Site icon Vistara News

Kannada Movie review : ಶಾಖಾಹಾರಿ: ಶಾಕಾಹಾರಿಗಳಷ್ಟೇ ಅಲ್ಲ, ಮಾಂಸಾಹಾರಿಗಳೂ ನೋಡಬಹುದು!

Shakahari Kannada movie

ಶಿವರಾಜ್​ ಡಿ. ಎನ್​. ಎಸ್​

ಈ ಚಿತ್ರದ ಟೈಟಲ್ ಮೊದಮೊದಲಿಗೆ ಆಕರ್ಷಿಸಲಿಲ್ಲ. (Kannada Movie review) ಆದರೆ ಟ್ರೈಲರ್ ಇದು ಬೇರೆಯದೇ ಆಯಾಮದ ಸಿನಿಮಾ ಎನ್ನುವುದರ ಸುಳಿವು ನೀಡಿತ್ತು, ಪ್ರೇಕ್ಷಕರು ಆ ಸುಳಿವಿನ ಆಧಾರದ ಮೇಲೆ ಎಂಥೆಂಥ ಕತೆ ಕಟ್ಟಿಕೊಂಡಿದ್ದರೂ ಅದೆಲ್ಲವನ್ನೂ ಮೀರಿದ ಕಥೆ ಹೇಳಿ ಚಿತ್ರ ತಣಿಸಿದೆಯಾ, ಟ್ರೈಲರ್ ಮಾಡಿದ ಪ್ರಾಮಿಸಿಂಗ್ ಉಳಿಸಿಕೊಂಡಿದೆಯಾ ಅನ್ನೋದನ್ನ ನೋಡುವುದಾದರೆ…ಹೌದು ಎನ್ನಬಹುದು.

ಸಿನಿಮಾ ಗೆದ್ದಿದೆಯಾ?

ಸುಪ್ರಸಿದ್ಧ ಅನಿಸಿಕೊಂಡಿರುವ ಸಿದ್ಧಸೂತ್ರಗಳನ್ನು ಕೈಬಿಟ್ಟು ಹೊಸತೇನೋ ಮಾಡಲು ಹೊರಟ ಪ್ರಯತ್ನದಲ್ಲೇ ಸಿನಿಮಾ ಅರ್ಧ ಗೆದ್ದಂತೆ. ಅಂತಹ ಪ್ರಯತ್ನದಲ್ಲಿ ಹೊಸತನದೊಂದಿಗೆ ಒಂದು ಮಿಸ್ಟರಿ ಕಥೆಯನ್ನು ಹದವಾಗಿ ಒಂದು ಪ್ರದೇಶಕ್ಕೆ ಹೊಂದಿಸಿ ಚೆಂದದೊಂದು ರೋಚಕ ಚಿತ್ರವಾಗಿಸಿ ಈ ‘ಶಾಖಾಹಾರಿ’ ಚಿತ್ರತಂಡ ಗೆದ್ದಿದೆ ಅನ್ನಬಹುದು.

ಯಾಕೆ ಈ ಸಿನಿಮಾ ನೋಡಬೇಕು?

ಮೊದಲೇ ಹೇಳಿದಂತೆ ಇಲ್ಲಿ ನಿರ್ದೇಶಕರು ಯಾವುದೇ ಕಮರ್ಷಿಯಲ್ ಅಂಶಗಳಿಗೆ ಜೋತು ಬೀಳದೆ ತಮಗೇನು ತಿಳಿದಿದೆಯೋ, ತಾವೇನು ಹೇಳಬೇಕು ಅಂದುಕೊಂಡಿದ್ದರೋ ಆ ಕಂಟೆಂಟ್ ಮೇಲೆ ನಂಬಿಕೆಯಿಟ್ಟು ತಮ್ಮಿಂದ ಸಾಧ್ಯವಾದಷ್ಟೂ ಪ್ರಯತ್ನಪಟ್ಟು ಶ್ರದ್ಧೆಯಿಂದ ಚಿತ್ರ ಕಟ್ಟಿಕೊಟ್ಟಿದ್ದಾರೆ.

ಸಿನಿಮಾದ ಶಾಖ ಸರಿಯಾಗಿ ತಟ್ಟೋದು ಸೆಕೆಂಡ್ ಹಾಫ್‌ನಲ್ಲಿ. ಚಿತ್ರ ಶುರುವಾಗಿ ಮೊದಲಾರ್ಧದಲ್ಲಿ ಸಿನಿ ಪ್ರೇಮಿಯ ತಾಳ್ಮೆ ಪರೀಕ್ಷೆ ಮಾಡೋದು ನಿಜ. ಆದರೆ ಸೆಕೆಂಡ್ ಹಾಫ್ ಮತ್ತು ಕ್ಲೈಮ್ಯಾಕ್ಸ್ ಈ ಸಿನಿಮಾದಲ್ಲಿ ಕಂಟೆಂಟ್ ಇದೆ. ಅದನ್ನು ನೋಡಿದಾಗ ನಿರ್ದೇಶಕರಲ್ಲಿ ಪ್ರತಿಭೆ ಇದೆ ಅನಿಸಿಬಿಡುತ್ತದೆ. ಮೊದಲಾರ್ಧದ ಕತೆ ಇನ್ನೂ ಚೂರು ಚೂರುಕಾಗಿ ಸೂಕ್ಷ್ಮ ವಿಚಾರಗಳಲ್ಲಿ ಗಮನ ಹರಿಸಬಹುದಿತ್ತು. ನಿರ್ದೇಶಕರು ಹೇಳ ಹೊರಟ ವಿಷಯ ಬೇರೆಯದೇ ಆಗಿದ್ದರಿಂದ ಅದರ ಕುರಿತು ತಲೆಕೆಡಿಸಿಕೊಂಡಿಲ್ಲವೇನೊ ಅನಿಸೋದು ಸಹಜ. ಆದರೆ ಅವರು ಹೇಳಹೊರಟ ಮುಖ್ಯ ವಿಷಯ ಮುಖ್ಯ ಪಾತ್ರದಲ್ಲಿ ಗಟ್ಟಿತನವಿದೆ ಅಂತ ಹೇಳಬಹುದು.

ಇದನ್ನೂ ಓದಿ : Actor Darshan: ಹೌದು ನಾನು ಬ್ಯಾಡ್‌ ಬಾಯ್‌, ವಿವಾದಕ್ಕೆ ಕೇರ್‌ ಮಾಡಲ್ಲ ಎಂದ ದರ್ಶನ್‌!

‘ಸೌಗಂಧಿಕ’ ಹಾಗೂ ‘ಎಲ್ಲೋ ಸುರಿದ ಮಳೆ’ ಹಾಡುಗಳು ಸುಮಧುರ ಎನ್ನುವುದನ್ನು ಥಿಯೇಟರ್‌ನಲ್ಲಿ ಮತ್ತೆ ಸಾಬೀತುಪಡಿಸಿವೆ. ‘ಎಲ್ಲೋ ಸುರಿದ ಮಳೆ’ ಹಾಡು ಅನ್ನ ಮಾಡುವಾಗ ನೀರು ಕುದಿವ ಮುಂಚೆಯೇ ಅಕ್ಕಿ ಹಾಕಿಬಿಟ್ಟರಲ್ಲ ಅಂದುಕೊಳ್ಳುವಂತೆ ಮಾಡಿ WRONG PLACEMENT ಅನಿಸುತ್ತದೆ. ಆದರೆ ಕೊನೆಗೆ ಅದೆಲ್ಲವನ್ನೂ ಮರೆಸಿ ವಾವ್ಹ್‌, ಇಟ್ಸ್ ಬ್ರಿಲಿಯಂಟ್ ಅನಿಸಿಕೊಳ್ಳುವಂಥ ತಾಕತ್ತು ಚಿತ್ರದ ಕೊನೆಯ ಇಪ್ಪತ್ತು ನಿಮಿಷಕ್ಕಿದೆ. ಛಾಯಾಗ್ರಹಣ, ಸಂಗೀತ ಸೇರಿದಂತೆ ಎಲ್ಲ ತಂತ್ರಗಾರಿಕೆಯೂ ಅಚ್ಚುಕಟ್ಟಾಗಿದೆ. ಈ ಸಿನಿಮಾಗೆ ಮೂರು ಕ್ಲೈಮ್ಯಾಕ್ಸ್. ಮೂರಕ್ಕೆ ಮೂರು ಪಾಸ್ ಆಗಿವೆ. ಸಿನಿ ರಸಿಕರಿಗೆ ಸಿನಿಮಾ ಇಷ್ಟ ಆಗುತ್ತೆ. ಸುಬ್ಬಣ್ಣ ಹಾಗೂ ಸುಭದ್ರಾ ನವಿರಾದ ಪ್ರೇಮ ಕಾವ್ಯ ಸಿನಿಮಾ ನೋಡಿ ಹೊರಬಂದಮೇಲೂ ಕಾಡೋದಂತು ಖಂಡಿತ. ಚಿತ್ರದಲ್ಲಿ ರಂಗಾಯಣ ರಘು ಅವರು ಹಾಕಿರುವ ಅಷ್ಟೂ ಪಟ್ಟುಗಳು ತುಂಬಾ ಇಷ್ಟ ಆಗುತ್ತವೆ. ಅಂತಹ ಗಂಭೀರ ಸನ್ನಿವೇಶದಲ್ಲೂ ಪ್ರೇಕ್ಷಕರು ಮೈಮರೆತು ಕೈತಟ್ಟಿ ನಗುವಂತೆ ಮಾಡೋದು ಸುಲಭದ ಮಾತಲ್ಲ. ಅಲ್ಲಿ ಕಲಾವಿದರು ನಿರ್ದೇಶಕ, ಬರಹಗಾರನ ಸಂಭಾಷಣೆ ಎಲ್ಲರ ಶ್ರಮ ಎದ್ದು ಕಾಣುತ್ತದೆ.

ತಾರಾಗಣದಲ್ಲಿ ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ, ವಿನಯ್, ನಿಧಿ ಹೆಗ್ಡೆ, ಸುಜಯ್ ಶಾಸ್ತ್ರಿ, ಯತೀಶ್ ಕೊಳ್ಳೆಗಾಲ, ವಾಸನೆ ಹಿಡಿಯೋನ ಪಾತ್ರದಲ್ಲಿ ಮೋಹನ್ ಶೆಣೈ ಮುಂತಾದವರಿದ್ದಾರೆ. ಎಲ್ಲ ಪಾತ್ರಗಳೂ ಅಚ್ಚುಕಟ್ಟಾಗಿ ಮೂಡಿ ಬಂದಿವೆ.

ಅದೇನ್ ಕಥೆ? ಅದ್ಹೇಗೆ ಮೂರ್ ಮೂರ್ ಕ್ಲೈಮ್ಯಾಕ್ಸ್ ಅಂತೀರಾ?:

ಕತೆಯ ಕುರಿತು ಹೇಳೋದು ಬೇಡ, ಕೇಳೋದೂ ಬೇಡ. ಇಷ್ಟಷ್ಟೆ ಹೇಳ್ತಿನಿ. ಇದು ಸೈಕೊ ಕಿಲ್ಲರ್ ಸಿನಿಮಾ ಅಲ್ಲ. ಸಿನಿಮಾಸಕ್ತರೂ ಸೀದಾ ಹೋಗಿ ಸಿನಿಮಾವನ್ನು ಥಿಯೇಟರಲ್ಲೆ ನೋಡಿ. ಆ ರೋಚಕ ಅನುಭವವನ್ನು ಅನುಭವಿಸಿ. U/A ಸೆನ್ಸಾರ್ ಸರ್ಟಿಫಿಕೇಟ್ ಪಡೆದಿರುವ ಕ್ರೈಮ್ ಥ್ರಿಲ್ಲರ್ ಕತೆಯ ಶಾಖಾಹಾರಿ ಸಿನಿಮಾವನ್ನು ಶಾಖಾಹಾರಿಗಳಷ್ಟೆ ಅಲ್ಲ, ಮಾಂಸಾಹಾರಿ ಪ್ರೇಕ್ಷಕರೂ ನೋಡಬಹುದು.

ಇದು ನೀರ್ದೇಶಕರ ಚೊಚ್ಚಲ ಸಿನಿಮಾವಾದರೂ ಸಿನಿಮಾ ವಿದ್ಯಾರ್ಥಿಗಳು ಇಂತಹ ಸಿನಿಮಾಗಳನ್ನು ತಪ್ಪದೇ ವೀಕ್ಷಿಸುವುದು ಒಳ್ಳೆಯದು. ಯಾಕೆಂದರೇ ಓವರ್ ಕಮರ್ಷಿಯಲ್ ಸಿನಿಮಾಗಳಿಂದ ಪ್ರೇರಣೆ ಪಡೆದು ಎಂಥೆಂಥದ್ದೋ ಕತೆ ಮಾಡಿ ಅತ್ತ ವಿಷಯವನ್ನೂ ತಲುಪಲಾಗದೆ ಇತ್ತ ತಂತ್ರಗಾರಿಯಲ್ಲೂ ಯಶಸ್ವಿಯಾಗದೆ ಪೇಲವತನಕ್ಕೆ ಸಾಕ್ಷಿಯಾಗಿ ಸೋಲುಣ್ಣುವ ಬದಲು ಇಂತಹ ಹೊಸ ಪ್ರಯೋಗಳನ್ನು ಗಮನಿಸಿ, ಅರ್ಥೈಸಿಕೊಂಡು, ಪ್ರೇಕ್ಷರನ್ನು ರಂಜಿಸುವ ಪ್ರಯತ್ನದಲ್ಲಿ ಹೊಸತೇನೋ ಪ್ರಯತ್ನಿಸಿ ಗೆಲ್ಲಬಹುದು ಅನ್ನುವ ನಂಬಿಕೆ ಇರುತ್ತದೆ.

Exit mobile version