ಬೆಂಗಳೂರು: ಬಿಗ್‌ಬಾಸ್ ಸೀಸನ್ 10ರ (BBK Season 10) ಆರನೇ ವಾರ ರ‍್ಯಾಪರ್ ಇಶಾನಿ (Rapper Eshani) ಔಟ್ ಆಗಿದ್ದಾರೆ. ಉತ್ತಮವಾಗಿ ಆಡುತ್ತಿದ್ದ, ರ‍್ಯಾಪ್ ಸಾಂಗ್‌ಗಳ ಮೂಲಕವೇ ಮನಗೆದ್ದಿದ್ದ ಇಶಾನಿ ಅವರು ಆರನೇ ವಾರಕ್ಕೇ ಬಿಗ್ ಬಾಸ್ ಮನೆಯಲ್ಲಿ ಆಟ ನಿಲ್ಲಿಸಿದ್ದಾರೆ. ಎಲಿಮಿನೇಷನ್ ಬಾಣದಿಂದ ತಪ್ಪಿಸಿಕೊಳ್ಳಲು ಆಗದ ಇಶಾನಿ ಈಗ ದೊಡ್ಮನೆಯಿಂದ ಹೊರಬಂದಿದ್ದಾರೆ. ಇದರೊಂದಿಗೆ ಆರನೇ ವಾರದ ಎಲಿಮಿನೇಷನ್ ಕುತೂಹಲಕ್ಕೆ ತೆರೆ ಬಿದ್ದಂತಾಗಿದೆ.
ಕಳೆದ ವಾರ ವರ್ತೂರ್ ಸಂತೋಷ್ ಅವರ ಕಾರಣದಿಂದ ಎಲಿಮಿನೇಷನ್ ನಡೆದಿರಲಿಲ್ಲ. ಈ ವಾರ ಡಬಲ್ ಎಲಿಮಿನೇಷನ್ ವೀಕ್ ಇತ್ತು. ಇಬ್ಬರು ಈ ಮನೆಯಿಂದ ಹೊರಗೆ ಹೋಗಲಿದ್ದಾರೆ ಎಂದು ಕಿಚ್ಚ ಹೇಳಿದ್ದರು. ಶನಿವಾರದ ಎಪಿಸೋಡ್ ಕೊನೆಯಲ್ಲಿ, ಕಿಚ್ಚ, ‘ಈ ವಾರ ಒಬ್ಬರು ಮನೆಯಿಂದ ಹೊರಗೆ ಹೋಗುತ್ತಿದ್ದಾರೆ. ಅವರು ಯಾರು ಎಂದು ನಿಮಗೇ ಗೊತ್ತಿರಬೇಕು. ಅವರೇ ಎದ್ದು ನಿಂತುಕೊಳ್ಳಿ’ ಎಂದು ಕೇಳಿದರು. ಇಶಾನಿ ಎದ್ದು ನಿಂತುಕೊಂಡರು. ಕಿಚ್ಚ, ನಿಜ. ನಿಮ್ಮ ಪಯಣ ಬಿಗ್‌ಬಾಸ್ ಮನೆಯಲ್ಲಿ ಮುಗಿಯುತ್ತಿದೆ. ಆಲ್‌ದಿ ಬೆಸ್ಟ್ ಎಂದು ಹೇಳಿದರು.
ಭಾನುವಾರದ ಎಪಿಸೋಡ್‌ನಲ್ಲಿ ಇನ್ನೊಬ್ಬರು ಬಿಗ್‌ಬಾಸ್ ಮನೆಯಿಂದ ಎಲಿಮಿನೇಟ್ ಆಗಲಿದ್ದಾರೆ. ಹೊರಬಿದ್ದ ಇಬ್ಬರೂ ಸ್ಪರ್ಧಿಗಳ ಜತೆ ಭಾನುವಾರದ ಎಪಿಸೋಡ್‌ನಲ್ಲಿ ಕಿಚ್ಚ ಸಂವಾದ ನಡೆಸಲಿದ್ದಾರೆ. ಕೊನೆಯದಾಗಿ ಇಶಾನಿ, ‘ನಾನು ಇನ್ನಷ್ಟು ಎಫರ್ಟ್ ಹಾಕಬೇಕಾಗಿತ್ತು. ಆಗಲಿಲ್ಲ. ಮನೆಯಿಂದ ಸಾಕಷ್ಟು ಕಲಿತುಕೊಂಡಿದ್ದೀನಿ. ಉಳಿದ ಎಲ್ಲ ಸ್ಪರ್ಧಿಗಳಿಗೆ ಆಲ್ ದಿ ಬೆಸ್ಟ್’ ಎಂದು ಹೇಳಿದರು. ಅಲ್ಲಿಗೆ ಶನಿವಾರದ ‘ಕಿಚ್ಚನ ಪಂಚಾಯಿತಿ’ ಮುಗಿದಿದೆ. ಭಾನುವಾರ ಮತ್ಯಾವ ಸ್ಪರ್ಧಿ ಮನೆಯಿಂದ ಹೊರಬೀಳಲಿದ್ದಾರೆ ಎಂಬ ಕುತೂಹಲ ಹಾಗೆಯೇ ಉಳಿದುಕೊಂಡಿದೆ.
ಇದನ್ನೂ ಓದಿ: BBK Season 10: ಅಪ್ಪನ ಧ್ವನಿ ಕೇಳಿ ಬಿಕ್ಕಿ ಬಿಕ್ಕಿ ಅತ್ತ ಡ್ರೋನ್ ಪ್ರತಾಪ್; ಜಗಳದಾಚೆ ಭಾವುಕ ಜಗತ್ತು
ನಾಮಿನೇಟ್ ಆದವರು ಇವರೇ
ಆರನೇ ವಾರ ಒಟ್ಟು 8 ಮಂದಿ ನಾಮಿನೇಟ್ ಆಗಿದ್ದಾರೆ. ಈ ಬಾರಿ ಕೂಡ ಮನೆಯಲ್ಲಿ ಗ್ರೂಪಿಸಂ ನಡೆದಿದ್ದು ಬಿಗ್ ಬಾಸ್ ಅಸ್ತ್ರದಿಂದ ಮನೆಮಂದಿಯ ಪ್ಲ್ಯಾನ್‌ಗಳು ತಲೆ ಕೆಳಗಾಗಿವೆ. ಈ ವಾರ ಭಾಗ್ಯಶ್ರೀ ಅವರನ್ನು ಮೈಕಲ್ ನೇರವಾಗಿ ನಾಮಿನೇಟ್ ಮಾಡಿದರೆ, ಉಳಿದವರು ಲುಡೋ ಗೇಮ್‌ನಿಂದಾಗಿ ನಾಮಿನೇಟ್ ಆದರು. ಲುಡೋ ಗೇಮ್ ಅನುಸಾರ ವಿನಯ್ ಗೌಡ, ಇಶಾನಿ, ನಮ್ರತಾ ಗೌಡ, ತನಿಷಾ ಕುಪ್ಪಂಡ, ತುಕಾಲಿ ಸಂತು, ಕಾರ್ತಿಕ್ ಮಹೇಶ್ ಹಾಗೂ ನೀತು ನಾಮಿನೇಟ್ ಆಗಿದ್ದರು. ಈಗ ಒಬ್ಬರು ಮಾತ್ರ ಎಲಿಮಿನೇಟ್ ಆಗಿದ್ದಾರೆ.
ಬಿಗ್ ಬಾಸ್ ಸೀಸನ್ 10ರ ಮೊದಲ ವಾರ ಮೈಸೂರಿನ ಸ್ನೇಕ್ ಶಾಮ್ ಅವರು ಎಲಿಮಿನೇಟ್ ಆಗಿದ್ದರು. ಎರಡನೇ ವಾರ ಗೌರೀಶ್ ಅಕ್ಕಿ ಅವರು ದೊಡ್ಮನೆಯಿಂದ ಹೊರಬಂದಿದ್ದರು. ಮೂರನೇ ವಾರ ನಾಮಿನೇಷನ್ ಪ್ರಕ್ರಿಯೆ ನಡೆದಿರಲಿಲ್ಲ. ನಾಲ್ಕನೇ ವಾರ ರಕ್ಷಕ್ ಬುಲೆಟ್ ಔಟ್ ಆಗಿದ್ದರು. ಐದನೇ ವಾರ ವರ್ತೂರು ಸಂತೋಷ್ ಅವರಿಂದಾಗಿ ನಾಮಿನೇಷನ್ ನಡೆದಿರಲಿಲ್ಲ. ಆರನೇ ವಾರ ಇಶಾನಿ ಹೊರಬಿದ್ದಂತಾಗಿದೆ.
ಬಿಗ್‌ಬಾಸ್ ಜಿಯೋ ಸಿನಿಮಾಸ್ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ