Site icon Vistara News

Pavitra Lokesh | ಸುಚೇಂದ್ರ ಪ್ರಸಾದ್ ಜತೆ ಮದುವೆ ಆಗಿರಲಿಲ್ಲ, ನರೇಶ್‌ ಜತೆಗೂ ಆಗಿಲ್ಲ: ಪವಿತ್ರಾ ಲೋಕೇಶ್‌

Pavitra Lokesh

ಬೆಂಗಳೂರು: ತೆಲುಗು ನಟ ನರೇಶ್‌ ಜತೆಗಿನ ಸಂಬಂಧದ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್‌ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ನಟಿ ಪವಿತ್ರಾ ಲೋಕೇಶ್‌ (Pavitra Lokesh) ಶುಕ್ರವಾರ (ಜೂನ್‌ 29) ಮೈಸೂರಿನ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸುಚೇಂದ್ರ ಪ್ರಸಾದ್‌ ಜತೆ ತಮಗೆ ಮದುವೆಯೇ ಆಗಿಲ್ಲ ಎಂದು ಪ್ರತಿಪಾದಿಸಿದ್ದಾರೆ.

ಸುಚೇಂದ್ರ ಪ್ರಸಾದ್‌ ಜತೆಗಿನ ಪವಿತ್ರ ಸಂಬಂಧ

ನಟ ಸುಚೇಂದ್ರ ಪ್ರಸಾದ್‌ ಜತೆಗಿನ ಸಂಬಂಧದ ಬಗ್ಗೆಯೂ ಪವಿತ್ರಾ ಲೋಕೇಶ್‌ ಪ್ರತಿಕ್ರಿಯೆ ನೀಡಿದ್ದಾರೆ. ʻʻನಾನು ಮದುವೆ ಆಗಿಲ್ಲ. ನಾನೇಕೆ ವಿಚ್ಛೇದನ ತೆಗೆದುಕೊಳ್ಳಬೇಕು?ʼʼ ಎಂದು ಪ್ರಶ್ನಿಸಿದ್ದಾರೆ. ʻʻನಾನು ಕಳೆದ 6 ವರ್ಷಗಳಿಂದ ಸುಚೇಂದ್ರ ಅವರಿಂದ ಬೇರೆ ಇದ್ದೇನೆ. ನಾನು ಮದುವೆಯಾಗಿರುವುದಕ್ಕೆ ದಾಖಲೆ ಏನಾದರೂ ಇದೆಯಾ? ಮದುವೆ ಆಗದೇ ಯಾಕೆ 11 ವರ್ಷಗಳ ಕಾಲ ಜತೆಗೆ ಇದ್ದೆವು ಎನ್ನುವುದನ್ನು ನಾನು ಹೇಳಲಾರೆ. ಅದನ್ನು ಸುಚೇಂದ್ರ ಪ್ರಸಾದ್ ಅವರೇ ಹೇಳಬೇಕು. ಮದುವೆ ಆಗದೇ ಇರುವುದಕ್ಕೆ ಅವರೇ ಕಾರಣ. ಅವರನ್ನು ನಾನು ಇವತ್ತಿಗೂ ಗೌರವಿಸುತ್ತೇನೆ. ನಮ್ಮ ಮದುವೆ ವಿಚಾರವನ್ನು ಇಷ್ಟೇ ಹೇಳುವುದಕ್ಕೆ ಸಾಧ್ಯʼʼ ಎಂದಿದ್ದಾರೆ.

ಮಾಧ್ಯಮಗಳ ವಿರುದ್ಧ ಸಿಡಿಮಿಡಿಗೊಂಡ ಪವಿತ್ರಾ

ʻʻನನಗೆ ಮಾಧ್ಯಮ ಸಹಾಯ ಮಾಡುತ್ತಾ, ಜನ ಸಹಾಯ ಮಾಡುತ್ತಾರಾ? ಜನರು ನನಗೆ ಸ್ಪಂದನೆ ನೀಡಬಹುದು, ಆದರೆ ಸಹಾಯ ಮಾಡಲು ಆಗುವುದಿಲ್ಲ. ನನ್ನ ಸಮಸ್ಯೆಗಳನ್ನು ನಾನೇ ಬಗೆಹರಿಸಿಕೊಳ್ಳಬೇಕು. ನನ್ನ ಮನೆಯೊಳಗೆ ಬಂದು ಏನು ಬೇಕಾದರೂ ಮಾಡಬಹುದು. ನಾನು ಈಗ ಹೇಗೆ ಹೊರಗೆ ಹೋಗಲಿ? ನನ್ನ ಜೀವಕ್ಕೆ ಮತ್ತು ನನ್ನ ವೃತ್ತಿ ಬದುಕಿಗೆ ತೊಂದರೆಯಾಗುತ್ತಿದೆʼʼ ಎಂದು ಪವಿತ್ರಾ ಲೋಕೇಶ್‌ ಕಿಡಿಕಾರಿದ್ದಾರೆ.

ಇದನ್ನೂ ಓದಿ | Pavitra Lokesh | ಸಾಮಾಜಿಕ ಜಾಲತಾಣದಲ್ಲಿ ಕಿರುಕುಳ: ಸೈಬರ್‌ ಠಾಣೆ ಮೆಟ್ಟಿಲೇರಿದ ನಟಿ

ನರೇಶ್‌ ಮತ್ತು ಪವಿತ್ರಾ ಲೋಕೇಶ್‌

ನರೇಶ್‌ ಮತ್ತು ತಮ್ಮ ಸಂಬಂಧದ ವದಂತಿ ಬಗ್ಗೆ ಮಾತನಾಡಿದ ಪವಿತ್ರಾ ʻʻಹೆಣ್ಣು ಮತ್ತು ಗಂಡು ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡ ಮಾತ್ರಕ್ಕೆ ಅವರ ಮಧ್ಯೆ ಏನೋ ಇದೆ ಎಂದು ಹೇಳುವುದು ಸರಿಯಲ್ಲʼʼ ಎಂದಿದ್ದಾರೆ. ನರೇಶ್‌ ಅವರ ಪತ್ನಿ ಮಾಡಿರುವ ಆಪಾದನೆ ಬಗ್ಗೆ ಅವರು ಪ್ರತಿಕ್ರಿಯೆ ನೀಡಿ ʻʻನರೇಶ್‌ ಅವರ ಪತ್ನಿ ಬಗ್ಗೆ ನನಗೆ ತಿಳಿದಿಲ್ಲ. ಅವರು ಯಾರು ಎನ್ನುವುದೇ ನನಗೆ ಗೊತ್ತಿಲ್ಲ. ಒಡವೆ, ಆಭರಣಗಳನ್ನು ನಾನು ನರೇಶ್‌ ಅವರಿಂದ ಪಡೆದಿದ್ದೆ ಎಂಬ ಆಪಾದನೆ ನನ್ನ ಮೇಲೆ ಹೊರಿಸಿದ್ದಾರೆ. ಆದರೆ ಇದರ ಬಗ್ಗೆ ನನಗೆ ಏನೂ ತಿಳಿದಿಲ್ಲ. ನಾನು ಸ್ವತಃ ದುಡಿದು ಒಡವೆಗಳನ್ನು ಮಾಡಿಕೊಂಡಿದ್ದೇನೆ. ಅದಕ್ಕೆ ಸಾಕ್ಷಿಗಳು ಕೂಡ ನನ್ನಲ್ಲಿವೆ. ನರೇಶ್‌ ಅವರು ಶ್ರೀಮಂತ ವ್ಯಕ್ತಿ ಆಗಿರಬಹುದು. ನನ್ನ ಬಳಿ ಅಷ್ಟಾಗಿ ಹಣ ಇಲ್ಲದಿರಬಹುದು. ಆದರೆ ನಾನು ಕಷ್ಟಪಟ್ಟು ದುಡಿದ ಹಣದಿಂದ ಒಡವೆಗಳನ್ನು ಮಾಡಿಸಿಕೊಂಡಿದ್ದೇನೆʼʼ ಎಂದು ಗರಂ ಆಗಿ ಉತ್ತರಿಸಿದ್ದಾರೆ.

ನರೇಶ್‌ ಪತ್ನಿ ಬಗ್ಗೆ ಗೊತ್ತೇ ಇಲ್ಲ ಎಂದ ಪವಿತ್ರಾ ಲೋಕೇಶ್‌

ನರೇಶ್‌ ಪತ್ನಿ ರಮ್ಯಾ ಅವರ ಕುರಿತಾಗಿ ಮಾತನಾಡಿ ʻʻರಮ್ಯಾ ಅವರ ಬಗ್ಗೆ ನನಗೆ ಏನೂ ಗೊತ್ತಿಲ್ಲ. ನನ್ನನ್ನು ಟಾರ್ಗೆಟ್‌ ಮಾಡುತ್ತಿದ್ದಾರೆ. ಇದಕ್ಕೆ ಮಾಧ್ಯಮದವರು ಉತ್ತರ ನೀಡಬೇಕು. ಮಾಧ್ಯಮದಲ್ಲಿ ನನ್ನ ಮತ್ತು ನರೇಶ್‌ ಅವರ ಪೋಟೋಗಳನ್ನು ಹಾಕುತ್ತಿದ್ದಾರೆ. ರಮ್ಯಾ ಅವರ ಮೂಲ ಹೈದರಾಬಾದ್‌. ಅವರು ಅಲ್ಲಿ ಕಂಪ್ಲೇಂಟ್‌ ಮಾಡಬೇಕು. ಇಲ್ಲಿ ಯಾಕೆ ಅವರು ಮಾತನಾಡುತ್ತಿದ್ದಾರೆ?ʼʼ ಎಂದು ಪ್ರಶ್ನಿಸಿದರು.

ʻʻಚಲನಚಿತ್ರಗಳಲ್ಲಿ ನರೇಶ್‌ ಅವರ ಜತೆ ಹಲವಾರು ನಟಿಯರು ಅಭಿನಯ ಮಾಡಿದ್ದಾರೆ. ಅವರೆಲ್ಲರ ಜತೆ ನರೇಶ್‌ ಅವರು ಸಂಬಂಧವನ್ನು ಹೊಂದಿದ್ದಾರೆ ಎನ್ನುವುದು ತಪ್ಪಾಗುತ್ತದೆ. ಅದೇ ರೀತಿ ನಾನು ನರೇಶ್‌ ಅವರೊಂದಿಗೆ ನಟಿಸಿದ್ದೇನೆ. ನನಗೆ ಅವರ ಹಿನ್ನೆಲೆ ಏನು ಎಂಬುದೇ ಗೊತ್ತಿರಲಿಲ್ಲ. ಅವರು ನನಗೆ ಒಬ್ಬ ಒಳ್ಳೆಯ ಸ್ನೇಹಿತʼʼ ಎಂದು ಪವಿತ್ರಾ ಲೋಕೇಶ್‌ ಪ್ರತಿಕ್ರಿಯೆ ನೀಡಿದ್ದಾರೆ.

ನರೇಶ್‌ ಹೇಳೋದೇನು?

ಜೂನ್‌ (30) ಗುರುವಾರ ಹೈದರಾಬಾದ್‌ನಿಂದ ಬೆಂಗಳೂರಿಗೆ ಆಗಮಿಸಿದ ನರೇಶ್‌ ಖಾಸಗಿ ಚಾನೆಲ್‌ ಒಂದರಲ್ಲಿ ಸಂಕಷ್ಟವನ್ನು ತೋಡಿಕೊಂಡಿದ್ದರು. ಪತ್ನಿ ರಮ್ಯಾ ಮಾಡಿದ ಆರೋಪಗಳೆಲ್ಲವನ್ನೂ ಅಲ್ಲಗಳೆದಿದ್ದಾರೆ. ʻʻರಮ್ಯಾ ಮಾನಸಿಕ ಸ್ಥಿತಿ ಸರಿಯಿಲ್ಲ. ಆಕೆ ಹಲವು ಪುರುಷರ ಜತೆ ಅಫೇರ್‌ ಹೊಂದಿದ್ದಾಳೆ. ಮಾನಸಿಕವಾಗಿ ಮತ್ತು ದೈಹಿಕವಾಗಿ ನನಗೆ ಹಿಂಸೆ ನೀಡಿದ್ದಾಳೆ. 10 ವರ್ಷಗಳ ಹಿಂದೆ ಮದುವೆಯಾದ ನಾವು 8 ವರ್ಷಗಳಿಂದ ದೂರವಿದ್ದೇವೆʼʼ ಎಂದಿದ್ದರು.

ಪವಿತ್ರಾ, ನಾನು ಒಳ್ಳೆಯ ಸ್ನೇಹಿತರು 

ಪವಿತ್ರಾ ಲೋಕೇಶ್ ಜತೆಗಿನ ಸ್ನೇಹದ ಬಗ್ಗೆ ಮಾತನಾಡಿರುವ ನಟ ನರೇಶ್ ʻʻಪವಿತ್ರಾ ನನಗೆ ನಾಲ್ಕು ವರ್ಷಗಳಿಂದ ಪರಿಚಯ. ಇದುವರೆಗೆ 6 ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ. ನನ್ನ ವೈಯಕ್ತಿಕ ಜೀವನದಲ್ಲಿ ನೊಂದು ಖಿನ್ನತೆಯ ಮಟ್ಟಕ್ಕೆ ಹೋಗಿದ್ದ ವೇಳೆ ಪವಿತ್ರಾ ಲೋಕೇಶ್ ಸಿನೆಮಾ ಸೆಟ್‌ನಲ್ಲಿ ಕಷ್ಟ ಸುಖ ಮಾತನಾಡುವಾಗ ಆತ್ಮೀಯವಾಗಿ ನನಗೆ ಹತ್ತಿರವಾದರು. ಅವರು ನನಗೆ ಉತ್ತಮ ಸ್ನೇಹಿತೆ, ಮಾರ್ಗದರ್ಶಿ. ನಾವು ಮದುವೆಯಾಗಿಲ್ಲ, ಮುಂದೆ ಮದುವೆಯಾಗುತ್ತೇವೋ ಇಲ್ಲ ಸ್ನೇಹಿತರಾಗಿರುತ್ತೇವೋ ನಮ್ಮಿಬ್ಬರ ವೈಯಕ್ತಿಕ ನಿರ್ಧಾರʼʼ ಎಂದಿದ್ದಾರೆ.

ಇದನ್ನೂ ಓದಿ | ಜಗಳ ಬಿಡಿಸಿ ಎಂದು ಕರೆದು ನಾಲ್ವರಿಗೆ ಬೆಂಕಿ ಇಟ್ಟ: ಇಬ್ಬರ ಸಾವು, ಮತ್ತಿಬ್ಬರು ಗಂಭೀರ

Exit mobile version