Site icon Vistara News

Actor Darshan:  ಇನ್​ಸ್ಟಾಗ್ರಾಮ್‌ ಖಾತೆಯನ್ನು ಸಕ್ರಿಯಗೊಳಿಸಿದ ದರ್ಶನ್‌ ಪತ್ನಿ; ಮಾಧ್ಯಮದ ಮುಂದೆ ಬರ್ತಾರಾ?

Vijayalakshmi Darshan Reactivated Instagram Account

ಬೆಂಗಳೂರು: ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್‌ (Actor Darshan) ಜೈಲು ಸೇರಿದ ಬಳಿಕ ಪತ್ನಿ ವಿಜಯಲಕ್ಷ್ಮಿ ಅವರು ತಮ್ಮ ಇನ್ಸ್ಟಾ ಖಾತೆಯನ್ನು ಡಿಲಿಟ್‌ ಮಾಡಿದ್ದರು. ಈಗ ಮತ್ತೆ ತಮ್ಮ ಇನ್​ಸ್ಟಾಗ್ರಾಂ ಖಾತೆಯನ್ನು ಸಕ್ರಿಯಗೊಳಿಸಿದ್ದಾರೆ. ಮಾತ್ರವಲ್ಲ ವಿಜಯಲಕ್ಷ್ಮಿ ಅವರೇ ದರ್ಶನ್‌ ಪರ ವಕೀಲ ಅನಿಲ್ ಬಾಬು ಅವರನ್ನು ನೇಮಿಸಿದ್ದಾರೆ. ಇನ್ನು ದರ್ಶನ್‌ ಜೈಲು ಸೇರಿದಾಗಿನಿಂದ ಅವರ ಸಹೋದರ ಆಗಲಿ, ತಾಯಿಯಾಗಲಿ ದರ್ಶನ್‌ ಅವರನ್ನು ಠಾಣೆಗೆ ಭೇಟಿ ನೀಡಿಲ್ಲ.

ಇದೀಗ ವಿಜಯಲಕ್ಷ್ಮಿ ಹಳೆಯ ಖಾತೆಯನ್ನೇ ಮುಂದುವರಿಸಿದ್ದಾರೆ. ಎಲ್ಲ ಪೋಸ್ಟ್​ಗಳನ್ನು ಡಿಲೀಟ್ ಮಾಡಿದ್ದಾರೆ. ಫಾಲೋ ಮಾಡುತ್ತಿದ್ದವರನ್ನು ಸಹ ಅನ್​ಫಾಲೋ ಮಾಡಿದ್ದಾರೆ.ಖಾತೆ ಹೆಸರು ‘ವಿಜಿ ದರ್ಶನ್’ ಎಂದೇ ಇದೆ. ಬಯೋನಲ್ಲಿ ವಿಜಯಲಕ್ಷ್ಮಿ ದರ್ಶನ್ ಎಂದಿದೆ. ಆದರೆ ಪ್ರೊಫೈಲ್ ಚಿತ್ರ, ಮಾಡಲಾಗಿದ್ದ ಪೋಸ್ಟ್​ಗಳೆಲ್ಲವನ್ನೂ ಸಹ ವಿಜಯಲಕ್ಷ್ಮಿ ಡಿಲೀಟ್ ಮಾಡಿದ್ದಾರೆ.

ವಕೀಲ ಅನಿಲ್ ಬಾಬು ಮಾಧ್ಯಮದವರ ಮುಂದೆ ಮಾತನಾಡಿ ʻʻವಿಜಯಲಕ್ಷ್ಮಿ ಅವರ ಪತ್ನಿಗೆ ಬೇಜಾರು ಆಗಿದ್ದು, ಪವಿತ್ರಾ ಗೌಡ ಅವರು ದರ್ಶನ್‌ ಹೆಂಡತಿ ಎಂದು ಎಲ್ಲ ಮೀಡಿಯಾಗಳು ತೋರಿಸಿದ್ದರು. ದರ್ಶನ್‌ ಅವರಿಗೆ ಇರವ ಏಕೈಕ ಪತ್ನಿ ಎಂದರೆ ಅದು ವಿಜಯಲಕ್ಷ್ಮಿ. ದಂಪತಿಗೆ ವಿನೀಶ್‌ ಎಂಬ ಪುತ್ರನಿದ್ದಾನೆ. ಮಾಧ್ಯಮಗಳು ಪವಿತ್ರಾ ಅವರನ್ನು ದರ್ಶನ್​ರ ಪತ್ನಿ ಎಂದು ಸಂಭೋದಿಸಬಾರದು’ ಎಂದಿದ್ದರು. ವಿಜಯಲಕ್ಷ್ಮಿ ಅವರು ಮಾನಸಿಕವಾಗಿ ಜರ್ಜರಿತವಾಗಿದ್ದಾರೆ. ಸದ್ಯಕ್ಕೆ ಅವರಿಗೆ ಸಮಯದ ಅಗತ್ಯವಿದೆ. ಆದಷ್ಟು ಬೇಗ ಅವರು ಎಲ್ಲರ ಮುಂದೆ ಬರಲಿದ್ದಾರೆ ಎಂದಿದ್ದರು.

ಇದನ್ನೂ ಓದಿ: V Cinemas: ರಮೇಶ್ ಅರವಿಂದ್ – ಡಾಲಿ ಧನಂಜಯರಿಂದ ‘ವಿ ಸಿನಿಮಾಸ್’ ಮಲ್ಟಿಪ್ಲೆಕ್ಸ್ ಉದ್ಘಾಟನೆ

ಕೌಟುಂಬಿಕ ಕಲಹದಲ್ಲಿ ʼದಾಸʼ

ದರ್ಶನ್‌ ವಿರುದ್ಧ ಹಲವು ಆರೋಪಗಳು ಕೇಳಿ ಬಂದಿದ್ದವು. ಇನ್ನು ಕೌಟುಂಬಿಕ ಕಲಹದಲ್ಲಿಯೂ 28 ದಿನಗಳ ಕಾಲ ಜೈಲಿನಲ್ಲಿ ಇದ್ದು ಬಂದಿದ್ದರು. 2011ರಲ್ಲಿ ವಿಜಯಲಕ್ಷ್ಮಿ ಮೇಲೆ ದರ್ಶನ್ ಮಾರಣಾಂತಿಕ ಹಲ್ಲೆ ಮಾಡಿದ್ದರು. 2016ರಲ್ಲಿ ಮತ್ತೊಮ್ಮೆ ದರ್ಶನ್ ವಿರುದ್ಧ ವಿಜಯಲಕ್ಷ್ಮಿ ದೂರು ನೀಡಿದ್ದ ಘಟನೆಯೂ ನಡೆದಿತ್ತು. ಮಗನನ್ನು ಹತ್ಯೆ ಮಾಡುವುದಾಗಿಯೂ ದರ್ಶನ್‌ ಬೆದರಿಸುವುದಾಗಿ ಕೇಳಿ ಬಂದಿತ್ತು. ಮಾತ್ರವಲ್ಲ ವಿಜಯಲಕ್ಷ್ಮಿ ಅವರಿಗೆ ಸಿಗರೇಟ್‌ನಿಂದ ಸುಟ್ಟು ಗಾಯಗೊಳಿಸಿದ್ದರು. ಅಂಬರೀಶ್ ಮಧ್ಯಪ್ರವೇಶದಿಂದ ವಿಜಯಲಕ್ಷ್ಮಿ ಎಲ್ಲವನ್ನೂ ಮರೆತು ರಾಜಿ ಸಂಧಾನಕ್ಕೆ ಒಪ್ಪಿದ್ದರು.

ಇದಾದ ಬಳಿಕ ದರ್ಶನ್‌ ಕುಡಿದು ಬಂದು ವಿಜಯಲಕ್ಷ್ಮಿ ವಿರುದ್ಧ ಕೂಗಾಡಿರುವ ಆಡಿಯೊ ವೈರಲ್‌ ಆಗಿತ್ತು. ಸ್ವತಃ ವಿಜಯಲಕ್ಷ್ಮಿ ಅವರೇ ಆಡಿಯೊ ಸುಳ್ಳು ಎಂದು ಹೇಳಿಕೆ ನೀಡಿದ್ದರು. ಹೀಗೆ ಸಿಹಿ-ಕಹಿ ಜೀವನ ನಡೆಸುತ್ತಿದ್ದ ದಂಪತಿ ಮಧ್ಯೆ ಮತ್ತೆ ಬಿರುಗಾಳಿಯಂತೆ ಬಂದಿದ್ದು ಪವಿತ್ರಾ ಗೌಡ.

ಪಾರ್ಟಿಯಲ್ಲಿ ಕುಣಿದು ಕುಪ್ಪಳಿಸಿದ್ದ ದರ್ಶನ್‌

ಇತ್ತೀಚೆಗಷ್ಟೇ ಹುಟ್ಟು ಹಬ್ಬ ಆಚರಿಸಿಕೊಂಡಿದ್ದ ನಟ ದರ್ಶನ್‌ ಸ್ನೇಹಿತರು ಹುಟ್ಟುಹಬ್ಬವನ್ನು ಜೋರಾಗಿಯೇ ಸೆಲೆಬ್ರೇಟ್ ಮಾಡಿದ್ದರು. ಪಾರ್ಟಿಯೊಂದರಲ್ಲಿ ದರ್ಶನ್ ಅವರು ಪತ್ನಿ ವಿಜಯಲಕ್ಷ್ಮಿ ಅವರೊಂದಿಗೆ ಮಸ್ತ್‌ ಡಾನ್ಸ್ ‌ಮಾಡಿದ್ದು, ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ನಿರ್ಮಾಪಕ ಉಮಾಪತಿ ಗೌಡ ಹಾಗೂ ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ಪದಗಳ ಬಳಕೆ ಹಿನ್ನೆಲೆಯಲ್ಲಿ ಮಹಿಳಾ ಸಂಘಟನೆಗಳು ಸೇರಿ ವಿವಿಧ ಸಂಘಗಳು, ನಟನ ವಿರುದ್ಧ ಅಸಮಾಧಾನ ಹೊರಹಾಕಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದವು. ಆದರೆ, ವಿವಾದಗಳಿಗೆ ಸೊಪ್ಪು ಹಾಕದ ದರ್ಶನ್‌, ಪಾರ್ಟಿಯೊಂದರಲ್ಲಿ ಭಾಗಿಯಾಗಿ ಪತ್ನಿ ಜತೆ ಕುಣಿದು ಕುಪ್ಪಳಿಸಿದ್ದರು.

Exit mobile version