ಮುಂಬೈ: ”ಬಾಡಿಗೆ ಕೊಡಲು ನಮ್ಮ ತಂದೆ ತಾಯಿ ಬಳಿ ಹಣ ಇರುತ್ತಿರಲಿಲ್ಲ, ಬಾಲ್ಯದಲ್ಲಿ ನನಗೊಂದು ಗೊಂಬೆ ಕೊಡಿಸಲು ಅವರು ಕಷ್ಟಪಡುತ್ತಿದ್ದರು….” ಹೀಗೆ ತಮ್ಮ ಕುಟುಂಬ ಎದುರಿಸಿದ ಆರ್ಥಿಕ ಸಮಸ್ಯೆಗಳು ಕುರಿತು ಮುಕ್ತವಾಗಿ ಹೇಳಿಕೊಂಡಿದ್ದಾರೆ ನಟಿ, ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ(Rashmika Mandanna). ಕನ್ನಡ, ತೆಲುಗು, ತಮಿಳು, ಹಿಂದಿ ಚಿತ್ರರಂಗಗಳಲ್ಲಿ ಬ್ಯೂಸಿಯಾಗಿರುವ ‘ನ್ಯಾಷನಲ್’ ಕ್ರಶ್ ರಶ್ಮಿಕಾ ಈಗ ಬಹು ಬೇಡಿಕೆಯ ತಾರೆಯಾಗಿದ್ದಾರೆ. ಹಾಗೆಯೇ, ಸೋಷಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಟ್ರೋಲ್‌ಗೆ ಒಳಗಾಗುವ ನಟಿಯೂ ಹೌದು. ರಿಷಭ್ ಶೆಟ್ಟಿ ನಿರ್ದೇಶನದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ರಶ್ಮಿಕಾ ಮಂದಣ್ಣ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡರು.
ಸಿನಿಮಾ ಉದ್ಯಮದಲ್ಲಿ ಗಳಿಸಿಕೊಂಡಿರುವ ಸಕ್ಸೆಸ್ ಬಗ್ಗೆ ಮಾತನಾಡಿರುವ ರಶ್ಮಿಕಾ, ತಾನು ಪಡೆದುಕೊಂಡಿರುವ ಜನಪ್ರಿಯತೆಯನ್ನು ಮತ್ತು ಅಭಿಮಾನಿಗಳನ್ನು ಹಗುರವಾಗಿ ಪರಿಗಣಿಸುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ನಾನು ಮತ್ತೊಂದು ರೀತಿಯ ಜೀವನವನ್ನೂ ನೋಡಿದ್ದೇನೆ. ಸ್ವಂತ ಮನೆ ಇರಲಿಲ್ಲ. ಆಗಾಗ ಮನೆ ಬದಲಾಯಿಸಬೇಕಾಗುತ್ತಿತ್ತು. ಹಾಗಾಗಿ, ನನಗೆ ಬಾಲ್ಯದಿಂದಲೂ ಈ ಹೋರಾಟವೇನೂ ಹೊಸದಲ್ಲ ಎಂದು ‘ಕಿರಿಕ್ ಪಾರ್ಟಿ’ ಚಿತ್ರದ ಸಾನ್ವಿ ಪಾತ್ರಧಾರಿ ರಶ್ಮಿಕಾ ಹೇಳಿದ್ದಾರೆ.
ನಾನು ಗಳಿಸುವ ಹಣ, ನಾನು ಪಡೆಯುವ ಪ್ರೀತಿ ಮತ್ತು ನಟಿಯಾಗಿ ನಾನು ಪಡೆಯುವ ಮನ್ನಣೆಯನ್ನು ನಾನು ಗೌರವಿಸುತ್ತೇನೆ. ನನ್ನ ಯಶಸ್ಸನ್ನು ನಾನು ಲಘುವಾಗಿ ತೆಗೆದುಕೊಳ್ಳಲು ನನ್ನ ಬಾಲ್ಯದ ನೆನಪುಗಳು ಹಾಗೆ ಮಾಡಲು ಬಿಡುವುದಿಲ್ಲ. ಏಕೆಂದರೆ ಇದ್ಯಾವುದು ಶಾಶ್ವತವಾಗಿ ಉಳಿಯುವುದಿಲ್ಲ ಎಂದು ನನಗೆ ತಿಳಿದಿದೆ ಎಂದು ರಶ್ಮಿಕಾ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ | ಇಷ್ಟು ದ್ವೇಷವನ್ನು ಹೇಗೆ ತಡೆದುಕೊಳ್ಳಲಿ?- ನೋವಿನಿಂದ ಸುದೀರ್ಘ ಪೋಸ್ಟ್ ಹಾಕಿದ ರಶ್ಮಿಕಾ ಮಂದಣ್ಣ