Site icon Vistara News

Salman Khan: ನಟ ಸಲ್ಮಾನ್​ ಖಾನ್ ಮನೆಯ ಹೊರಗೆ ಗುಂಡಿನ ದಾಳಿ; ಹೊಣೆ ಹೊತ್ತ ಗ್ಯಾಂಗ್​ಸ್ಟರ್​ ಸಹೋದರ

Salman Khan

Salman Khan

ಮುಂಬೈ: ಇಂದು (ಏ. 14) ಮುಂಜಾನೆ ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಅವರ ಮುಂಬೈ ನಿವಾಸದ ಹೊರಗೆ ಗುಂಡಿನ ದಾಳಿ ನಡೆದಿತ್ತು. ಈ ದಾಳಿಯಲ್ಲಿ ತಮ್ಮದೇ ಕೈವಾಡವಿದೆ ಎಂದು ಗ್ಯಾಂಗ್​ಸ್ಟರ್​ ಲಾರೆನ್ಸ್​ ಬಿಷ್ಣೋಯ್ ಸಹೋದರ ಅನ್ಮೋಲ್ ಬಿಷ್ಣೋಯ್ (Anmol Bishnoi)​ ಹೇಳಿಕೊಂಡಿದ್ದಾನೆ. ಅನ್ಮೋಲ್ ಈಗ ಅಮೆರಿಕದಲ್ಲಿದ್ದು, ಸಲ್ಮಾನ್ ಮನೆಯ ಹೊರಗೆ ನಡೆದ ಗುಂಡಿನ ದಾಳಿಯ ಹೊಣೆ ಹೊತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾನೆ.

ಇಂದು ಬೆಳಗ್ಗೆ ಇಬ್ಬರು ಆಗಂತುಕರು ಸಲ್ಮಾನ್‌ ಖಾನ್‌ ಅವರ ನಿವಾಸದೆದುರು 6 ಬಾರಿ ಗುಂಡಿನ ಮಳೆಗೆರೆದಿದ್ದರು. ಬಳಿಕ ಅವರು ಬೈಕ್‌ನಲ್ಲಿ ಸ್ಥಳದಿಂದ ಪರಾರಿಯಾಗಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಟ್ರೈಲರ್‌ ಮಾತ್ರ!

ಅನ್ಮೋಲ್‌ನ ಫೇಸ್‌ಬುಕ್‌ ಪೇಜ್‌ನಲ್ಲಿ ‘ಈ ಘಟನೆ ಟ್ರೈಲರ್‌ ಮಾತ್ರ. ಇದಕ್ಕಿಂತಲೂ ಭೀಕರ ಪರಿಣಾಮವನ್ನು ಮುಂದೆ ಎದುರಿಸಬೇಕಾಗುತ್ತದೆʼ ಎಂದು ಸಲ್ಮಾನ್‌ ಖಾನ್‌ಗೆ ಎಚ್ಚರಿಕೆ ನೀಡಲಾಗಿದೆ. ಈ ಪೋಸ್ಟ್‌ ಅನ್ನು ಇಂದು ಬೆಳಗ್ಗೆ ಸುಮಾರು 11.30ಕ್ಕೆ ಪೋಸ್ಟ್‌ ಮಾಡಲಾಗಿದೆ. ಅಂದರೆ ಬಾಂದ್ರಾದ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ಹೊರಗೆ ಗುಂಡಿನ ದಾಳಿ ನಡೆದ ಸುಮಾರು 5 ಗಂಟೆಗಳ ನಂತರ ಈ ಪೋಸ್ಟ್‌ ಅನ್ನು ಶೇರ್‌ ಮಾಡಲಾಗಿದೆ.

ʼಸಲ್ಮಾನ್‌ ಖಾನ್‌ ಇದು ನಾವು ನಿಮಗೆ ತೋರಿಸಿದ್ದು ಟ್ರೈಲರ್‌ ಮಾತ್ರ. ನಮ್ಮ ಸಾಮರ್ಥ್ಯ, ಶಕ್ತಿ ಏನು ಎಂಬುದರ ಪರಿಚಯ ಮಾಡಲು ಈ ಕ್ರಮ ಕೈಗೊಂಡಿದ್ದೇವೆ. ಇದು ನಾವು ನೀಡುವ ಮೊದಲ ಮತ್ತು ಕೊನೆಯ ವಾರ್ನಿಂಗ್‌ʼ ಎಂದು ಫೇಸ್‌ಬುಕ್‌ನಲ್ಲಿ ಬರೆಯಲಾಗಿದೆ.

ಯಾರು ಈ ಅನ್ಮೋಲ್‌?

ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯ್‌ನ ಸಹೋದರ ಈ ಅನ್ಮೋಲ್‌ ಬಿಷ್ಣೋಯ್‌. ಸದ್ಯ ಈತ ಕ್ಯಾಲಿಫೋರ್ನಿಯಾದಲ್ಲಿದ್ದಾನೆ. ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆಯಲ್ಲೂ ಆತನ ಕೈವಾಡವಿತ್ತು ಎನ್ನಲಾಗಿದೆ. ಸಿಧು ಮೂಸೆವಾಲಾ ಹತ್ಯೆಯ ಬಳಿಕ ಅನ್ಮೋಲ್‌ ನಕಲಿ ಪಾಸ್‌ಪೋರ್ಟ್‌ ಬಳಸಿ ಭಾರತದಿಂದ ವಿದೇಶಕ್ಕೆ ಪರಾರಿಯಾಗಿದ್ದ. ಕಳೆದ ವರ್ಷ ಆತನನ್ನು ಅಜರ್‌ಬೈಜಾನ್‌ನಲ್ಲಿ ಪತ್ತೆಯಾಗಿದ್ದರೂ ಅಲ್ಲಿಂದ ತಪ್ಪಿಸಿಕೊಂಡಿದ್ದ. ಬಳಿಕ ಅಮೆರಿಕದಲ್ಲಿ ಕಂಡುಬಂದಿದ್ದ. ಮದುವೆ ಸಮಾರಂಭಕ್ಕೆ ಆತ ತೆರಳಿದ್ದ ವಿಡಿಯೊ ವೈರಲ್‌ ಆಗಿತ್ತು.

ಸಲ್ಮಾನ್‌ ಖಾನ್‌ ಅವರಿಗೆ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯ್‌ ಹಿಂದೊಮ್ಮೆ ಬೆದರಿಕೆ ಹಾಕಿದ್ದ. ʻʻಸಲ್ಮಾನ್ ಖಾನ್ ಅವರನ್ನು ಕೊಲ್ಲುವುದು ನನ್ನ ಜೀವನದ ಗುರಿʼʼ ಎಂದು ಹೇಳಿದ್ದ. “ಸಲ್ಮಾನ್ ಖಾನ್ ಕ್ಷಮೆ ಕೇಳಬೇಕು. ಅವರು ಬಿಕಾನೇರ್‌ನಲ್ಲಿರುವ ನಮ್ಮ ದೇವಸ್ಥಾನಕ್ಕೆ ಹೋಗಿ ಕ್ಷಮೆ ಕೇಳಬೇಕು. ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದೇ ನನ್ನ ಜೀವನದ ಗುರಿ. ಸಲ್ಮಾನ್ ಖಾನ್ ಅವರ ಭದ್ರತೆಯನ್ನು ತೆಗೆದುಹಾಕಿದರೆ ನಾನು ಅವರನ್ನು ಕೊಲ್ಲುತ್ತೇನೆʼʼ ಎಂದು ಬಿಷ್ಣೋಯ್ ಹೇಳಿದ್ದ. ಇದಾದ ಕೆಲವೇ ದಿನಗಳಲ್ಲಿ, ಕೃಷ್ಣಮೃಗವನ್ನು ಕೊಂದ ಆರೋಪದ ಮೂಲಕ ಸಲ್ಮಾನ್ ತನ್ನ ಸಮುದಾಯವನ್ನು ಅವಮಾನಿಸಿದ್ದಾರೆ ಎಂದು ಲಾರೆನ್ಸ್‌ ಬಿಷ್ಣೋಯ್‌ ಹೇಳಿಕೆ ನೀಡಿದ್ದ.

ಯಾಕೆ ಈ ದ್ವೇಷ ?

2018ರಲ್ಲಿ, ಕೃಷ್ಣಮೃಗ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್‌ ಅವರಿಗೆ ಕೊಲ್ಲುವುದಾಗಿ ಬೆದರಿಕೆ ಹಾಕಿದ ನಂತರ ಬಿಷ್ಣೋಯ್ ಅವರ ಸಹಾಯಕರಲ್ಲಿ ಒಬ್ಬನನ್ನು ಬಂಧಿಸಲಾಯಿತು. ಜೋಧಪುರ್​ನ ಬಿಷ್ಣೋಯ್​ಗಳು ಕೃಷ್ಣಮೃಗವನ್ನು ತಮ್ಮ ಧಾರ್ಮಿಕ ಗುರು ಭಗವಾನ್ ಜಂಬೇಶ್ವರ ಅವರ ಪುನರ್ಜನ್ಮ ಎಂದು ಪರಿಗಣಿಸುತ್ತಾರೆ. ಹೀಗಾಗಿ, ಕೃಷ್ಣಮೃಗ ಕೊಲ್ಲುವುದನ್ನು ಬಿಷ್ಣೋಯ್​ಗಳು ಎಂದಿಗೂ ಸಹಿಸುವುದಿಲ್ಲ. ಈ ಕಾರಣಕ್ಕೆ ಸಲ್ಮಾನ್ ಖಾನ್ ಹತ್ಯೆ ಮಾಡಲು ಲಾರೆನ್ಸ್ ಬಿಷ್ಣೋಯ್ ನಿರ್ಧರಿಸಿದ್ದ. ಇದೀಗ ಪೊಲೀಸರು ಘಟನೆ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Salman Khan: ಬಿಡಿಗಾಸೂ ಕೈಯಲ್ಲಿ ಇಲ್ಲದೇ ಇದ್ದಾಗ ಸಲ್ಮಾನ್‌ ಖಾನ್‌ ಸಹೋದರಿಯನ್ನು ಮದುವೆಯಾಗಿದ್ರಂತೆ ಈ ನಟ!

Exit mobile version