ವಿಶಾಖಪಟ್ಟಣ: ಸ್ನೇಹಿತೆಯ ಮನೆಯಿಂದಲೇ ಚಿನ್ನ ಕದ್ದ ಹಿನ್ನೆಲೆಯಲ್ಲಿ ಸಿನಿಮಾ ನಟಿಯೊಬ್ಬಳನ್ನು ಆಂಧ್ರ ಪ್ರದೇಶದ ವೈಜಾಗ್ ಪೊಲೀಸರು ಬಂಧಿಸಿದ್ದಾರೆ. ನಟಿ ಸೌಮ್ಯಾ ಶೆಟ್ಟಿ (Soumya Shetty) ಬಂಧಿತ ಆರೋಪಿ. ಭಾರತೀಯ ಅಂಚೆ ಇಲಾಖೆಯ ನಿವೃತ್ತ ನೌಕರ ಪ್ರಸಾದ್ ಬಾಬು ಎಂಬುವರ ಮನೆಯಲ್ಲಿ ಸೌಮ್ಯಾ ಶೆಟ್ಟಿ ಚಿನ್ನ ಕದ್ದಿದ್ದಾಳೆಂಬ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಆಕೆಯ ಬಳಿಯಿಂದ ಕದ್ದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದ್ದು, ನಟಿಯನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ.
ಗೆಳತಿಯ ಮನೆಗೇ ಕನ್ನ
ಸೌಮ್ಯಾ ಶೆಟ್ಟಿ ಮತ್ತು ಪ್ರಸಾದ್ ಬಾಬು ಅವರ ಮಗಳು ಮೌನಿಕಾ ಇಬ್ಬರೂ ಗೆಳತಿಯರು. ಚಲನಚಿತ್ರ ಆಡಿಷನ್‌ನಲ್ಲಿ ಇಬ್ಬರೂ ಭೇಟಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಸೌಮ್ಯಾ ಆಗಾಗ ಮೌನಿಕಾಳ ಭೇಟಿಗೆ ಮನೆಗೆ ಆಗಮಿಸುತ್ತಿದ್ದಳು. ಈ ಸಲುಗೆಯಿಂದ ಆಕೆ ಪ್ರಸಾದ್ ಬಾಬು ಅವರ ಕುಟುಂಬದ ಆದಾಯದ ಮೂಲ, ಹಣ, ಒಡವೆಗಳನ್ನೆಲ್ಲ ಎಲ್ಲಿಟ್ಟಿದ್ದಾರೆ ಎಂಬಿತ್ಯಾದಿ ಮಾಹಿತಿ ಪಡೆದುಕೊಂಡಿದ್ದಳು ಎನ್ನಲಾಗಿದೆ.
1 ಕೆಜಿ ಚಿನ್ನ ದೋಚಿದ ಚಾಲಾಕಿ
ಮಗಳ ಗೆಳತಿ ಎನ್ನುವ ಕಾರಣಕ್ಕೆ ಪ್ರಸಾದ್ ಬಾಬು ಅವರ ಕುಟುಂಬವೂ ಸೌಮ್ಯಾ ಶೆಟ್ಟಿ ಮೇಲೆ ವಿಶ್ವಾಸವಿರಿಸಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಆಕೆ ಇತ್ತೀಚೆಗೆ ಮನೆಯಿಂದ ಸುಮಾರು 1 ಕೆಜಿ ಚಿನ್ನ ಕದ್ದಿದ್ದಳು. ಪ್ರಸಾದ್ ಬಾಬು ಅವರ ಕುಟುಂಬ ಮದುವೆಗೆಂದು ಹೊರ ಹೋಗಿದ್ದಾಗ ಈ ಕೃತ್ಯ ಎಸಗಿ ಗೋವಾಕ್ಕೆ ಪರಾರಿಯಾಗಿದ್ದಳು.
ಮದುವೆಯಿಂದ ಮರಳಿ ಬಂದ ಪ್ರಸಾದ್ ಬಾಬು ಕುಟುಂಬಕ್ಕೆ ಚಿನ್ನ ಕಳ್ಳತನವಾಗಿರುವ ವಿಷಯ ತಿಳಿದು ಬಂದಿತ್ತು. ಹೀಗಾಗಿ ಅವರು ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಸಿಸಿಟಿವಿ ದೃಶ್ಯಗಳ ಪರಿಶೀಲನೆ, ಬೆರಳಚ್ಚು ತಜ್ಞರ ಸಹಾಯಗಳನ್ನು ಪಡೆದು ಸುಮಾರು 11 ಜನರನ್ನು ಆರೋಪಿಗಳನ್ನಾಗಿ ಗುರುತಿಸಿ ವಿಚಾರಣೆ ನಡೆಸಿದ್ದರು. ಈ ಆರೋಪಿಗಳ ಪಟ್ಟಿಯಲ್ಲಿ ಸೌಮ್ಯಾ ಶೆಟ್ಟಿ ಸಹ ಇದ್ದರು.
ತನಿಖೆ ವೇಳೆ ಸೌಮ್ಯಾ ತಪ್ಪೊಪ್ಪಿಕೊಂಡಿದ್ದಾಳೆ. ಸದ್ಯ ಪೊಲೀಸರು ಆಕೆಯಿಂದ 74 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿಯೂ ಸಕ್ರಿಯಳಾಗಿರುವ ಸೌಮ್ಯಾ ಶೆಟ್ಟಿ 1 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾಳೆ. ತೆಲುಗಿನ ‘ಯುವರ್ಸ್ ಲವಿಂಗ್ಲಿ’, ‘ದಿ ಟ್ರಿಪ್’ ಸಿನಿಮಾಗಳಲ್ಲಿ ನಟಿಸಿರುವ ಸೌಮ್ಯಾ ಶೆಟ್ಟಿ ಕೆಲವು ಕಿರು ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾಳೆ. ಪ್ರಸ್ತುತ ‘ಶಿವಂ’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾಳೆ. ಈಕೆ ಸೌಮ್ಯಾ ಕಿಲಂಪಲ್ಲಿ ಎಂಬ ಹೆಸರಿನಿಂದಲೂ ಗುರುತಿಸ್ಪಡುತ್ತಿದ್ದಾಳೆ ಎಂದು ಮೂಲಗಳು ತಿಳಿಸಿವೆ. ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Actor Upendra: ‘UI’ ಹಾಡಲ್ಲಿ ತಗಡು, ಗುಮ್ಮಿಸ್ಕೋತಿಯಾ: ಉಪ್ಪಿ ಗುಮ್ಮಿದ್ದು ಯಾರ‍್ಯಾರಿಗೆ?