ಬೆಂಗಳೂರು : ಬಹುಭಾಷ ನಟಿ ಸಾಯಿ ಪಲ್ಲವಿ (Sai Pallavi) ಇತ್ತೀಚೆಗೆ ತಾವು ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಸಂದರ್ಶನದಲ್ಲಿ ತಾವು ನೀಡಿದ ಉತ್ತರವನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತಿದೆ. ಹೀಗಾಗಿ ತಾನು ಈ ಸ್ಪಷ್ಟನೆ ನೀಡುತ್ತಿರುವುದಾಗಿ ಅವರು ಫೇಸ್‌ಬುಕ್ ಲೈವ್‌ನಲ್ಲಿ ಹೇಳಿದ್ದಾರೆ.
ಇತ್ತೀಚಿಗಷ್ಟೇ ಅವರು ತಮ್ಮ ಮುಂದಿನ ಸಿನಿಮಾವಾದ ʼವಿರಾಟ ಪರ್ವಂʼ ಪ್ರಚಾರದ ಸಂದರ್ಭದಲ್ಲಿ ಸಂದರ್ಶನವೊಂದನ್ನು ನೀಡಿದ್ದು, ಈ ಸಂದರ್ಭದಲ್ಲಿ, ಕಾಶ್ಮೀರಿ ಪಂಡಿತರನ್ನು ಹೇಗೆ ಹತ್ಯೆ ಮಾಡಲಾಯಿತು ಎಂದು ದಿ ಕಾಶ್ಮೀರ್ ಫೈಲ್ಸ್ನಲ್ಲಿ ತೋರಿಸಲಾಗಿದೆ. ಅದನ್ನು ನೀವು ಧಾರ್ಮಿಕ ಸಂಘರ್ಷ ಎಂದು ಹೇಳುವುದಾದರೆ ಇತ್ತೀಚಿಗೆ ಗೋವು ಸಾಗಿಸುತ್ತಿದ್ದ ಒಬ್ಬ ಮುಸ್ಲಿಂ ವ್ಯಕ್ತಿ ಮೇಲೆ ಹಲ್ಲೆ ನಡೆಸಿ ಜೈ ಶ್ರೀರಾಮ್ ಎಂದು ಒತ್ತಾಯಪೂರ್ವಕವಾಗಿ ಹೇಳಿಸುವುದು ಕೂಡ ಅದೇ ಮಾದರಿಯದ್ದು. ಈ ಎರಡು ಘಟನೆಗಳ ನಡುವೆ ವ್ಯತ್ಯಾಸ ಎಲ್ಲಿದೆ? ನಾವು ಒಳ್ಳೆಯ ಮನುಷ್ಯರಾಗಿರಬೇಕು ಅಷ್ಟೇ ಎಂದು ಹೇಳಿಕೆ ನೀಡಿದ್ದರು.
ಕಾಶ್ಮೀರಿ ಪಂಡಿತರನ್ನು ಗೋವು ಸಾಗಿಸುವವರಿಗೆ ಹೋಲಿಸಿರುವುದಕ್ಕೆ ದೇಶಾದ್ಯಂತ ವ್ಯಪಾಕ ಆಕ್ರೋಶ ವ್ಯಕ್ತವಾಗಿತ್ತು. ಈ ಬಗ್ಗೆ ಈಗ ವಿವರಣೆ ನೀಡಿರುವ ನಟಿ, ಯಾವುದೇ ರೂಪದಲ್ಲಿ ಹಿಂಸೆ ಮತ್ತು ಯಾವುದೇ ಧರ್ಮದ ಹೆಸರಿನಲ್ಲಿ ನಡೆಯುವ ಹಿಂಸೆ ದೊಡ್ಡ ಪಾಪ ಎಂದೇ ನಾನು ಭಾವಿಸಿದ್ದೇನೆ. ಅದನ್ನೇ ಅಂದು ನಾನು ಹೇಳಲು ಹೊರಟಿದ್ದು ಎಂದಿದ್ದಾರೆ.
ನನ್ನ ಹೇಳಿಕೆಯನ್ನು ಅನೇಕರು ಬೇರೆ ರೀತಿ ಅರ್ಥೈಸಿಕೊಂಡಿರುವುದು ಆತಂಕಕಾರಿಯಾಗಿದೆ. ನಾನು ಎಂಬಿಬಿಎಸ್ ಪದವೀಧರೆಯಾಗ ಎಲ್ಲರ ಜೀವನವೂ ಬಹಳ ಮುಖ್ಯ ಎಂದೇ ನಂಬಿದ್ದೇನೆ. ನಮ್ಮಲ್ಲಿ ಯಾರೊಬ್ಬರಿಗೂ ಇನ್ನೊಬ್ಬರ ವೈಯಕ್ತಿಕ ಜೀವನದ ಮೇಲೆ ಅಧಿಕಾರ ಚಲಾಯಿಸುವ ಹಕ್ಕಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಸಾಯಿ ಪಲ್ಲವಿ ಹೇಳಿದ್ದಾರೆ.
ಒಂದು ಹುಟ್ಟಿದ ಮಗು ತನ್ನ ಗುರುತನ್ನು ಹೇಳಿಕೊಳ್ಳಲು ಹೆದರುವಂತಹ ಕಾಲ ನಮ್ಮ ದೇಶದಲ್ಲಿ ಬಾರದಿರಲಿ ಎಂದು ನಾನು ಆಶಿಸುತ್ತೇನೆ ಎಂದು ನಟಿ ತಮ್ಮ ವಿಡಿಯೋ ವಿವರಣೆಯಲ್ಲಿ ತಿಳಿಸಿದ್ದಾರೆ.
ಕೆಲವರು ನನ್ನ ಸಂದರ್ಶನವನ್ನೂ ಪೂರ್ತಿಯಾಗಿ ನೋಡದೇ ಪ್ರತಿಕ್ರಿಯಿಸಿದ್ದಾರೆ. ಇದು ಬೇಸರ ತರಿಸಿದೆ. ನಾನು ಯಾವಾಗಲೂ ತಟಸ್ಥ ನಿಲುವು ಹೊಂದಿದವಳು. ಇದನ್ನೇ ಆ ಸಂದರ್ಶನದಲ್ಲಿ ಹೇಳಿದ್ದೆ. ನಾವು ಎಡವೋ, ಬಲವೋ ಎನ್ನುವುದಕ್ಕಿಂತ ಮನುಷ್ಯರಾಗಬೇಕೆಂಬುದು ಬಹಳ ಮುಖ್ಯ ಎಂದಿದ್ದೆ ಎಂದಿರುವ ಸಾಯಿ ಪಲ್ಲವಿ, ಈ ವಿವಾದದ ಸಂದರ್ಭದಲ್ಲಿ ತಮ್ಮ ಜತೆಗಿದ್ದವರಿಗೆ ಧನ್ಯವಾದ ತಿಳಿಸಿದ್ದಾರೆ.
ಇದನ್ನೂ ಓದಿ| ಸಾಯಿ ಪಲ್ಲವಿ ಹೇಳಿಕೆಗೆ ಭಜರಂಗದಳ ಆಕ್ರೋಶ, ನಟಿ ವಿರುದ್ಧ ದೂರು ದಾಖಲು