ಸಲ್ಮಾನ್ ಖಾನ್‌ಗೆ ಜೀವ ನೀಡಿದ ಸ್ವರ
ದಕ್ಷಿಣ ಭಾರತದ ಇಂದಿನ ಬಹುತೇಕ ಎಲ್ಲ ಸ್ಟಾರ್‌ಗಳು, ಹಿಂದಿಯ ಹಲವು ತಾರೆಯರು ಎಸ್‌ಪಿಬಿ ಅವರ ಗಾಯನದಲ್ಲಿ ಹೊಸಜೀವ ಪಡೆದಿದ್ದಾರೆ. ಇದಕ್ಕೆ ಉದಾಹರಣೆ ಸಲ್ಮಾನ್ ಖಾನ್. ಸೂರಾಜ್ ಬಾರ್ಜಾತ್ಯಾ ಅವರ ʼಮೈನೇ ಪ್ಯಾರ್ ಕಿಯಾʼದಲ್ಲಿ ಪ್ರೇಮ್ ಪಾತ್ರದೊಂದಿಗೆ ಸಲ್ಮಾನ್ ಹಿಂದಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಎಸ್‌ಪಿಬಿ ಅವರ ಧ್ವನಿ ಈ ಚಾಕೊಲೇಟ್ ಲುಕ್ಕಿನ ಹುಡುಗನಿಗೆ ಸೂಟ್ ಆಗಲಿಕ್ಕಿಲ್ಲ ಎಂದೇ ಹೆಚ್ಚಿನವರು ಭಾವಿಸಿದ್ದರು. ಆದರೆ ಫಿಲ್ಮ್ ಬಿಡುಗಡೆಯಾದದ್ದೇ, ಸೂಪರ್ ಹಿಟ್ ಆಯಿತು. ಅದಕ್ಕೆ ಫಿಲ್ಮ್‌ನ ಮಧುರ ಹಾಡುಗಳೂ ಕಾರಣವಾಗಿದ್ದವು. ʼದಿಲ್ ದೀವಾನಾ ಬಿನ್ ಸಜನಾಕೆ ಮಾನೇನಾʼ ಮತ್ತು ʼಮೇರೆ ರಂಗ್ ಮೇʼ ಹಾಡುಗಳು ಎಲ್ಲರ ಮನಸೂರೆಗೊಂಡವು.
ಇದಾದ ಬಳಿಕ ಎಸ್‌ಪಿಬಿ, ಸಲ್ಮಾನ್ ಅವರ ಹೆಚ್ಚಿನ ಎಲ್ಲ ಸಿನಿಮಾಗಳ ಹಿನ್ನೆಲೆ ಹಾಡುಗಳ ಪರ್ಮನೆಂಟ್ ಧ್ವನಿಯೇ ಆಗಿಬಿಟ್ಟರು. ಸಾಜನ್ ಫಿಲ್ಮ್‌ನ ʼಬಹುತ್ ಪ್ಯಾರ್ ಕರ್‌ತೇ ಹೈʼ ಹಾಡು, ಲವ್ ಚಿತ್ರದ ʼಸಾಥಿಯಾ ತೂನೇ ಕ್ಯಾ ಕಿಯಾʼ ಹಾಡು, ʼಪತ್ಥರ್ ಕೆ ಫೂಲ್‌ನ ಕಭಿ ತು ಚಲಿಯಾ ಲಗ್ತಾ ಹೈʼ ಮುಂತಾದ ಹಾಡುಗಳು ಸಲ್ಮಾನ್ ಜನಪ್ರಿಯತೆಯ ಜೊತೆಗೇ ತಳುಕು ಹಾಕಿಕೊಂಡು ಬೆಳೆದವು. ಅಂದಾಜ್ ಅಪ್ನಾ ಅಪ್ನಾ, ಹಮ್ ಆಪ್ ಕೆ ಹೈ ಕೌನ್ ಫಿಲಂಗಳಲ್ಲಿ ಎಸ್‌ಪಿಬಿ ಹಾಡುಗಳು ಮತ್ತು ಸಲ್ಮಾನ್ ನಟನೆಗಳು ಚಿತ್ರರಸಿಕರನ್ನು ರೊಮ್ಯಾನ್ಸ್‌ನಲ್ಲಿ ಮುಳುಗಿ ಏಳುವಂತೆ ಮಾಡಿದವು.
ಜೋಡಿಗಳು ಮಾಡಿದ ಮೋಡಿ
ಎಸ್‌ಪಿಬಿ ಗಾಯಕರಾಗಿ ಹಲವು ಸಂಗೀತ ನಿರ್ದೇಶಕರ ಜೊತೆ ಮಿಂಚಿದ್ದಾರೆ. ಅದರಲ್ಲೂ ಇಳಯರಾಜ ಜೊತೆಗಿನ ಅವರ ಸಾಂಗತ್ಯ ಅದ್ಭುತವನ್ನೇ ಸೃಷ್ಟಿಸಿದೆ. ʼನಾಯಗನ್ʼ ಚಿತ್ರದ ಇಳಯರಾಜ ಸಂಗೀತ ಮತ್ತು ಕಮಲಹಾಸನ್ ನಟನೆಗೆ ಎಸ್‌ಪಿಬಿ ನೀಡಿದ ಧ್ವನಿ, ʼಸಾಗರ ಸಂಗಮಂʼ ಚಿತ್ರದಲ್ಲಿ ಇಳಯರಾಜ- ಎಸ್‌ಪಿಬಿ ಸಂಗೀತಗಳು ತಮಿಳಿನಲ್ಲಿ ಮೋಡಿಯನ್ನೇ ಸೃಷ್ಟಿಸಿದವು. ನಂತರ ಕನ್ನಡದಲ್ಲಿ ಹಂಸಲೇಖ ಜೊತೆಗೆ, ತಮಿಳು ಮತ್ತು ಹಿಂದಿಯಲ್ಲಿ ಎ.ಆರ್.ರೆಹಮಾನ್ ಜೊತೆಗೂ ಅವರು ಮಿಂಚಿದರು. ತೆಲುಗಿನ ಮರೋಚರಿತ್ರ ಹಿಂದಿಯಲ್ಲಿ ʼಎಕ್ ದೂಜೇ ಕೆ ಲಿಯೇʼ ಆದಾಗ ಅಲ್ಲಿ ಲಕ್ಷ್ಮೀಕಾಂತ್ ಪ್ಯಾರೇಲಾಲ್ ನೀಡಿದ ಸಂಗೀತದ ಎಲ್ಲ ಹಾಡುಗಳನ್ನೂ ಎಸ್‌ಪಿಬಿ ಅವರೇ ಕೋರಿಕೆಯ ಮೇರೆಗೆ ಹಾಡಿ ಸೈ ಎನಿಸಿಕೊಂಡಿದ್ದರು. ʼʼಈ ಮದ್ರಾಸಿಗೆ ಹಿಂದಿ ಏನು ಬರುತ್ತೆ?ʼʼ ಎಂದು ಮೂಗು ಮುರಿದವರೇ ಮುಂದೆ ಮಂತ್ರಮುಗ್ಧರಾಗಿ ಎಸ್‌ಪಿಬಿ ಹಾಡುಗಳನ್ನು ಆಲಿಸಿದ್ದು, ಅವರೇ ಬೇಕೆಂದು ಹಠ ಹಿಡಿದದ್ದು ಈಗ ಇತಿಹಾಸ.
ವಿಶ್ವ ದಾಖಲೆ
ತಮ್ಮ ಉತ್ಕರ್ಷದ ದಿನಗಳಲ್ಲಿ ಎಸ್‌ಪಿಬಿ ಪ್ರತಿವಾರ ನೂರಾರು ಹಾಡುಗಳನ್ನು ರೆಕಾರ್ಡಿಂಗ್ ಮಾಡುತ್ತಿದ್ದರು. ಒಂದು ಸಲ ಒದಮೇ ದಿನದಲ್ಲಿ 21 ಹಾಡುಗಳನ್ನು ಹಾಡಿ ದಾಖಲೆ ಸೃಷ್ಟಿಸಿದರು. ಇದನ್ನು ಅವರು ಮಾಡಿದ್ದು ಕನ್ನಡದಲ್ಲಿ ಹಾಗೂ ಕನ್ನಡದ ಸಂಗೀತ ನಿರ್ದೇಶಕ ಉಪೇಂದ್ರ ಕುಮಾರ್ ಅವರ ನಿರ್ದೇಶನದಲ್ಲಿ. ಇದನ್ನು ಕೇವಲ 12 ಗಂಟೆಗಳಲ್ಲಿ ಅವರು ಹಾಡಿದ್ದರಂತೆ. ತಮಿಳಿನಲ್ಲಿ ಒಂದೇ ದಿನ 19 ಹಾಡು ಹಾಗೂ ಹಿಂದಿಯಲ್ಲಿ 16 ಹಾಡು ಹಾಡಿದ ದಾಖಲೆಯಿದೆ.
ಕರ್ನಾಟಕದ ಬಗ್ಗೆ ಅಪಾರ ಪ್ರೀತಿ
ಕನ್ನಡದ ಬಗ್ಗೆ ಅವರಿಗೆ ಅಪಾರ ಅಭಿಮಾನ. ʼʼಮುಂದಿನ ಜನ್ಮವಿದ್ದರೆ ನಾನು ಕರ್ನಾಟಕದಲ್ಲಿಯೇ ಹುಟ್ಟಬೇಕು. ಕನ್ನಡಿಗರು ನನಗೆ ನೀಡಿದ ಪ್ರೀತಿಯ ಋಣ ತೀರಿಸಬೇಕುʼʼ ಎಂದು ಹೇಳಿಕೊಂಡಿದ್ದರು. ಹಿಂದಿಯಲ್ಲಿ ಒಂದು ಬಾರಿ, ತೆಲುಗಿನ ಹಾಡಿಗೆ ಎರಡು ಬಾರಿ, 1995ರಲ್ಲಿ ಗಾನಯೋಗಿ ಪಂಚಾಕ್ಷರಿ ಗವಾಯಿ ಚಿತ್ರದ ಹಾಡಿಗೆ ರಾಷ್ಟ್ರ ಪ್ರಶಸ್ತಿ ಗಳಿಸಿದರು. ಶಂಕರಾಭರಣಂ, ಪಂಚಾಕ್ಷರಿ ಗವಾಯಿ, ಸಾಗರ ಸಂಗಮಂ, ಸ್ವಾತಿ ಮುತ್ಯಂ, ರುದ್ರವೀಣ, ಏಕ್ ದೂಜೇ ಕೇಲಿಯೇ ಚಿತ್ರಗಳ ಹಾಡುಗಳಿಗೆ ಬಾಲು ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಪದ್ಮಶ್ರೀ, ಪದ್ಮಭೂಷಣ ಅವರಿಗೆ ಸಂದಿವೆ.