Site icon Vistara News

ʼರಾಕಿ ಭಾಯ್‌ʼ ಬೆಸ್ಟ್‌ ಎಂದ ಶಿವಣ್ಣ: KGF-2 ಬಗ್ಗೆ ಶಿವರಾಜಕುಮಾರ್‌ ಮಾತು

shivaraj kumar

ಬೆಂಗಳೂರು: ಸ್ಯಾಂಡಲ್‌ವುಡ್‌ನ ಫೇವರಿಟ್ ಹೀರೋ ಅಂದರೆ ಅದುವೇ ಶಿವರಾಜ್‌ಕುಮಾರ್‌. ದೇಶಾದ್ಯಂತ ಮನೆಮಾತಾಗುವುದರ ಜತೆಗೆ ಬಾಕ್ಸ್‌ ಆಫೀಸ್‌ನಲ್ಲೂ ಇತಿಹಾಸ ಸೃಷ್ಟಿಸಿರುವ ಕೆಜಿಎಫ್‌-2 ಕುರಿತು ಶಿವಣ್ಣ ಮೆಚ್ಚುಗೆಯ ಮಾತನ್ನಾಡಿದ್ದಾರೆ. ಗುರುವಾರ ಶಿರಸಿಯಲ್ಲಿ ಖಾಸಗಿ ಹೋಟೆಲ್‌ ಉದ್ಘಾಟನೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ಅದರದ್ದೇ ಆದ ಪ್ರಾಮುಖ್ಯತೆ ಇದೆ. ಕನ್ನಡ ಸಿನಿಮಾ ಇಂಡಸ್ಟ್ರಿ ಇಂದು ವಿಶ್ವಾದ್ಯಂತ ಹೆಸರು ಮಾಡಿದೆ. ಅದಕ್ಕೆ ಸಾಕ್ಷಿ ಯಶ್‌ ಅವರ ಕೆಜಿಎಫ್‌-2 ಸಿನಿಮಾ.

ಇದನ್ನೂ ಓದಿ | ದಿಶಾ ಸಿನಿಮಾ ಹೆಸರಲ್ಲಿ ವಂಚನೆ; ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ವಿರುದ್ಧ ಕೇಸ್‌

ಕೆಜಿಎಫ್‌ ಸಿನಿಮಾ ಇಂದು ಕನ್ನಡ ಚಲನಚಿತ್ರೋದ್ಯಮವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿದೆ. ಯಾರೇ ನೆಗೆಟಿವ್‌ ಮಾತನಾಡಿದರೂ ಅದಕ್ಕೆ ಗಮನ ಕೊಡದೇ ನಮ್ಮ ಕೆಲಸ ನಾವು ಮಾಡುತ್ತಾ ಹೋಗಬೇಕು ಎಂದು ಶಿವರಾಜ್‌ ಕುಮಾರ್‌ ಹೇಳಿದ್ದಾರೆ. ಕನ್ನಡ ನಟಿಯರ ಕುರಿತು ಮಾತನಾಡಿದ ಶಿವರಾಜ್‌ಕುಮಾರ್‌ ʼನಟಿಯರ ಬಗ್ಗೆ ನೆಗೆಟಿವ್‌ ಕಮೆಂಟ್‌ ಮಾಡುವುದಕ್ಕಿಂತ ಮೊದಲು ಮಾತನಾಡಿದವರ ಯೋಗ್ಯತೆ ಇದರಲ್ಲಿ ಅರ್ಥವಾಗುತ್ತದೆ. ಮನುಷ್ಯ ಯಾವಾಗಲೂ ಒಂದೇ ತರಹ ಇರುವುದಿಲ್ಲ. ಗಾಸಿಪ್‌ಗಳಿಗೆಲ್ಲ ರಿಯಾಕ್ಟ್‌ ಮಾಡುವುದು ಮೊದಲು ಬಿಡಬೇಕುʼ ಎಂದರು.

ʼʼಕನ್ನಡ ಚಿತ್ರರಂಗ ಡಾ. ರಾಜ್‌ಕುಮಾರ್‌ ಕಾಲದಿಂದಲೂ ತನ್ನದೇ ಆದ ಗೌರವ ಉಳಿಸಿಕೊಂಡು ಬಂದಿದೆ. ಉದಯ್‌ಕುಮಾರ್‌, ವಿಷ್ಣುವರ್ಧನ್‌, ಅಂಬರೀಷ್‌, ಅಪ್ಪುವರೆಗೆ ಎಲ್ಲರ ಕೊಡುಗೆಯೂ ಇದೆ. ಇದೀಗ ಯಶ್‌ ಈ ಗೌರವವನ್ನು ಇನ್ನೊಂದು ಹೆಜ್ಜೆ ಮುಂದಕ್ಕೆ ಒಯ್ದಿದ್ದಾರೆʼʼ ಎಂದು ಶಿವರಾಜ್‌ ಕುಮಾರ್ ಶ್ಲಾಘಿಸಿದ್ದಾರೆ.

ಮುಂದೆ ಭೈರಾಗಿ ಸಿನಿಮಾ ರಿಲೀಸ್‌ ಆಗಲಿದ್ದು, ಹುಲಿವೇಷದ ಕಥೆ ಆಧಾರಿತವಾಗಿದೆ. ಇದು ಜನರನ್ನು ರಂಜಿಸಲಿದೆ ಎಂದು ಶಿವರಾಜ್‌ಕುಮಾರ್‌ ಹೇಳಿದರು. ವೇದ ಸೇರಿದಂತೆ ಶಿವರಾಜ್‌ಕುಮಾರ್‌ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ವೇದ ಸಿನಿಮಾಗೆ ಹೊಸ ಬಗೆಯ ಪಾತ್ರವನ್ನು ನಿರ್ವಹಿಸುತ್ತಿದ್ದು, ಈ ಚಿತ್ರಕ್ಕೆ ಅವರ ಪತ್ನಿಯೇ ನಿರ್ಮಾಪಕರು ಎನ್ನುವುದು ವಿಶೇಷ.

ʼವೇದʼ ಶೂಟಿಂಗ್ ನಡುವೆಯೂ ಅವರು ಇನ್ನೂ ಮೂರು ಸಿನಿಮಾಗಳಿಗೆ ಸಹಿ ಮಾಡಿದ್ದಾರೆ. ಒಂದು ಚಿತ್ರಕ್ಕೆ ಶ್ರೀನಿ ನಿರ್ದೇಶನ ಮಾಡುತ್ತಿದ್ದರೆ, ಮತ್ತೊಂದು ಸಿನಿಮಾವನ್ನು ಸಚಿನ್ ನಿರ್ದೇಶನ ಮಾಡಲಿದ್ದಾರೆ.

ಶಿವರಾಜ್ ಕುಮಾರ್ ಪುತ್ರಿ ಈಗಾಗಲೇ ವೆಬ್ ಸೀರಿಸ್ ಲೋಕಕ್ಕೆ ಕಾಲಿಟ್ಟಾಗಿದೆ. ʼಹನಿಮೂನ್ʼ ಎಂಬ ವೆಬ್ ಸಿರೀಸ್ ಅನ್ನು ಅವರು ನಿರ್ಮಾಣ ಮಾಡಿದ್ದಾರೆ. ಅಲ್ಲದೆ, ಈ ಹಿಂದೆ ಪ್ರದೀಪ್ ಜತೆಗೂಡಿ ʼಲೂಸ್ ಕನೆಕ್ಷನ್ʼ ಎಂಬ ವೆಬ್ ಸೀರಿಸ್ ಕೂಡ ಮಾಡಿದ್ದರು. ಓಂಕಾರ ಹೆಸರಿನ ಕಥೆಯನ್ನು ವೆಬ್ ಸೀರಿಸ್‌ಗಾಗಿಯೇ ಈ ಟೀಮ್ ರೆಡಿ ಮಾಡಿಕೊಂಡಿದೆ.
ಇದನ್ನೂ ಓದಿ | ಪೋಷಕರೇ ನಿರ್ಮಿಸಿರುವ  ಸಿನಿಮಾ ʼSelfie ಮಮ್ಮಿGoogle ಡ್ಯಾಡಿʼ

Exit mobile version