ಚಿತ್ರ: ಅವತಾರ ಪುರುಷ: ಅಷ್ಟದಿಗ್ಬಂಧನ ಮಂಡಲಕ-1
ನಿರ್ದೇಶನ: ಸಿಂಪಲ್ ಸುನಿ
ನಿರ್ಮಾಪಕ: ಪುಷ್ಕರ್ ಮಲ್ಲಿಕಾರ್ಜುನಯ್ಯ
ಸಂಗೀತ: ಅರ್ಜುನ್ ಜನ್ಯ
ಛಾಯಾಗ್ರಹಣ: ವಿಲಿಯಮ್ ಡೇವಿಡ್
ತಾರಾಗಣ: ಶರಣ್, ಆಶಿಕಾ ರಂಗನಾಥ್, ಅಶುತೋಶ್ ರಾಣ, ಸಾಯಿಕುಮಾರ್, ಸುಧಾರಾಣಿ, ಸಾಧುಕೋಕಿಲ, ಶ್ರೀನಗರ ಕಿಟ್ಟಿ, ಭವ್ಯ.
ರೇಟಿಂಗ್: 3/5
ಸಿಂಪಲ್ ಸುನಿ ನಿರ್ದೇಶನದ ಹಾಗೂ ಕರುನಾಡ ಅಧ್ಯಕ್ಷ ಶರಣ್ ಅಭಿನಯದ ಅವತಾರ ಪುರುಷ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿದೆ. ಸಿಂಪಲ್ ಸುನಿ ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಹೊಸ ಬಗೆಯ ಸಿನಿಮಾಗಳನ್ನು ಮಾಡಬೇಕೆಂಬ ಸಾಲಿನಲ್ಲಿರುವ ಮುಂಚೂಣಿ ನಿರ್ದೇಶಕ. ಅವರ ಕಥೆಗಳು ಸಾಮಾನ್ಯವಾಗಿ ಸರಳ ಹಾಗೂ ಸುಂದರವಾಗಿರುತ್ತದೆ. ಆದರೆ ಅವತಾರ ಪುರುಷ ಸಿನಿಮಾ ಅವರ ಈವರೆಗಿನ ಸಿನಿಮಾಗಳಿಗಿಂತ ವಿಭಿನ್ನವಾಗಿದೆ. ಅವತಾರ ಪುರುಷ ಅವರ ಹೊಸ ಬಗೆಯ ಪ್ರಯತ್ನದ ಚಿತ್ರ.
ಕಥೆ ಹೇಗಿದೆ?
ಈ ಚಿತ್ರವು ಎರಡು ಭಾಗವಾಗಿ ಬಿಡುಗಡೆಗೊಳ್ಳಲಿದೆ. ಇದು ಮೊದಲ ಪಾರ್ಟ್.
ವಾಮಾಚಾರದ ಸುತ್ತಲೇ ನಡೆಯುವ ಒಂದು ವಿಭಿನ್ನ ಕಥೆಯನ್ನು ಸುನಿ ಬರೆದಿದ್ದಾರೆ. ಮಾಟ-ಮಂತ್ರ, ತಂತ್ರಗಳ ಆಚರಣೆ ಹಾಗೂ ಮಾಂತ್ರಿಕ ಆಧಿಪತ್ಯಕ್ಕಾಗಿ ಎರಡು ಪಕ್ಷಗಳ ನಡುವಿನ ಪೈಪೋಟಿಯನ್ನು ಕಥೆಯಾಗಿಸಲಾಗಿದೆ. ಈ ಕಥೆಯನ್ನು ಗಮನಿಸಿದಾಗ ಇದೊಂದು ಸುರ-ಅಸುರರ ನಡುವಿನ ಸಂಘರ್ಷ ಅಥವಾ ಧರ್ಮ-ಅಧರ್ಮಗಳ ನಡುವಿನ ಯುದ್ಧದ ಸಂಕೇತದಂತೆ ಕಾಣುತ್ತದೆ. ಪುರಾಣದ ಒಂದು ಮಹತ್ವವಾದ ತ್ರಿಶಂಕುವಿನ ಕಥೆಯನ್ನೂ ಇದಕ್ಕೆ ಜೋಡಿಸಿ ಹೆಣೆಯಲಾಗಿದೆ. ಈ ಕಥೆಯನ್ನು ಸರಿಯಾದ ರೀತಿಯಲ್ಲಿ ಜನರಿಗೆ ತಲುಪಿಸುವ ಯತ್ನ ಇಲ್ಲಿ ಢಾಳಾಗಿ ಕಾಣುತ್ತದೆ. ಇದಕ್ಕೆ ತಕ್ಕಂತೆ ಕೆಲವು ಅಧ್ಯಯನವನ್ನೂ ಮಾಡಿ ನಿರೂಪಿಸಲಾಗಿದ್ದು ಎದ್ದು ಕಾಣುತ್ತದೆ.
ಅಲ್ಲದೆ, ವಾಮಾಚಾರದ ನಡುವೆಯೇ ಸಾಗುವ ಕಥೆಗೆ ಒಂದು ಭಾವನಾತ್ಮಕ ಸಂಗತಿಯನ್ನೂ ಜೋಡಿಸಲಾಗಿದೆ.
ತಂದೆ ಮಗುವಿನ ಸಂಬಂಧ
ಈಗಾಗಲೇ ಟ್ರೇಲರ್‌ನಲ್ಲಿ ತೋರಿಸಿದಂತೆ ಒಬ್ಬ ತಂದೆ ತನ್ನ ಮಗುವನ್ನು ಕಳೆದುಕೊಂಡಿರುತ್ತಾನೆ. ಅವರ ನಿಜವಾದ ಮಗ ಯಾರು? ಎಂಬ ಪ್ರಶ್ನೆಯೇ ಮುಖ್ಯ ಕಥೆ. ಈ ನಡುವೆ ತ್ರಿಶಂಕು ಮಣಿಯನ್ನು ಪಡೆಯುವ ಕಾದಾಟ.
ಕಥೆ ಸರಳವಾಗಿ ಸಾಗುತ್ತದೆ. ಹೊಸ ಹೊಸ ತಿರುವುಗಳನ್ನು ನೀಡುವ ಪ್ರಯತ್ನ ಮಾಡಲಾಗಿದೆ. ಆದರೆ ಅದು ಅನಿರೀಕ್ಷಿತ ತಿರುವುಗಳಾಗಿ ಮೂಡಿಬಂದಿಲ್ಲ. ಶ್ರೀನಗರ ಕಿಟ್ಟಿಯ ಪಾತ್ರದ ಎಂಟ್ರಿ ಮಾತ್ರ ರೋಚಕವಾಗಿದೆ. ಉಳಿದಂತೆ ಕಥೆ ಹೇಗೆ ಮುಂದೆ ಸಾಗುತ್ತದೆ ಎಂದು ಪ್ರೇಕ್ಷಕ ಸುಲಭವಾಗಿ ಮೊದಲೇ ಊಹಿಸಬಹುದಾಗಿದೆ.
ಚಿತ್ರದ ಪ್ರಮುಖ ಅಂಶಗಳು:
- ಇದು ಸಿಂಪಲ್ ಸುನಿ ಹಾಗೂ ಶರಣ್ ಅವರ ಕಾಂಬಿನೇಷನ್ನ ಮೊದಲ ಚಿತ್ರ. ಶರಣ್ ಅವರ ಮೊದಲ ಬಿಗ್ ಬಜೆಟ್ ಮೂವಿ ಎಂದೂ ಹೇಳಲಾಗಿದೆ.
- ಚಿತ್ರದ ಮೊದಲಾರ್ಧ ತೀರಾ ಸಾಮಾನ್ಯವಾಗಿದೆ. ಆದರೆ ಇಂಟರ್ವಲ್ ನಂತರ ಕುತೂಹಲದಿಂದ ನೋಡುವಂತೆ ಪ್ರೇಕ್ಷಕರ ಗಮನವನ್ನು ಹಿಡಿದಿಡುವಲ್ಲಿ ಚಿತ್ರ ಯಶಸ್ವಿಯಾಗಿದೆ. ಹೊಸ ಬಗೆಯಲ್ಲಿ ಪುರಾಣದ ಕತೆಯನ್ನು ತೋರಿಸಲಾಗಿದೆ. ವಿಷುವಲ್ ಎಫೆಕ್ಟ್ಸ್ ಮೂಲಕ ಕಥೆಯನ್ನು ನಿರೂಪಿಸಲಾಗಿದ್ದು ವಿಶೇಷವಾಗಿ ಗಮನ ಸೆಳೆಯುತ್ತದೆ. ಈ ವಿಷಯದಲ್ಲಿ ಚಿತ್ರದ ಮೇಕಿಂಗ್ ತಂಡ ಗೆದ್ದಿದೆ ಎಂದು ಹೇಳಬಹುದು.
- ಸಾಮಾನ್ಯವಾಗಿ ಸುನಿ ನಿರ್ದೇಶನದ ಚಿತ್ರದಲ್ಲಿ ಪಂಚ್ ಲೈನ್ಗಳು ಆಕರ್ಷಿಸುತ್ತವೆ. ಈ ಸಿನಿಮಾದಲ್ಲೂ ಹಲವು ಪಂಚ್ ಲೈನ್ಗಳು ಖುಷಿ ನೀಡುತ್ತವೆ. ಹಾಗೂ ಸಂಭಾಷಣೆ ಕೂಡ ಸೊಗಸಾಗಿದೆ. ಸುನಿ ಅವರ ಈವರೆಗಿನ ಸಿನಿಮಾಗಳಿಗಿಂತ ಕಾಮಿಡಿ ಡೈಲಾಗ್ಗಳು ಕಮ್ಮಿಯಿದೆ. ಆದರೆ ಈ ಚಿತ್ರದ ಕಥೆ ಗಂಭೀರವಾಗಿದ್ದು, ಕಾಮಿಡಿಗೆ ಅವಕಾಶ ಕಡಿಮೆ. ಹಾಗಾಗಿ ಅದರಿಂದ ಯಾವುದೇ ತೊಡಕು ಉಂಟಾಗಿಲ್ಲ.
- ಕಂಟೆಂಪರರಿ ಜಗತ್ತಿಗೆ ಹೊಂದುವಂತಹ ಅಂಶಗಳನ್ನು ಸೇರಿಸಲಾಗಿದೆ. ಆದರೆ ಅದು ಸಹಜವಾಗಿ ಮೂಡಿಬರದೇ ಒತ್ತಾಯಪೂರ್ವಕವಾಗಿ ಸೇರಿಸದಂತೆ ಭಾಸವಾಗುತ್ತದೆ. ಉದಾಹರಣೆಗೆ, ಕೆಲವು ಹಾಡಿನಲ್ಲಿ ಬರುವ ಸಾಲುಗಳು ಅಥವಾ ಸಿನಿಮಾದ ಕೆಲವು ಡೈಲಾಗ್ಗಳು ಈ ಅನುಭವ ನೀಡುತ್ತದೆ.
- ಚಿತ್ರದ ದೃಶ್ಯಗಳಿಗೆ ಹೊಂದುವಂತಹ ಒಳ್ಳೆಯ ಬ್ಯಾಕ್ಗ್ರೌಂಡ್ ಮ್ಯೂಸಿಕ್ ಅರ್ಜುನ್ ಜನ್ಯ ನೀಡಿದ್ದಾರೆ. ಆದರೆ ಹಾಡುಗಳು ಯಾವುದೂ ಅಷ್ಟಾಗಿ ನೆನಪಿನಲ್ಲಿ ಉಳಿಯುವುದಿಲ್ಲ.
- ಕ್ಯಾಮೆರಾ ಹಿಂದೆ ವಿಲಿಯಮ್ ಡೇವಿಡ್ ಉತ್ತಮ ಕೈಚಳಕವನ್ನು ತೋರಿದ್ದಾರೆ. ಕೆಲವು ದೃಶ್ಯಗಳು ನೆನಪಿನಲ್ಲಿ ಉಳಿಯುವಂತೆ ಚಿತ್ರಿಸಲಾಗಿದೆ. ಆದರೆ ಕೆಲವು ಇನ್ನೂ ಉತ್ತಮಗೊಳಿಸಬಹುದಿತ್ತು ಎಂದೆನಿಸುತ್ತದೆ.
ಅಭಿನಯ ಹೇಗಿದೆ?
- ಮುಖ್ಯ ಪಾತ್ರದಲ್ಲಿ ಶರಣ್ ಅಭಿನಯ ಮೆಚುವಂಥದ್ದು. ಶರಣ್ ಅವರ ಕಾಮಿಡಿ ಟೈಮಿಂಗ್ ಅದ್ಭುತವಾಗಿದೆ. ಅದಕ್ಕೆ ಸೂಕ್ತ ಸಂಭಾಷಣೆಯನ್ನು ಸುನಿ ಬರೆದಿದ್ದಾರೆ. ಶರಣ್ ಈ ಹಿಂದೆ ರಾಜರಾಜೇಂದ್ರದಂತಹ ಸಿನಿಮಾದಲ್ಲಿ ಇಏ ರೀತಿಯ ಪಾತ್ರ ನಿರ್ವಹಿಸಿದ್ದರು. ಇದೂ ಕೂಡ ಅದಕ್ಕೆ ಹತ್ತಿರವಾಗಿದೆ.
- ಆಶಿಕಾ ರಂಗನಾಥ್ ಈವರೆಗೆ ಮಾಡಿದ ಚಿತ್ರಗಳಿಗಿಂತ ಇದರಲ್ಲಿ ಹೆಚ್ಚನ ಆತ್ಮವಿಶ್ವಾಸದಲ್ಲಿ ಅಭಿನಯಿಸಿದಂತೆ ಕಾಣುತ್ತದೆ. ಮೊದಲ ಅರ್ಧದಲ್ಲಿ ಸಾಮನ್ಯ ಎಂದು ಅನಿಸುವ ಭವ್ಯ ಅವರ ಅಭಿನಯ ಚಿತ್ರದ ಕ್ಲೈಮಾಕ್ಸ್ನಲ್ಲಿ ಬೆರಗು ಮೂಡಿಸಿದ್ದಾರೆ. ಇನ್ನು ಸಾಯಿಕುಮಾರ್ ಹಾಗೂ ಸುಧಾರಾಣಿ ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
- ಮುಖ್ಯ ಖಳನಾಯಕನ ಪಾತ್ರದಲ್ಲಿ ಅಶುತೋಶ್ ರಾಣ ಮಾಂತ್ರಿಕನ ಲುಕ್ನಲ್ಲಿ ಭಯಾನಕವಾಗಿ ಕಾಣುತ್ತಾರೆ. ಬಾಲಾಜಿ ರಾಣ ನಟನೆ ಕೂಡ ಕಣ್ಣುಸೆಳೆಯುತ್ತದೆ. ಇನ್ನು ಹಾಸ್ಯಪಾತ್ರದಲ್ಲಿ ಸಾಧುಕೋಕಿಲ ಕಾಣಿಸಿಕೊಂಡಿದ್ದಾರೆ. ಆದರೆ ಈ ಸಿನಿಮಾದಲ್ಲಿ ಅವರ ಪಾತ್ರಕ್ಕೆ ಹೆಚ್ಚು ಒತ್ತು ನೀಡಿದಂತೆ ಕಂಡಿಲ್ಲ. ಆದರೆ ಮುಂದಿನ ಪಾರ್ಟ್ನಲ್ಲಿ ಅವರ ಪಾತ್ರಕ್ಕೆ ಮಹತ್ವವಿರಬಹುದೇ? ಎಂಬ ಸುಳಿವು ಹುಟ್ಟಿಹಾಕಿದೆ.
- ಖದರ್ ಲುಕ್ನಲ್ಲಿ ಎಂಟ್ರಿ ಕೊಡುವ ಶ್ರೀನಗರ ಕಿಟ್ಟಿಯ ಪಾತ್ರವೇ ಚಿತ್ರದ ಸಿಗ್ನೇಚರ್. ಅವರ ವಸ್ತ್ರಾಲಂಕಾರ ಹಾಗೂ ಮೇಕಪ್ ಮಾಂತ್ರಿಕನನ್ನೇ ಕಂಡಂತೆ ಆಗುತ್ತದೆ. ಅವರ ಗಂಭೀರವಾದ ಅಭಿನಯ ವಿಶೇಷವಾಗಿದೆ.
ಪಾರ್ಟ್ 2ನಲ್ಲಿ ಏನು ನಿರೀಕ್ಷಿಸಬಹುದು?
ರಾಮ ಜೋಯಿಸರ ಕಳೆದುಹೋದ ನಿಜವಾದ ಮಗ ಯಾರು? ತ್ರಿಶಂಕು ಮಣಿಯನ್ನು ಯಾರು ಪಡೆಯುತ್ತಾರೆ? ಯಾರು ತ್ರಿಶಂಕು ಸ್ವರ್ಗಕ್ಕೆ ಪಯಣಿಸುತ್ತಾರೆ? ಮುಖ್ಯ ಖಳನಾದ ಧಾರಕ ಹಾಗೂ ಶರಣ್ ನಿರ್ವಹಿಸಿದ ಕರ್ಣನ ಪಾತ್ರದ ನಡುವಿನ ಪೈಪೋಟಿಯಲ್ಲಿ ಯಾರು ಗೆಲ್ಲುತ್ತಾರೆ? ಶ್ರೀನಗರ ಕಿಟ್ಟಿಯ ಕುಮಾರನ ಪಾತ್ರ ಮುಂದೆ ಏನು ಹೆಜ್ಜೆಯಿಡುತ್ತಾನೆ? ಈ ಎಲ್ಲಾ ಪ್ರಶ್ನೆಗಳನ್ನು ಮೊದಲ ಭಾಗ ಹುಟ್ಟಿಹಾಕಿದೆ.
ಇನ್ನು ಈ ಪ್ರಶ್ನೆಗಳಿಗೆ ಉತ್ತರ ʼಅವತಾರಪುರುಷ: ತ್ರಿಶಂಕುಗಮನ- 2ʼ ದಲ್ಲಿ ಸಿಗುವ ನಿರೀಕ್ಷೆ ಹುಟ್ಟಿಸಿದೆ.
ಇದನ್ನೂ ಓದಿ: KGF ಸಿನಿಮಾ ವಿಮರ್ಶೆ