ಮಳೆ ಎಂದರೆ ಮುಂಗಾರು, ಮುಂಗಾರು ಮಳೆ ಎಂದ ಕೂಡಲೇ ಅದೇ ಹೆಸರಿನ ಚಲನಚಿತ್ರದ ನೆನಪು. ಈ ಫಿಲಂಗೂ ಮೊದಲು ಮುಂಗಾರು ಇರಲಿಲ್ಲವೇ? ಇತ್ತು. ಮುಂಗಾರು ಮಳೆಯ ಮಧುರಾನುಭೂತಿಯೂ ಇತ್ತು. ಆದರೆ ಈ ಮೂವಿ ಬಂದ ಬಳಿಕ ಮಳೆಯ ಹನಿಗಳ ಜತೆಗೆ ʼʼಮುಂಗಾರು ಮಳೆಯೇ, ಏನು ನಿನ್ನ ಹನಿಗಳ ಲೀಲೆ..ʼʼ ಎಂಬ ಹಾಡು ಬ್ಯಾಕ್‌ಗ್ರೌಂಡಲ್ಲಿ ತೇಲಿ ಬರುತ್ತದೆ. ಮಳೆಯಲ್ಲಿ ನೆನೆಯುವುದು ಎಂದರೆ ಪ್ರೀತಿ, ಪ್ರೇಮ, ಸಾಂಗತ್ಯ, ವಿರಹ ಎಲ್ಲವೂ ಮೇಳೈಸಿದ ಒಂದು ಅನುಭೂತಿ. ಮುಂಗಾರನ್ನು ಇನ್ನಷ್ಟು ಮಧುರವಾಗಿಸಲು ಚಿತ್ರಗೀತೆಗಳು (rain songs) ಸಾಂಗತ್ಯ ಒದಗಿಸುತ್ತವೆ. ಅಂಥ ಕನ್ನಡ ಚಿತ್ರಗೀತೆಗಳು (monsoon songs) ಯಾವುದು ನೋಡೋಣ, ಅವುಗಳನ್ನು ಈ ಮಳೆಗಾಲದಲ್ಲಿ ಕೇಳುತ್ತಾ ಆನಂದಿಸೋಣ.
ಸ್ವಾತಿ ಮುತ್ತಿನ ಮಳೆ ಹನಿಯೆ…
ಬಣ್ಣದ ಗೆಜ್ಜೆ ಚಿತ್ರದ ʼʼಸ್ವಾತಿ ಮುತ್ತಿನ ಮಳೆ ಹನಿಯೆ ಮೆಲ್ಲ ಮೆಲ್ಲನೆ ಧರೆಗಿಳಿಯೆ, ನನ್ನ ರಾಣಿಯ ಹೃದಯದ ಚಿಪ್ಪಿಗೆ ಬಾರೆ ಸರ ಸರನೆʼʼ ಹಾಡು ಹಂಸಲೇಖ ಅವರ ಸಂಗೀತ, ಸಾಹಿತ್ಯದಿಂದಾಗಿ, ಎಸ್‌ಪಿಬಿ ಮತ್ತು ಎಸ್. ಜಾನಕಿ ಅವರ ಮಧುರ ಕಂಠದಿಂದಾಗಿ, ಅಚ್ಚಳಿಯದೆ ಮನದಲ್ಲಿ ಉಳಿಯುತ್ತದೆ. ಮಳೆಯಲ್ಲಿ ತೊನೆದಾಡುವ ರವಿಚಂದ್ರನ್ ಮತ್ತು ಅಮಲಾ ಕೂಡ ಅಮಲೇರಿಸುತ್ತಾರೆ!
ಮುಂಗಾರು ಮಳೆಯೇ
ಮುಂಗಾರು ಮಳೆ ಚಿತ್ರದ ಈ ಹಾಡು, ದಂತಕಥೆಯೇ ಆಗಿ ಹೋಗಿದೆ. ಗಣೇಶ್- ಪೂಜಾ ಗಾಂಧಿ ಅಭಿನಯದ ಮೂಲಕ ಇದನ್ನು ನೋಡುಗರ ಮನದಲ್ಲಿ ಅಚ್ಚೊತ್ತಿಬಿಟ್ಟಿದ್ದಾರೆ ಎನ್ನುವುದು ನಿಜ. ಆದರೆ ಯೋಗರಾಜ್ ಭಟ್ ಅವರ ಸಾಹಿತ್ಯ, ಮನೋಮೂರ್ತಿ ಅವರ ಸಂಗೀತ, ಸೋನು ನಿಗಮ್ ಗಾಯನ ಕೂಡ ಇದನ್ನು ಸೊಗಸಾಗಿಸಿದೆ.
ಮೇಘ ಬಂತು ಮೇಘ
ʼಮಣ್ಣಿನ ದೋಣಿʼ ಚಿತ್ರದಲ್ಲಿ ಡಾ. ರಾಜ್‌ಕುಮಾರ್ ಅವರು ಹಾಡಿದ ʼಮೇಘ ಬಂತು ಮೇಘʼ ಯಾರಿಗೆ ನೆನಪಿಲ್ಲ ಹೇಳಿ! ಅಂಬರೀಶ್ ಮತ್ತು ಸುಧಾರಾಣಿ ತಮ್ಮ ನಟನೆಯ ಮೂಲಕ ಇದನ್ನು ಅಮರವಾಗಿಸಿದ್ದಾರೆ. ಎಂದಿನಂತೆ, ʼಮೇಘ ನೀಲಿಯ ಮೇಘ, ಮೇಘ ಮಲ್ಹಾರ ಮೇಘʼ ಎಂದು ಸಾಗುವ ಇದನ್ನು ಬರೆದು ಸಂಗೀತ ನೀಡಿದವರು ಹಂಸಲೇಖ.
ಮುತ್ತು ಮುತ್ತು ನೀರ ಹನಿಯ…
ʼʼಮುತ್ತು ಮುತ್ತು ನೀರ ಹನಿಯ ತಾಂತನನಂ, ಉಲ್ಲಾಸದ ಮೇರೆ ಮೀರಿ ಧೀಂತನಕಧೀಂʼʼ ಎಂದು ಆರಂಭವಾಗಿ ಮಧುರವಾಗಿ ಸಾಗುವ ಹಾಡು ನಮ್ಮೂರ ಮಂದಾರ ಹೂವೆ ಚಿತ್ರದ್ದು. ಸಂಗೀತ ನೀಡಿದರು ಒನ್ ಆಂಡ್ ಓನ್ಲಿ ಇಳಯರಾಜ! ಸಾಹಿತ್ಯ ಕನ್ನಡ ಸಿನಿರಂಗದ ಕೆ. ಕಲ್ಯಾಣ್ ಅವರದು. ಎಸ್.ಪಿ. ಬಾಲಸುಬ್ರಮಣ್ಯಂ, ಚಿತ್ರಾ ಧ್ವನಿ ನೀಡಿ ಜೀವ ತುಂಬಿದ್ದಾರೆ. ಶಿವರಾಜ್‌ಕುಮಾರ್, ರಮೇಶ್ ಅರವಿಂದ್ ಮತ್ತು ಪ್ರೇಮಾ ಅವರ ಕೆಮಿಸ್ಟ್ರಿ ಇಲ್ಲಿ ಸೊಗಸಾಗಿದೆ.
ಮಳೆಯಲಿ ಜೊತೆಯಲಿ
ಮತ್ತದೇ ಮುಂಗಾರು ಮಳೆಯ ಸೀನ್, ಆದರೆ ಸಿನಿಮಾ ಮಾತ್ರ ಬೇರೆ- ʼಮಳೆಯಲಿ ಜೊತೆಯಲಿ.ʼ ಮತ್ತದೇ ಗಣೇಶ್, ಹಾಡಿದವರು ಮತ್ತದೇ ಸೋನು ನಿಗಮ್. ಹಾಡು ನೀಡಿದವರು ಜಯಂತ ಕಾಯ್ಕಿಣಿ. ಆದರೆ ಈ ಬಾರಿ ನಾಯಕಿ ಅಂಜನಾ ಸುಖಾನಿ. ಸಂಗೀತ ನೀಡಿದವರು ವಿ.ಹರಿಕೃಷ್ಣ. ಪ್ರೀತಂ ಗುಬ್ಬಿ ನಿರ್ದೇಶನದ ಈ ಚಿತ್ರ ಗಣೇಶ್‌ಗೆ ಮತ್ತೊಮ್ಮೆ ಪ್ರೇಮಿಯ ಇಮೇಜ್ ನೀಡಿತು.
ಮಳೆ ನಿಂತು ಹೋದ ಮೇಲೆ
ಜಯಂತ್ ಕಾಯ್ಕಿಣಿ ಸಾಕಷ್ಟು ಮಳೆಯ ಹಾಡುಗಳನ್ನು ಕೊಟ್ಟಿದ್ದಾರೆ. ಅದರಲ್ಲಿ ʼಮಿಲನʼ ಚಿತ್ರದ ʼಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ, ಮಾತೆಲ್ಲ ಮುಗಿದ ಮೇಲೆ ದನಿಯೊಂದು ಕಾಡಿದೆʼ ಹಾಡೂ ಒಂದು. ಮಳೆ ಆರಂಭದ ರೂಪಕವಾಗಿ ಬಂದಿದೆ ಎಂಬುದು ಬಿಟ್ಟರೆ ಇಲ್ಲಿ ಮಳೆಗೆ ಹೆಚ್ಚಿನ ಕೆಲಸವಿಲ್ಲ. ಸಂಗೀತ ಮನೋಮೂರ್ತಿ, ಗಾಯಕರು ಸೋನು ನಿಗಮ್ ಮತ್ತು ಶ್ರೇಯಾ ಘೋಷಾಲ್.
ಮೊದಲ ಮಳೆಯಂತೆ
ʼಮೈನಾʼ ಚಿತ್ರದ ಈ ಹಾಡಿನಲ್ಲಿ ಚೇತನ್ ಮತ್ತು ನಿತ್ಯಾ ಮೆನನ್ ನಿಜಕ್ಕೂ ಆಪ್ತವಾಗುತ್ತಾರೆ. ಮೊದಲ ಮಳೆಯಿಂದ ತಿಯ್ದ ಕೊಂಕಣ್ ರೈಲ್ವೇ ಹಾದಿಯಲ್ಲಿ ಈ ಹಾಡು ಚಿತ್ರೀಕರಿಸಲಾಗಿದ್ದು, ಹಸಿರು ಕಣ್ಣು ತುಂಬುತ್ತದೆ. ಇದರ ಸಾಹಿತ್ಯ ಕವಿರಾಜ್, ಸಂಗೀತ ಜೆಸ್ಸಿ ಗಿಪ್ಟ್ ಮತ್ತು ಹಾಡಿದವರು ಸೋನು ನಿಗಮ್, ಶ್ರೇಯಾ ಘೋಷಾಲ್.