Site icon Vistara News

Lok Sabha Election 2024: ಚೆನ್ನೈನಲ್ಲಿ ಮತ ಚಲಾಯಿಸಿದ ರಜನಿಕಾಂತ್​, ಧನುಷ್, ಕಮಲ್ ಹಾಸನ್, ವಿಜಯ್‌!

ಚೆನ್ನೈ : ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ (Democracy) ದೇಶವಾದ ಭಾರತದಲ್ಲಿ ಇಂದು (ಏ.19) ಲೋಕಸಭೆ ಚುನಾವಣೆ (Lok Sabha Election 2024) ಮೊದಲ ಹಂತದ ಮತದಾನ (voting) ಆರಂಭವಾಗಿದೆ. ಮೊದಲ ಹಂತದಲ್ಲಿ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾನ ನಡೆಯಲಿದೆ. ಮುಂಜಾನೆ 7 ಗಂಟೆಗೇ ಆರಂಭವಾದ ವೋಟಿಂಗ್‌ಗೆ ಎಲ್ಲೆಡೆ ಉತ್ಸಾಹದ ಪ್ರತಿಕ್ರಿಯೆ ಕಂಡುಬಂತು. ಸೂಪರ್‌ಸ್ಟಾರ್ ರಜನಿಕಾಂತ್ (Rajinikanth) ಮತ್ತು ಕಮಲ್ ಹಾಸನ್ (Kamal Haasan) ಏಪ್ರಿಲ್ 19 ರಂದು ಚೆನ್ನೈನ ತಮ್ಮ ತಮ್ಮ ಮತಗಟ್ಟೆಗಳಲ್ಲಿ ಮತದಾನ ಮಾಡಿದರು. ನಟ ಧನುಷ್ ಅವರು ಟಿಟಿಕೆ ರಸ್ತೆಯ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಶಾಲೆಯಲ್ಲಿ ಮತ ಚಲಾಯಿಸಿದರು. ವಿಜಯ್ ಸೇತುಪತಿ ಕಿಲ್ಪಾಕ್‌ನ (Vijay Sethupathi vote in Chennai) ಚೆನ್ನೈ ಹೈಸ್ಕೂಲ್‌ನಲ್ಲಿ ಮತದಾನ ಮಾಡಿದರು.

ಸೂಪರ್‌ಸ್ಟಾರ್ ರಜನಿಕಾಂತ್ ಅವರು ತಮ್ಮ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ. ಮತಗಟ್ಟೆಯಿಂದ ನಿರ್ಗಮಿಸುವಾಗ ಅಭಿಮಾನಿಗಳು ಅವರನ್ನು ಗುಂಪುಗೂಡಿದ್ದಾರೆ. ನಟರಾದ ಅಜಿತ್ ಕುಮಾರ್, ಶಿವಕಾರ್ತಿಕೇಯನ್, ಗೌತಮ್ ಕಾರ್ತಿಕ್, ನಿರ್ದೇಶಕರಾದ ಸುಂದರ್ ಸಿ, ವೆಟ್ರಿ ಮಾರನ್ ಮತ್ತು ಶಶಿಕುಮಾರ್ ಮತ್ತು ಇತರರು ಮತ ಚಲಾಯಿಸಿದರು.

ಇದನ್ನೂ ಓದಿ: Lok Sabha Election 2024: ಮೊದಲ ಹಂತದ ಮತದಾನ ಆರಂಭ; 102 ಲೋಕಸಭಾ ಕ್ಷೇತ್ರಗಳ ಭವಿಷ್ಯ ಇಂದು ನಿರ್ಣಯ

ಸಾರ್ವತ್ರಿಕ ಚುನಾವಣೆ ದೇಶಾದ್ಯಂತ ಏಳು ಹಂತಗಳಲ್ಲಿ ನಡೆಯಲಿದ್ದು, ಜೂನ್ 1ರಂದು ಕೊನೆಗೊಳ್ಳಲಿದೆ. ಲೋಕಸಭೆ ಚುನಾವಣೆಯ ಮತಗಳ ಎಣಿಕೆ ಮತ್ತು ಫಲಿತಾಂಶ ಘೋಷಣೆ ಜೂನ್ 4ರಂದು ನಡೆಯಲಿದೆ. ಇಂದು ಒಟ್ಟು 102 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.

ಇಂದು ಮತದಾನ ಮಾಡಲಿರುವ ರಾಜ್ಯಗಳು

ತಮಿಳುನಾಡಿನ 39 ಕ್ಷೇತ್ರಗಳು
ರಾಜಸ್ಥಾನದ 12 ಕ್ಷೇತ್ರಗಳು
ಉತ್ತರ ಪ್ರದೇಶದ 8 ಕ್ಷೇತ್ರಗಳು
ಮಧ್ಯ ಪ್ರದೇಶದ 6 ಕ್ಷೇತ್ರಗಳು
ಉತ್ತರಾಖಂಡದ 5 ಕ್ಷೇತ್ರಗಳು
ಮಹಾರಾಷ್ಟ್ರದ 5 ಕ್ಷೇತ್ರಗಳು
ಅಸ್ಸಾಂನ 5 ಕ್ಷೇತ್ರಗಳು
ಬಿಹಾರದ 4 ಕ್ಷೇತ್ರಗಳು
ಪಶ್ಚಿಮ ಬಂಗಾಳದ 3 ಕ್ಷೇತ್ರಗಳು
ಮಣಿಪುರದ 2 ಕ್ಷೇತ್ರಗಳು
ಅರುಣಾಚಲ ಪ್ರದೇಶದ 2 ಕ್ಷೇತ್ರಗಳು
ಮೇಘಾಲಯ 2 ಕ್ಷೇತ್ರಗಳು
ಪುದುಚೆರಿ, ಅರುಣಾಚಲ ಪ್ರದೇಶ, ಛತ್ತೀಸ್‌ಘಡ, ಜಮ್ಮು ಕಾಶ್ಮೀರ, ಲಡಾಕ್, ಲಕ್ಷದೀಪ, ಮಿಜೋರಾಮ್, ನಾಗಾಲ್ಯಾಂಡ್, ಸಿಕ್ಕಿಂ ಮತ್ತು ತ್ರಿಪುರದ ತಲಾ 1 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

21 ರಾಜ್ಯಗಳ 102 ಕ್ಷೇತ್ರಗಳಲ್ಲಿ 11 ಎಸ್ಟಿ, 18 ಎಸ್ಸಿ, 73 ಸಾಮಾನ್ಯ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಬೆಳಗ್ಗೆ 7ರಿಂದ ಸಂಜೆ 6 ಗಂಟೆವರೆಗೂ ಮತದಾನ ನಡೆಯಲಿದೆ. 18 ಲಕ್ಷ ಮತಗಟ್ಟೆ ಸಿಬ್ಬಂದಿ ನಿಯೋಜಿಸಲಾಗಿದೆ. 1.87 ಲಕ್ಷ ಮತಗಟ್ಟೆಗಳ ನಿರ್ಮಾಣವಾಗಿದ್ದು, 16.63 ಕೋಟಿ ಮತದಾರರಿಂದ ಮತದಾನ ನಡೆಯಲಿದೆ. ಇವರಲ್ಲಿ 8.4 ಕೋಟಿ ಪುರುಷ, 8.23 ಕೋಟಿ ಮಹಿಳಾ ಮತ್ತು 11,371 ತೃತೀಯ ಲಿಂಗಿ ಮತದಾರರು ಇದ್ದಾರೆ. 35.67 ಲಕ್ಷ ಯುವ ಸಮೂಹದಿಂದ ಮೊದಲ ಸಲ ಓಟಿಂಗ್ ನಡೆಯುತ್ತಿದೆ. 3.51 ಕೋಟಿ ಯುವ ಮತದಾರರು ಹಾಗೂ 14.14 ಲಕ್ಷ 85+ ವಯಸ್ಸಿನ ಮತದಾರರು ಇದ್ದಾರೆ.

ಕಣದಲ್ಲಿ 1625 ಅಭ್ಯರ್ಥಿಗಳು, 1491 ಪುರುಷ, 134 ಮಹಿಳಾ ಅಭ್ಯರ್ಥಿಗಳು ಇದ್ದಾರೆ. 41 ಹೆಲಿಕಾಪ್ಟರ್, 84 ವಿಶೇಷ ರೈಲು ಹಾಗೂ 1 ಲಕ್ಷ ವಾಹನಗಳು ಚುನಾವಣಾ ಕಾರ್ಯಕ್ಕೆ ಬಳಕೆಯಾಗುತ್ತಿದೆ. 127 ಸಾಮಾನ್ಯ, 67 ಪೊಲೀಸ್, 167 ಇತರೆ ಸೇರಿ ಒಟ್ಟು 361 ಮಂದಿ ಚುನಾವಣಾ ಮೇಲ್ವಿಚಾರಕರ ನೇಮಕವಾಗಿದೆ.

Exit mobile version