Site icon Vistara News

ನೋಡಲೇಬೇಕಾದ ಸಿನಿಮಾ: Where The Crawdads Sing; ಸ್ವತಂತ್ರ ಹೆಣ್ಣಿನ ಸಂಪೂರ್ಣ ಬದುಕಿನ ಚಿತ್ರಣ

Must Watch movie: Where The Crawdads Sing

Must Watch movie: Where The Crawdads Sing; A picture of the whole life of an independent woman

| ಶಿವರಾಜ್‌ ಡಿ.ಎನ್‌.ಎಸ್.

ನಮ್ಮನ್ನ ನಾವು ಪ್ರೀತಿಸುವಷ್ಟು ಯಾರಿಂದಲೂ ಪ್ರೀತಿಸಲು ಸಾಧ್ಯವಿಲ್ಲ..! ನಮ್ಮನ್ನ ನಾವು ಸಮಾಧಾನಿಸಿಕೊಳ್ಳುವಷ್ಟು ಯಾರಿಂದಲೂ ಸಮಾಧಾನಿಸಲೂ ಸಾಧ್ಯವಿಲ್ಲ, ನಮ್ಮ ಬದುಕೂ ಅಷ್ಟೇ. ನಾವಷ್ಟೇ ಬದುಕದೆ ಬೇರೆ ದಾರಿ ಇಲ್ಲ. ಎಂದುಕೊಳ್ಳುವ ಏಕಾಂಗಿಗಳನ್ನು ಕಲಾಕೃತಿಯಾದ ಈ ಸಿನಿಮಾ ವರ್ಣನೆಗೆ ಸಿಗದ ಆಕೃತಿಯಾಗಿ ಯಾರೋ ಬಿಗಿದಪ್ಪಿ ಕಣ್ಣೀರೊರಸಿ ಸಮಾಧಾನಿಸಿದಂತಹ ಅನುಭವ ನೀಡಬಹುದು. ನಮ್ಮ ಈ ಬದುಕಿನ ಆಸೆ ಕನಸುಗಳು ನಮ್ಮದೇ ಆಗಿದ್ದರೆ ನಾವು ಪ್ರಯತ್ನಸಿದಾಗ ಅವುಗಳನ್ನು ತಲುಪಲು ಅವುಗಳೇ ನಮಗೆ ದಾರಿ ಮಾಡುಕೊಡುತ್ತವೆ. ಆ ಮಾರ್ಗದಲ್ಲಿ ನಮ್ಮ ಪರಿಶ್ರಮ ಎಂದಿಗೂ ವ್ಯರ್ಥವಾಗದು ಎನ್ನುವ ಸಂದೇಶವನ್ನು ಯಾರೋ ಕಿವಿಯಲ್ಲಿ ಪಿಸುಗುಟ್ಟಿ ಹೋದಂತಹ ಅನುಭವ ನೀಡಬಹುದು. ನಾವಷ್ಟೇ ಅಲ್ಲ, ಪ್ರತಿಯೊಂದು ಜೀವಿಯೂ ಬದುಕಲು ಏನು ಮಾಡಬೇಕಾಗಿ ಬರುತ್ತದಯೋ ಅದನ್ನು ಮಾಡಿಯೇ ತೀರುತ್ತದೆ ನೋಡಿ ಎಂದು ಉದಾಹರಿಸಿದಂತೆ ಅನಿಸಲೂಬಹುದು. ಪ್ರೇಕ್ಷಕನಿಗೆ ಕೊನೆಗೆ ಊರಿಂದಾಚೆ ಯಾವುದೋ ಒಂದು ಸುಂದರ ವಾತಾವರಣದ ನದಿ ದಂಡೆಯಲಿ ಸಂಜೆಯ ತಂಗಾಳಿ ತಂಪು ನಮ್ಮ ದೇಹ ಆತ್ಮ ಎಲ್ಲವನ್ನೂ ತಂಪಾಗಿಸಿ, ಸುತ್ತೆಲ್ಲ ಸದ್ದಿಡುವ ಪ್ರಾಣಿ ಪಕ್ಷಿ ಗಿಡ ಮರ ಕೀಟಗಳೆಲ್ಲ ನೀನು ಹುಟ್ಟಿದ್ದಿಯಾ, ಒಂದು ದಿನ ಸಾಯುತ್ತೀಯ. ಈಗ ಹೋಗು, ಎದ್ದೋಗಿ ಬದುಕು.. ಎಂದು ನಮ್ಮ ಮುಂದಿನ ನಡೆಗೆ ಹುರಿದುಂಬಿಸಿ ಉತ್ಸಾಹ ತುಂಬಿ ಕಳುಹಿಸವಂತಹ ಅ‌ನುಭವವನ್ನೂ ನೀಡಬಲ್ಲದು‌. ಸಿನಿಮಾ ನೋಡಿಲ್ಲದವರಿಗೆ ಈ ಪೀಠಿಕೆ ಹೆಚ್ಚಾಯಿತು ಅನಿಸಬಹುದೇನೋ, ಸಿನಿಮಾ ನೋಡಿದ ನಂತರ ಇದೂ ಕಡಿಮೆಯಾಯಿತು ಅನಿಸಲೂಬಹುದು. ಈ ಮಾತೆಲ್ಲವೂ ನನ್ನ ಅನಿಸಿಕೆ ಅಷ್ಟೆ.

ವೇರ್ ದ ಕ್ರಾಡ್ಯಾಡ್ಸ್‌ ಸಿಂಗ್‌ (Where The Crawdads Sing) ಸಿನಿಮಾ ಹೆಣ್ಣಿನ ಸಂಪೂರ್ಣ ಜೀವನವನ್ನು ಹೀಗೂ ತೆರೆಗೆ ತರಬಹುದೇ ಎನ್ನುವ ಬೆರಗಿನೊಂದಿಗೆ ಒಂದು ಹೆಣ್ಣು ಹೀಗೂ ಸ್ವತಂತ್ರ ಬದುಕು ಕಟ್ಟಿಕೊಂಡು ಬದುಕ ಬಲ್ಲಳೇ.?, ಪ್ರೀತಿ ಎಂದರೆ ಏನು..? ನಿಜಕ್ಕೂ ಪ್ರೇಮ ಕಾಮದ ನಡುವಿನ ವ್ಯತ್ಯಾಸ ಏನು? ಹಾಗೆ ಯಾರಿಗೇ ಆದರೂ ಕನಿಷ್ಠ ವಿದ್ಯಾಭ್ಯಾಸವಾದರೂ ಯಾಕೆ ಮುಖ್ಯ ಅನ್ನೋದನ್ನೂ ಈ ಸಿನಿಮಾ ಹೇಳಬಲ್ಲದು. ವಾವ್ ..! ಅಮೋಘ, ಚಿತ್ರದಲ್ಲಿ ತೆರೆದಿಟ್ಟಿರುವ ಪ್ರಕೃತಿ ಸೌಂದರ್ಯ ಮನಸೂರೆಗೊಳಿಸದಂತೆಯಂತೂ ಇರದು.

Where the Crawdads Sing (ವೇರ್ ದ ಕ್ರಾಡ್ಯಾಡ್ಸ್ ಸಿಂಗ್) ಇದು 2018 ರಲ್ಲಿ ಪ್ರಕಟಗೊಂಡಿರುವ ಅದೇ ಹೆಸರಿನ ಲೇಖಕಿ ಡೆಲಿಯಾ ಓವೆನ್ಸ್ ಅವರ ಕಾದಂಬರಿಯ ಆಧಾರಿತ ಸಿನಿಮಾವಂತೆ. ಮೇಲ್ನೊಟಕ್ಕೆ ಇದೊಂದು ಮರ್ಡರ್ ಮಿಸ್ಟ್ರಿ ಸಿನಿಮಾ ಎನಿಸಿಕೊಂಡರೂ ಸುಂದರ ಕಥೆಯಿಂದ ಅಡಕವಾಗಿದೆ. ಮರ್ಡರ್ ಮಿಸ್ಟರಿ ಸಿನಿಮಾದಲ್ಲಿ ಏನಿದಿಯಪ್ಪ ಸುಂದರ ಎಂದರೆ ಅದೇ ಈ ಸಿ‌ನಿಮಾದ ವೈಶಿಷ್ಟ್ಯ. ಈ ಕಥೆಯು ‘ಕ್ಹಾಯ’ಳ ಬಾಲ್ಯ ಮತ್ತು ಯೌವ್ವನ ಎರಡು ಕಾಲಘಟ್ಟದ ಎಳೆಗಳ ಸಂಕೋಲೆಗಳೊಂದಿಗೆ ಸಾಗುವ ಚಿತ್ರಕಥೆಯಿರುವಂತ ಸಿನಿಮಾ. ಬದುಕಿನ ಅನೇಕ ಮಜಲುಗಳೊಂದಿಗೆ ಒಂದು ಕೊಲೆಯ ಸುತ್ತಲಿನ ರಹಸ್ಯ ಕೊಲೆಯಾದ ವ್ಯಕ್ತಿಯ ರಹಸ್ಯ, ಹಾಗೂ ಕೊಲೆಗೈದವರ ರಹಸ್ಯ ಬದುಕು. ಎಲ್ಲವೂ ಬರವಣಿಗೆಯಲ್ಲಿ ಅದ್ಭುತವಾಗಿದೆ. ಅಷ್ಟೇ ಅದ್ಭುತವಾಗಿ ತೆರೆಮೇಲೂ ತಂದಿದ್ದಾರೆ. ಮನಮೋಹಕ ದೃಶ್ಯಗಳೊಂದಿಗೆ ಕುತೂಹಲ ಕೆರಳಿಸುತ್ತಲೇ ಸಾಗುವ ಸಿನಿಮಾ ಕೊನೆಗೆ ಚಕಿತಗೊಳಿಸಿ ಒಂದು ರೀತಿಯ ಸಂತೋಷದೊಂದಿಗೆ ಸಮಾಧಾನವನ್ನೂ ನೀಡುತ್ತದೆ.

ಸಿನಿಮಾ ಶುರುವಿನಲ್ಲಿ ಸೈಕಲ್ ತುಳಿಯುತ್ತ ಹೊರಟ ಇಬ್ಬರು ಹುಡುಗರು ಒಂದು ಮೃತ ದೇಹ ನೋಡಿ ಪೊಲೀಸರಿಗೆ ತಿಳಿಸುತ್ತಾರೆ. ಪೋಲಿಸರು ಮರಣೋತ್ತರ ಪರೀಕ್ಷೆ, ಸ್ಥಳ ಪರಿಶೀಲನೆ, ಊರಿನೊದಂತಿಯಲ್ಲವನ್ನೂ ಗಮನಿಸಿ ನಂತರ ಕೊಲೆ ಯಾರು ಮಾಡಿರಬಹುದು ಎನ್ನುವುದನ್ನು ಪತ್ತೆಹಚ್ಚಿ ಕೋರ್ಟಿಗೆ ತಂದು ನಿಲ್ಲಿಸುತ್ತಾರೆ. ಆ ಕೊಲೆ ಆರೋಪಿ ಕ್ಹಾಯ ಕ್ಲಾರ್ಕ್, ‘ಕ್ಹಾಯ’ ಅನ್ನೋದು ಈ ಚಿತ್ರದ ಕತಾ ನಾಯಕಿಯ ಹೆಸರು. ಅವಳೇ ಈ ಕೊಲೆಯ ಆರೋಪಿ ಆಗಿರುತ್ತಾಳೆಯೇ ಹೊರತು ಕೊಲೆಗಾರ್ತಿ ಅಲ್ಲ. ಈ ಕ್ಹಾಯ ಯಾರು.? ಅವಳ ಬಾಲ್ಯ ಹೇಗಿತ್ತು.? ಅವಳ ಯೌವನ ಹೇಗಿತ್ತು.? ಅವಳ ವ್ಯಕ್ತಿತ್ವ ಎಂತದ್ದೂ ಅವಳ ಬದುಕು ಬವಣೆ ಎಲ್ಲವನ್ನೂ ಎಳೆ ಎಳೆಯಾಗಿ ತೆರೆದಿಟ್ಟಿದ್ದಾರೆ ಈ ಸಿನಿಮಾದಲ್ಲಿ.

1960ರ ಅಥವಾ ಯಾವುದೊ ಕಾಲಘಟ್ಟದಲ್ಲಿ North Carolina (ಉತ್ತರ ಕೆರೋಲಿನಾ) ಮಾರ್ಷ್‌ನಲ್ಲಿ ತನ್ನ ಬಡ ಕುಟುಂಬದೊಂದಿಗೆ ವಾಸಿಸುತ್ತಿದ್ದವಳು ಈ ಕ್ಹಾಯ, ಮದ್ಯವ್ಯಸನಿ ತಂದೆಯಿಂದ ನೊಂದು, ಅವಳ ತಾಯಿ ಹಾಗು ಒಡಹುಟ್ಟಿದವರು ಒಬ್ಬೊಬ್ಬರಾಗಿ ಮನೆ ಬಿಟ್ಟು ಹೊರಡ್ತಾರೆ, ಕ್ಹಾಯ ಮಾತ್ರ ಅವಳ ತಂದೆಯ ಕೈಬಿಡದೆ ತಾಯಿಯ ಬರುವಿಕೆಯ ನಿರೀಕ್ಷೆಯಲ್ಲಿ ಅಮ್ಮನ ಪ್ರೀತಿಗೆ ಹಪಾಹಪಿಸುತ್ತ ತಂದೆಯೊಂದಿಗೆ ಇರ್ತಾಳೆ, ನಂತರದಲ್ಲಿ ತಂದೆ ಕೂಡ ತೀರಿ ಹೋಗ್ತಾನೆ. ತಂದೆಯ ವೃತ್ತಿಯನ್ನ ಅನುಸರಿಸಿ ಬದುಕಿನ ದಾರಿ ಕಂಡುಕೊಳ್ಳುತ್ತಾಳೆ. ಕ್ಹಾಯ ಒಬ್ಬಂಟಿಯಾಗಿ ತನ್ನ ಮನೆಯಲ್ಲಿ ವಾಸ ಇರ್ತಾಳೆ. ಅವಳಿಗೆ ಹೊರಗಿನ ಜನ ಅಂದ್ರೆ ಸಂಕೋಚ, ಆಕೆ ತುಂಬು ಯೌವ್ವನದ ಸುಂದರ ಮೊಗದ ಅಂತರ್ಮುಖಿ, ಯಾರೊಂದಿಗೂ ಸೇರದೆ ತನ್ನದೇ ಪ್ರಪಂಚದಲ್ಲಿ ಬುದುಕು ನಡೆಸುತ್ತಿರುತ್ತಾಳೆ, ಊರಿನ ಮಂದಿಯೆಲ್ಲ ಅವಳನ್ನ ಮಾರ್ಷ್ ಗರ್ಲ್ ಎಂದು ಗುರುತಿಸುತ್ತಾರೆ.

ಒಂದು ವ್ಯಾಪಾರ ಮಳಿಗೆಯಲ್ಲಿನ ದಂಪತಿಗಳು ಆಕೆಯನ್ನ ಪ್ರೀತಿಯಿಂದ ಕಾಣುತ್ತಿರುತ್ತಾರೆ, ಕ್ಹಾಯಳ ಬಾಲ್ಯದಿಂದಲೂ ಪರಿಚಿತರಾದ ಅವರೊಂದಿಗೆ ಅವಿನಾಭಾವ ಎಂದು ಹೇಳಲಾಗದ ಅಥವಾ ಹೇಳಲೂ ಬಹುದಾದ ಒಂದುರೀತಿಯ ಸಂಬಂಧ ಹೊಂದಿರುತ್ತಾಳೆ. ಹೀಗೆ ಬದುಕುವಾಗ ಯೌವನಾವಸ್ಥೆಯಲ್ಲಿ ಟೇಟ್ ಸಿಗ್ತಾನೆ ಅವನೊಂದಿಗೆ ವಿಭಿನ್ನರೀತಿಯಲಿ ಸ್ನೇಹ ಚಿಗುರಿ ಬೆಳೆದು ಪ್ರೀತಿ ಅರಳುತ್ತೆ, ಆತ ಇವಳಿಗೆ ಓದು ಬರಹ ಕಲಿಸುತ್ತಾನೆ. ಯಾಕೆ ಆಕೆ ಶಾಲೆಗೆ ಹೋಗಿರ್ಲಿಲ್ವ..? ಖಂಡಿತ ಹೋಗಿದ್ಲು, ಅಲ್ಲಿ ಏನಾಯ್ತು ಯಾಕ್ ಅವಳು ಕಲಿಯಲಿಲ್ಲ ಅಂತ ಸಿನ್ಮಾದಲ್ಲೆ ನೋಡಿ ಭಾವ ಪರವಶರಾಗಬಹುದು. ಕ್ಹಾಯ ಮತ್ತು ಟೇಟ್ ಪ್ರೀತಿ ಪ್ರೇಮ ಪ್ರಣಯದಲ್ಲಿ ಮಿಂದೆದ್ದು ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುತ್ತಾ ಹಚ್ಚಿಕೊಂಡು ಆಗಾಗ ಕೂಡಿ ಜೊತೆಯಾಗಿರ್ತಾರೆ, ಟೇಟ್ ತನ್ನ ವಿದ್ಯಾಭ್ಯಾಸಕ್ಕಾಗಿ ಬೇರೆ ಊರಿಗೆ ಹೋಗುವ ಸಂದರ್ಭ ಎದುರಾಗಿ ಹಿಂದಿರುಗುವ ಭರವಸೆ ಕೊಟ್ಟು ಹೋಗ್ತಾನೆ, ಆದರೆ ಅನಿವಾರ್ಯ ಕಾರಣ ಹೇಳಿದ ದಿನ ವಾಪಸಾಗುವುದಿಲ್ಲ, ನದಿದಂಡೆಯಲ್ಲಿ ಒಂದಿಡೀ ರಾತ್ರಿಹಗಲು ಅವನಿಗಾಗಿ ಕಾಯುವ ದೃಶ್ಯ.. ವಾವ್ ಅವಳ ಆ ವೇದನೆ ಮನ ಮುಟ್ಟಬಹುದು. ಕ್ಹಾಯಳಿಗೆ ಮತ್ತವಳ ಹಳೆಯ ಒಂಟಿತನಕ್ಕೆ ಹೊಂದಿಕೊಳ್ಳಲು ಸಮಯವೇನೂ ಹಿಡಿಯುವುದಿಲ್ಲ….

ಹೀಗೆ ಬದುಕುವಾಗ ಅವಳ ವಾಸಸ್ಥಳ ಪರರ ಸ್ವತ್ತಾಗುವ ಸಂದರ್ಭ ಎದಿರಾಗುತ್ತದೆ, ಅದನ್ನು ಉಳಿಸಿಕೊಳ್ಳಲೂ ಹಗಲು ರಾತ್ರಿ ಶ್ರಮಿಸುತ್ತ, ಟೇಟ್‌ನ ಮಾತಿನಂತೆ ತನ್ನ ಪ್ರಕೃತಿಪ್ರಿಯ ರೇಖಾಚಿತ್ರಗಳು ಮತ್ತು ಬರಹಗಳನ್ನು ಪ್ರಕಟಿಸುವ ಹಂತಕ್ಕೆ ಯೋಜನೆ ರೂಪಿಸಿಕೊಳ್ಳುತ್ತಿರುತ್ತಾಳೆ. ಮತ್ತದೆ ನದಿದಂಡೆ, ಏಕಾಂತ, ದೈನಂದಿನ ಚಟುವಟಿಕೆಗಳ ನಡುವೆ. ಚೇಸ್ ಆಂಡ್ರ್ಯೂಸ್ ಎನ್ನುವ ಮತ್ತೊಬ್ಬ ಯುವಕ ಕ್ಹಾಯ ಳ ಸ್ನೇಹ ಬಯಸಿ ಬರ್ತಾನೆ, ಆದರೆ, ಅವನ ಉದ್ದೇಶ ಬೇರೆಯದ್ದೇ ಆಗಿರುತ್ತದೆ. ಅವನ ಧ್ಯೇಯೊದ್ದೇಶಗಳನ್ನ ಅರಿತ ಕ್ಹಾಯ ಆತನ ಸ್ನೇಹವನ್ನ ನಿರಾಕರಿಸುತ್ತಾಳೆ, ದೂರಾಗಲು ನಿರ್ಧರಿಸುತ್ತಾಳೆ, ಆಂಡ್ರ್ಯೂಸ್ ಅದಕ್ಕೆ ವಿರೋಧಿಸುತ್ತಾನೆ, ಅವಳು ಅವನನ್ನು ಯಾಕಾಗಿ ನಿರಾಕರಿಸುತ್ತಾಳೆ ಅನ್ನೋದು ಸಿನಿಮಾ ನೋಡುವ ಪ್ರೇಕ್ಷಕರಿಗೆ ಅರ್ಥವಾಗುತ್ತದೆ. ಕ್ಹಾಯಳ ಜೀವನದಲ್ಲಿ ಹಿಗೆಲ್ಲ ಏನೊ ನೆಡೆಯುತ್ತಿರುವ ಹೊತ್ತಿಗೆ ಟೇಟ್ ಮತ್ತೆ ವಾಪಸಾಗುತ್ತಾನೆ, ಅವನಷ್ಟೇ ಅಲ್ಲ ಸಣ್ಣವಯಸ್ಸಿನಲ್ಲಿ ಮನೆ ಬಿಟ್ಟು ಹೋಗಿದ್ದಂತ ಅಣ್ಣನೂ ಸಿಗುತ್ತಾನೆ. ಅಲ್ಲಿಂದಾಚೆಗೆ ಏನಾಗುತ್ತದೆ ನಿಜವಾಗಿ ಚೇಸ್ ಆಂಡ್ರ್ಯೂಸ್‌ನನ್ನು ಯಾರು ಕೊಲ್ಲುತ್ತಾರೆ..? ಯಾಕೆ ಕೊಲ್ಲುತ್ತಾರೆ..? ಕ್ಹಾಯ ಬದುಕು ಏನಾಗುತ್ತದೆ.? ಕೋರ್ಟ್‌ನಲ್ಲಿ ಏನೆಲ್ಲ ನೆಡೆಯುತ್ತದೆ, ಕೊರ್ಟು ಕಚೇರಿ ಪೊಲೀಸು ಇದನ್ನೆಲ್ಲ ಹೊಸತಾಗಿ ಕಾಣುತ್ತಿರುವ ಅವಳಿಗೆ ಸಹರಿಸುವವರು ಯಾರು ಅವಳ ಆಗಿನ ಪರಿಸ್ಥಿತಿ ಮನಸ್ಥಿತಿ ಹೇರುತ್ತದೆ, ಅವಳ ಪುಸ್ತಕಗಳು ಪ್ರಕಟಗೊಳ್ಳುತ್ತವಾ? ತನ್ನ ಮನೆಯನ್ನ ಆಕೆ ಉಳಿಸಿಕೊಳ್ಳುತ್ತಾಳಾ? ಈ ಎಲ್ಲ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಸಿನಿಮಾ ನೋಡಬೇಕು ಅಥವಾ ಆ ಕಾದಂಬರಿ ಓದ ಬೇಕು ಅಷ್ಟೆ.

ಸಿನಿಮಾ ಕುತೂಹಲದಿಂದ ಸಂಪೂರ್ಣವಾಗಿ ನೋಡಿಸಿಕೊಳ್ಳುವುದಲ್ಲದೆ ಮನಸ್ಸಿನಲ್ಲಿ ಕ್ಹಾಯ ಅಚ್ಚಳಿಯದೆ ಉಳಿಯುತ್ತಾಳೆ. 2018ರಲ್ಲಿ ಪ್ರಕಟಗೊಂಡಿರುವ ಚಿತ್ರದ ಮೂಲ ಕಾದಂಬರಿ ಏಪ್ರಿಲ್ 2023ರ ವೇಳೆಗೆ 1.1 ಕೋಟಿ ಕಾಪಿಗಳಿಗೂ ಹೆಚ್ಚು ಸೇಲ್ ಆಗಿದೆಯಂತೆ.

ಇದನ್ನೂ ಓದಿ: ನೋಡಲೇಬೇಕಾದ ಸಿನಿಮಾ : Sirf Ek Bandaa Kaafi Hai; ನ್ಯಾಯದ ಕನ್ನಡಿ, ಹೋರಾಟದ ಛಲಕ್ಕೆ ಮುನ್ನುಡಿ ಬರೆಯುವ ಚಿತ್ರ

ಚಿತ್ರಕ್ಕೆ Reese Witherspoon ಮತ್ತು Lauren Neustadter ಬಂಡವಾಳ ಹೂಡಿದ್ದು, Lucy Alibar ಚಿತ್ರಕಥೆ ರೂಪಿಸಿ ನಿರ್ದೇಶಕಿ Olivia Newman ರವರು ನಿರ್ದೇಶನ ಮಾಡಿದ್ದಾರೆ. Polly Morgan ಅವರ ಅದ್ಭುತ ಛಾಯಾಗ್ರಹಣವಿದ್ದು, ಲೈಫ್ ಆಫ್ ಪೈ ಚಿತ್ರಕ್ಕೆ ಸಂಗೀತ ನೀಡಿದ್ದ mychael danna ಈ ಚಿತ್ರಕ್ಕೂ ಸಂಗೀತ ನೀಡಿದ್ದಾರೆ. Daisy Edgar-Jones, Taylor John Smith, Harris Dickinson, Michael Hyatt, Sterling Macer Jr. ಮುಂತಾದ ತಾರಾಗಣವಿರುವ ಈ ಇಂಗ್ಲಿಷ್ ಭಾಷೆಯ ರೊಮ್ಯಾಂಟಿಕ್ ಮಿಸ್ಟ್ರಿ ಡ್ರಾಮ ಸದ್ಯ Netflix ನಲ್ಲಿ ಸ್ಟ್ರೀಮ್ ಆಗುತ್ತಿದೆ. ಕ್ಲಾಸ್ ಸಿನಿಮಾ ಸಸ್ಪೆನ್ಸ್ ಫುಲ್ ರೊಮ್ಯಾಂಟಿಕ್ ಡ್ರಾಮಾ ಇಷ್ಟಪಡುವವರು ಹಾಗೂ ಪತ್ತೆದಾರಿ ಕಾದಂಬರಿ ಇಷ್ಟಪಡುವಂತವರು ತಪ್ಪದೇ ನೋಡಿ, ಇಷ್ಟವಾಗಬಹುದು.

Exit mobile version