ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ನಟಿಸಿರುವ, ಆಗಸ್ಟ್ 15ರಂದು ತೆರೆಗೆ ಬರಲು ಸಿದ್ಧವಾಗಿರುವ ಕೃಷ್ಣಂ ಪ್ರಣಯ ಸಖಿ (Krishnam Pranaya Sakhi) ಸಿನಿಮಾದ ‘ದ್ವಾಪರ ದಾಟುತ’ (Dwapara Kannada Song) ಹಾಡು ಕನ್ನಡಿಗರ ಮನ ಸೆಳೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಾಡು ವೈರಲ್ ಆಗಿದ್ದು, ಜನರು ಕೂಡ ಡಾನ್ಸ್ ಮಾಡಿದ ರೀಲ್ಸ್ ಹಂಚಿಕೊಳ್ಳುತ್ತಿದ್ದಾರೆ. ಇನ್ನು ದ್ವಾಪರ ದಾಟುತ ಹಾಡು ಹಾಡಿದ ಜಸ್‌ಕರಣ್ ಸಿಂಗ್ (Jaskaran Singh) ಅವರು ಪಂಜಾಬ್‌ನವರಾದರೂ ಕನ್ನಡಿಗರು ಅವರನ್ನು ಮೆಚ್ಚಿದ್ದಾರೆ. ಅಷ್ಟೇ ಅಲ್ಲ, ಮುಂದೊಂದು ದಿನ ಸಾಧ್ಯವಾದರೆ ಕನ್ನಡತಿಯನ್ನೇ ಮದುವೆಯಾಗುತ್ತೇನೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಭಾನುವಾರ (ಆಗಸ್ಟ್ 4) ಕೃಷ್ಣಂ ಪ್ರಣಯ ಸಖಿ ಸಿನಿಮಾದ ನಾಲ್ಕನೇ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಜಸ್‌ಕರಣ್ ಸಿಂಗ್ ಅವರು ಕನ್ನಡತಿಯನ್ನೇ ಮದುವೆಯಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ. “ನಾನು ಗಣೇಶ್ ಅವರ ಅಭಿಮಾನಿಯಾಗಿದ್ದೇನೆ. ಅನಿಸುತಿದೆ ಯಾಕೋ ಇಂದು ಹಾಡು ನನಗೆ ಫೇವರಿಟ್ ಆಗಿದೆ. ಈಗ ಕನ್ನಡ ಸಿನಿಮಾದ ಹಾಡು ಹಾಡಿರುವುದು ಖುಷಿ ತಂದಿದೆ. ಕನ್ನಡಿಗರು ನೀಡಿದ ಪ್ರೀತಿಯನ್ನು ನಾನು ಮರೆಯಲು ಸಾಧ್ಯವಿಲ್ಲ. ಮುಂದೊಂದು ದಿನ ಸಾಧ್ಯವಾದರೆ ನಾನು ಕನ್ನಡತಿಯನ್ನೇ ಮದುವೆಯಾಗುವೆ” ಎಂದಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಟಿ ಮಾಳವಿಕಾ ನಾಯರ್ ಅವರು ಹೆಜ್ಜೆ ಹಾಕಿರುವ ದ್ವಾಪರ ದಾಟುತ ಹಾಡು ಯುಟ್ಯೂಬ್‌ನಲ್ಲಿ 1.3 ಕೋಟಿ (13 ದಶಲಕ್ಷ) ವ್ಯೂಸ್ ಪಡೆದುಕೊಂಡಿದೆ. ಇನ್‌ಸ್ಟಾಗ್ರಾಂ ರೀಲ್ಸ್‌ನಲ್ಲಿಯೂ ಹಾಡು ದಾಖಲೆ ಬರೆದಿದೆ.
ಈಗಾಗಲೇ ಬಿಡುಗಡೆಯಾಗಿರುವ ಮೂರು ಹಾಡುಗಳು ಯಶಸ್ವಿಯಾಗಿರುವುದಕ್ಕೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಗೂ ಆಡಿಯೋ ಹಕ್ಕು ಪಡಿದಿರುವ ಆನಂದ್ ಆಡಿಯೋದವರು ಆನಂದ ಪಟ್ಟಿದ್ದಾರೆ. ಈ ಸಂಭ್ರಮದ ಸಮಯದಲ್ಲಿ ನಿರ್ಮಾಪಕರು ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ. ಆಗಸ್ಟ್ 15 ರಂದು ಬಿಡುಗಡೆಯಾಗುತ್ತಿರುವ ಈ ಚಿತ್ರವನ್ನು ವೀಕ್ಷಿಸಲು ಗೋಲ್ಡನ್ ಸ್ಟಾರ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಕೌಟುಂಬಿಕ ಕಥಾಹಂದರ ಹೊಂದಿರುವ ಈ ಚಿತ್ರವನ್ನು ತ್ರಿಶೂಲ್ ಎಂಟರ್‌ಟೇನ್‌ಮೆಂಟ್ ಲಾಂಛನದಲ್ಲಿ ಪ್ರಶಾಂತ್ ಜಿ. ರುದ್ರಪ್ಪ ನಿರ್ಮಿಸಿದ್ದಾರೆ. ಈಗಾಗಲೇ ಚಿತ್ರೀಕರಣ ಮುಕ್ತಾಯವಾಗಿದ್ದು, ಬೆಂಗಳೂರು, ವಿಯೆಟ್ನಾಂ ಮುಂತಾದ ಕಡೆ ಚಿತ್ರೀಕರಣ ನಡೆದಿದೆ.
ಇದನ್ನೂ ಓದಿ: Golden Star Ganesh: ಸೋಷಿಯಲ್ ಮೀಡಿಯಾದಲ್ಲಿ ಹೊಸ ದಾಖಲೆ ಬರೆದ `ಕೃಷ್ಣಂ ಪ್ರಣಯ ಸಖಿ’ ಹಾಡುಗಳು!