾ ಹರೀಶ್ ಅವರ ಸಹೋದರ ಭಾಮಾ ಗಿರೀಶ್ ಅವರು ನಿರ್ಮಾಪಕರ ಸಂಘದ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ವಿತರಕರ ವಲಯದಿಂದ ಕರಿಸುಬ್ಬು ವಿಜಯ ಸಾಧಿಸಿದ್ದಾರೆ ಪ್ರದರ್ಶಕರ ವಲಯದಿಂದ ಸುಂದರ ರಾಜು ಜಯಭೇರಿ ಬಾರಿಸಿದ್ದಾರೆ. ಖಜಾಂಚಿಯಾಗಿ‌ ಜಯಸಿಂಹ‌ ಮುಸೂರಿ ಗೆಲುವು ತಮ್ಮದಾಗಿಸಿಕೊಂಡಡಿದ್ದಾರೆ.

ಉಪಾಧ್ಯಕ್ಷರಾಗಿ ನಿರ್ಮಾಪಕರ ವಲಯದಿಂದ ಹಿರಿಯ ನಟಿ ಪ್ರಮಿಳಾ ಜೋಷಾಯ್ ಆಯ್ಕೆಯಾಗಿದ್ದಾರೆ. ವಿತರಕರ ವಲಯದಿಂದ ವೆಂಕಟೇಶ್. ಜಿ ಗೆಲುವು ಸಾಧಿಸಿದ್ದರೆ, ಪ್ರದರ್ಶಕರ ವಲಯದಿಂದ ನರಸಿಂಹುಲು ಜಯ ಗಿಟ್ಟಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ ಕಳೆದ ಬಾರಿಗಿಂತ ಸುಮಾರು 55ಕ್ಕೂ ಹೆಚ್ಚು ಅಭ್ಯರ್ಥಿಗಳು ಈ ಬಾರಿ ಕಣದಲ್ಲಿದ್ದರು.

Exit mobile version