Site icon Vistara News

Movie Review | ರೋಚಕ ಪಯಣದ ಅನುಭವ ನೀಡುವ ವಿಂಡೋ ಸೀಟ್‌

ಪ್ರತಿದಿನ ಟ್ರೇನ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಸುತ್ತಮುತ್ತಲಿನ ಹಲವಾರು ಘಟನೆಗಳು ಕಣ್ಣಿಗೆ ಬೀಳುತ್ತಿರುತ್ತವೆ. ಕೆಲವೊಂದು ಮನಸ್ಸಿನ ಮೇಲೆ ಆಳವಾಗಿ ಪ್ರಭಾವ ಬೀರುತ್ತವೆ. ಅಚ್ಚಾಗಿ ಉಳಿದುಬಿಡುತ್ತದೆ. ವಿಂಡೋ ಸೀಟ್‌ ಕೂಡ ಅದೇ ಅನುಭವ ನೀಡುವ ಸಿನಿಮಾ. ಕಿಟಿಕಿಯ ಪಕ್ಕದ ಸೀಟಿನಲ್ಲಿ ಕುಳಿತು ಹೊರ ಪ್ರಪಂಚದತ್ತ ಕಣ್ಣು ಹಾಯಿಸಿದರೆ ಮೋಹಕ ದೃಶ್ಯಗಳು ಕಾಣಿಸುತ್ತವೆ. ಗಿಡ ಮರಗಳು, ವಿದ್ಯುತ್ ಕಂಬಗಳು, ತಣ್ಣನೆಯ ಗಾಳಿ, ಮೂಗಿನ ಮೇಲೆ ಬೀಳುವ ಮಳೆಯ ಹನಿ ಎಲ್ಲವೂ ಪಯಣವನ್ನು ಸುಂದರಗೊಳಿಸುತ್ತವೆ. ಆದರೆ ಈ ಪಯಣದಲ್ಲಿ ಒಂದು ರೋಚಕ ತಿರುವು ಉಂಟಾದರೆ? ಅದೇ ಈ ವಿಂಡೋ ಸೀಟ್.‌

ಚಿತ್ರ: ವಿಂಡೋ ಸೀಟ್(ಕನ್ನಡ)
ನಿರ್ದೇಶನ: ಶೀತಲ್‌ ಶೆಟ್ಟಿ
ನಿರ್ಮಾಪಕ: ಜಾಕ್‌ ಮಂಜು
ಸಂಗೀತ: ಅರ್ಜುನ ಜನ್ಯ
ಛಾಯಾಗ್ರಹಣ: ವಿಗ್ನೇಶ್‌ ರಾಜ್
ತಾರಾಗಣ: ನಿರೂಪ್‌ ಭಂಡಾರಿ, ಸಂಜನಾ ಆನಂದ್‌, ಅಮೃತಾ ಅಯ್ಯಂಗಾರ್‌, ಲೇಖಾ ನಾಯ್ಡು
ರೇಟಿಂಗ್:‌ 3/5

ರೋಚಕವಾದ ಪ್ರೇಮ ಕಥೆ!

ಇದು ಶೀತಲ್‌ ಶೆಟ್ಟಿ ನಿರ್ದೇಶಿಸಿದ ಮೊದಲ ಸಿನಿಮಾ. ರಘುವೀರ್‌ ಎಂಬ ವ್ಯಕ್ತಿಯ ರೈಲಿನ ಪಯಣದ ಕಥೆ ಇದು. ಪ್ರತಿನಿತ್ಯ ತಾನು ಇಷ್ಟಪಡುವ ಹುಡುಗಿಯನ್ನು ರೈಲಿನ ಕಿಟಕಿಯಿಂದ ನೋಡುತ್ತಿರುವ ಮೌನ ಪ್ರೇಮಿ. ಹಾಗೆ ಪ್ರತಿನಿತ್ಯ ಕಿಟಕಿಯಿಂದ ಹೊರಗೆ ನೋಡುತ್ತಿದ್ದಾಗ ಒಂದು ಸಂದರ್ಭದಲ್ಲಿ ಒಂದು ದುರಂತದ ದೃಶ್ಯ ಕಣ್ಣಿಗೆ ಬೀಳುತ್ತದೆ. ಆತನ ಮನಸ್ಸಿಗೆ ಆಘಾತ ಉಂಟಾಗುತ್ತದೆ. ಕೂಡಲೇ ಪೊಲೀಸರಿಗೆ ದೂರು ನೀಡುತ್ತಾನೆ. ಪೊಲೀಸರು ಈ ಪ್ರಕರಣವನ್ನು ಭೇದಿಸಲು ಮುಂದಾಗುತ್ತಾರೆ. ಒಂದು ಪ್ರಕರಣವನ್ನು ಬಗೆಹರಿಸಲು ಬಂದ ಪೊಲೀಸರ ಮುಂದೆ ಬೇರೊಂದು ಪ್ರಕರಣ ತೆರೆದುಕೊಳ್ಳುತ್ತದೆ.

ಒಂದು ಕೊಲೆಯ ಹಿಂದಿರುವ ನಿಜವಾದ ಕೊಲೆಗಾರ ಯಾರು ಎಂಬ ಪತ್ತೆದಾರಿ ಕಥಾಹಂದರವನ್ನು ನಿರ್ದೇಶಕಿ ಶೀತಲ್‌ ಶೆಟ್ಟಿ ರೋಚಕವಾಗಿ ಹೆಣೆದಿದ್ದಾರೆ.

ವಿಂಡೋ ಸೀಟ್‌ನ ಪಯಣದ ಅನುಭವ!

ಸಾಧಾರಣ ಆರಂಭದೊಂದಿಗೆ ಚಿತ್ರ ತೆರೆದುಕೊಳ್ಳುತ್ತದೆ. ಒಂದು ಪ್ರೇಮಕಥೆಯಂತೆ ಭಾಸವಾಗುತ್ತದೆ. ಆದರೆ, ಮಧ್ಯಂತರದ ಅವಧಿಯ ಸಂದರ್ಭದಲ್ಲಿ ಒಳ್ಳೆಯ ಸಸ್ಪೆನ್ಸ್‌ ಕಥೆಯಾಗಿ ಮಾರ್ಪಾಡುಗೊಳ್ಳುತ್ತದೆ. ಒಂದಾದ ಮೇಲೊಂದು ತಿರುವುಗಳನ್ನು ಪಡೆದುಕೊಳ್ಳುತ್ತಾ ಸಾಗುತ್ತದೆ.

ಇದೊಂದು ತ್ರಿಕೋನ ಪ್ರೇಮಕಥೆ. ನಾಯಕನ ಪಾತ್ರದಲ್ಲಿ ನಿರೂಪ್‌ ಭಂಡಾರಿ ಒಳ್ಳೆಯ ನಟನೆ ತೋರಿಸಿದ್ದಾರೆ. ಚಿತ್ರಕ್ಕೆ ಹೆಗಲು ನೀಡಿದ ಅಮೃತ ಅಯ್ಯಂಗಾರ್‌ ಹಾಗೂ ಸಂಜನಾ ಆನಂದ್‌ ಕೂಡ ತಮ್ಮ ಪಾತ್ರವನ್ನು ಉತ್ತಮವಾಗಿ ನಿಭಾಯಿಸಿದ್ದಾರೆ. ಪೊಲೀಸ್‌ ಪಾತ್ರದಲ್ಲಿ ಕಾಣಿಸಿಕೊಂಡ ಲೇಖಾ ನಾಯ್ಡು ಅವರದ್ದು ಅದ್ಭುತ ನಟನೆ! ರವಿಶಂಕರ್‌ ಹಾಗೂ ಮಧುಸೂಧನ್‌ ರಾವ್‌ ಅವರ ನಟನೆ ಕೂಡ ಸುಂದರವಾಗಿದೆ.

ಚಿತ್ರಕ್ಕೆ ಸಂಗೀತ ನೀಡಿದ ಅರ್ಜುನ್‌ ಜನ್ಯ ಸೊಗಾಸದ ಹಾಡುಗಳನ್ನು ನೀಡಿದ್ದಾರೆ. ವಿಗ್ನೇಶ್‌ ರಾಜ್‌ ಅವರ ಕ್ಯಾಮೆರಾ ಹಿಂದಿನ ಕೆಲಸ ಕೂಡ ಅಭಿನಂದನಾರ್ಹ.

ಚಿತ್ರದಲ್ಲಿ ಕೊರತೆಗಳೇ ಇಲ್ಲವೇ?

ಕನ್ನಡ ಸಿನಿಮಾ ರಂಗದಲ್ಲಿ ಇತ್ತೀಚೆಗೆ ಅನೇಕ ಹೊಸ ಪ್ರಯೋಗಗಳು ನಡೆಯುತ್ತಿವೆ. ಈ ಸಿನಿಮಾ ಕೂಡ ಅದೇ ಸಾಲಿಗೆ ಸೇರುತ್ತದೆ. ಹಾಗೆಯೇ ಕೆಲವು ಕೊರತೆಗಳಿವೆ.

ಈ ಘಟನೆ ನಡೆಯುವುದು ಮಲೆನಾಡಿನ ಸಾಗರದಲ್ಲಿ. ಮಲೆನಾಡು ಎಂಬುದನ್ನು ಅಚ್ಚಾಗಿಸಲು, ಅಲ್ಲಿನ ಸೊಬಗನ್ನು ತೋರಿಸುವ ಪ್ರಯತ್ನ ಇದೆ, ಆದರೆ ಯಶಸ್ವಿಯಾಗಿಲ್ಲ.

ಸಂಭಾಷಣೆಯಲ್ಲಿ ಕೆಲವು ಸಿದ್ಧಾಂತಗಳನ್ನು ಜೋಡಿಸುವ ಪ್ರಯತ್ನ ನಡೆದಿದೆ. ಆದರೆ ಒತ್ತಾಯಪೂರ್ವಕವಾಗಿ ಸೇರಿಸಿದಂತೆ ಕಂಡುಬರುತ್ತದೆ. ಇದು ಕೆಲವೊಮ್ಮೆ ರೈಲು ಕ್ರಾಸಿಂಗ್‌ನಲ್ಲಿ ನಿಂತಾಗ ಉಂಟಾಗುವ ಕಿರಿಕಿರಿಯಂತೆ. ಕೆಲವು ಪಾತ್ರಗಳು ಕೂಡ ಅದೇ ರೀತಿ ಇವೆ.

ಉಳಿದಂತೆ ಈ ಸಿನಿಮಾ ಒಂದು ಒಳ್ಳೆಯ ಪಯಣ. ಕಥೆ, ನಿರ್ದೇಶನ ಎಲ್ಲವೂ ಶ್ಲಾಘನೀಯ. ಹಾಲಿವುಡ್‌ನ ದಿ ಗರ್ಲ್‌ ಆನ್‌ ದಿ ಟ್ರೇನ್‌ ಚಿತ್ರವನ್ನು ನೆನಪಿಸುವಂತಹ ಸಿನಿಮಾ. ಅಂತ್ಯದಲ್ಲಿ ಒಂದು ಹೊಸ ತಿರುವನ್ನು ನೀಡಿದ ಈ ಸಿನಿಮಾ ಆಹ್ಲಾದಕರ ಹಾಗೂ ಅಚ್ಚರಿ!

ಇದನ್ನೂ ಓದಿ: Movie Review | 777 ಚಾರ್ಲಿ ಪ್ರೀತಿಯ ಜರ್ನಿಯಲ್ಲಿ ನಗುವಿದೆ, ಕಣ್ಣೀರಿದೆ, ಮೌನವೂ ಇದೆ!

Exit mobile version