ಬೆಂಗಳೂರು: ಐತಿಹಾಸಿಕ 416ನೇ ಮೈಸೂರು ದಸರಾ (Mysore dasara) ಮಹೋತ್ಸವದ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಭಾನುವಾರ (ಅಕ್ಟೋಬರ್ 15) 10.15ಕ್ಕೆ ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿಗೆ (Devi Chamundeshwari) ಪೂಜೆ ಸಲ್ಲಿಸುವ ಮೂಲಕ ದಸರಾ ಉದ್ಘಾಟಿಸಲಾಗುತ್ತಿದ್ದು, ಸಂಗೀತ ನಿರ್ದೇಶಕ, ನಾದಬ್ರಹ್ಮ ಹಂಸಲೇಖ (Music Director Hamsalekha) ದಸರಾಕ್ಕೆ ಚಾಲನೆ ನೀಡಲಿದ್ದಾರೆ. 73 ವರ್ಷದ ಈ ಸಾಧಕ ಹುಟ್ಟಿದ್ದು ಮೈಸೂರಿನಲ್ಲಿ ಎಂಬುದು ಮತ್ತೊಂದು ವಿಶೇಷ. ಆರ್ಕೆಸ್ಟ್ರಾ ಗಾಯಕರಾದವರು ಈಗ ದಸರಾ ಉದ್ಘಾಟನೆ ಮಾಡುವವರೆಗೆ ಬೆಳೆದಿದ್ದು ಸಾಧನೆಯೇ ಸರಿ.
ಅಂದಹಾಗೆ ಹಂಸಲೇಖ ಅವರ ಮೂಲ ಹೆಸರು ಗಂಗರಾಜು. ಸಾಮಾನ್ಯ ಕುಟುಂಬದಲ್ಲಿ ಜನಿಸಿ ನಾದಬ್ರಹ್ಮ ಆಗುವ ಮಟ್ಟಿಗೆ ಬೆಳವಣಿಗೆ ಹೊಂದಿದ, ಕನ್ನಡ ಸಿನಿರಂಗವನ್ನು ಸಂಗೀತದ ಅಲೆಗಳಲ್ಲಿ ತೇಲಿಸಿದ, ಸಿನಿಮಾ ಸಂಗೀತಕ್ಕೆ ಹೊಸ ಟಚ್ ನೀಡಿರುವ ಇವರು ಕರುನಾಡಿನ ಚಂದನವನಕ್ಕೆ (ಸ್ಯಾಂಡಲ್‌ವುಡ್) ತಮ್ಮದೇ ಕೊಡುಗೆ ನೀಡಿದ್ದಾರೆ. ಆಡು ಭಾಷೆಯನ್ನು ಸಂಗೀತಕ್ಕೆ ಬಳಸುವ ಮೂಲಕ ಹಾಡುಗಳು ಮತ್ತಷ್ಟು ಆಪ್ಯಾಯಮಾನವನ್ನಾಗಿ ಮಾಡಿರುವ ಇವರು ಕನ್ನಡ ನಾಡಿನ ಸಾಧಕರಲ್ಲೊಬ್ಬರು.
ಇದನ್ನೂ ಓದಿ: Mysore dasara : ದಸರಾ ಎಂಬ ನಾಡಹಬ್ಬದಲಿ ಚಿನ್ನದ ಅಂಬಾರಿ, ಜಂಬೂ ಸವಾರಿ; ನೋಡ ಬನ್ನಿ ಮೈಸೂರು ನಗರಿ!
ಗೀತ ರಚನಕಾರರಾಗಿ ಸಿನಿರಂಗಕ್ಕೆ ಎಂಟ್ರಿ
“ತ್ರಿವೇಣಿ” ಚಿತ್ರದ ಮೂಲಕ ಹಂಸಲೇಖ ಅವರು 1973ರಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. “ನೀನಾ ಭಗವಂತ” ಹಾಡನ್ನು ಬರೆದು ಗೀತ ರಚನೆಕಾರರಾಗಿ ಗುರುತಿಸಿಕೊಂಡ ಇವರು ಸಿಕ್ಕ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡರು. ಈಗ 300ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.
ನೇಮು-ಫೇಮು ಕೊಟ್ಟ “ಪ್ರೇಮಲೋಕ”!
1985ರಲ್ಲಿ ಸಂಗೀತ ನಿರ್ದೇಶಕರಾಗಿ ಬಡ್ತಿ ಪಡೆದುಕೊಂಡ ಹಂಸಲೇಖ ಅವರು ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ “ನಾನು ನನ್ನ ಹೆಂಡ್ತಿ” ಚಿತ್ರದಲ್ಲಿ ಸಂಗೀತ ಮೋಡಿ ಮಾಡಿದರು. ಈ ಚಿತ್ರದಲ್ಲಿ ಬಹುತೇಕ ಎಲ್ಲ ಹಾಡುಗಳೂ ಹಿಟ್ ಆದವು. ಅದಾದ ಬಳಿಕ 1987ರಲ್ಲಿ ತೆರೆಕಂಡ ರವಿಚಂದ್ರನ್ ಅಭಿನಯದ ಪ್ರೇಮಲೋಕ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ಅಧ್ಯಾಯವನ್ನೇ ಬರೆಯಿತು. ಇದರ ಎಲ್ಲ ಹಾಡುಗಳೂ ಸೂಪರ್ ಡೂಪರ್ ಹಿಟ್ ಆದವು. ಅಲ್ಲದೆ, ಹಂಸಲೇಖ ಅವರಿಗೆ ನೇಮು-ಫೇಮು ತಂದು ಕೊಟ್ಟಿತು. ಅಲ್ಲಿಂದ ಹಂಸಲೇಖ ಅವರು ತಿರುಗಿ ನೋಡಲೇ ಇಲ್ಲ. ಇದುವರೆಗೆ ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ ಚಿತ್ರಗಳಿಗೆ ಸಂಗೀತ, ಸಾಹಿತ್ಯವನ್ನು ನೀಡಿ ಸೈ ಎನಿಸಿಕೊಂಡಿದ್ದಾರೆ.
ಸಂದ ಪ್ರಶಸ್ತಿಗಳು ಏನು?
ಅತ್ಯುತ್ತಮ ಸಂಗೀತ ನಿರ್ದೇಶನಕ್ಕಾಗಿ 1995ರಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಹಂಸಲೇಖ ಅವರು ಪಡೆದುಕೊಂಡಿದ್ದಾರೆ. ಅಲ್ಲದೆ, ಈ ವಿಭಾಗದಲ್ಲಿ ಮೂರು ಬಾರಿ ರಾಜ್ಯ ಪ್ರಶಸ್ತಿಯನ್ನೂ ಬಾಚಿಕೊಂಡಿದ್ದಾರೆ. ಇನ್ನು ಎರಡು ಬಾರಿ ಅತ್ಯುತ್ತಮ ಸಾಹಿತ್ಯಕ್ಕಾಗಿ ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ. 2012ರಲ್ಲಿ ಕರ್ನಾಟಕ ಸರ್ಕಾರವು ಡಾ.ರಾಜ್ ಕುಮಾರ್ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಬೆಸ್ಟ್ ಮ್ಯೂಸಿಕ್ ಡೈರೆಕ್ಟರ್ ವಿಭಾಗದಲ್ಲಿ ಆರು ಬಾರಿ ಫಿಲ್ಮ್ ಫೇರ್ ಪ್ರಶಸ್ತಿ ಪಡೆದಿರುವ ಖ್ಯಾತಿಯನ್ನು ಹಂಸಲೇಖ ಹೊಂದಿದ್ದಾರೆ. ನೆನಪಿರಲಿ, ಪ್ರೀತ್ಸೆ, ಯಾರೇ ನೀನು ಚೆಲುವೆ, ಹಾಲುಂಡ ತವರು, ಆಕಸ್ಮಿಕ, ರಾಮಾಚಾರಿ ಚಿತ್ರಗಳ ಸಂಗೀತ ನಿರ್ದೇಶನಕ್ಕೆ ಈ ಗೌರವಗಳು ಸಂದಿವೆ. ಇನ್ನು ಸಂಗೀತ ಕ್ಷೇತ್ರದಲ್ಲಿ ಇವರ ಸೇವೆಯನ್ನು ಪರಿಗಣಿಸಿ 2014ರಲ್ಲಿ ಬೆಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್ ನೀಡಲಾಗಿದೆ.
ಇದನ್ನೂ ಓದಿ: Mysore dasara : ದಸರಾ ಮಹೋತ್ಸವದ ಉದ್ಘಾಟನೆಗೆ ಕ್ಷಣಗಣನೆ; ನಾಳೆ ಹಂಸಲೇಖರಿಂದ ಸಿಗಲಿದೆ ಚಾಲನೆ
ಸಂಗೀತ ಶಾಲೆ ತೆರದಿರುವ ನಾದಬ್ರಹ್ಮ
ಹಂಸಲೇಖ ಅವರು ತಮ್ಮದೇ “ದೇಸಿ ಸಂಗೀತ ಶಾಲೆ”ಯನ್ನು ಪ್ರಾರಂಭಿಸಿದ್ದಾರೆ. ಇದಕ್ಕೆ ಅವರೇ ಪ್ರಾಂಶುಪಾಲರಾಗಿದ್ದಾರೆ. ಇಲ್ಲಿ ಅನೇಕ ಸಂಗೀತಾಸಕ್ತರಿಗೆ ಗುರುವಾಗಿ ಕಲಿಸುತ್ತಿದ್ದಾರೆ.
ಮೈಸೂರಿನಲ್ಲಿ ಜನನ
ಹಂಸಲೇಖ ಅವರು 1951ರ ಜೂನ್ 23ರಂದು ಮೈಸೂರಿನಲ್ಲಿ ಜನಿಸಿದ್ದಾರೆ. ಆದರೆ, ಓದಿದ್ದು, ಬೆಳೆದಿದ್ದು ಎಲ್ಲವೂ ಬೆಂಗಳೂರಿನಲ್ಲಾಗಿದೆ. ಸಾಮಾನ್ಯ ಕುಟುಂಬದವರಾದ ಇವರ ಮೂಲ ಹೆಸರು ಗಂಗರಾಜು. ಆದರೆ, ಸಂಗೀತದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದರು. ಇವರ ಹೆಸರನ್ನು ಹಂಸಲೇಖ ಎಂದು ಬದಲಾಯಿಸಿದ್ದು ಗುರುಗಳಾದ ಲಾವಣಿ ನೀಲಕಂಠಪ್ಪ ಗಂಗರಾಜು ಎಂಬುವವರು. ಇವರ ಪ್ರತಿಭೆಯನ್ನು ಮೊದಲೇ ಗುರುತಿಸಿ ಅವರು ಈ ಹೆಸರನ್ನು ಇಟ್ಟಂತಾಗಿದೆ. ಮೊದಲು ಆರ್ಕೆಸ್ಟ್ರಾಗಳಿಗೆ ಸಾಹಿತ್ಯ ಬರೆದು, ಹಾಡುತ್ತಿದ್ದ ಹಂಸಲೇಖ ಅವರಿಗೆ ‘ತ್ರಿವೇಣಿ’ ಸಿನಿಮಾವು ಸಿನಿ ಜರ್ನಿಯ ಟರ್ನಿಂಗ್ ಪಾಯಿಂಟ್ ಆಯಿತು.
ಇದು ಹಂಸಲೇಖ ಕುಟುಂಬ
ಹಂಸಲೇಖ ಅವರದ್ದು ಸಂಗೀತ ಕುಟುಂಬ. ಲತಾ ಅವರನ್ನು 1990ರಲ್ಲಿ ಹಂಸಲೇಖ ವರಿಸಿದರು. ಲತಾ ಅವರೂ ಹಿನ್ನೆಲೆ ಗಾಯಕಿಯಾಗಿದ್ದಾರೆ. ಹಂಸಲೇಖ ದಂಪತಿಗೆ ಅಲಂಕಾರ್, ತೇಜಸ್ವಿನಿ, ನಂದಿನಿ ಮೂವರು ಮಕ್ಕಳಿದ್ದಾರೆ. ಅಲಂಕಾರ್ 2 ಸಿನಿಮಾದಲ್ಲಿ ನಟಿಸಿದ್ದಲ್ಲದೆ, ಈಗ ಸಂಗೀತ ನಿರ್ದೇಶನಕ್ಕಿಳಿದಿದ್ದಾರೆ. ಹೆಣ್ಣು ಮಕ್ಕಳಾದ ತೇಜಸ್ವಿನಿ ಹಾಗೂ ನಂದಿನಿ ಸಹ ಸಿನಿಕ್ಷೇತ್ರದಲ್ಲಿದ್ದಾರೆ.
ವಿವಾದ ಎಬ್ಬಿಸಿದ್ದ ಹೇಳಿಕೆ
ಜಾತಿ ವಿಷಯವಾಗಿ ಹಂಸಲೇಖ ಅವರು ಆಡಿದ್ದ ಒಂದು ಮಾತು ಭಾರಿ ಜನಾಕ್ರೋಶಕ್ಕೆ ಕಾರಣವಾಗಿತ್ತು. 2021ರಲ್ಲಿ ಕಾರ್ಯಕ್ರಮವೊಂದರಲ್ಲಿ ಹಂಸಲೇಖ ಅವರು ಮಾತನಾಡುವಾಗ ಅಸ್ಪೃಶ್ಯತೆ ಬಗ್ಗೆ ಉಲ್ಲೇಖಿಸಿದ್ದರು. ದಲಿತರ ಮನೆಯಲ್ಲಿ ಸವರ್ಣೀಯರ ವಾಸ್ತವ್ಯ ಕುರಿತು ಹೇಳಿಕೆ ನೀಡಿದ್ದರು. ಈ ವಿಡಿಯೊ ವೈರಲ್ ಆಗಿತ್ತು. ಸಾಕಷ್ಟು ಪರ – ವಿರೋಧ ಚರ್ಚೆಗಳು ನಡೆದವು. ಅವರ ವಿರುದ್ಧ ದೂರು ಕೂಡಾ ದಾಖಲಾಗಿತ್ತು. ನಂತರ ಹಂಸಲೇಖ ಕ್ಷಮೆ ಯಾಚಿಸಿದ್ದರು.
ಇದನ್ನೂ ಓದಿ: Mysore dasara : ಜಂಬೂ ಸವಾರಿಯಲ್ಲಿ ಗಜ ಗಾಂಭೀರ್ಯ; ಗಮನ ಸೆಳೆವ ಆನೆಗಳ ಸೌಂದರ್ಯ
ಉದ್ಘಾಟನೆಗೆ ಬಂದಿರುವ ಹಂಸಲೇಖ
ಹಂಸಲೇಖ ಅವರು ಶನಿವಾರ (ಅಕ್ಟೋಬರ್ 14) ಕುಟುಂಬ ಸಮೇತ ಮೈಸೂರಿಗೆ ಬಂದಿಳಿದಿದ್ದು, ಸುತ್ತಮುತ್ತಲ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ನಂಜನಗೂಡು ತಾಲೂಕಿನ ಸುತ್ತೂರು ಮಠಕ್ಕೆ ದಸರಾ ಉದ್ಘಾಟಕ ಹಂಸಲೇಖ ಅವರು ಕುಟುಂಬ ಸಮೇತರಾಗಿ ಭೇಟಿ ನೀಡಿದ್ದರು. ಪತ್ನಿ, ಮಕ್ಕಳು, ಅಳಿಯಂದಿರ ಜತೆ ಬಂದ ಅವರನ್ನು ಜೆಎಸ್‌ಎಸ್ ಶಾಲಾ ಮಕ್ಕಳು ಸ್ವಾಗತಿಸಿದರು. ಪೂರ್ಣಕುಂಭ, ವಾದ್ಯಗೋಷ್ಠಿ ಮೂಲಕ ಬರ ಮಾಡಿಕೊಳ್ಳಲಾಗಿತ್ತು. ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಾದ ಪಡೆದ ಹಂಸಲೇಖ ಅವರು, ಶ್ರೀಗಳಿಂದ ಪ್ರಸಾದ ಸ್ವೀಕರಿಸಿ ತೆರಳಿದ್ದಾರೆ.
ಈ ಬಾರಿಯ ದಸರಾ ಟೈಂಟೇಬಲ್ ಹೀಗಿದೆ!
15-10-2023 ಭಾನುವಾರ ಶರನ್ನವರಾತ್ರಿ ಪ್ರಾರಂಭ: ಬೆಳಗ್ಗೆ 10.15 ರಿಂದ 10.36 ಶುಭ ವೃಶ್ಚಿಕ ಲಗ್ನದಲ್ಲಿ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ಪೂಜೆ ನಡೆಯಲಿದೆ. ಇನ್ನು ಅಂದು ಸಂಜೆ 6.30 ರಿಂದ 7.15ರ ಶುಭಮೇಷ ಲಗ್ನದಲ್ಲಿ ಅರಮನೆಯಲ್ಲಿ ಪೂಜೆಗಳು ಆರಂಭವಾಗಲಿವೆ.
ಶುಕ್ರವಾರ (20-10-2023): ಕಾತ್ಯಾಯಿನೀ – ಮೂಲ ನಕ್ಷತ್ರದಲ್ಲಿ ಸರಸ್ವತಿ ಪೂಜೆ ಆರಂಭವಾಗುತ್ತದೆ. ಶ್ರವಣ ನಕ್ಷತ್ರದ ದಿನ ಅಂದರೆ 24-10-2023ರ ಮಂಗಳವಾರ ವಿಸರ್ಜನೆ ನಡೆಯಲಿದೆ.
21-10-2023 ಶನಿವಾರ: ಕಾಳರಾತ್ರಿ, ಮಹಿಷಾಸುರ ಸಂಹಾರ ನಡೆಯಲಿದೆ.
23-10-2023 ಸೋಮವಾರ: ಆಯುಧ ಪೂಜೆ ನಡೆಯಲಿದೆ.
ಇದನ್ನೂ ಓದಿ: Mysore Dasara : ದಸರಾ ಹಬ್ಬಕ್ಕಾಗಿ ವಿಶೇಷ ರೈಲುಗಳ ಸಂಚಾರ
ವಿಜಯದಶಮಿ ವಿಶೇಷ
24-10-2023ರ ಮಂಗಳವಾರದಂದು ವಿಜಯದಶಮಿ ನಡೆಯಲಿದೆ. ಅಂದು ಮಧ್ಯಾಹ್ನ 1.46 ರಿಂದ 2:08 ಮಕರ ಲಗ್ನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ನಂದಿ ಧ್ವಜ ಪೂಜೆ ನಡೆಯಲಿದೆ. ಮಧ್ಯಾಹ್ನ 4.40 ರಿಂದ 5.00ರ ಶುಭ ಮೀನ ಲಗ್ನದಲ್ಲಿ ಮುಖ್ಯಮಂತ್ರಿಯಿಂದ ಮತ್ತು ಗಣ್ಯರಿಂದ ಅಂಬಾರಿಯಲ್ಲಿರುವ ಚಾಮುಂಡಿ ತಾಯಿಗೆ ಪುಷ್ಪಾರ್ಚನೆ ನಡೆಯಲಿದೆ. ನಂತರ ಜಂಬೂ ಸವಾರಿ ಪ್ರಾರಂಭವಾಗಲಿದೆ. ಭಾನುವಾರ (ಅಕ್ಟೋಬರ್ 26) ಚಾಮುಂಡಿ ಬೆಟ್ಟದಲ್ಲಿ ಶ್ರೀಚಾಮುಂಡೇಶ್ವರಿ ರಥೋತ್ಸವ ನಡೆಯಲಿದೆ.