Site icon Vistara News

Fashion Interview: ಕಿರುತೆರೆಯ ಸ್ಟೈಲಿಶ್‌ ಐಕಾನ್‌ಗಳ ಟಾಪ್‌ ಲಿಸ್ಟ್‌ಗೆ ಸೇರಿದ ನಿರಂಜನ್‌ ದೇಶಪಾಂಡೆ

Fashion Interview

ಸಂದರ್ಶನ: ಶೀಲಾ ಸಿ. ಶೆಟ್ಟಿ

ಕಿರುತೆರೆಯಲ್ಲಿ ಸದ್ಯಕ್ಕೆ ಸ್ಟೈಲಿಶ್‌ ಹಾಗೂ ಆಕರ್ಷಕವಾಗಿ ಕಾಣಿಸುವವರ ಸಾಲಿನಲ್ಲಿ ನಟ ಹಾಗೂ ನಿರೂಪಕ ನಿರಂಜನ್‌ ದೇಶಪಾಂಡೆ ಮೊದಲ ಸ್ಥಾನದಲ್ಲಿದ್ದಾರೆ. ಪ್ರತಿ ಕಾರ್ಯಕ್ರಮಗಳಲ್ಲೂ ಸಖತ್‌ ಫ್ಯಾಷೆನಬಲ್‌ ಆಗಿ ಕಾಣಿಸಿಕೊಳ್ಳುವ ಯುವ ನಿರೂಪಕ ನಿರಂಜನ್‌ (niranjan deshpande) ಅವರು ಫ್ಯಾಷನ್‌ ವಿಮರ್ಶಕರ ಫೇವರೇಟ್‌ ಕೂಡ ಹೌದು. ಆ ಮಟ್ಟಿಗೆ ಟ್ರೆಂಡಿಯಾಗಿ ಕಾಣಿಸಿಕೊಳ್ಳುತ್ತಾರೆ. ಜತೆಗೆ ತಮ್ಮದೇ ಆದ ಯೂನಿಕ್‌ ಫ್ಯಾಷನ್‌ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಉದ್ಯಾನನಗರಿಯ ವೆಲ್ಹೋಜ್ಹ್ ಇವ್‌ ಸಂಸ್ಥೆ ಆಯೋಜಿಸಿದ್ದ ವಿಮೆನ್ಸ್‌ ಆಚಿವರ್ಸ್ ಆವಾರ್ಡ್ ಸಮಾರಂಭಕ್ಕೆ ಅತಿಥಿಯಾಗಿ ಆಗಮಿಸಿದ್ದ ನಿರಂಜನ್‌ ದೇಶಪಾಂಡೆ, ವಿಸ್ತಾರ ನ್ಯೂಸ್‌ನೊಂದಿಗೆ ತಮ್ಮ ಫ್ಯಾಷನಬಲ್‌ ಲೈಫ್‌ಸ್ಟೈಲ್‌ ಬಗ್ಗೆ ಮಾತನಾಡಿದ್ದಾರೆ.

ಫ್ಯಾಷನಬಲ್‌ ನಿರೂಪಕರ ಟಾಪ್‌ ಲಿಸ್ಟ್‌ನಲ್ಲಿದ್ದಿರಲ್ಲ! ನಿಮ್ಮ ಫ್ಯಾಷನ್‌ ಮಂತ್ರ ಏನು ?

ಧನ್ಯವಾದಗಳು. ನಾನು ಆದಷ್ಟೂ ಸೀಸನ್‌ವೈಸ್‌ ಫ್ಯಾಷನ್‌ ಅಳವಡಿಸಿಕೊಳ್ಳುತ್ತೇನೆ. ಉದಾಹರಣೆಗೆ., ಬೇಸಿಗೆ ತಕ್ಕಂತೆ ನನ್ನ ಡ್ರೆಸ್‌ಕೋಡ್‌ ಇರುತ್ತದೆ. ಬಿಸಿಲಿಗೆ ಸನ್‌ಗ್ಲಾಸ್‌, ಇನ್ನು ಚಳಿಗಾಲಕ್ಕೆ ಲೆಯರ್‌ ಲುಕ್‌ ನೀಡುವ ಜಾಕೆಟ್ಸ್‌ ಹೀಗೆ ಬದಲಾಗುತ್ತಿರುತ್ತದೆ.

ನಿಮ್ಮ ಸಿಗ್ನೇಚರ್‌ ಸ್ಟೈಲ್‌ ಬಗ್ಗೆ ಹೇಳಿ?

ನನಗೆ ಚೈನಾ ಕಾಲರ್ಸ್ ಇರುವಂತಹ ಶರ್ಟ್ಸ್‌, ಟೋರ್ನ್ ಜೀನ್ಸ್‌ ಹಾಗೂ ಸನ್‌ಗ್ಲಾಸ್‌ ನನ್ನ ಸಿಗ್ನೇಚರ್‌ ಸ್ಟೈಲ್‌ ಲಿಸ್ಟ್‌ನಲ್ಲಿದೆ.

Fashion Interview

ನಿಮ್ಮ ಸ್ಟೈಲ್‌ಸ್ಟೇಟ್‌ಮೆಂಟ್‌ಗೆ ಸಾಥ್‌ ನೀಡುವ ಅಂಶಗಳ್ಯಾವುವು?

ಮುಗುಳ್ನಗೆ. ಹೌದು. ಮುಖದ ಮೇಲಿನ ಒಂದು ಮುಗುಳ್ನಗೆ ಇಡೀ ಲುಕ್‌ಗೆ ಕಿರೀಟವಿದ್ದಂತೆ. ನೋಡಲು ಆಕರ್ಷಕವಾಗಿ ಕಾಣಲು ಇದು ಪ್ಲಸ್‌ ಪಾಯಿಂಟ್‌. ಹುಡುಗಿಯರೇ ಆಗಲಿ ಹುಡುಗರೇ ಆಗಲಿ, ಎಷ್ಟೆಲ್ಲಾ ಫ್ಯಾಷನಬಲ್‌ ಆಗಿ ರೆಡಿಯಾಗಿದ್ದರೂ ಕೊನೆಗೆ ಮುಖದ ಮೇಲಿನ ನಗು ಮತ್ತಷ್ಟು ಸುಂದರವಾಗಿ ಕಾಣುವಂತೆ ಬಿಂಬಿಸುತ್ತದೆ. ನಗು ಇಲ್ಲದಿದ್ದರೇ ಎಷ್ಟು ದುಬಾರಿ ಉಡುಪು ಧರಿಸಿದರೂ ಸಪ್ಪೆಯೆಂದೆನಿಸಬಹುದು.

ನಿಮಗೆ ಎಥ್ನಿಕ್‌ ಅಥವಾ ವೆಸ್ಟರ್ನ್ ಯಾವ ಬಗೆಯ ಫ್ಯಾಷನ್‌ವೇರ್‌ಗಳಿಷ್ಟ?

ಹಾಗೇನಿಲ್ಲ! ಕಂಫರ್ಟಬಲ್‌ ಹಾಗೂ ಗುಡ್‌ ಲುಕ್ಕಿಂಗ್‌ ಕಾಣುವಂತಹ ಯಾವುದೇ ಉಡುಪಾದರೂ ಸರಿಯೇ!

ಟೆಲಿವಿಷನ್‌ನಲ್ಲಿ ನೀವು ಧರಿಸುವ ಫ್ಯಾಷನ್‌ವೇರ್‌ಗೂ ಅಭಿಮಾನಿಗಳು ಇದ್ದಾರಂತಲ್ಲ! ಸೋ, ಪ್ರತಿಬಾರಿ ಸ್ಟೈಲಿಶ್‌ ಲುಕ್‌ ಹೇಗೆ ನಿರ್ಧರಿಸುತ್ತೀರಿ?

ಹೌದು. ಅಭಿಮಾನಿಗಳಿದ್ದಾರೆ. ಖುಷಿಯಾಗುತ್ತದೆ. ಕೆಲವೊಂದು ಸ್ಟೈಲಿಶ್‌ ಲುಕ್‌ಗಳನ್ನು ಖುದ್ದು ನಿರ್ಧರಿಸುತ್ತೀನಿ. ಆದರೆ, ಇದೀಗ ಆಯಾ ಕಾರ್ಯಕ್ರಮಗಳಿಗೆ ತಕ್ಕಂತೆ ಚಾನೆಲ್‌ಗಳೇ ಹೀಗಿರಬೇಕೆಂದು ತೀರ್ಮಾನಿಸಿ ಆಪ್ಷನ್‌ ನೀಡುತ್ತವೆ. ಪರಿಣಾಮ, ಎಲ್ಲರ ಅಭಿಪ್ರಾಯಗಳು ಒಟ್ಟಿಗೆ ಸೇರಿ ಸ್ಟೈಲಿಶ್‌ ಲುಕ್‌ ನನ್ನದಾಗುತ್ತದೆ.

ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಸಕ್ರಿಯವಾಗಿರುವ ನೀವು ನೆಟ್ಟಿಗರಿಗೆ ಯಾವ ಬಗೆಯ ಫ್ಯಾಷನ್‌ ಟಿಪ್ಸ್‌ ನೀಡುತ್ತೀರಾ?

ಫ್ಯಾಷನ್‌ ಲುಕ್‌ ನಿಮಗೆ ಹೊಂದುವಂತಿರಲಿ, ಬೇರೆಯವರ ಫ್ಯಾಷನ್‌ ಫಾಲೋ ಮಾಡಲು ಹೋಗಿ ನಗೆಪಾಟಲಿಗೀಡಾಗಬೇಡಿ. ಆದಷ್ಟೂ ನಿಮ್ಮ ಬಾಡಿ ಟೈಪ್‌ಗೆ ಹೊಂದುವಂತದ್ದನ್ನು ಧರಿಸಿ. ಸ್ಮಾರ್ಟ್ ಆಗಿ ಕಾಣಿಸಿಕೊಳ್ಳಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Exit mobile version