ಬೆಂಗಳೂರು: ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ಕಾಂತಾರ ಸಿನಿಮಾ ದೇಶ-ವಿದೇಶದಲ್ಲಿ ಭರ್ಜರಿ ಹೆಸರು ಗಳಿಸಿದ ಬೆನ್ನಲ್ಲೇ ರಿಷಬ್ ಶೆಟ್ಟಿ ಅವರು ಕಾಂತಾರ ಚಾಪ್ಟರ್ 1 (Kantara Movie) (ಪ್ರಿಕ್ವೆಲ್) ಚಿತ್ರೀಕರಣಕ್ಕೆ ಇಳಿದಿದ್ದಾರೆ. ಹಾಗಾಗಿ, ಕಾಂತಾರ ಚಾಪ್ಟರ್ 1 ಕುತೂಹಲ ಹೆಚ್ಚಿಸಿದೆ. ಇದರ ಬೆನ್ನಲ್ಲೇ, ಕಾಂತಾರ ಸಿನಿಮಾದ ಡಿಜಿಟಲ್ ಹಕ್ಕುಗಳು (Digital Rights) ಅಮೆಜಾನ್ ಪ್ರೈಮ್ ಪಾಲಾಗಿದ್ದು, ಸುಮಾರು 125 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ ಎಂದು ತಿಳಿದುಬಂದಿದೆ. ಇದರೊಂದಿಗೆ, ಸಿನಿಮಾ ಬಿಡುಗಡೆಗೆ ಮೊದಲೇ ಕಾಂತಾರ ಭರ್ಜರಿ ಆದಾಯ ಗಳಿಸಿದಂತಾಗಿದೆ.
ದೈವಾರಾಧನೆಯ ಎಳೆಯನ್ನು ಇಟ್ಟುಕೊಂಡು, ಕಡಿಮೆ ಬಜೆಟ್‌ನಲ್ಲಿ ನಿರ್ಮಿಸಿದ ಕಾಂತಾರ ಸಿನಿಮಾ ಭಾರತ ಸೇರಿ ಜಗತ್ತಿನಾದ್ಯಂತ ಹೆಸರು ಗಳಿಸಿದೆ. ರಿಷಬ್ ಶೆಟ್ಟಿ ಅವರ ಸಿನಿಮಾ ಬದುಕಿಗೆ ಹೊಸ ಸ್ವರೂಪ ನೀಡಿದೆ. ಹಾಗಾಗಿ, ಕಾಂತಾರ ಪ್ರಿಕ್ವೆಲ್‌ಅನ್ನು ಅದ್ಧೂರಿಯಾಗಿ ನಿರ್ಮಿಸುವುದು ರಿಷಬ್ ಶೆಟ್ಟಿ ಅವರ ಗುರಿಯಾಗಿದೆ. ಇದರ ಬೆನ್ನಲ್ಲೇ, ಕಾಂತಾರ ಚಾಪ್ಟರ್ 1 ಸಿನಿಮಾದ ಡಿಜಿಟಲ್ ಹಕ್ಕುಗಳು ದಾಖಲೆಯ 125 ಕೋಟಿ ರೂ.ಗೆ ಮಾರಾಟವಾಗಿರುವುದು ಮಹತ್ವದ ಸಂಗತಿಯಾಗಿದೆ.
ಚಿತ್ರೀಕರಣ ಆರಂಭ
ಕೆಲ ದಿನಗಳ ಹಿಂದಷ್ಟೇ ರಿಷಬ್ ಶೆಟ್ಟಿ ಅವರು ಕಾಂತಾರ 2 ಚಿತ್ರೀಕರಣ ಆರಂಭವಾಗಿದೆ ಎಂದು ಹೇಳಿದ್ದರು. ಕಾಂತಾರ ಚಿತ್ರದ ಕುರಿತು ಅಧಿಕೃತವಾಗಿ ಹೊಂಬಾಳೆ ಸಂಸ್ಥೆ ಎಲ್ಲವನ್ನೂ ಘೋಷಣೆ ಮಾಡುತ್ತದೆ. ಈಗಾಗಲೇ ಚಿತ್ರೀಕರಣ ಆರಂಭವಾಗಿದ್ದು, ಬಹಳ ಚೆನ್ನಾಗಿ ಕೆಲಸಕಾರ್ಯಗಳು ನಡೆಯುತ್ತಿವೆ. ಮೊದಲಿಗಿಂತ ದೊಡ್ಡ ಜವಾಬ್ದಾರಿಯೊಂದಿಗೆ ದೊಡ್ಡ ತಂಡ ಕೆಲಸ ಮಾಡುತ್ತಿದೆ” ಎಂದು ಹೇಳಿದ್ದರು.
“ಹೊಂಬಾಳೆ ಪ್ರೊಡಕ್ಷನ್ ಹೌಸ್ ಸಿಕ್ಕಿರುವುದು ಫಿಲಂ ಮೇಕರ್‌ಗಳಿಗೆ ಒಂದು ಪುಣ್ಯ. ಕಾಂತಾರದಲ್ಲಿ ಅದ್ಭುತವಾದ ಟೆಕ್ನಿಷಿಯನ್ಸ್‌ಗಳು ಕೆಲಸ ಮಾಡುತ್ತಿದ್ದಾರೆ. ನಿರಂತರವಾಗಿ ಕೆಲಸಗಳು ನಡೆಯುತ್ತಿದ್ದು ಪಾರ್ಟ್ ಬೈ ಪಾರ್ಟ್ ಚಿತ್ರೀಕರಣ ನಡೆಯುತ್ತದೆ. ಜನ ಕಾಂತಾರವನ್ನು ಗೆಲ್ಲಿಸಿದ್ದಾರೆ, ಹೀಗಾಗಿ ಮಾತಿನಲ್ಲಿ ಏನನ್ನೂ ಹೇಳುವುದಿಲ್ಲ. ಕೆಲಸದ ಮೂಲಕ ಮಾಡಿ ತೋರಿಸಬೇಕು ಎಂದು ಅಂದುಕೊಂಡಿದ್ದೇನೆ” ಎಂದಿದ್ದರು.
ಕಾಂತಾರ ಶೂಟಿಂಗ್‌ಗಾಗಿ ಕುಂದಾಪುರದ ಕರಾವಳಿ ಪ್ರದೇಶದಲ್ಲಿ ಅದ್ಧೂರಿ ಸೆಟ್ ನಿರ್ಮಿಸಲಾಗಿದೆ. 200×200 ಅಡಿಯ ಬೃಹತ್ ಸೆಟ್ ನಿರ್ಮಿಸಲಾಗಿದೆ. ಚಿತ್ರದ ಹೆಚ್ಚಿನ ಭಾಗವನ್ನು ಕಾಡಿನಲ್ಲಿ ಚಿತ್ರೀಕರಿಸಲಿದ್ದರೆ, ಬೃಹತ್ ಸೆಟ್ ಡಬ್ಬಿಂಗ್ ಸ್ಟುಡಿಯೊ ಮತ್ತು ಎಡಿಟಿಂಗ್ ಸೂಟ್ ಒಳಗೊಂಡಿರುತ್ತದೆ ಎಂದು ವರದಿಯಾಗಿದೆ. ಮುಂಬೈ, ಬೆಂಗಳೂರು ಮತ್ತು ಹೈದರಾಬಾದ್‌ನಂತಹ ಸ್ಥಳಗಳಿಂದ ಸೆಟ್ ನಿರ್ಮಾಣಕ್ಕಾಗಿ 600 ನುರಿತ ಬಡಗಿಗಳು ಮತ್ತು ಸ್ಟಂಟ್ ಮಾಸ್ಟರ್‌ಗಳನ್ನು ನೇಮಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ರಾಮೋಜಿ ಫಿಲ್ಮ್ ಸಿಟಿಯ ನಂತರ ದೇಶದಲ್ಲೇ ಅತಿ ದೊಡ್ಡ ಸೆಟ್ ಇದಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: Kantara Movie: ರಾಮೋಜಿ ಫಿಲ್ಮ್ ಸಿಟಿ ಮೀರಿಸುವಂತಿದೆಯಂತೆ ʻಕಾಂತಾರ ಚಾಪ್ಟರ್ 1ʼ ಸೆಟ್!