Site icon Vistara News

ಹಾಡು ಮುಗಿಸಿದ ಗಾಯಕ ʼಕೆಕೆʼ, ಕೋಲ್ಕೊತಾ ಕನ್ಸರ್ಟ್‌ ಬಳಿಕ ಕುಸಿದು ಬಿದ್ದು ಸಾವು

ಕೋಲ್ಕೊತಾ: ಬಾಲಿವುಡ್‌ನ ಮೆಲೊಡಿ ಸಿಂಗರ್‌ ಕೆಕೆ ಹೃದಯಾಘಾತದಿಂದ ಅಕಾಲಿಕವಾಗಿ ಕೊನೆಯುಸಿರೆಳೆದಿದ್ದಾರೆ. ಕೋಲ್ಕೊತಾದಲ್ಲಿ ಮಂಗಳವಾರ ಕನ್ಸರ್ಟ್‌ ಮುಗಿಸಿದ ಕೆಲವು ಗಂಟೆಯಲ್ಲಿ ಅವರು ಪ್ರಾಣ ಬಿಟ್ಟಿದ್ದಾರೆ. ಕನ್ಸರ್ಟ್ ಮುಗಿಸಿ ಹೋಟೆನಲ್ಲಿ ಮೆಟ್ಟಿಲು ಇಳಿಯುವಾಗ ಅವರು ಕೆಳಗೆ ಬಿದ್ದಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಅಷ್ಟರಲ್ಲಿ ಅವರು ಮೃತಪಟ್ಟಿದ್ದರು. ಹೃದಯಾಘಾತ ಅವರ ಸಾವಿಗೆ ಕಾರಣ ಎನ್ನಲಾಗುತ್ತಿದೆ.

ಕೃಷ್ಣಕುಮಾರ್‌ ಕುನ್ನಾಥ್ ʼಕೆಕೆʼ ಎಂದೇ ಜನಪ್ರಿಯಾಗಿದ್ದರು. 53 ವರ್ಷದ ಕೆಕೆ ಬಾಲಿವುಡ್‌ನಲ್ಲಿ ಅನೇಕ ಸುಮಧುರ ಗೀತೆಯನ್ನು ಹಾಡಿದ್ದಾರೆ. 90ರ ದಶಕದ ಜನರಿಗೆ ಇವರ ಹಾಡುಗಳು ಹಿತವಾದ ಅನುಭವ ನೀಡಿವೆ. 1999ರಲ್ಲಿ ಇವರು ʼಪಲ್‌ʼ ಆಲ್ಬಂ ಮೂಲಕ ಡೆಬ್ಯೂ ಮಾಡಿದವರು. ಒಮ್ಮೆ ಬಾಲಿವುಡ್‌ನಲ್ಲಿ ಇವರು ಹಾಡಿನ ಮೂಲಕ ಎಂಟ್ರಿ ಕೊಟ್ಟ ಮೇಲೆ ಯಶಸ್ವಿನ ಹಾದಿಯಲ್ಲೇ ಸಾಗಿದ್ದರು. ಇವರ ಇಂಪಾದ ಧ್ವನಿ ಎಲ್ಲರಿಗೂ ಅಚ್ಚುಮೆಚ್ಚಾಗಿತ್ತು, ಮತ್ತೆ ಮತ್ತೆ ಕೇಳುವಷ್ಟು ಸುಮಧುರವಾಗಿತ್ತು.

ʼದಿಲ್‌ ಚಾಹತಾ ಹೈʼ ಸಿನಿಮಾದ ʼಕೋಯಿ ಕಹೆ…ಕೆಹತಾ ರಹೆ..ʼ, ʼದಿವಾನಾ ಕರ್‌ ರಹಾ ಹೈʼ, ʼಹಮ್‌ ದಿಲ್‌ ದೆ ಚುಕೇ ಸನಮ್‌ʼ ಚಿತ್ರದ ʼತಡಪ್‌ ತಡಪ್‌ ಕೆʼ ಹೀಗೆ ಈವರೆಗೆ ಅನೇಕ ಸುಮಧುರ ಗೀತೆಯನ್ನು ಕೆಕೆ ಬಾಲಿವುಡ್‌ಗೆ ನೀಡಿದ್ದಾರೆ. ಅಲ್ಲದೆ ಕನ್ನಡ, ಮಲಯಾಳಂ, ತಮಿಳು, ತೆಲುಗು ಭಾಷೆಯಲ್ಲಿಯೂ ಹಾಡಿ ಜನರ ಮಚ್ಚುಗೆಗೆ ಪಾತ್ರರಾಗಿದ್ದಾರೆ. ಎಂದಿಗೂ ಮರೆಯಲಾಗದಂತಹ ಮಧುರವಾದ ಗೀತೆಗಳನ್ನು ಕೆಕೆ ನೀಡಿದ್ದಾರೆ. ತಮ್ಮ ಹಾಡುಗಳಲ್ಲಿ ಅವರು ಸದಾ ಜೀವಂತವಾಗಿರುತ್ತಾರೆ. ಅವರೇ ಹಾಡಿದ ʼಜಿಂದಗಿ ದೋ ಪಲ್‌ ಕಿʼ ಎಂಬ ಹಾಡಿನ ಸಾರವನ್ನು ನಿಜಗೊಳಿಸಿ ಕೆಕೆ ಅಗಲಿದ್ದಾರೆ.

ಈವರೆಗೆ ಸುಮಾರು 11 ಭಾಷೆಗಳಲ್ಲಿ 3,500ಕ್ಕೂ ಅಧಿಕ ಜಿಂಗಲ್ಸ್‌ ಹಾಡಿದ್ದಾರೆ. ಇವರ ಧ್ವನಿಯನ್ನು ಒಮ್ಮೆ ಕೇಳಿದರೆ ಮರೆಯಲು ಸಾಧ್ಯವಾಗುವುದೇ ಇಲ್ಲ. ಅಷ್ಟು ಸುಮಧುರ ಧ್ವನಿ ಇವರದ್ದು. ಹಾಡು ಮುಗಿಸಿಯೇ ಇಹಲೋಕ ತ್ಯಜಿಸಿದ್ದಾರೆ. ಭಾರತ ಚಿತ್ರರಂಗ ಹಾಗೂ ಸಂಗೀತ ಕ್ಷೇತ್ರ ಅಮೂಲ್ಯ ರತ್ನವೊಂದನ್ನು ಈ ಘಳಿಗೆಯಲ್ಲಿ ಕಳೆದುಕೊಂಡಿದೆ. ಕೆಕೆ ಅವರ ಮರಣದ ಸುದ್ದಿ ಅವರ ಅಭಿಮಾನಿಗಳಿಗೆ ನಂಬಲಸಾಧ್ಯವಾಗುವ ಸಂಗತಿಯಾಗಿದೆ. ಇಷ್ಟು ಬೇಗ ಅವರು ಹಾಡು ನಿಲ್ಲಿಸಿದ್ದು ದುರ್ವಿಧಿಯೇ ಸರಿ. ಕೆಕೆ ಅವರಿಗೆ ಸದ್ಗತಿ ದೊರೆಯಲಿ ಎಂದು ಅಭಿಮಾನಿಗಳು ಪ್ರಾರ್ಥಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಬಾಲಿವುಡ್‌ ನಟ ಅಕ್ಷಯ್‌ ಕುಮಾರ್ ಸೇರಿದಂತೆ ಅನೇಕ ಗಣ್ಯರು ಟ್ವೀಟ್‌ ಮಾಡುವ ಮೂಲಕ ಕೆಕೆಗೆ ಸಂತಾಪ ಸೂಚಿಸಿದ್ದಾರೆ ಹಾಗೂ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿದ್ದಾರೆ.

Exit mobile version