Site icon Vistara News

BBK Season 10 : ಡ್ರೋನ್‌ ಪ್ರತಾಪ್‌ ಅಮ್ಮನಿಗೆ LOVE YOU ಎಂದು ಹೇಳಿದ ಕಿಚ್ಚ ಸುದೀಪ್!

Drone pratap and Kiccha Sudeep

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್‌ 10 (BBK Season 10) ವೇದಿಕೆ ಶನಿವಾರ ರಾತ್ರಿ ಭಾವುಕ ಕ್ಷಣಗಳಿಗೆ ಸಾಕ್ಷಿಯಾಯಿತು. ಕಳೆದ ಮೂರು ವರ್ಷಗಳಿಂದ ಒಂದೇ ಒಂದು ಮಾತು ಆಡದ ಡ್ರೋನ್‌ ಪ್ರತಾಪ್‌ (Drone Pratap) ಮತ್ತು ಅವರ ತಂದೆ ಪ್ರೀತಿಯಿಂದ ಮನಸಿನ ಮಾತು ಹಂಚಿಕೊಂಡರು. ಅಪ್ಪನ ಧ್ವನಿ ಕೇಳುತ್ತಿದ್ದಂತೆಯೇ ಡ್ರೋನ್‌ ಪ್ರತಾಪ್‌ ಅಂತೂ ಬಿಕ್ಕಿಬಿಕ್ಕಿ ಅತ್ತರು. ಅತ್ತ ಕಡೆಯಿಂದ ಅಪ್ಪನೇ ಸಮಾಧಾನ ಮಾಡಿದರು. ಮೂರು ವರ್ಷಗಳ ಹಸಿವು ಇಂಗುತ್ತಿದ್ದಂತೆಯೇ ಲವಲವಿಕೆಯಿಂದ ಪುಟಿದೆದ್ದ ಡ್ರೋನ್‌ ತನ್ನದೊಂದು ಆಸೆ ಪೂರೈಸುವಂತೆ ಕಿಚ್ಚ ಸುದೀಪ್‌ (Kiccha Sudeep) ಅವರನ್ನು ಕೇಳಿಕೊಂಡರು.

ನನ್ನ ಅಮ್ಮನ ಹೆಸರು ಸವಿತಾ.. ಅವರು ನಿಮ್ಮ ದೊಡ್ಡ ಅಭಿಮಾನಿ. ಸಣ್ಣ ವಯಸ್ಸಿನಿಂದಲೂ ನಿಮ್ಮ ಸಿನಿಮಾ ನೋಡುತ್ತಿದ್ದಾರೆ ಎಂದು ಹೇಳಿದರು ಡ್ರೋನ್‌ ಪ್ರತಾಪ್‌. ಆಗ ನಕ್ಕ ಸುದೀಪ್‌ ʻʻಹಾಗಿದ್ದರೆ ನಂಗೇನು 80 ವರ್ಷ ಆಗಿದೆಯಾʼ ಎಂದು ಕೇಳಿದರು. ಆಗ ಪ್ರತಾಪ್‌ ʻನಾವು ಸಣ್ಣ ಇರುವಾಗಿನಿಂದ ಸರ್‌ʼ ಎಂದು ತಿದ್ದಿದರು!

ಮೊದಲು ಅಮ್ಮ ಸವಿತಾ ಅವರಿಗೆ ಒಂದು ಹಲೋ ಹೇಳಿ ಎಂದು ಪ್ರತಾಪ್‌ ರಿಕ್ವೆಸ್ಟ್‌ ಮಾಡಿದರು. ಸುದೀಪ್‌ ಅವರು ವೇದಿಕೆಯ ಮೂಲಕ ʻಸವಿತಾ ಅವರೇ.. ನಿಮ್ಮ ಸುಪುತ್ರನ ಜೊತೆ ನಮ್ಮನ್ನೂ ನೋಡುತ್ತಿದ್ದೀರಾ. ನಿಮ್ಮ ಪತಿ ಕರೆ ಮಾಡಿದ್ದಕ್ಕೆ ಧನ್ಯವಾದಗಳು. ನಿಮ್ಮ ಮಧ್ಯೆ ಏನು ನಡೆದಿದೆ ಅಂತ ನನಗೆ ಗೊತ್ತಿಲ್ಲ. ಆದರೆ, ಪ್ರೀತಿಸುವ ವಸ್ತುವನ್ನ ಕಳೆದುಕೊಳ್ಳದ ಹಾಗೆ ಆದಷ್ಟು ನೋಡಿಕೊಳ್ಳಿ.. ಥ್ಯಾಂಕ್ಯು’’ ಎಂದರು. ಬಳಿಕ ಇನ್ನೇನಾದರೂ ಹೇಳಬೇಕಾಗಿತ್ತಾ ಎಂದು ಪ್ರತಾಪ್‌ ಅವರನ್ನು ಕೇಳಿದರು.

ಆಗ ಡ್ರೋನ್‌ ಪ್ರತಾಪ್‌, ನನ್ನ ಅಮ್ಮನಿಗೊಂದು ಲವ್‌ ಯೂ ಅಂತ ಹೇಳಿಬಿಡಿ ಎಂದು ಹೇಳಿದರು! ಡ್ರೋನ್‌ ಪ್ರತಾಪ್‌ ಆಸೆಯಂತೆ ಸುದೀಪ್‌ ಅವರು ʻಲವ್‌ ಯೂ ಆಲ್‌ʼ ಎಂದು ಸಂದೇಶ ರವಾನಿಸಿದರು.

Drone pratap talks to Appa

ಒಟ್ಟಿನಲ್ಲಿ ಡ್ರೋನ್‌ ಪ್ರತಾಪ್‌ ಮತ್ತು ಮನೆಯ ನಡುವೆ ಮೂರು ವರ್ಷಗಳಿಂದ ಮುರಿದು ಹೋಗಿದ್ದ ಸಂಬಂಧವನ್ನು ಕಿಚ್ಚ ಸುದೀಪ್‌ ಅವರು ಬಿಗ್‌ ಬಾಸ್‌ ವೇದಿಕೆಯ ಮೂಲಕ ಮರು ಜೋಡಣೆ ಮಾಡಿದರು.

ಅಪ್ಪನ ಕರೆ ಬಂದಾಗ ಡ್ರೋನ್‌ ಪ್ರತಾಪ್‌ ಹೇಗೆ ಪ್ರತಿಕ್ರಿಯಿಸಿದರು?

ಡ್ರೋನ್‌ ಪ್ರತಾಪ್‌ ಮತ್ತು ಕುಟುಂಬದ ಮಧ್ಯೆ ಕಳೆದ ಮೂರು ವರ್ಷಗಳಿಂದ ಸಂಪರ್ಕವೇ ಇರಲಿಲ್ಲ. ಪ್ರತಾಪ್‌ ಎದುರಿಸಿದ ಡ್ರೋನ್‌ ವಂಚನೆ ಆರೋಪದಿಂದ ಅಪಮಾನಕ್ಕೆ ಒಳಗಾದ ಕುಟುಂಬ ಅವರನ್ನು ದೂರ ಇಟ್ಟಿತ್ತು. ಬಿಗ್‌ ಬಾಸ್‌ ಮನೆಯೊಳಗೆ ಕಳುಹಿಸುವಾಗಲೂ ಪ್ರತಾಪ್‌ ಒಂಟಿಯಾಗಿಯೇ ಬಂದಿದ್ದರು. ಬಿಗ್‌ ಬಾಸ್‌ ಮನೆಯಲ್ಲಿ ಹಲವು ಬಾರಿ ’ನಾನು ನಮ್ಮ ತಂದೆ – ತಾಯಿ ಜೊತೆಗೆ 3 ವರ್ಷಗಳಿಂದ ಮಾತನಾಡಿಲ್ಲ. ಒಮ್ಮೆ ಮಾತನಾಡಿಸಿ ಪ್ಲೀಸ್‌ ಎಂದು ಗೋಗರೆದಿದ್ದರು.

ಇತ್ತೀಚೆಗೆ ಬಿಗ್‌ ಬಾಸ್‌ ಸ್ಪರ್ಧಿಗಳಿಗೆ ಅವರ ಮನೆಯಿಂದ ಸ್ಪೆಷಲ್‌ ಫುಡ್‌ ಬಂದಿತ್ತು ಮತ್ತು ಪತ್ರವೂ ಬಂದಿತ್ತು. ಪ್ರತಾಪ್‌ಗೆ ಪಾಯಸ ಬಂದಿತ್ತು. ಆದರೆ, ಪತ್ರವನ್ನು ಪಡೆಯಲು ಟಾಸ್ಕ್‌ ಇದ್ದಿದ್ದರಿಂದ ಎಲ್ಲರಿಗೂ ಪತ್ರ ಸಿಕ್ಕಿರಲಿಲ್ಲ. ಪ್ರತಾಪ್‌ ಗೂ ಪತ್ರ ಸಿಕ್ಕಿರಲಿಲ್ಲ. ಹೀಗಾಗಿ ಈ ಪಾಯಸ ಮನೆಯಿಂದಲೇ ಬಂತಾ ಇಲ್ಲವಾ ಎನ್ನುವುದರ ಬಗ್ಗೆ ಡ್ರೋನ್‌ ಪ್ರತಾಪ್‌ಗೆ ಸ್ಪಷ್ಟತೆ ಇರಲಿಲ್ಲ.

ಶನಿವಾರ ನಡೆದ ವಾರದ ಕಥೆ ಕಿಚ್ಚನ ಜತೆ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್‌ ಅವರು ಪ್ರತಾಪ್‌ ಅವರನ್ನು ಉದ್ದೇಶಿಸಿ ʻಹೇಗಿದೆ ನಿಮ್ಮ 3 ವರ್ಷದ ಹಸಿವು?ʼ ಎಂದು ಕೇಳಿದರು. ಆಗ ಡ್ರೋನ್ ಪ್ರತಾಪ್, “ಜಾಸ್ತಿಯಾಗಿದೆ ಸರ್‌, ಎಲ್ಲರೂ ತಮ್ಮ ಮನೆಯವರನ್ನು ನೆನಪಿಸಿಕೊಂಡಾಗ, ಪತ್ರಗಳು ಬಂದಾಗʼ ಅಂದರು. ಪಾಯಸ ಕಳಿಸಿದ್ದು ನಮ್ಮ ಮನೆಯಿಂದನೇನಾ ಎಂದು ಡ್ರೋನ್‌ ಕೇಳಿದಾಗ, ʻʻಎಲ್ಲ ಪ್ರಶ್ನೆಗಳಿಗೂ ಉತ್ತರ ನಮ್ಮ ಬಳಿ ಇದೆ. ಆದರೆ, ಉತ್ತರ ಕೊಡಬೇಕಾಗಿಲ್ಲ. ಬಹುಶಃ ಪತ್ರ ಸಿಕ್ಕಿದ್ದರೆ ಪಾಯಸದ ಗುಟ್ಟು ಹೊರಗೆ ಬಂದಿರೋದುʼʼ ಎಂದು ನಕ್ಕರು ಸುದೀಪ್‌.

ಮನೆಯಿಂದ ಬರುವ ಪತ್ರದಲ್ಲಿ ಏನು ನಿರೀಕ್ಷೆ ಮಾಡುತ್ತಿದ್ದಿರಿ ಎಂದು ಸುದೀಪ್‌ ಕೇಳಿದಾಗ, ಪತ್ರವನ್ನೇ ನಿರೀಕ್ಷೆ ಮಾಡುತ್ತಿದ್ದರೆ ಸರ್‌ ಎಂದರು ಪ್ರತಾಪ್‌. 3 ವರ್ಷದಲ್ಲಿ ಏನು ನಿರೀಕ್ಷೆ ಮಾಡ್ತಿದ್ರಿ ಎಂದು ಕೇಳಿದಾಗ, ʻʻಅಪ್ಪ.. ನಮ್ಮ ಅಪ್ಪ ಹೇಳುವ ಮಾತನ್ನ ನಿರೀಕ್ಷೆ ಮಾಡ್ತಿದ್ದೆ ಸರ್‌ ಎಂದರು.

ಅಷ್ಟು ಹೊತ್ತಿಗೆ ಡ್ರೋನ್‌ ಒಮ್ಮೆಗೇ ಭಾವುಕರಾದರು… ಅಪ್ಪಾ.. ಅಂದರು. ಆಗ ಸುದೀಪ್‌ ನೀವು ಅಪ್ಪಾ ಅಂತ ಕರೆಯೋದು ಹಿತವಾಗಿದೆ. ಇನ್ನೊಮ್ಮೆ ಜೋರಾಗಿ ಕರೆಯಿರಿ ಅಂದರು. ಆಗ ಪ್ರತಾಪ್‌ ಜೋರಾಗಿ ಮತ್ತು ಅಷ್ಟೇ ಹಿತವಾಗಿ ʻಅಪ್ಪಾ…ʼ ಎಂದರು. ಆಗ ಒಮ್ಮಿಂದೊಮ್ಮೆಗೇ ಅಪ್ಪನಿಗೆ ಕಾಲ್‌ ಕನೆಕ್ಟ್‌ ಆಗಿ ಅಪ್ಪ ಲೈನ್‌ಗೆ ಬಂದರು!

ಅಪ್ಪನ ಧ್ವನಿ ಕೇಳುತ್ತಲೇ ಡ್ರೋನ್‌ ದುಃಖದ ಕಟ್ಟೆ ಒಡೆದೇ ಹೋಯಿತು. ಬಿಕ್ಕಿ ಬಿಕ್ಕಿ ಅತ್ತಾಗ ಅಪ್ಪನೇ ಸಮಾಧಾನ ಮಾಡಿದರು. ಅಳಬೇಡ.. ಯಾಕೆ ಅಳ್ತಿದಿಯಾ ಎಂದು ಕೇಳಿದರು.

ಡ್ರೋನ್‌ ಮತ್ತು ಅಪ್ಪ ಚೆನ್ನಾಗಿ ಮಾತನಾಡಿಕೊಂಡರು. ಡ್ರೋನ್‌ ನಾನು ಮಾಡಿದ್ದೆಲ್ಲ ತಪ್ಪಾಯ್ತು ಅಂತ ಕ್ಷಮೆ ಕೇಳಿದರು. ಅಮ್ಮ, ಪುಟ್ಟಿ ಹೇಗಿದ್ದಾರೆ ಎಂದು ವಿಚಾರಿಸಿದರು.

ʻನೀನು ಚೆನ್ನಾಗಿ ಆಡ್ತಾ ಇದ್ದೀಯಾ.. ಆಡು. ಊರವರೂ ಚೆನ್ನಾಗಿ ಆಡ್ತಿದ್ದೀಯಾ ಅಂತಿದ್ದಾರೆ. ಪುಟ್ಟೀನೂ ಹೇಳ್ತಿದ್ದಾಳೆ ಎಂದು ಅಪ್ಪ ಹೇಳಿದರು.

ಆಗ ಡ್ರೋನ್‌ ಪ್ರತಾಪ್‌: ಅಪ್ಪ ಒಂದ್ಸಲ ನೋಡಲು ಬಾ ಅನ್ನುತ್ತಾರೆ. ಅದಕ್ಕೆ ಅಪ್ಪ: ಬರ್ತೀನಿ. ಪ್ರತಿದಿನ ನೋಡ್ತಾ ಇದ್ದೀವಿ. ಚೆನ್ನಾಗಿ ಆಡು. ನಾವೇನೂ ಬೇಜಾರು ಮಾಡಿಕೊಂಡಿಲ್ಲ. ಧೈರ್ಯವಾಗಿ ಆಡು ಎಂದು ಧೈರ್ಯ ತುಂಬಿದರು. ಕೊನೆಗೆ ಡ್ರೋನ್‌ ಪ್ರತಾಪ್‌ ಜೋರಾಗಿ, ಐ ಲವ್ ಯೂ ಅಪ್ಪ. ನಾನು ನಿಮ್ಮನ್ನ ತುಂಬಾ ಪ್ರೀತಿಸ್ತೀನಿ ಅಂದ್ರು.

ಇದನ್ನೂ ಓದಿ: BBK Season 10 : ಸಂಗೀತಾ ಯು ಆರ್‌ ರಾಂಗ್;‌ ಡಾಮಿನೆನ್ಸ್‌ ಕ್ವೀನ್‌ ಕಿವಿ ಹಿಂಡಿದ ಕಿಚ್ಚ

ವೇದಿಕೆಗೆ ಮಂಡಿಯೂರಿ ನಮಸ್ಕರಿಸಿದ ಪ್ರತಾಪ್‌

ಅಪ್ಪನ ಜತೆ ಮಾತನಾಡಿದ ಬಳಿಕ ಬಹಳ ನಿರಾಳರಾದ ಡ್ರೋನ್‌ ಪ್ರತಾಪ್‌, ʻʻನಿಮ್ಮಂದಲೇ.. ಎಲ್ಲಾ ಸರಿ ಆಯ್ತು ಸರ್. 3 ವರ್ಷದಿಂದಲೂ ಅವರೇ ಮಾತನಾಡಸಲಿ, ಅವನೇ ಮಾತನಾಡಿಸಲಿ, ನಾನ್ಯಾಕೆ, ನಾನ್ಯಾಕೆ ಅಂತ ನಡೆಯುತ್ತಲೇ ಇತ್ತು. ಅದು ಬ್ಲಾಕಿಂಗ್‌ವರೆಗೂ ಹೋಯ್ತು. ಅವರಿಗೆ ನಾನು ಇಲ್ಲಿಗೆ ಬರೋದು ಇಷ್ಟವೇ ಇರಲಿಲ್ಲ. ಈಗ ಮಾತನಾಡಿದರು. ತುಂಬಾ ಥ್ಯಾಂಕ್ಸ್ ಸರ್‌. ಇದನ್ನ ನಾನು ಮರೆಯೋದಿಲ್ಲʼʼ ಎಂದು ಹೇಳಿ ಸುದೀಪ್‌ ಅವರಿಗೆ ಕೈಮುಗಿದರು. ಮಂಡಿಯೂರಿ ಬಿಗ್‌ ಬಾಸ್‌ ವೇದಿಕೆಗೆ ನಮಿಸಿದರು.

ಕೊನೆಗೆ ಸುದೀಪ್‌ ಮುಂದೆ ತಪ್ಪೊಪ್ಪಿಕೊಂಡ ಡ್ರೋನ್‌

‘ಬಿಗ್ ಬಾಸ್ ವೇದಿಕೆಯಿಂದ ನಿಮ್ಮ ಜೀವನದಲ್ಲಿ ಹಲವಾರು ಸರಿಹೋಗಿದೆ ಅಂತ ಅಂದುಕೊಳ್ಳುತ್ತೇವೆ. ಬಿಗ್ ಬಾಸ್’ ಶೋ ಇರೋದು ಅದಕ್ಕಲ್ಲ. ಆದರೆ, ಈ ವೇದಿಕೆಯಿಂದ ಒಬ್ಬ ವ್ಯಕ್ತಿಗೆ ಏನೇನು ಒಳ್ಳೆಯದ್ದಾಗಬಹುದು ಎಂಬ ಉದಾಹರಣೆಗಳು ಮೊದಲನೇ ಸೀಸನ್‌ನಿಂದ ಇಲ್ಲಿಯವರೆಗೂ ನಡೆದಿದೆ. ಅದು ಈ ವೇದಿಕೆಗೆ ಮಾತ್ರ ಇರುವ ತಾಕತ್ತುʼʼ ಎಂದು ಸುದೀಪ್‌ ಹೇಳಿದರು.

ಅದಕ್ಕೆ ಡ್ರೋನ್‌ ಪ್ರತಾಪ್‌, ‘’ಖಂಡಿತ ಹೌದು ಸರ್. ಬಹುಶಃ ಇದಾಗಿರಲಿಲ್ಲ ಅಂದಿದ್ರೆ ಗೊತ್ತಿಲ್ಲ ನಾನು ಯಾವಾಗ ಮಾತಾಡ್ತಿದ್ನೋ.. ಏನಾಗುತ್ತಿತ್ತೋ ಅಂತ. ಇಲ್ಲಿಯವರೆಗೂ ನನ್ನ ತಲೆಯಲ್ಲಿ ಕೊರೆಯುತ್ತಿತ್ತು. ಈಗ ನಮ್ಮ ಅಪ್ಪ-ಅಮ್ಮ ಎಲ್ಲವನ್ನೂ ಮರೆತಿದ್ದಾರೆ, ಊರಿನಲ್ಲೂ ಮಾತಾಡುತ್ತಿದ್ದಾರೆ ಅಂದ್ರೆ ನಮ್ಮ ತಂದೆ-ತಾಯಿಗೂ ಗೌರವ ಸಿಗುವ ತರಹ ಆಗಿದೆ ಅಂದುಕೊಳ್ಳುತ್ತಿದ್ದೇನೆ. ಬಿಗ್ ಥ್ಯಾಂಕ್ಸ್ ಟು ಯು ಸರ್ʼʼ ಎಂದರು.

ಕೊನೆಯಲ್ಲಿ ಸುದೀಪ್‌ ಒಂದು ಪ್ರಶ್ನೆ ಕೇಳಿದರು: ಹೊರಗಡೆ ನೀವು ಸಾಧನೆ ಮಾಡಿದ ಹಾಗೆ, ಕೆಲವು ತಪ್ಪುಗಳನ್ನೂ ನೀವು ಮಾಡಿದ್ದೀರಿ ಅಂತ ಒಪ್ಪಿಕೊಳ್ತೀರಾ? ಆಗ ಡ್ರೋನ್‌ ಪ್ರತಾಪ್‌, ‘’ಹೌದು ಸರ್. ಒಪ್ಪಿಕೊಳ್ತೀನಿ’’ ಎಂದರು. ಸುದೀಪ್‌ ತಮ್ಮ ಸಿಗ್ನೇಚರ್‌ ಸ್ಟೈಲ್‌ನಲ್ಲಿ ಆಲ್‌ ದಿ ಬೆಸ್ಟ್‌ ಎಂದರು.

Exit mobile version