Site icon Vistara News

Sidhartha Mallya: ಹಸೆಮಣೆಗೇರಲು ಸಜ್ಜಾದ ದೀಪಿಕಾ ಪಡುಕೋಣೆ ಮಾಜಿ ಪ್ರೇಮಿ ಸಿದ್ಧಾರ್ಥ್‌ ಮಲ್ಯ

Sidhartha Mallya

Sidhartha Mallya

ಲಂಡನ್‌: ಇಂಗ್ಲೆಂಡ್‌ನಲ್ಲಿ ತಲೆ ಮರೆಸಿಕೊಂಡಿರುವ ಮದ್ಯದ ದೊರೆ ವಿಜಯ್‌ ಮಲ್ಯ ಪುತ್ರ ಸಿದ್ಧಾರ್ಥ್‌ ಮಲ್ಯ (Sidhartha Mallya) ಶೀಘ್ರದಲ್ಲಿಯೇ ಹಸೆಮಣೆಗೇರಲಿದ್ದಾರೆ. ತಮ್ಮ ಬಹುಕಾಲದ ಗೆಳತಿ ಜಾಸ್ಮಿನ್ ಜತೆಗೆ ದಾಂಪತ್ಯ ಜೀವನಕ್ಕೆ ಕಾಲಿಡಲು ಅವರು ಸಜ್ಜಾಗಿದ್ದು, ಈ ವಾರ ಮದುವೆ ನೆರವೇರಲಿದೆ. ಲಂಡನ್‌ನಲ್ಲಿ ಆಪ್ತರ ಸಮ್ಮುಖದಲ್ಲಿ ವಿವಾಹ ಆಯೋಜಿಸಲಾಗಿದ್ದು, ಈಗಾಗಲೇ ಸಿದ್ಧತೆ ಆರಂಭವಾಗಿದೆ. ಸಿದ್ಧಾರ್ಥ್‌ ಮಲ್ಯ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಜಾಸ್ಮಿನ್ ಜತೆಗಿರುವ ಫೋಟೊ ಪೋಸ್ಟ್‌ ಮಾಡಿದ್ದಾರೆ.

ʼʼಮದುವೆಯ ಖುಷಿಯ ಕ್ಷಣ ಆರಂಭವಾಯಿತುʼʼ ಎಂದು ಬರೆದುಕೊಂಡು ಫೋಟೊ ಹಂಚಿಕೊಂಡಿದ್ದಾರೆ. ಸಿದ್ಧಾರ್ಥ್‌ ಬಿಳಿ ಟಕ್ಸೆಡೋ ಮತ್ತು ಗುಲಾಬಿ ಪ್ಯಾಂಟ್‌ನಲ್ಲಿ ಕಾಣಿಸಿಕೊಂಡರೆ, ಜಾಸ್ಮಿನ್ ತಿಳಿ ಹಸಿರು ಬಣ್ಣದ ಉಡುಪು ಧರಿಸಿ ನಗುತ್ತಾ ಪೋಸ್‌ ನೀಡಿದ್ದಾರೆ. ಸದ್ಯ ಈ ಜೋಡಿಗೆ ಸೋಷಿಯಲ್‌ ಮೀಡಿಯಾದಲ್ಲಿ ಶುಭಾಶಯಗಳ ಸುರಿಮಳೆಯೇ ಆಗುತ್ತಿದ್ದು, ಸೆಲೆಬ್ರಿಟಿಗಳು, ಅಭಿಮಾನಿಗಳು ಹಾರೈಸಿದ್ದಾರೆ.

ವರ್ಷದ ಹಿಂದೆಯೇ ಪ್ರಪೋಸ್‌

ಬಹುಕಾಲದ ಗೆಳತಿ ಜಾಸ್ಮಿನ್‌ಗೆ 2023ರ ಆರಂಭದಲ್ಲಿ ಸಿದ್ಧಾರ್ಥ್ ಪ್ರಪೋಸ್ ಮಾಡಿದ್ದರು. ಕ್ಯಾಲಿಫೋರ್ನಿಯಾದಲ್ಲಿನ ಹ್ಯಾಲೋವಿನ್ ಪಾರ್ಟಿಯಲ್ಲಿ ಸಿದ್ದಾರ್ಥ್ ಹಾಗೂ ಜಾಸ್ಮಿನ್ ಇಬ್ಬರು ಜತೆಯಾಗಿ ಪಾಲ್ಗೊಂಡಿದ್ದರು. ಈ ವೇಳೆ ಸಿದ್ದಾರ್ಥ್ ತಮ್ಮ ಪ್ರೀತಿಯನ್ನು ಹೇಳಿಕೊಂಡಿದ್ದರು. ಇದಕ್ಕೆ ಜಾಸ್ಮಿನ್ ಗ್ರೀನ್ ಸಿಗ್ನಲ್ ನೀಡಿದ್ದರು. ಬಳಿಕ ಈ ಜೋಡಿ ಕಳೆದ ವರ್ಷವೇ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಮದುವೆ ದಿನಾಂಕ ಶೀಘ್ರ ಬಹಿರಂಗಪಡಿಸುವುದಾಗಿ ಸಿದ್ಧಾರ್ಥ್‌ ತಿಳಿಸಿದ್ದರು.

ದೀಪಿಕಾ ಜತೆ ಪ್ರೀತಿಯಲ್ಲಿ ಬಿದ್ದಿದ್ದ ಸಿದ್ಧಾರ್ಥ್‌

ಕೆಲವು ವರ್ಷಗಳ ಹಿಂದೆ ಬಾಲಿವುಡ್‌ ಬೆಡಗಿ, ಕನ್ನಡತಿ ದೀಪಿಕಾ ಪಡುಕೋಣೆ ಮತ್ತು ಸಿದ್ಧಾರ್ಥ್‌ ಮಲ್ಯ ಡೇಟಿಂಗ್‌ ನಡೆಸುತ್ತಿದ್ದರು. ಇವರು ಐಪಿಎಲ್‌ ಪಂದ್ಯಗಳಿಗೆ ಜತೆಯಾಗಿ ತೆರಳುತ್ತಿದ್ದರು. ಒಂದೊಮ್ಮೆ ಇಬ್ಬರು ಪಂದ್ಯ ವೀಕ್ಷಿಸುತ್ತಿರುವಾಗಲೇ ಪರಸ್ಪರ ಚುಂಬಿಸಿ ಸದ್ದು ಮಾಡಿದ್ದರು. ಆರಂಭದಲ್ಲಿ ದೀಪಿಕಾ ಕಿಂಗ್‌ ಫಿಷರ್‌ ಕ್ಯಾಲಂಡರ್‌ಗೆ ಮಾಡೆಲ್‌ ಆಗಿದ್ದರು. ಆ ವೇಳೆ ಸಿದ್ಧಾರ್ಥ್‌ನ ಪರಿಚಯವಾಗಿತ್ತು. ಬಳಿಕ ಇಬ್ಬರು ಜತೆಗೆ ಹಲವು ಕಡೆ ಸುತ್ತಾಡುತ್ತಾ ಗಾಸಿಪ್‌ಗೆ ಆಹಾರವಾಗಿದ್ದರು. ಅದಾಗ್ಯೂ ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಬಾಯ್ಬಿಟ್ಟಿರಲಿಲ್ಲ.

ಬಳಿಕ ಕಾರಣಾಂತರಗಳಿಂದ ಈ ಜೋಡಿ ಬೇರ್ಪಟ್ಟಿತ್ತು. ದೀಪಿಕಾ ಬಾಲಿವುಡ್‌ನಲ್ಲಿ ಗಟ್ಟಿಯಾಗಿ ನೆಲೆಯೂರಿದ್ದರು. ಬಳಿಕ ರಣವೀರ್‌ ಸಿಂಗ್‌ ಜತೆ ಸಪ್ತಪದಿ ತುಳಿದರು. ಇತ್ತ ಸಿದ್ಧಾರ್ಥ್‌ ತಂದೆ ಜತೆಗೆ ಲಂಡನ್‌ಗೆ ಹಾರಿ ಅಲ್ಲೇ ನೆಲೆಸಿದರು. ಬ್ರೇಕಪ್‌ ಆದ ಆರಂಭದಲ್ಲಿ ಸಿದ್ಧಾರ್ಥ್‌ ಸನ್ಯಾಸತ್ವ ಸ್ವೀಕರಿಸುತ್ತಾರೆ ಎಂಬೆಲ್ಲ ಸುದ್ದಿ ಹರಡಿದ್ದವು. ಲಂಡನ್‌ಗೆ ಪರಾರಿಯಾದ ಬಳಿಕ ಸಿದ್ದಾರ್ಥ್ ಮತ್ತು ಜಾಸ್ಮಿನ್ ಆತ್ಮೀಯರಾಗಿದ್ದರು.

ಇದನ್ನೂ ಓದಿ: Kalki 2898 AD: ʼಕಲ್ಕಿ 2898 ADʼ ಚಿತ್ರದ ಭೈರವ ಆಂಥಮ್‌ ರಿಲೀಸ್‌!

ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನಲ್ಲಿ ಜನಿಸಿದ ಸಿದ್ಧಾರ್ಥ್‌ ಮಲ್ಯ ಲಂಡನ್‌ನಲ್ಲಿ ಶಿಕ್ಷಣ ಪೂರೈಸಿದರು. ಪದವಿ ಪಡೆದ ನಂತರ ಅವರು ಮಾಡೆಲ್‌ ಮತ್ತು ನಟನಾಗಿ ವೃತ್ತಿ ಜೀವನ ಆರಂಭಿಸಿದರು. ಬ್ರಾಹ್ಮಣ ನಮನ್ (Brahman Naman), ಬೆಸ್ಟ್‌ ಫೇಕ್‌ ಫ್ರೆಂಡ್ಸ್‌ (Best Fake Friends) ಮುಂತಾದ ಚಿತ್ರಗಳಲ್ಲಿ ನಟಿಸಿದರು. ಬಳಿಕ ಅಭಿನಯದಿಂದ ದೂರ ಸರಿದಿದ್ದರು.

Exit mobile version