ಮುಂಬಯಿ: 2020ರಲ್ಲಿ ಗಲ್ವಾನ್ ಕಣಿವೆಯಲ್ಲಿ ನಡೆದ ಭಾರತ-ಚೀನಾ ಸಂಘರ್ಷದ ಬಗ್ಗೆ ಅಪಹಾಸ್ಯ ಮಾಡಿ ಟ್ವೀಟ್ ಮಾಡಿದ್ದ ಬಾಲಿವುಡ್ ನಟಿ ರಿಚಾ ಚಡ್ಡಾ ವಿರುದ್ಧ ಅಪಾರ ವಿರೋಧ ವ್ಯಕ್ತವಾಗಿತ್ತು. ರಿಚಾ ಚಡ್ಡಾ ಟ್ವೀಟ್ಗೆ ವಿರೋಧ ಮಾಡಿದ್ದವರಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಕೂಡ ಒಬ್ಬರು. ‘ಗಲ್ವಾನ್ ಹಾಯ್ ಎನ್ನುತ್ತಿದೆ’ ಎಂದು ರಿಚಾ ಮಾಡಿದ್ದ ಟ್ವೀಟ್ನ್ನು ರೀಟ್ವೀಟ್ ಮಾಡಿಕೊಂಡಿದ್ದ ಅಕ್ಷಯ್ ಕುಮಾರ್, ‘ಇಂಥ ವಾಕ್ಯಗಳನ್ನು ಓದಲು ನೋವಾಗುತ್ತದೆ. ನಮ್ಮ ಸಶಸ್ತ್ರ ಪಡೆಗಳಿಗೆ ನಾವು ಯಾವತ್ತೂ ಕೃತಘ್ನರಾಗಬಾರದು. ಅವರು ಅಲ್ಲಿ ಇರುವುದರಿಂದಲೇ, ನಾವಿಲ್ಲಿ ಜೀವಂತವಾಗಿ ಇದ್ದೇವೆ’ ಎಂದು ಹೇಳಿದ್ದರು.
ಹೀಗೆ ರಿಚಾ ಚಡ್ಡಾ ಟ್ವೀಟ್ಗೆ ವಿರೋಧ ವ್ಯಕ್ತಪಡಿಸಿದ ನಟ ಅಕ್ಷಯ್ ಕುಮಾರ್ರನ್ನು ಹಿರಿಯ ನಟ ಪ್ರಕಾಶ್ ರೈ (ಪ್ರಕಾಶ್ ರಾಜ್) ರಾಟೆಗೆ ತೆಗೆದುಕೊಂಡಿದ್ದಾರೆ. ಅಕ್ಷಯ್ ಕುಮಾರ್ ಟ್ವೀಟ್ನ್ನು ರೀಟ್ವೀಟ್ ಮಾಡಿರುವ ಪ್ರಕಾಶ್ ರೈ ‘ಅಕ್ಷಯ್ ಕುಮಾರ್ ಅವರೇ, ನಿಮ್ಮಿಂದ ಇಂಥ ಮಾತುಗಳನ್ನು ನಿರೀಕ್ಷೆ ಮಾಡಿರಲಿಲ್ಲ. ನೆನಪಿಡಿ, ನಿಮಗಿಂತಲೂ ರಿಚಾ ಚಡ್ಡಾ ಅವರೇ ಈ ದೇಶಕ್ಕೆ ಅತ್ಯಂತ ಹೆಚ್ಚು ಅವಶ್ಯಕ ಇದ್ದಾರೆ’ ಎಂದು ಹೇಳಿದ್ದಾರೆ. ಅದಕ್ಕೂ ಮೊದಲು ರಿಚಾ ಚಡ್ಡಾ ಟ್ವೀಟ್ಗೆ ಬೆಂಬಲ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದ ಪ್ರಕಾಶ್ ರೈ, ‘ರಿಚಾ ಚಡ್ಡಾ ಅವರೇ ನೀವು ಯಾವ ಅರ್ಥದಲ್ಲಿ ಈ ಟ್ವೀಟ್ ಮಾಡಿದ್ದೀರಿ ಎಂಬ ಬಗ್ಗೆ ನಮಗೆ ಅರಿವಾಗಿದೆ. ನಿಮ್ಮ ಮಾತಿಗೆ ನನ್ನ ಬೆಂಬಲ ಇದೆ’ ಎಂದು ಹೇಳಿದ್ದರು.
ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಹಿಂಪಡೆಯಬೇಕು ಎಂದು ಆದೇಶ ಬಂದರೆ, ಅದನ್ನು ಪಾಲಿಸಿ ಕಾರ್ಯಗತಗೊಳಿಸಲು ನಾವು ಸನ್ನದ್ಧರಾಗಿದ್ದೇವೆ ಎಂದು ಭಾರತೀಯ ಸೇನೆಯ ಉತ್ತರ ವಲಯದ ಲೆಫ್ಟಿನೆಂಟ್ ಕಮಾಂಡರ್ ಜನರಲ್ ಉಪೇಂದ್ರ ದ್ವಿವೇದಿ ಮಂಗಳವಾರ ಹೇಳಿದ್ದರು. ಉಪೇಂದ್ರ ದ್ವಿವೇದಿ ಮಾತಿನ ಬೆನ್ನಲ್ಲೇ ರಿಚಾ ಚಡ್ಡಾ ಅವರು ತಮ್ಮ ಟ್ವಿಟರ್ನಲ್ಲಿ ‘ಗಲ್ವಾನ್ ಹಾಯ್ ಎನ್ನುತ್ತಿದೆ (Galwan says hi)’ ಎಂದು ಬರೆದುಕೊಂಡಿದ್ದರು. 2020ರ ಗಲ್ವಾನ್ ಸಂಘರ್ಷದ ಪ್ರತೀಕಾರವನ್ನೇ ಇನ್ನೂ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ, ಹಾಗಿರುವಾಗ ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ರಿಚಾ ವ್ಯಂಗ್ಯ ಮಾಡಿದ್ದಾರೆ ಎಂದು ನೆಟ್ಟಿಗರು ಕಿಡಿಕಾರಿದ್ದರು. ಈ ಟ್ವೀಟ್ ದೊಡ್ಡ ವಿವಾದ ಸೃಷ್ಟಿಸಿದ ಬೆನ್ನಲ್ಲೇ ಹಲವು ಗಣ್ಯರೂ ರಿಚಾ ವಿರುದ್ಧ ತಿರುಗಿಬಿದ್ದಿದ್ದಾರೆ. ದಿ ಕಾಶ್ಮೀರಿ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕೂಡ ರಿಚಾ ಟ್ವೀಟ್ನ್ನು ಖಂಡಿಸಿದ್ದಾರೆ.
ಕ್ಷಮೆ ಕೇಳಿದ್ದ ರಿಚಾ
ಯಾವಾಗ ತಾವು ಮಾಡಿದ ಟ್ವೀಟ್ಗೆ ದೊಡ್ಡಮಟ್ಟದ ವಿರೋಧ ವ್ಯಕ್ತವಾಯಿತೋ ಆಗ ರಿಚಾ ಚಡ್ಡಾ ಎಚ್ಚೆತ್ತುಕೊಂಡು ಕ್ಷಮೆ ಕೇಳಿ ಪೋಸ್ಟ್ ಹಾಕಿದ್ದರು. ‘ಸೇನೆಯನ್ನು ಅಪಹಾಸ್ಯ ಮಾಡುವುದು ನನ್ನ ಉದ್ದೇಶ ಆಗಿರಲಿಲ್ಲ. ಆದರೂ ನನ್ನ ಈ ಮೂರು ಶಬ್ದಗಳ ಟ್ವೀಟ್ನಿಂದ ಯಾರಿಗೆಲ್ಲ ನೋವಾಗಿದೆಯೋ ಅವರ ಬಳಿ ಕ್ಷಮೆ ಕೇಳುತ್ತೇನೆ. ನನಗೆ ಸೇನೆ ಎಂದರೆ ಏನು ಗೊತ್ತು. ನನ್ನ ಸ್ವಂತ ನಾನಾಜಿ ಅವರು ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿದ್ದರು. 1960 ಇಂಡೋ-ಚೀನಾ ಯುದ್ಧದಲ್ಲಿ ಅವರ ಕಾಲಿಗೆ ಬುಲೆಟ್ ಬಿದ್ದಿತ್ತು. ಇನ್ನು ನನ್ನ ಮಾಮಾಜಿ ಕೂಡ ಪ್ಯಾರಾಟ್ರೂಪರ್ ಆಗಿದ್ದರು. ನಾನೆಂದಿಗೂ ಸೇನೆಗೆ ಅವಮಾನ ಮಾಡುವುದಿಲ್ಲ’ ಎಂದು ರಿಚಾ ಹೇಳಿದ್ದರು.
ಇದನ್ನೂ ಓದಿ: ಪಾಕ್ ಆಕ್ರಮಿತ ಕಾಶ್ಮೀರ ವಶಕ್ಕೆ ಸಿದ್ಧ ಎಂದಿದ್ದ ಸೇನಾ ಜನರಲ್ರನ್ನು ಅಪಹಾಸ್ಯ ಮಾಡಿದ ಬಾಲಿವುಡ್ ನಟಿ ರಿಚಾ ಚಡ್ಡಾ