ಬೆಂಗಳೂರು: ಸ್ಯಾಂಡಲ್‌ವುಡ್‌ನ ಕ್ಯೂಟ್ ಕಪಲ್ ಎಂದೇ ಜನಪ್ರಿಯವಾಗಿರುವ ಯಶ್ ಮತ್ತು ರಾಧಿಕಾ ಪಂಡಿತ್ ನಿಶ್ಚಿತಾರ್ಥ ನಡೆದು 8 ವರ್ಷ ಆಗಿದೆ. ಈ ಹಿನ್ನಲೆಯಲ್ಲಿ ರಾಧಿಕಾ ಪಂಡಿತ್ (Radhika Pandit) ಇನ್‌ಸ್ಟಾಗ್ರಾಮ್‌ನಲ್ಲಿ ಯಶ್ ಜತೆಗಿನ ಫೋಟೊ ಹಂಚಿಕೊಂಡು, ʼʼ8 ವರ್ಷಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಾಲೇ ನನಗೆ 100 ಜನ್ಮದಲ್ಲೂ ನಿಮ್ಮನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ ಎಂಬುದು ತಿಳಿದಿತ್ತುʼʼ ಎಂದು ಬರೆದುಕೊಂಡಿದ್ದಾರೆ.
2016ರ ಆಗಸ್ಟ್ 12ರಂದು ಗೋವಾದಲ್ಲಿ ಅದ್ಧೂರಿಯಾಗಿ ಯಶ್- ರಾಧಿಕಾ ನಿಶ್ಚಿತಾರ್ಥ ನೆರವೇರಿತ್ತು. ಬಳಿಕ ಅದೇ ವರ್ಷ ಡಿಸೆಂಬರ್ 9ರಂದು ಗೋವಾದಲ್ಲಿ ಸಪ್ತಪದಿ ಇವರು ಸಪ್ತಪದಿ ತುಳಿದಿದ್ದರು.
ಧಾರಾವಾಹಿಯಲ್ಲಿ ನಟಿಸುತ್ತಿದ್ದ ರಾಧಿಕಾ ಪಂಡಿತ್ 2008ರಲ್ಲಿ ತೆರೆಕಂಡ ʼಮೊಗ್ಗಿನ ಮನಸ್ಸುʼ ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದ್ದರು. ವಿಶೇಷ ಎಂದರೆ ಇದರಲ್ಲಿ ಯಶ್ ಕೂಡ ನಟಿಸಿದ್ದರು. ಮೊದಲ ಚಿತ್ರದಲ್ಲೇ ಮೋಡಿ ಮಾಡಿದ ಇವರು ಬಳಿಕ ʼಡ್ರಾಮʼ, ʼಮಿ. ಆ್ಯಂಡ್ ಮಿ. ರಾಮಾಚಾರಿʼ, ʼಸಂತು ಸ್ಟ್ರೈಟ್ ಫಾರ್ವರ್ಡ್ʼ ಮುಂತಾದ ಸಿನಿಮಾಗಳಲ್ಲಿ ಜತೆಯಾಗಿ ನಟಿಸಿದ್ದರು.
ಮಕ್ಕಳಾದ ಐರಾ ಹಾಗೂ ಯಥರ್ವ್ ಅವರೊಂದಿಗೆ ಸಾಕಷ್ಟು ಸಮಯ ಕಳೆಯುವ ಯಶ್ ಮತ್ತು ರಾಧಿಕಾ ಪಂಡಿತ್, ಕುಟುಂಬದೊಂದಿಗಿನ ಫೋಟೊಗಳನ್ನು ಆಗಾಗ ಶೇರ್ ಮಾಡುತ್ತಿರುತ್ತಾರೆ.
ಸದ್ಯ ಯಶ್ ಬಹು ನಿರೀಕ್ಷಿತ ‘ಟಾಕ್ಸಿಕ್’ ಚಿತ್ರದಲ್ಲಿ ನಿರತರಾಗಿದ್ದಾರೆ. ಮಕ್ಕಳ ಲಾಲನೆ-ಪಾಲನೆಯಲ್ಲಿ ತೊಡಗಿಸಿಕೊಂಡಿರುವ ರಾಧಿಕಾ ಪಂಡಿತ್ ಚಿತ್ರರಂಗಕ್ಕೆ ಯಾವಾಗ ಮರುಳುತ್ತಾರೆ ಎನ್ನುವ ಪ್ರಶ್ನೆಯನ್ನು ಅಭಿಮಾನಿಗಳು ಆಗಾಗ ಕೇಳುತ್ತಲೇ ಇರುತ್ತಾರೆ. ಆದರೆ ಅವರು ಇದುವರೆಗೆ ಈ ಬಗ್ಗೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ.
ರಾಧಿಕಾ ಪಂಡಿತ್ ಕೊನೆಯದಾಗಿ 2019ರಲ್ಲಿ ತೆರೆಕಂಡ ʼಆದಿ ಲಕ್ಷ್ಮೀ ಪುರಾಣʼ ಚಿತ್ರದಲ್ಲಿ ನಟಿಸಿದ್ದರು. ಇದರಲ್ಲಿ ನಿರೂಪ್ ಭಂಡಾರಿ ನಾಯಕನಾಗಿ ಅಭಿನಯಿಸಿದ್ದರು. ಇತ್ತೀಚೆಗೆ ಯಶ್ ಜತೆ ಜಾಹೀರಾತಿನಲ್ಲಿ ನಟಿಸಿದ್ದ ರಾಧಿಕಾ ಪಂಡಿತ್ ಸಿನಿಮಾಕ್ಕೆ ಬಣ್ಣ ಹಚ್ಚಿಲ್ಲ.
‘ನಂದಗೋಕುಲ’ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ರಾಧಿಕಾ ಪಂಡಿತ್, ಉತ್ತಮ ಕಥೆ ಸಿಕ್ಕರೆ ಮತ್ತೆ ಖಂಡಿತಾ ನಟಿಸುತ್ತೇನೆ ಎಂದು ಈ ಹಿಂದೆ ತಿಳಿಸಿದ್ದು, ಅವರ ಕಂಬ್ಯಾಕ್‌ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.
ಸ್ಯಾಂಡಲ್‌ವುಡ್ ಸಿಂಡ್ರೆಲ್ಲಾ ಎಂದೇ ಕರೆಯಲ್ಪಡುವ ರಾಧಿಕಾ ಪಂಡಿತ್ ಕೆಲವು ದಿನಗಳ ಹಿಂದೆ ಅಭಿಮಾನಿಗಳ ಜತೆ ಮಾತುಕತೆ ನಡೆಸಿದ್ದರು. ಈ ವೇಳೆ ʼʼಮತ್ತೆ ನೀವು ಯಾವಾಗ ಚಿತ್ರದಲ್ಲಿ ನಟಿಸುತ್ತೀರಾ? ಬೆಳ್ಳಿ ತೆರೆಯಲ್ಲಿ ನಿಮ್ಮನ್ನು ನೋಡಲು ನಾವೆಲ್ಲ ಕಾತುರದಿಂದ ಕಾಯುತ್ತಿದ್ದೇವೆʼʼ ಎಂದು ಹೇಳಿದಾಗ ʼʼಸರಿಯಾದ ಸಮಯ ಬಂದಾಗʼʼ ಎಂದಷ್ಟೇ ಉತ್ತರಿಸಿ ಕುತೂಹಲ ಹೆಚ್ಚಿಸಿದ್ದಾರೆ.
ಇದನ್ನೂ ಓದಿ: Radhika Pandit: ನಟಿ ರಾಧಿಕಾ ಪಂಡಿತ್ ಕಮ್ ಬ್ಯಾಕ್ ಯಾವಾಗ? ಅಭಿಮಾನಿಗಳ ಪ್ರಶ್ನೆಗೆ ಕೊನೆಗೂ ಸಿಕ್ತು ಉತ್ತರ