Site icon Vistara News

‘ಸ್ಟಾರ್‌’ ಸಿನಿಮಾಗಳಿಲ್ಲದ ಕಾರಣ ಚಿತ್ರಮಂದಿರಗಳ ಬಂದ್‌ಗೆ ಚಿಂತನೆ;‌ ನಿರ್ಮಾಪಕರಿಂದ ಭಾರಿ ಆಕ್ರೋಶ!

Theatre

Temporary Shutdown Of Theatres In Karnataka: Film Producers Opposed In A Meeting

ಬೆಂಗಳೂರು: ಐಪಿಎಲ್‌ (IPL), ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತೆಲಂಗಾಣದಲ್ಲಿ ಒಂದು ತಿಂಗಳು ಚಿತ್ರಮಂದಿರಗಳನ್ನು ಮುಚ್ಚುವ ನಿರ್ಧಾರ ತೆಗೆದುಕೊಂಡಿತ್ತು. ಇದರಂತೆ, ಐಪಿಎಲ್‌, ಚುನಾವಣೆ ಜತೆಗೆ ಸ್ಟಾರ್‌ ನಟರ ಸಿನಿಮಾಗಳ ಬಿಡುಗಡೆ ಇಲ್ಲದ ಕಾರಣ ಕರ್ನಾಟಕದಲ್ಲೂ (Karnataka) ಒಂದು ತಿಂಗಳು ಚಿತ್ರಮಂದಿರಗಳನ್ನು ಮುಚ್ಚಬೇಕು ಎಂಬ ಚಿಂತನೆ ನಡೆದಿದೆ. ಇದರ ಬೆನ್ನಲ್ಲೇ, ಫಿಲಂ ಚೇಂಬರ್‌ನಲ್ಲಿ (Film Chamber) ನಿರ್ಮಾಪಕರ ಸಭೆ ನಡೆದಿದ್ದು, ಥಿಯೇಟರ್‌ಗಳನ್ನು (Theatres) ಮುಚ್ಚುವ ಚಿಂತನೆಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಫಿಲಂ ಚೇಂಬರ್‌ ಅಧ್ಯಕ್ಷ ಎನ್‌.ಎಂ.ಸುರೇಶ್‌ ನೇತೃತ್ವದಲ್ಲಿ ಹೈವೋಲ್ಟೇಜ್ ಸಭೆ ನಡೆದಿದೆ. “ಕನ್ನಡ ಚಿತ್ರರಂಗದ ಕುರಿತು ಇಷ್ಟು ದಿನಗಳಲ್ಲಿ ಈಗ ಸಭೆಯಾಗುತ್ತಿರುವುದು ಒಳ್ಳೆಯ ವಿಚಾರ. ತೆಲಂಗಾಣದ ಪರಿಸ್ಥಿತಿ ನಮ್ಮ ಗಮನಕ್ಕಿದೆ. ಆದರೆ, ಕರ್ನಾಟಕದಲ್ಲಿ ಚಿತ್ರಮಂದಿರಗಳನ್ನು ಬಂದ್‌ ಮಾಡುವುದು ಸರಿಯಲ್ಲ. ತಾತ್ಕಾಲಿಕವಾಗಿ ಸಿಂಗ್‌ ಸ್ಕ್ರೀನ್‌ ಥಿಯೇಟರ್‌ಗಳನ್ನು ಬಂದ್‌ ಮಾಡಿದರೆ ಕನ್ನಡ ಚಿತ್ರರಂಗದ ಮೇಲೆ ಪರಿಣಾಮ ಬೀರುತ್ತದೆ. ಪ್ರದರ್ಶಕರು, ವಿತರಕರು ಹಾಗೂ ನಿರ್ಮಾಪಕರು ಸದ್ಯಕ್ಕೆ ಯಾವ ನಿರ್ಧಾರವನ್ನೂ ತೆಗೆದುಕೊಳ್ಳುವ ಪರಿಸ್ಥಿತಿಯಲ್ಲಿಲ್ಲ. ಸುಮಾರು 80ಕ್ಕೂ ಹೆಚ್ಚು ಸಿನಿಮಾಗಳಿಗೆ ರಿಲೀಸ್ ಪ್ಲಾನ್ ಮಾಡಲು ಆಗುತ್ತಿಲ್ಲ. ಸ್ಟಾರ್ ಚಿತ್ರಗಳು ಹೆಚ್ಚಾಗುವುದು ಮುಂದೆಯೂ ಅಸಾಧ್ಯ ಎಂಬಂತಿದೆ. ಥಿಯೇಟರ್‌ಗಳನ್ನು ಮುಚ್ಚಿದರೆ ಮುಂದಾಗುವ ಪರಿಣಾಮಗಳ ಬಗ್ಗೆಯೂ ಗಮನ ಇರಬೇಕು. ಹಾಗಾಗಿ, ಚಿತ್ರಮಂದಿರಗಳನ್ನು ಮುಚ್ಚಬಾರದು” ಎಂದು ನಿರ್ಮಾಪಕರು ಆಗ್ರಹಿಸಿದರು.

ಸ್ಟಾರ್‌ ನಟರ ಜತೆ ಚರ್ಚೆಗೆ ನಿರ್ಧಾರ

ಕರ್ನಾಟಕದಲ್ಲಿ ಸ್ಟಾರ್‌ ನಟರ ಸಿನಿಮಾಗಳ ಬಿಡುಗಡೆಯಾಗದಿರುವ ಕುರಿತು ಕೂಡ ಸಭೆಯಲ್ಲಿ ಚರ್ಚಿಸಲಾಯಿತು. ಇದರಿಂದ ಕನ್ನಡ ಚಿತ್ರರಂಗ ದಯನೀಯ ಸ್ಥಿತಿಗೆ ತಲುಪುವ ಕುರಿತು ಕೂಡ ಅಭಿಪ್ರಾಯ ವ್ಯಕ್ತವಾಯಿತು. ಸ್ಟಾರ್‌ ನಟರು ವರ್ಷಕ್ಕೆ ಎರಡು ಸಿನಿಮಾ ಮಾಡುವಂತೆ ಮನವಿ ಮಾಡಲು ಕೂಡ ನಿರ್ಧರಿಸಲಾಯಿತು. ಚಿತ್ರರಂಗದ ಉಳಿವು, ಮುಂದಿನ ದಿನಗಳಲ್ಲಿ ಮಾಡಬೇಕಾದ ಬದಲಾವಣೆಗಳು ಸೇರಿ ಹಲವು ವಿಷಯಗಳ ಕುರಿತು ಚರ್ಚಿಸಲಾಯಿತು.

ಬಂದ್‌ ನಿರ್ಧಾರ ನಿಲ್ಲ ಎಂದ ಎನ್.ಎಂ.ಸುರೇಶ್‌

ಸಭೆಯ ಬಳಿಕ ಮಾತನಾಡಿದ ಎನ್‌.ಎಂ.ಸುರೇಶ್‌, “ಕರ್ನಾಟಕದಲ್ಲಿ ಥಿಯೇಟರ್‌ಗಳನ್ನು ಮುಚ್ಚುವ ಕುರಿತು ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಕನ್ನಡ ಚಿತ್ರರಂಗದ ಸಮಸ್ಯೆಗಳ ಕುರಿತು ಚರ್ಚಿಸಿದ್ದೇವೆ. ಕನ್ನಡ ಚಿತ್ರರಂಗದ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುತ್ತೇವೆ. ಟಿಕೆಟ್ ರೇಟ್ ಕಡಿಮೆ ಮಾಡುವುದು, ಯುಎಫ್ಒ, ಕ್ಯೂಬ್ ರೇಟ್ ಕಡಿಮೆ ಮಾಡುವ ಕುರಿತು ಸರ್ಕಾರಕ್ಕೆ ಕೋರಿಕೆ ಸಲ್ಲಿಸುತ್ತೇವೆ. ಕೇರಳದಲ್ಲಿ ಸರ್ಕಾರದ್ದೇ ಸ್ವಂತ ಒಟಿಟಿ ವ್ಯವಸ್ಥೆ ಇದೆ. ಇದು ಕರ್ನಾಟಕದಲ್ಲೂ ಜಾರಿಗೆ ಬರಬೇಕು. ಕಲಾವಿದರು ಕೂಡ ಸಹಕಾರ ನೀಡಬೇಕು. ಮೂರ್ನಾಲ್ಕು ದಿನದಲ್ಲಿ ಸ್ಟಾರ್‌ ನಟರ ಜತೆ ಸಭೆ ನಡೆಸಲಾಗುತ್ತದೆ” ಎಂದು ತಿಳಿಸಿದರು.

ಫಿಲಂ ಚೇಂಬರ್ ಅಧ್ಯಕ್ಷ ಎನ್. ಎಂ. ಸುರೇಶ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಟಗರು, UI ಚಿತ್ರಗಳ ಖ್ಯಾತಿಯ ನಿರ್ಮಾಪಕ ಕೆ.ಪಿ. ಶ್ರೀಕಾಂತ್, ಕಬ್ಜ ಖ್ಯಾತಿಯ ಆರ್. ಚಂದ್ರು, ಜಯಣ್ಣ, ತರುಣ್ ಶಿವಪ್ಪ, ಲಹರಿ ವೇಲು, ಹೊಂಬಾಳೆ ಫಿಲಮ್ಸ್‌ ಪ್ರತಿನಿಧಿ ಚಿದಾನಂದ್ ಸೇರಿ ಹಲವು ನಿರ್ಮಾಕರು ಭಾಗವಹಿಸಿದರು. ಐಪಿಎಲ್‌ ಅಬ್ಬರ, ಲೋಕಸಭೆ ಚುನಾವಣೆ ಭರಾಟೆ ಸೇರಿ ಹಲವು ಕಾರಣಗಳಿಂದ ಆಂಧ್ರಪ್ರದೇಶದಲ್ಲಿ ಕೆಲವು ದಿನಗಳ ಹಿಂದೆ ಚಿತ್ರಮಂದಿರಗಳನ್ನು ತಾತ್ಕಾಲಿಕವಾಗಿ ಬಂದ್‌ ಮಾಡಲಾಗಿತ್ತು. ಇದೇ ರೀತಿ ಕರ್ನಾಟಕದಲ್ಲೂ ತಾತ್ಕಾಲಿಕವಾಗಿ ಸಿಂಗ್‌ ಸ್ಕ್ರೀನ್‌ ಥಿಯೇಟರ್‌ಗಳನ್ನು ಬಂದ್ ಮಾಡಬೇಕು ಎಂಬ ಚಿಂತನೆ ನಡೆದಿತ್ತು.

ಇದನ್ನೂ ಓದಿ: Blink Movie: ಹಾಫ್ ಸೆಂಚುರಿ ಬಾರಿಸಿದ ʻಬ್ಲಿಂಕ್ ʼ ಸಿನಿಮಾ; ಒಟಿಟಿಯಲ್ಲಿಯೂ ʻಬಹುಪರಾಕ್ʼ!

Exit mobile version