Site icon Vistara News

Oscars 2023: ಆಸ್ಕರ್‌ ಅವಾರ್ಡ್‌ ಘೋಷಣೆಗೆ ಕ್ಷಣಗಣನೆ, ಪ್ರಶಸ್ತಿ ಆಯ್ಕೆ ಹೇಗೆ? ಇಲ್ಲಿದೆ ಡಿಟೇಲ್ಸ್

Natu Natu Song

ಭಾರತದ ಮೂರು ಸಿನಿಮಾಗಳು ಆಸ್ಕರ್‌ ಪ್ರಶಸ್ತಿಯ (Oscars 2023 Nominations) ಅಂತಿಮ ಸುತ್ತಿಗೆ ನಾಮನಿರ್ದೇಶನಗೊಂಡಿವೆ. ಎಸ್‌.ಎಸ್‌.ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್‌ ಸಿನಿಮಾದ ನಾಟು ನಾಟು ಹಾಡು ಒರಿಜಿನಲ್‌ ಬೆಸ್ಟ್‌ ಹಾಡು ಕೆಟಗರಿ, ಅತ್ಯುತ್ತಮ ಸಾಕ್ಷ್ಯಚಿತ್ರ ಕೆಟಗರಿಯಲ್ಲಿ (Best Documentary Feature Film) ಆಲ್‌ ದಿ ಬ್ರೆತ್ಸ್‌ (All The Breathes) ನಾಮಿನೇಟ್‌ ಆಗಿವೆ. ಈ ಮೂರೂ ಸಿನಿಮಾಗಳು ಪ್ರಶಸ್ತಿಯ ಸನಿಹಕ್ಕೆ ಹೋಗಿವೆ. ಮಾರ್ಚ್‌ 12ರಂದು ಪ್ರಶಸ್ತಿ ಘೋಷಿಸಲಾಗುತ್ತದೆ.

ಹಾಗಾದರೆ, ಅಂತಿಮವಾಗಿ ಆಸ್ಕರ್‌ ಪ್ರಶಸ್ತಿಯನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ? ಇದಕ್ಕೆ ಇರುವ ನಿಯಮಗಳು ಯಾವವು? ಆಸ್ಕರ್‌ ಪ್ರಶಸ್ತಿಯ ಹಿನ್ನೆಲೆ, ಇದುವರೆಗೆ ಆಸ್ಕರ್‌ ಗೆದ್ದ ಭಾರತದ ಸಿನಿಮಾಗಳು ಯಾವವು ಎಂಬುದು ಸೇರಿ ಹಲವು ವಿಷಯಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಆಸ್ಕರ್‌ ಪ್ರಶಸ್ತಿ ಚಲನಚಿತ್ರಗಳಿಗೆ ಸಿಗುವ ಅತಿ ದೊಡ್ಡ ಜಾಗತಿಕ ಮನ್ನಣೆ. ಹಾಲಿವುಡ್‌ ನೆಲೆ ನಿಂತಿರುವ ಲಾಸ್‌ ಏಂಜಲೀಸ್‌ನಲ್ಲಿರುವ ʼಅಕಾಡೆಮಿ ಆಫ್‌ ಮೋಷನ್‌ ಪಿಕ್ಚರ್‌ ಆರ್ಟ್ಸ್‌ ಆಂಡ್‌ ಸೈನ್ಸಸ್‌ʼ ಈ ಪ್ರಶಸ್ತಿಯನ್ನು ಕೊಡಮಾಡುತ್ತದೆ. 1927ರಲ್ಲಿ ಈ ಸಂಸ್ಥೆ ಅಸ್ತಿತ್ವಕ್ಕೆ ಬಂತು. 1929ರಿಂದ ಅಕಾಡೆಮಿ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಈ ಪುರಸ್ಕಾರಗಳಿಗೆ ಈಗ 95 ವರ್ಷ.

ಆಸ್ಕರ್‌ ಎಂಬ ಹೆಸರು ಹೇಗೆ ಬಂತು?

ಈ ಕುರಿತು ಒಮ್ಮತದ ಅಭಿಪ್ರಾಯವಿಲ್ಲ. ಅಕಾಡೆಮಿ ಲೈಬ್ರೇರಿಯನ್‌ ಮಾರ್ಗರೆಟ್‌ ಹೆರ್ರಿಕ್‌, ತನ್ನ ಅಂಕಲ್‌ ಆಸ್ಕರ್‌ನನ್ನು ಈ ಪ್ರಶಸ್ತಿ ಮೂರ್ತಿ ಹೋಲುತ್ತದೆ ಎಂದಳೆಂದೂ, ನಟಿ ಬೆಟ್ಟಿ ಡೇವಿಸ್‌ ತನ್ನ ಗಂಡ ಹರ್ಮನ್‌ ಆಸ್ಕರ್‌ ನೆಲ್ಸನ್‌ನ ಬೆನ್ನನ್ನು ಈ ಮೂರ್ತಿ ಹೋಲುತ್ತದೆ ಎಂದು ಹೇಳಿದಳೆಂದೂ, ಅಂಕಣಕಾರ ಸಿಡ್ನಿ ಸ್ಕೋಲ್ಸ್‌ಕಿ ಮೊದಲ ಬಾರಿಗೆ ಪ್ರಶಸ್ತಿಯನ್ನು ಹಾಗೆ ಕರೆದನೆಂದೂ- ಮೂರು ಮೂರು ಕತೆಗಳಿವೆ. ಯಾವುದು ನಿಜವೋ ತಿಳಿಯದು. ಬಹುಶಃ ಮೂರೂ ಸತ್ಯವಿರಬಹುದು.

ಪ್ರಶಸ್ತಿಗೆ ಪರಿಗಣನೆ ಹೇಗೆ?

ಪ್ರತಿ ವರ್ಷ ಜನವರಿ ಒಂದರಿಂದ ಡಿಸೆಂಬರ್‌ ಅಂತ್ಯದವರೆಗೆ ಚಿತ್ರಗಳು, ಸಾಕ್ಷ್ಯಚಿತ್ರಗಳು ಮತ್ತು ಆನಿಮೇಟೆಡ್‌ ಚಿತ್ರಗಳನ್ನು ಆ ವರ್ಷದ ಅಕಾಡೆಮಿ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗುತ್ತದೆ. ಚಲನಚಿತ್ರಗಳ ನಿರ್ಮಾಪಕರು, ನಿರ್ದೇಶಕರು, ನಟರು, ತಂತ್ರಜ್ಞರು, ಮತ್ತು ಆಯಾ ದೇಶದ ಸರ್ಕಾರಿ ಚಲನಚಿತ್ರ ಮಾಧ್ಯಮ ನಿಯಂತ್ರಣ ಸಂಸ್ಥೆಗಳು ಇದಕ್ಕೆ ಅರ್ಜಿ ಸಲ್ಲಿಸಬಹುದು. ಇದು ಮೊದಲ ಸುತ್ತು. ಇವುಗಳನ್ನು ಸಾವಿರಾರು ಮಂದಿ ವೀಕ್ಷಿಸಿ ಪರಿಶೀಲಿಸಿದ ಬಳಿಕ ಮೊದಲ ಸುತ್ತಿಗೆ ಆಯ್ಕೆ ಮಾಡಲಾಗುತ್ತದೆ. ಅನಂತರ ಚಿತ್ರಗಳು ನಾಮನಿರ್ದೇಶನ ಪಟ್ಟಿಗೆ ಬರುತ್ತವೆ.

ಯಾವೆಲ್ಲಾ ವಿಭಾಗಗಳಿವೆ?

ಸದ್ಯ ಆಸ್ಕರ್‌ ಪ್ರಶಸ್ತಿಯಲ್ಲಿ 24 ಅತ್ಯುತ್ತಮ ವಿಭಾಗಗಳಿವೆ. ಅವು ಹೀಗಿವೆ:

ಆಯ್ಕೆಗೆ ನಿಯಮಗಳೇನು?

2022ರಲ್ಲಿ ಬಿಡುಗಡೆಯಾದ ಮತ್ತು ಚಿತ್ರಮಂದಿರಗಳಲ್ಲಿ ಪ್ರದರ್ಶಿತವಾದ ಚಿತ್ರಗಳನ್ನು ಪ್ರಶಸ್ತಿ ಸುತ್ತಿಗೆ ಆಯ್ಕೆ ಮಾಡಿ ಎಂದು ಚಿತ್ರದ ನಿರ್ಮಾಪಕರು, ನಿರ್ದೇಶಕರು, ನಟರು, ತಂತ್ರಜ್ಞರು ಅರ್ಜಿ ಸಲ್ಲಿಸಬಹುದು. ಅಕಾಡೆಮಿ ಅವಾರ್ಡ್‌ನ ಜಾಲತಾಣದಲ್ಲೇ ಹೀಗೆ ಅರ್ಜಿ ಸಲ್ಲಿಸಬಹುದು. ಅರ್ಜಿಯ ಜತೆಗೆ ಚಿತ್ರದ ಡಿಜಿಟಲ್‌ ಕಾಪಿಯನ್ನೂ ಕಳಿಸಬೇಕಾಗುತ್ತದೆ. ಯಾವ ವಿಭಾಗದಲ್ಲಿ ಸ್ಪರ್ಧೆ ಎಂಬುದನ್ನೂ ಅದರಲ್ಲಿ ತಿಳಿಸಬೇಕು.

ಅಕಾಡೆಮಿಯಲ್ಲಿ ಈಗ ಸುಮಾರು 10,000 ಸದಸ್ಯರಿದ್ದಾರೆ. ಇದರಲ್ಲಿ ಸಿನಿಮಾಗೆ ಸಂಬಂಧಿಸಿದ ಎಲ್ಲಾ ಕ್ಷೇತ್ರಗಳು ತಜ್ಞರು ಇರುತ್ತಾರೆ. ಈ ಎಲ್ಲಾ ಸದಸ್ಯರು ಚಿತ್ರವನ್ನು ವೀಕ್ಷಿಸುತ್ತಾರೆ. ನಾಮನಿರ್ದೇಶನ ಮಾಡಬಹುದು ಎಂಬ ಭಾವಿಸಿದ ಚಿತ್ರವನ್ನು ಅಕಾಡೆಮಿಗೆ ಶಿಫಾರಸು ಮಾಡುತ್ತಾರೆ. ಇದರ ಆಧಾರದಲ್ಲಿ ಅಕಾಡೆಮಿಯು ಒಂದು ರಿಮೈಂಡರ್‌ ಪಟ್ಟಿಯನ್ನು ಸಿದ್ಧಪಡಿಸುತ್ತದೆ.

ಈ ರಿಮೈಂಡರ್‌ ಪಟ್ಟಿಯಲ್ಲಿರುವ ಚಿತ್ರಗಳನ್ನು ನಿಮಾನಿರ್ದೇಶನ ಮಾಡಲು ಪರಿಗಣಿಸಲಾಗುತ್ತದೆ. ಚಿತ್ರವನ್ನು ಯಾವ ವಿಭಾಗದಲ್ಲಿ ಪರಿಗಣಿಸಬಹುದು ಎಂದು ಅರ್ಜಿಯಲ್ಲಿ ಪರಿಗಣಿಸಲಾಗುತ್ತ ಅಂಥ ವಿಭಾಗದ ತಜ್ಞರಿಗೆ ಅದನ್ನ ವೀಕ್ಷಣೆಗೆ ನೀಡಲಾಗುತ್ತದೆ. ಆಯಾ ವಿಭಾಗದ ಪರಿಣತರು ಚಿತ್ರವನ್ನು ವೀಕ್ಷಿಸುತ್ತಾರೆ. ಆದ್ಯತೆಯ ಮೇರೆಗೆ ತಮ್ಮ ಮತ ಚಲಾಯಿಸುತ್ತಾರೆ. ಅತ್ಯಧಿಕ ಮತ ಪಡೆದ ಚಿತ್ರಗಳನ್ನು ನಾಮನಿರ್ದೇಶನಕ್ಕೆ ಪರಿಗಣಿಸಲಾಗುತ್ತದೆ. ಹೀಗೆ ನಾಮನಿರ್ದೇಶನಗೊಳ್ಳುವ ಚತ್ರಗಳ ಹೆಸರು ಜನವರಿ 24ರಂದು ಪ್ರಕಟವಾಗಲಿದೆ.

ಅಂತಿಮ ಸುತ್ತು

ನಾಮನಿರ್ದೇಶನಗೊಂಡ ಚಿತ್ರಗಳನ್ನು ತಜ್ಞರ ಸಮಿತಿ ಮತ್ತೊಮ್ಮೆ ವೀಕ್ಷಿಸುತ್ತದೆ. ಅವುಗಳಲ್ಲಿ ಅತ್ಯುತ್ತಮವಾದುದನ್ನು ಆದ್ಯತೆಯ ಮತದ ಮೇಲೆ ಆಯ್ಕೆ ಮಾಡಲಾಗುತ್ತದೆ. ಅಂದರೆ ಪ್ರಶಸ್ತಿ ಸುತ್ತಿನಲ್ಲಿ ಐದು ಚಿತ್ರಗಳಿದ್ದರೆ, ತಮ್ಮ ಪ್ರಥಮ ಆಯ್ಕೆಯ ಚಿತ್ರಕ್ಕೆ ಮೊದಲ ಮತ, ನಂತರ ಎರಡನೆಯದು- ಹೀಗೆ. ಈ ವೀಕ್ಷಣೆ ಮತ್ತು ಮತದಾನಕ್ಕೆ ಒಂದು ತಿಂಗಳಿಗೂ ಹೆಚ್ಚು ಕಾಲ ಬೇಕು. ಇವೆಲ್ಲ ಪ್ರಕ್ರಿಯೆಯೂ ಗುಪ್ತವಾಗಿ ನಡೆಯುತ್ತದೆ. ಹೀಗೆ ಗುಪ್ತವಾಗಿ ಸಂಗ್ರಹವಾದ ಮತಗಳನ್ನು ಅಕಾಡೆಮಿಯ ಇಬ್ಬರು ಅಧಿಕಾರಿಗಳು ಕ್ರೋಡೀಕರಿಸಿ ಅಂತಿಮ ಫಲಿತಾಂಶ ಸಿದ್ಧಪಡಿಸಿರುತ್ತಾರೆ. ಪ್ರಶಸ್ತಿ ಘೋಷಣೆಯಾಗುವವರೆಗೂ ಈ ಇಬ್ಬರನ್ನು ಹೊರತುಪಡಿಸಿ ಇನ್ಯಾರಿಗೂ ವಿಜೇತರು ಯಾರೆಂದು ತಿಳಿದಿರುವುದಿಲ್ಲ. ಸಾಕ್ಷ್ಯಚಿತ್ರ, ಆನಿಮೇಟೆಡ್‌ ಚಿತ್ರಗಳನ್ನೂ ಹೀಗೇ ಸೆಲೆಕ್ಟ್‌ ಮಾಡಲಾಗುತ್ತದೆ.

ಅತ್ಯುತ್ತಮ ಚಿತ್ರ- ಅತ್ಯುತ್ತಮ ವಿದೇಶಿ ಭಾಷೆಯ ಚಿತ್ರ

ಆಸ್ಕರ್‌ ಪ್ರಶಸ್ತಿಯಲ್ಲಿ ʼಅತ್ಯುತ್ತಮ ಚಿತ್ರʼ ಎಂದರೆ ಹಾಲಿವುಡ್‌ ಚಿತ್ರ ಮಾತ್ರ. ಅಕಾಡೆಮಿಯ ಸಕ್ರಿಯ ಮತ್ತು ಆಜೀವ ಸದಸ್ಯರು ಮತದಾನದ ಮೂಲಕ ಇದಕ್ಕೆ ತಮ್ಮ ಆಯ್ಕೆಯನ್ನು ತಿಳಿಸುತ್ತಾರೆ. ಬೇರೆ ಬೇರೆ ವಿಭಾಗಗಳಿಗೆ ಆಯಾ ವಿಭಾಗದ ಪರಿಣಿತರು ಮತ ಹಾಕಿದರೆ, ಈ ವಿಭಾಗಕ್ಕೆ ಮಾತ್ರ ಎಲ್ಲ ಸದಸ್ಯರೂ ಮತ ಹಾಕುತ್ತಾರೆ. ಈ ಚಿತ್ರವು ಅಮೆರಿಕದಲ್ಲಿ ನಿರ್ಮಾಣವಾಗಿರಬೇಕು ಹಾಗೂ ಅಲ್ಲಿನ ಚಲನಚಿತ್ರ ಮಂದಿರಗಳಲ್ಲಿ ಪ್ರದರ್ಶನಗೊಂಡಿರುವುದು ಕಡ್ಡಾಯ.

ʼಅತ್ಯುತ್ತಮ ವಿದೇಶಿ ಭಾಷೆಯ ಚಿತ್ರʼ ಪುರಸ್ಕಾರ ಹಾಲಿವುಡ್‌ ಹೊರತುಪಡಿಸಿ ಇತರ ಎಲ್ಲ ಭಾಷೆಗಳಿಗೆ ಮೀಸಲು. ಇಲ್ಲಿ ಸ್ಪರ್ಧೆ ಹೆಚ್ಚು. ಅಮೆರಿಕ ಅಲ್ಲದೆ ಬೇರೆ ದೇಶ, ಭಾಷೆಗಳಲ್ಲಿ ನಿರ್ಮಾಣವಾದ ಸಿನಿಮಾಗಳನ್ನು ಈ ವಿಭಾಗಕ್ಕೆ ಪರಿಗಣಿಸಲಾಗುತ್ತದೆ. ಅವು ಅಮೆರಿಕದ ಚಿತ್ರಮಂದಿರಗಳಲ್ಲಿ ಪ್ರದರ್ಶಿತವಾಗಿರಬೇಕು ಎಂದೇನೂ ಇಲ್ಲ. ಆದರೆ 40 ನಿಮಿಷಕ್ಕೂ ಹೆಚ್ಚು ಪ್ರದರ್ಶನಾವಧಿ ಹೊಂದಿರುವ ಫೀಚರ್‌ ಫಿಲಂಗಳಾಗಿರಬೇಕು. ಇಂಗ್ಲಿಷ್‌ ಸಬ್‌ಟೈಟಲ್‌ ಇರಬೇಕು.

ಎಷ್ಟು ಭಾರತೀಯರಿಗೆ ಬಂದಿದೆ?

ಭಾರತದ ಐವರು ಸಾಧಕರಿಗೆ ಮಾತ್ರ ಈವರೆಗೆ ಈ ಪ್ರಶಸ್ತಿ ಲಭಿಸಿದೆ. ೧೯೮೨ರಲ್ಲಿ ʼಗಾಂಧಿʼ ಚಿತ್ರದ ವಸ್ತ್ರವಿನ್ಯಾಸಕ್ಕೆ, ಅತ್ಯುತ್ತಮ ವಸ್ತ್ರವಿನ್ಯಾಸಕಾರ ಪುರಸ್ಕಾರವನ್ನು ಭಾನು ಅಥೈಯಾ ಪಡೆದರು. ಅವರೇ ಇದನ್ನು ಪಡೆದ ಮೊದಲಿಗರು. ೧೯೯೨ರಲ್ಲಿ ಜೀವಮಾನ ಸಾಧನೆಯ ಪ್ರಶಸ್ತಿಯನ್ನು ನಿರ್ದೇಶಕ ಸತ್ಯಜಿತ್ ರೇ ಪಡೆದುಕೊಂಡರು. ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್ ಮತ್ತು ಗೀತಕಾರ ಗುಲ್ಜಾರ್ ʼಸ್ಲಂ ಡಾಗ್‌ ಮಿಲಿಯನೇರ್‌ʼ ಚಿತ್ರದ ʼಜೈ ಹೋʼ ಹಾಡಿಗೆ ʼಅತ್ಯುತ್ತಮ ಮೂಲ ಗೀತೆʼ ಪ್ರಶಸ್ತಿಯನ್ನು ಹಂಚಿಕೊಂಡರು. ಇದೇ ಚಿತ್ರದಲ್ಲಿನ ʼಅತ್ಯುತ್ತಮ ಧ್ವನಿ ಮಿಶ್ರಣʼಕ್ಕೆ ರೆಸೂಲ್ ಪೂಕುಟ್ಟಿ ಆಸ್ಕರ್ ತೆಗೆದುಕೊಂಡರು.

ಭಾರತದ ಈ ಹಿಂದಿನ ಯಾವ ಚಿತ್ರ ಆಸ್ಕರ್‌ಗೆ ಹೋಗಿತ್ತು?

ಆಸ್ಕರ್‌ ಮೊದಲ ಸುತ್ತಿಗೆ ಭಾರತದ ಅನೇಕ ಸಿನಿಮಾಗಳು ಹೋಗಿವೆ. ಆದರೆ ಅಂತಿಮ ಸುತ್ತಿಗೆ ನಾಮನಿರ್ದೇಶನಗೊಂಡ ಚಿತ್ರಗಳು ಕೇವಲ ಮೂರು- ಮದರ್‌ ಇಂಡಿಯಾ, ಸಲಾಂ ಬಾಂಬೆ ಹಾಗೂ ಲಗಾನ್. ಆಸ್ಕರ್‌ನ‌ ನಾಮನಿರ್ದೇಶನ ಸುತ್ತಿಗೆ ಹೋಗುವುದೇ ಬಹು ದೊಡ್ಡ ಸಾಧನೆಯೆನಿಸಿದೆ.‌

ಇದನ್ನೂ ಓದಿ | Oscar award | ಆಸ್ಕರ್‌ ಪ್ರಶಸ್ತಿ ಕಣದಲ್ಲಿ ಕನ್ನಡದ ಕಾಂತಾರ, ವಿಕ್ರಾಂತ್‌ ರೋಣ | ಇನ್ಯಾವ ಸಿನಿಮಾಗಳಿವೆ?

Exit mobile version