ಬೆಂಗಳೂರು: ಸ್ಯಾಂಡಲ್‌ವುಡ್ ನಿರ್ದೇಶಕ ಹಾಗೂ ನಟ ರಿಷಬ್ ಶೆಟ್ಟಿಗೆ (Rishab Shetty) ಗುರುವಾರ (ಜು.೭) ಜನುಮದಿನದ ಸಂಭ್ರಮ. ರಿಷಬ್ ಶೆಟ್ಟಿ 37ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ರಿಕ್ಕಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ರಿಷಬ್, ʻಉಳಿದವರು ಕಂಡಂತೆʼ ಸಿನಿಮಾ ಮೂಲಕ ಖ್ಯಾತಿ ಪಡೆದರು.
2016ರಲ್ಲಿ ತೆರೆಕಂಡ ರಿಷಬ್ ಅವರ ನಿರ್ದೇಶನದ ಕಿರಿಕ್ ಪಾರ್ಟಿ ಸಿನಿಮಾ ಯಶಸ್ಸು ಪಡೆದುಕೊಂಡಿತು. ಸ.ಹಿ.ಪ್ರಾ ಶಾಲೆ ಕಾಸರಗೋಡು ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ದೊರೆತಿದ್ದಲ್ಲದೆ, ವ್ಯಾಪಕ ಪ್ರಶಂಸೆಗೆ ಪಾತ್ರವಾಯಿತು. ಈಗ ರಿಷಬ್ ಶೆಟ್ಟಿ ಅವರು ಒಂದರ ಮೇಲೊಂದು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ನಿರ್ದೇಶನ ಮಾತ್ರವಲ್ಲದೆ ನಟನೆಯಲ್ಲೂ ತೊಡಗಿಸಿಕೊಂಡ ಇವರು ʻಕಾಂತಾರʼ ಸಿನಿಮಾದ ಮೂಲಕ ಹೊಸ ಲುಕ್‌ನಲ್ಲಿ ಬರುತ್ತಿದ್ದಾರೆ.
ಇನ್ನೂ ವಿಶೇಷ ಎಂದರೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರ 126ನೇ ಚಿತ್ರ ʼರುದ್ರಪ್ರಯಾಗʼವನ್ನು ನಿರ್ದೇಶನ ಮಾಡುತ್ತಿದ್ದಾರೆ. ಮೂಲತಃ ಕುಂದಾಪುರದವರಾದ ರಿಷಬ್, ಯಾವುದೇ ಹಿನ್ನೆಲೆಯಿಲ್ಲದೆ ಸಿನಿಮಾ ರಂಗಕ್ಕೆ ಬಂದರು.
ಸಿನಿಮಾ ಮೂಲಕ ಚಿತ್ರರಂಗದಲ್ಲಿ ಹೆಸರು ಪಡೆದ ರಿಷಬ್
ತುಘಲಕ್, ಸ.ಹಿ.ಪ್ರಾ ಶಾಲೆ ಕಾಸರಗೋಡು, ಉಳಿದವರು ಕಂಡಂತೆ, ಹೀರೋ, ಬೆಲ್ ಬಾಟಂ, ಗರುಡ ಗಮನ ವೃಷಭ ವಾಹನ, ಕಥಾ ಸಂಗಮ, ಅವನೇ ಶ್ರೀಮನ್ನಾರಾಯಣ ಹಾಗೂ ಹರಿ ಕಥೆ ಅಲ್ಲ ಗಿರಿ ಕಥೆ ಸೇರಿ ಸಾಕಷ್ಟು ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿ, ಸಿನಿ ರಸಿಕರನ್ನು ರಂಜಿಸಿದರು. ರಿಷಬ್ ಕೇವಲ ನಟನೆ ಮತ್ತು ನಿರ್ದೇಶನ ಮಾಡುವುದಲ್ಲದೆ, ಉತ್ತಮ ಬರಹಗಾರರೂ ಆಗಿದ್ದಾರೆ. ಜತೆಗೆ ಈಗ ನಿರ್ಮಾಪಕರೂ ಆಗಿದ್ದಾರೆ.
ಪ್ರಶಸ್ತಿಗಳ ಗರಿ
64ನೇ ಫಿಲ್ಮ್‌ಫೇರ್ ಅವಾರ್ಡ್‌ನಲ್ಲಿ ಕಿರಿಕ್ ಪಾರ್ಟಿ ಸಿನಿಮಾಗೆ ಬೆಸ್ಟ್ ಡೈರೆಕ್ಟರ್ ಪ್ರಶಸ್ತಿ ಲಭಿಸಿದೆ. ಅಲ್ಲದೆ, ಅದೇ ಸಿನಿಮಾಗೆ ಇಫಾ ಹಾಗೂ ಸೈಮಾ ಅವಾರ್ಡ್ ದೊರೆತಿವೆ. ಸ.ಹಿ.ಪ್ರಾ ಶಾಲೆ ಕಾಸರಗೋಡು ಚಿತ್ರದ ನಿರ್ದೇಶನಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಸಿಕ್ಕಿವೆ.
ತಮ್ಮದೇ ರಿಷಬ್ ಶೆಟ್ಟಿ ಫಿಲ್ಮ್ಸ್ ಪ್ರೊಡಕ್ಷನ್ ಸಹ ಪ್ರಾರಂಭಿಸಿದ್ದು, ಇದರ ಮೂಲಕ ಅನೇಕ ಚಿತ್ರಗಳು ತೆರೆ ಕಾಣುತ್ತಿವೆ. ಇದೀಗ ರಿಷಬ್ ಹೊಂಬಾಳೆ ಫಿಲ್ಮ್ಸ್ ಸಿನಿಮಾದ ಜತೆ ಕೈ ಜೋಡಿಸಿದ್ದಾರೆ. ಕಾಂತಾರ ಸಿನಿಮಾವನ್ನು ನಿರ್ದೇಶನದ ಜತೆ, ನಟನೆಯನ್ನು ಮಾಡುತ್ತಿದ್ದಾರೆ. ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಶುಭಾಶಯ ಕಳುಹಿಸುತ್ತಿದ್ದಾರೆ.
ʻದಸರಾದ ಜತೆಗೆ ಕಾಡ್ಗಿಚ್ಚಿನ ಬಯಲಾಟಕ್ಕೆ ಸಾಕ್ಷಿಯಾಗಿ.. ಸೆಪ್ಟೆಂಬರ್ 30ರಂದು ಬಯಲಾಟಕ್ಕೆ ಸಾಕ್ಷಿಯಾಗಿʼ ಎಂಬ ಟ್ಯಾಗ್‌ಲೈನ್‌ನೊಂದಿಗೆ ಸಿನಿಮಾ ಬಿಡುಗಡೆ ದಿನಾಂಕವನ್ನು ಸ್ವತಃ ರಿಷಭ್ ಶೆಟ್ಟಿ ಹಂಚಿಕೊಂಡಿದ್ದರು. ಕಾಂತಾರ ಸೆಪ್ಟೆಂಬರ್ 30ರಂದು ತೆರೆ ಕಾಣಲಿದೆ. ಹುಟ್ಟುಹಬ್ಬದ ನಿಮಿತ್ತ ಸಿನಿಮಾ ಕುರಿತು ಹೊಸ ಸುದ್ದಿಯನ್ನು ಹಂಚಿಕೊಳ್ಳಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.