Site icon Vistara News

Actor Darshan : ಸಾರ್ವಜನಿಕವಾಗಿ ಲಾಂಗ್‌ ಹಿಡಿದು ಪೋಸ್‌; ಮತ್ತೊಂದು ವಿವಾದದಲ್ಲಿ ದರ್ಶನ್‌

Darshan thurugudeepa with long

ಬೆಂಗಳೂರು: ಚಿತ್ರ ನಟ ದರ್ಶನ್‌ (Actor Darshan) ಮತ್ತೊಮ್ಮೆ ಸುದಿದ ಮಾಡಿದ್ದಾರೆ. ಕಾಟೇರ ಸಿನಿಮಾದ (Katera Movie) ಪ್ರಮೋಷನ್‌ ಮತ್ತು ಇತ್ತೀಚೆಗೆ ನಾಯಿಯೊಂದು ಮಹಿಳೆಯೊಬ್ಬರಿಗೆ ಕಚ್ಚಿದ ಪ್ರಕರಣದಲ್ಲಿ ಸುದ್ದಿಯಾಗಿದ್ದ ಅವರನ್ನು ಈಗ ಮತ್ತೊಂದು ವಿವಾದ ಬೆನ್ನು ಹತ್ತಿದೆ. ಅಭಿಮಾನಿಗಳು ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ದರ್ಶನ್‌ ಕೈಯಲ್ಲಿ ಲಾಂಗ್‌ ಹಿಡಿದು ಪೋಸ್‌ (Darshan poses with long in hand) ನೀಡಿರುವುದು ಚರ್ಚೆಗೆ ಕಾರಣವಾಗಿದೆ.

ದರ್ಶನ್‌ ಯಾವತ್ತಿದ್ದರೂ ಅಭಿಮಾನಿಗಳ ಪಾಲಿನ ಪ್ರೀತಿಯ ನಟ. ಅವರಿಗೆ ಅತ್ಯಂತ ದೊಡ್ಡ ಫ್ಯಾನ್‌ ಬೇಸ್‌ ಇದೆ. ಸೋಷಿಯಲ್‌ ಮೀಡಿಯಾದಲ್ಲಿ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಲೇ ಇರುತ್ತಾರೆ. ಅವರ ಮನೆ ಬಳಿಯೂ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಬರುತ್ತಾರೆ. ದರ್ಶನ್‌ ಯಾವ ಅಭಿಮಾನಿಗೂ ನಿರಾಸೆ ಆಗಲು ಬಿಡುವುದಿಲ್ಲ. ದಾರಿಯಲ್ಲಿ ಹೋಗುವಾಗಲೂ ಯಾರಾದರೂ ನಿಲ್ಲಿಸಿದರೆ ಮಾತನಾಡಿಸಿ ಹೋಗುವ ಜಾಯಮಾನ ಅವರದು. ಅಭಿಮಾನಿಗಳು ಎಲ್ಲೇ ಕಾರ್ಯಕ್ರಮ ಆಯೋಜಿಸಿದರೂ ಅವರು ತಪ್ಪಿಸಿಕೊಳ್ಳುವುದು ಕಡಿಮೆ. ಇಂಥ ಅಭಿಮಾನ ಹೊಂದಿರುವ ನಟ ದರ್ಶನ್‌ ಅಭಿಮಾನಿಗಳಿಗೆ ಬೇಸರ ಆಗಬಾರದು ಎಂಬ ಕಾರಣಕ್ಕೆ ಕೈಯಲ್ಲಿ ಲಾಂಗ್‌ ಹಿಡಿದು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಅದು ಕೆಲವು ದಿನಗಳ ಹಿಂದೆ ಬೆಂಗಳೂರಿನ ಜಯನಗರದ ನಾಲ್ಕನೇ ಬ್ಲಾಕ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮ. ಅಖಿಲ ಕರ್ನಾಟಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆಳೆಯರ ಬಳಗ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಾವಿರಾರು ಅಭಿಮಾನಿಗಳು ಭಾಗವಹಿಸಿದ್ದರು. ದರ್ಶನ್‌ ಅವರ ಜತೆ ಬ್ಯಾಡ್‌ ಮ್ಯಾನರ್ಸ್‌ ಸಿನಿಮಾದ ಪ್ರಮೋಷನ್‌ನಲ್ಲಿರುವ ಅಭಿಷೇಕ್‌ ಅಂಬರೀಷ್‌ ಕೂಡಾ ಇದ್ದರು.

ಈ ಕಾರ್ಯಕ್ರಮದಲ್ಲಿ ಅಭಿಮಾನಿಗಳು ತಮ್ಮ ಪ್ರೀತಿಯ ದ್ಯೋತಕವಾಗಿ ದರ್ಶನ್‌ ಅವರಿಗೆ ಬೆಳ್ಳಿಯ ಲಾಂಗ್‌ ನೀಡಿದರೆ, ಅಭಿಷೇಕ್‌ ಅಂಬರೀಷ್‌ ಅವರಿಗೆ ಬೆಳ್ಳಿಯ ಕಿರೀಟ ನೀಡಿದ್ದಾರೆ. ದರ್ಶನ್‌ ಅವರು ಅಭಿಮಾನಿಗಳ ಪ್ರೀತಿಗೆ ಮಣಿದು ಈ ಲಾಂಗ್‌ನ್ನು ಕೈಯಲ್ಲಿ ಹಿಡಿದು ಪೋಸ್‌ ನೀಡಿದ್ದಾರೆ.

ಈ ಚಿತ್ರಗಳು ಈಗ ಸೋಷಿಯಲ್‌ ಮೀಡಿಯಾದಲ್ಲಿ ಓಡಾಡುತ್ತಿದ್ದು, ಸಾರ್ವಜನಿಕರಿಂದ ಟೀಕೆಗೆ ಒಳಗಾಗಿವೆ. ಈ ರೀತಿ ಸಾರ್ವಜನಿಕವಾಗಿ ಮಾರಕಾಸ್ತ್ರಗಳನ್ನು ಪ್ರದರ್ಶಿಸುವುದು ತಪ್ಪು ಸಂದೇಶ ನೀಡುತ್ತದೆ. ಅದರ ಜತೆಗೆ ಪೊಲೀಸರು ಕೂಡಾ ಶಸ್ತ್ರಾಸ್ತ್ರ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಳ್ಳಲೂ ಅವಕಾಶವಿದೆ.

ಅದಕ್ಕಿಂತಲೂ ಹೆಚ್ಚಾಗಿ ದರ್ಶನ್‌ ಅವಂಥ ನಟರು ಈ ರೀತಿ ಸಾರ್ವಜನಿಕವಾಗಿ ಲಾಂಗ್‌ ಪ್ರದರ್ಶನ ಮಾಡಿದರೆ ಅವರ ಅಭಿಮಾನಿಗಳಲ್ಲಿ ಕೂಡಾ ಇಂಥಹುದೇ ಶೋಕಿ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ರೌಡಿ ಶೀಟರ್‌ಗಳು ತಮ್ಮ ಬರ್ತ್‌ಡೇ ಸಮಯದಲ್ಲಿ ಲಾಂಗ್‌ ಹಿಡಿದು, ಕೇಕ್‌ ಕತ್ತರಿಸಿ ಪೋಸ್‌ ಕೊಡುವುದು ಆಗಾಗ ಕಾಣುತ್ತೇವೆ. ಆದರೆ, ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ದರ್ಶನ್‌ ಈ ರೀತಿಯ ಕಳಪೆ ಪ್ರದರ್ಶನಕ್ಕೆ ಮುಂದಾಗಿತ್ತು ಸರಿಯಲ್ಲ ಎಂಬ ಅಭಿಪ್ರಾಯವಿದೆ.

ಇದನ್ನೂ ಓದಿ ; Actor Darshan : ಮುಂದೆ ಹೀಗಾಗಲ್ಲ ಎಂದ ದರ್ಶನ್; ಘಟನೆ ಬಗ್ಗೆ ಪಿನ್‌ ಟು ಪಿನ್‌ ಮಾಹಿತಿ ಕೊಟ್ಟ ನಟ

ಅದೇ ಹೊತ್ತಿಗೆ, ದರ್ಶನ್‌ ಅವರ ಅಭಿಮಾನಿಗಳು ಗಣ್ಯ ವ್ಯಕ್ತಿಗಳಿಗೆ ಕತ್ತಿ, ತಲವಾರುಗಳನ್ನು ನೀಡುವ ಪರಿಪಾಠ ನಮ್ಮಲ್ಲಿ ಇಲ್ಲವೇ, ಲಾಂಗ್‌ ಕೊಟ್ಟಿದ್ದರಿಂದ ಹಿಡಿದಿದ್ದರಿಂದ ಏನು ತಪ್ಪು? ಅವರೇನು ಲಾಂಗ್‌ ಹಿಡಿದು ಬೆದರಿಸಿದ್ದಾರಾ? ಸುಮ್ಮನೆ ವಿವಾದ ಮಾಡಬೇಡಿ ಎಂದು ಅವರ ಅಭಿಮಾನಿಗಳು ಆಗ್ರಹಿಸಿದ್ದಾರೆ.

ಲಾಂಗ್‌ ಹಿಡಿದ ದೃಶ್ಯಗಳು ಇಲ್ಲಿವೆ

Exit mobile version