Site icon Vistara News

Oscar Committee | ಜೈ ಭೀಮ್ ನಟ ಈಗ ಆಸ್ಕರ್‌ ಸಮಿತಿಯ ಸದಸ್ಯ

ನವ ದೆಹಲಿ: ಆಸ್ಕರ್ ಸಂಘಟಕರ ಸದಸ್ಯತ್ವ ಸಮಿತಿಗೆ (Oscar organiser’s membership committee) ಆಯ್ಕೆಯಾದ ಮೊದಲ ತಮಿಳು ನಟ ಎಂಬ ಕೀರ್ತಿಗೆ ನಟ ಸೂರ್ಯ ಪಾತ್ರರಾಗಿದ್ದಾರೆ. 2022ರ ಆಸ್ಕರ್‌ ಸಮಿತಿಗೆ ದಿ ಅಕಾಡೆಮಿ ಆಫ್‌ ಮೋಷನ್‌ ಪಿಕ್ಚರ್‌ ಆರ್ಟ್ಸ್‌ ಆ್ಯಂಡ್‌ ಸೈನ್ಸ್‌ ಒಟ್ಟು 397 ಕಲಾವಿದರು ಹಾಗೂ ನಿರ್ವಾಹಕರನ್ನು ಆಮಂತ್ರಿಸಿದೆ. ಈ ಪಟ್ಟಿಯಲ್ಲಿ ಮೂವರು ಭಾರತೀಯ ಕಲಾವಿದರಿರುವುದು ಭಾರತೀಯರಿಗೆ ಹೆಮ್ಮೆಯ ವಿಷಯವಾಗಿದೆ.

ತಮಿಳುನಾಡಿನಿಂದ ಆಸ್ಕರ್‌ ಪಯಣ

ಸೂರ್ಯ ಅವರ ನಟನೆಗೆ ಫಿದಾ ಆಗದಿರುವ ಜನರು ಬಹುಶಃ ಯಾರೂ ಇಲ್ಲ! ಇತ್ತೀಚೆಗೆ ಬಿಡುಗಡೆಯಾದ ತಮಿಳಿನ ವಿಕ್ರಮ್‌ ಸಿನಿಮಾದಲ್ಲಿ ಕೆಲವೇ ಕೆಲವು ನಿಮಿಷಗಳ ಮಟ್ಟಿಗೆ ಸೂರ್ಯ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಆದರೆ, ಅವರ ಲುಕ್‌, ಅವರ ಎಂಟ್ರಿ, ಅವರ ಅಭಿನಯದಿಂದ ಆ ಕೆಲವು ನಿಮಿಷಗಳೇ ಚಿತ್ರದ ಹೆಚ್ಚುಗಾರಿಕೆಯಂತೆ ಮೂಡಿಬಂದಿದ್ದು ಸುಳ್ಳಲ್ಲ.

ಸೂರ್ಯ ಅಭಿನಯದ ಇತ್ತೀಚಿನ ಎರಡು ಅದ್ಭುತ ಸಿನಿಮಾಗಳೆಂದರೆ ಜೈ ಭೀಮ್‌ ಹಾಗೂ ಸೂರಾರೈ ಪೊಟ್ರು. ಅವರೆಡೂ ಒಟಿಟಿಯಲ್ಲಿ ಜನರ ಗಮನ ಸೆಳೆದಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಚಿತ್ರಗಳಾಗಿದ್ದವು. ಅನೇಕ ಸೂಪರ್‌ಹಿಟ್‌ ಸಿನಿಮಾಗಳನ್ನು ಅವರು ಈ ಹಿಂದೆ ಮಾಡಿದ್ದರೂ, ಈ ಎರಡು ಸಿನಿಮಾಗಳು ವಿಶ್ವಾದ್ಯಂತ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದವು.

ಚಿತ್ರರಂಗದಲ್ಲಿ ಯಶಸ್ಸನ್ನು ಕಾಣುತ್ತಿದ್ದ ಬೆನ್ನಲ್ಲೇ ಮತ್ತೊಂದು ಹೆಮ್ಮೆಯ ವಿಷಯಕ್ಕೆ ಸೂರ್ಯ ಪಾತ್ರರಾಗಿದ್ದಾರೆ. ಆಸ್ಕರ್‌ ಸಂಘಟಕರ ಸದಸ್ಯತ್ವ ಸಮಿತಿಗೆ ಆಯ್ಕೆಯಾಗಿದ್ದಾರೆ. 2022ರ ಈ ಸಮಿತಿಗೆ ಆಯ್ಕೆಯಾಗಿರುವ ಮೊದಲ ತಮಿಳು ನಟ ಎಂಬ ಹೆಗ್ಗಳಿಕೆ ನಟ ಸೂರ್ಯ ಅವರಿಗಿದೆ. ತಮಿಳು ನಟ ಸೂರ್ಯ ಅವರಿಗೆ ಇದೊಂದು ನಿಜಕ್ಕೂ ಅತ್ಯಂತ ಹೆಮ್ಮೆಯ ಹಾಗೂ ಸಂಭ್ರಮದ ಕ್ಷಣವಾಗಿದೆ.

ಸೂರ್ಯ ಜತೆ ಯಾರೆಲ್ಲ ಭಾಗಿಯಾಗಲಿದ್ದಾರೆ?

ಬಾಲಿವುಡ್‌ ತಾರೆ ಕಾಜೋಲ್‌ ಹಾಗೂ ರೀಮಾ ಕಾಗ್ತಿ ಕೂಡ ಈ ಸಮಿತಿಯ ಭಾಗವಾಗಲಿದ್ದಾರೆ. ಈ ವರ್ಷದ ಆಸ್ಕರ್‌ ವಿಜೇತರಾದ ಅರಿಯಾನ ಡಿ ಬೋಸ್‌, ನಿರ್ದೇಶಕ ಸಿಯನ್‌ ಹೆದರ್‌ ಅವರನ್ನೂ ಈ ಸಮಿತಿಗೆ ಆಮಂತ್ರಿಸಲಾಗಿದೆ. ಬಿಲ್ಲಿ ಐಲಿಶ್‌, ಫಿನ್ನೆಸ್‌ ಒʼಕೊನ್ನೆಲ್‌, ಜೆಸ್ಸೆ ಬಕ್ಲಿ, ಒಲ್ಗಾ ಮೆರೆಡಿಜ್‌, ಕೊಡಿ ಸ್ಮಿತ್‌ಎಂಫೀ, ಅನ್ಯ ಟೇಲರ್‌ ಹಾಗೂ ಇತರರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ಸಮಿತಿಯಲ್ಲಿ ನಿರ್ದೇಶನ ಹಾಗೂ ಬರವಣಿಗೆ ಸೇರಿದಂತೆ ಒಟ್ಟು 17 ವಿಭಾಗಗಳಿವೆ. ಆಮಂತ್ರಿತ ಗಣ್ಯರು ಈ ಸಮಿತಿಯ ಭಾಗಿಯಾಗಲು ಕೊನೆಯ ದಿನಾಂಕದೊಳಗೆ ತಮ್ಮ ವಿಭಾಗವನ್ನು ಆಯ್ಕೆ ಮಾಡಬೇಕಿದೆ.

ಇದನ್ನೂ ಓದಿ: ಆಸ್ಕರ್‌ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ನಿರೂಪಕನಿಗೆ ಕಪಾಳಮೋಕ್ಷ: ವಿಡಿಯೋ ವೈರಲ್‌

Exit mobile version