Site icon Vistara News

ವಿಸ್ತಾರ ಸಂಪಾದಕೀಯ | ಜಾಗತಿಕ ಚಿತ್ರಲೋಕದಲ್ಲಿ ದಕ್ಷಿಣದ ಖ್ಯಾತಿ ಹೆಮ್ಮೆಯ ಸಂಗತಿ

Natu Natu Song

ಕನ್ನಡವೂ ಸೇರಿದಂತೆ ದಕ್ಷಿಣ ಭಾರತದ ಸಿನಿಮಾಗಳು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಇತ್ತೀಚಿನ ಕೆಲವು ವರ್ಷಗಳಲ್ಲಿ ನಡೆಯುತ್ತಿರುವ ಸಂಗತಿ. ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಸೇರಿದಂತೆ ಹಲವು ಪ್ರತಿಷ್ಠಿತ ಜಾಗತಿಕ ಪ್ರಶಸ್ತಿಗಳ ಸ್ಪರ್ಧೆಯಲ್ಲಿ ಕನ್ನಡದ ಕಾಂತಾರ, ತೆಲುಗಿನ ಆರ್‌ಆರ್‌ಆರ್‌ ಸೇರಿದಂತೆ ಹಲವು ಚಿತ್ರಗಳು ಸದ್ದು ಮಾಡುತ್ತಿವೆ.

ಆಸ್ಕರ್‌ನ ʼಅತ್ಯುತ್ತಮ ವಿದೇಶಿ ಚಿತ್ರʼ ವಿಭಾಗ ಮತ್ತು ʼಅತ್ಯುತ್ತಮ ನಟʼ ವಿಭಾಗಗಳ ಸ್ಪರ್ಧೆಗೆ ಕನ್ನಡಿಗ ರಿಷಭ್‌ ಶೆಟ್ಟಿ ನಟನೆ ಹಾಗೂ ನಿರ್ದೇಶನದ ಕಾಂತಾರ ಆಯ್ಕೆಯಾಗಿ ಜಾಗತಿಕ ಮನ್ನಣೆಗೆ ಪಾತ್ರವಾಗಿದೆ. ದೇಶವಿದೇಶಗಳ ಸಿನಿಮಾ ವಿಮರ್ಶಕರ ಮೆಚ್ಚುಗೆಗೆ ಅದು ಪಾತ್ರವಾಗಿದೆ. ಇನ್ನು ಎಸ್‌.ಎಸ್‌ ರಾಜಮೌಳಿ ನಿರ್ದೇಶನದ RRR ಕೂಡ ಜಾಗತಿಕ ಮಟ್ಟದ ಹಲವು ಪ್ರಶಸ್ತಿಗಳಿಗೆ ಪಾತ್ರವಾಗಿದೆ. ಅಮೆರಿಕದ ಪ್ರತಿಷ್ಠಿತ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿಯಲ್ಲಿ ʼಅತ್ಯುತ್ತಮ ಮೂಲ ಗೀತೆʼ ಗೌರವಕ್ಕೆ RRRನ ʼನಾಟು ನಾಟುʼ ಪ್ರಾಪ್ತವಾಗಿದೆ. ಕ್ರಿಟಿಕ್ಸ್‌ ಚಾಯ್ಸ್‌ ಅವಾರ್ಡ್‌ನಲ್ಲಿ ʼಅತ್ಯುತ್ತಮ ವಿದೇಶಿ ಚಿತ್ರʼ ಹಾಗೂ ʼಅತ್ಯುತ್ತಮ ಮೂಲ ಗೀತೆʼ ಪುರಸ್ಕಾರಗಳು ದೊರೆತಿವೆ. ಇದಲ್ಲದೇ ಇನ್ನೂ ಹಲವು ಗೌರವಗಳು ದೊರೆತಿದ್ದು, ಇದು ಕೂಡ ಆಸ್ಕರ್‌ಗೆ ಸ್ಪರ್ಧಿಸುತ್ತಿದೆ. ಇದರ ನಿರ್ದೇಶಕ ರಾಜಮೌಳಿ ಮೂಲತಃ ಕನ್ನಡಿಗರು ಎಂಬುದು ಅಭಿಮಾನದ ಸಂಗತಿ. ಟೈಟಾನಿಕ್, ಅವತಾರ್ ಖ್ಯಾತಿಯ ಜೇಮ್ಸ್ ಕ್ಯಾಮರೂನ್‌ರಂಥ ದೈತ್ಯ ನಿರ್ಮಾಪಕ, ನಿರ್ದೇಶಕ ದಕ್ಷಿಣ ಭಾರತದ ಚಿತ್ರರಂಗವನ್ನು ಹೊಗಳುತ್ತಿರುವುದು ಗಮನಾರ್ಹ.

ಒಂದು ಕಾಲದಲ್ಲಿ ಜಾಗತಿಕ ಮಟ್ಟದ ಪ್ರಶಸ್ತಿಗೆ ಸ್ಪರ್ಧಿಸುವುದು ತನ್ನ ಹಕ್ಕು ಮಾತ್ರವೇ ಎಂದು ಬಾಲಿವುಡ್ ಭಾವಿಸಿತ್ತು. ಇಂಗ್ಲಿಷ್‌ ಸಿನಿಮಾಗಳನ್ನು ಹೊರತುಪಡಿಸಿದರೆ, ವಿದೇಶಿ ಭಾಷೆಗಳ ಚಿತ್ರಗಳು ಬಹುಕಾಲ ಆಸ್ಕರ್‌ ಪ್ರಶಸ್ತಿಯ ಪರಿಗಣನೆಗೂ ಬರುತ್ತಿರಲಿಲ್ಲ. ಈಗಲೂ ಆಸ್ಕರ್‌ ಪ್ರಶಸ್ತಿಯು ಹಾಲಿವುಡ್‌ ಫಿಲಂಗಳಿಗೆ ಮಾತ್ರವೇ ಇದ್ದು, ವಿದೇಶಿ ಭಾಷೆಯ ಫಿಲಂಗಳಿಗೆ ಪ್ರತ್ಯೇಕ ವಿಭಾಗವೇ ಇದೆ. ಇದುವರೆಗೂ ಮೂರು ಚಿತ್ರಗಳು ಮಾತ್ರವೇ ಭಾರತದಿಂದ ಆಸ್ಕರ್‌ನ ಅಂತಿಮ ಹಂತಕ್ಕೆ ನಾಮಿನೇಟ್‌ ಆಗಿವೆಯಾದರೂ (ಮದರ್‌ ಇಂಡಿಯಾ, ಸಲಾಂ ಬಾಂಬೆ, ಲಗಾನ್)‌ ಯಾವುದೂ ಪ್ರಶಸ್ತಿಯನ್ನು ಗೆದ್ದಿಲ್ಲ. ಇಬ್ಬರು ದಕ್ಷಿಣ ಭಾರತೀಯರು ವೈಯಕ್ತಿಕ ಪ್ರಶಸ್ತಿಗಳನ್ನು ಗೆದ್ದಿದ್ದಾರಾದರೂ (ಎ.ಆರ್.‌ ರೆಹಮಾನ್‌, ರೆಸೂಲ್‌ ಪೂಕುಟ್ಟಿ) ಅದು ಭಾರತೀಯ ಸಿನಿಮಾಕ್ಕಲ್ಲ. ಇನ್ನು ಆಸ್ಕರ್‌ಗೆ ನಾಮಿನೇಟ್‌ ಆಗುತ್ತಿದ್ದ ಸಿನಿಮಾಗಳು ಕೂಡ ಹಿಂದಿಯ ಸಿನಿಮಾಗಳು. ದಕ್ಷಿಣ ಭಾರತದ ಚಿತ್ರಗಳನ್ನು ಜಾಗತಿಕವಾಗಿ ಮಾತ್ರವಲ್ಲ, ಹಿಂದಿ ವಲಯದಲ್ಲೂ ತುಚ್ಛವಾಗಿ ಕಾಣಲಾಗುತ್ತಿತ್ತು. ಆದರೆ ಈಗ ಕನ್ನಡ, ತೆಲುಗು, ತಮಿಳು, ಮಲಯಾಳ ಚಿತ್ರಗಳ ಪ್ರತಿಭಾವಂತ ನಿರ್ದೇಶಕರು, ತಂತ್ರಜ್ಞರು, ಕಲಾವಿದರು ದೇಶ ಮಟ್ಟದಲ್ಲಿ ಮಾತ್ರವಲ್ಲ, ಜಾಗತಿಕ ಮಟ್ಟದಲ್ಲೂ ದಕ್ಷಿಣ ಭಾರತದ ಪ್ರಾದೇಶಿಕ ಭಾಷೆಗಳ ಚಿತ್ರಗಳ ಕೀರ್ತಿ ಪತಾಕೆ ಹಾರಿಸುತ್ತಿದ್ದಾರೆ. ಹಿಂದೆಂದೂ ಇಲ್ಲದ ಯಶಸ್ಸನ್ನು ಕಂಡ ಕೆಜಿಎಫ್‌, ಕಾಂತಾರ, 777 ಚಾರ್ಲಿ ಮುಂತಾದವುಗಳನ್ನು ಇಲ್ಲಿ ಉದಾಹರಿಸಬಹುದು.

ಇದರಿಂದ ಆಗಿರುವುದೇನು? ಕನ್ನಡ ಚಿತ್ರರಂಗದ ಮಾರುಕಟ್ಟೆ ಸೀಮಿತ ಎಂಬ ರೂಢಿಯ ಹೇಳಿಕೆಗಳು ಈಗ ಸುಳ್ಳಾಗಿವೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕನ್ನಡ ಚಿತ್ರಗಳು ದೇಶವಾಸಿಗಳ ಮನ ಗೆಲ್ಲುತ್ತಿವೆ. ಎಪ್ಪತ್ತು ಹಾಗೂ ಎಂಬತ್ತರ ದಶಕದಲ್ಲಿ ಇನ್ನೊಂದು ರೀತಿಯಲ್ಲಿ ಕನ್ನಡದ ಚಿತ್ರಗಳು ದೇಶದ ಚಿತ್ರರಸಿಕರ ಮನಸೂರೆಗೊಂಡಿದ್ದವು. ಸಂಸ್ಕಾರ, ಘಟಶ್ರಾದ್ಧ, ವಂಶವೃಕ್ಷ, ಚೋಮನ ದುಡಿ, ಕಾಡು, ಭೂತಯ್ಯನ ಮಗ ಅಯ್ಯು ಮುಂತಾದ ಚಿತ್ರಗಳು ಸದಾಕಾಲ ಸ್ವರ್ಣಕಮಲ ಮುಂತಾದ ಪ್ರಶಸ್ತಿಗಳನ್ನು ಗೆದ್ದುಕೊಂಡು ಬರುತ್ತಿದ್ದವು. ಇದರಿಂದಲೇ ಮುಂದೆ ಗಿರೀಶ್‌ ಕಾರ್ನಾಡ್‌ ಮುಂತಾದವರು ರಾಷ್ಟ್ರಮಟ್ಟದ ನಟರಾಗಿ ಬೆಳೆದುದೂ ನಮಗೆ ಗೊತ್ತಿದೆ. ಇವೆರಡು ದಶಕಗಳ ಕನ್ನಡದ ಸಿನಿಮಾಗಳು ಸದ್ದು ಮಾಡುವುದು ಕಡಿಮೆಯಾಗಿತ್ತು. ಡಾ.ರಾಜ್‌ಕುಮಾರ್‌ ಅವರ ʼಬಂಗಾರದ ಮನುಷ್ಯʼ ಮುಂತಾದ ಸಿನೆಮಾಗಳು ಗುಣಮಟ್ಟದಲ್ಲಿ ಶ್ರೇಷ್ಠವಾಗಿದ್ದರೂ ಅದನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸಿರಲಿಲ್ಲ. ಇದೀಗ ಕನ್ನಡಕ್ಕೆ ಮತ್ತೆ ಅಂಥ ಸುವರ್ಣಯುಗ ಮರಳಿ ಬಂದಂತಿದೆ.

ಅನುಕರಣೆ, ಹಿಂಸೆ, ಸ್ವಂತಿಕೆರಹಿತ ಕತೆ, ಅಶ್ಲೀಲತೆ, ದೇಶವಿರೋಧಿ ಕತೆಗಳು, ಸಂಸ್ಕೃತಿ ವಿರೋಧಿ ಕಥಾವಸ್ತುವಿನಲ್ಲಿ ಮುಳುಗಿ ಹೋಗಿರುವ ಬಾಲಿವುಡ್‌ಗೆ ಇಲ್ಲೊಂದು ಪಾಠವೂ ಇದೆ. ದಕ್ಷಿಣ ಭಾರತದ ಸಿನಿಮಾಗಳ ಮುಂದೆ ಹಿಂದಿ ಚಿತ್ರಗಳು ಯಾಕೆ ದಯನೀಯವಾಗಿ ಸೋಲುತ್ತಿವೆ ಎಂಬುದರ ಆತ್ಮವಿಮರ್ಶೆಯನ್ನು ಅವರು ಮಾಡಿಕೊಳ್ಳಬೇಕು. ನಮ್ಮ ಸಂಸ್ಕೃತಿಯಲ್ಲಿ ಬೇರುಬಿಟ್ಟ, ನಮ್ಮ ರೀತಿರಿವಾಜುಗಳನ್ನು ಅಪಮಾನಿಸದ, ನಮ್ಮ ಸಹಜ ಬದುಕಿನ ರೀತಿಯನ್ನು ಅರ್ಥ ಮಾಡಿಕೊಂಡ ಸೃಜನಶೀಲವಾದ ಸಿನಿಮಾಗಳನ್ನು ಖಂಡಿತಾ ಚಿತ್ರರಸಿಕ ಗೆಲ್ಲಿಸುತ್ತಾನೆ ಎಂಬುದಕ್ಕೆ ದೃಷ್ಟಾಂತಗಳು ಇಲ್ಲಿವೆ.

ಇದೆಲ್ಲದರ ನಡುವೆ ಕನ್ನಡ ಚಿತ್ರರಂಗದ ಬೆಳವಣಿಗೆಗೆ ಸರ್ಕಾರ ಮತ್ತಷ್ಟು ಮೂಲಸೌಕರ್ಯ ಕಲ್ಪಿಸಬೇಕಿದೆ. ಎಲ್ಲ ಸೌಕರ್ಯಗಳಿಂದ ಸುಸಜ್ಜಿತವಾದ ಸ್ಟುಡಿಯೋ ನಮ್ಮ ರಾಜ್ಯದಲ್ಲಿ ಇನ್ನೂ ಲಭ್ಯವಿಲ್ಲ. ಅತ್ಯಾಧುನಿಕ ತಂತ್ರಜ್ಞತೆ ಬೇಕಿದ್ದರೆ ಚೆನ್ನೈ ಅಥವಾ ಹೈದರಾಬಾದನ್ನು ಅವಲಂಬಿಸಬೇಕಾಗಿದೆ. ಈ ಪರಿಸ್ಥಿತಿ ಹೋಗಲಾಡಿಸಬೇಕು. ಸರ್ಕಾರ ಭರವಸೆ ನೀಡಿರುವ ಚಿತ್ರನಗರಿಯ ನಿರ್ಮಾಣ ಇನ್ನೂ ಕನಸಾಗಿಯೇ ಉಳಿದಿದೆ. ಇದು ಅಸ್ತಿತ್ವಕ್ಕೆ ಬರಲು ಅಗತ್ಯವಾದ ನೆರವನ್ನು ಸರ್ಕಾರ ಒದಗಿಸಬೇಕು. ಈ ಮೂಲಕ ಕನ್ನಡ ಚಿತ್ರರಂಗ ಮತ್ತಷ್ಟು ಬೆಳೆಯುವಂತಾಬೇಕು.

ಇದನ್ನೂ ಓದಿ | ವಿಸ್ತಾರ ಸಂಪಾದಕೀಯ | ಕೈದಿಗಳ ಅಟಾಟೋಪದ ತಾಣಗಳಾಗುತ್ತಿರುವ ಕಾರಾಗೃಹಗಳು

Exit mobile version