ಬೆಂಗಳೂರು : ಕನ್ನಡ ಚಿತ್ರರಂಗದಲ್ಲಿ ಸಾಲು ಸಾಲು ಸಿನಿಮಾಗಳು (Upcoming Kannada Movie ) ತೆರೆಗೆ ಬರಲು ಸಜ್ಜಾಗಿವೆ. ಇದೀಗ ಅಭಿಮಾನಿಗಳಿಗೆ ಯಾವ ಸಿನಿಮಾ ನೋಡಲಿ ಎಂಬ ಕುತೂಹಲ ಶುರುವಾಗಿದೆ. ಶುಕ್ರವಾರ (ಜು.೮) ಆರು ಕನ್ನಡ ಸಿನಿಮಾಗಳು ಒಂದೇ ಬಾರಿಗೆ ಥಿಯೇಟರ್‌ಗೆ ಲಗ್ಗೆ ಇಡಲಿವೆ.
ಸಿಎಂ ಪಾತ್ರದಲ್ಲಿ ಸುಮಲತಾ ಅಂಬರೀಷ್ ನಟನೆಯ ʻಹೋಪ್ʼ, ಲವ್ ಜಾನರ್ ಹೊಂದಿರುವ ಪೃಥ್ವಿ ಅಂಬಾರ್ ಹಾಗೂ ಪ್ರಿಯಾಂಕ ತಿಮ್ಮೇಶ್ ಅಭಿನಯದ ʻಶುಗರ್ ಲೆಸ್ʼ , ಚಂದ್ರ ಕೀರ್ತಿ, ಪವನ್ ಗೌಡ ನಟನೆಯ ʻತೂತು ಮಡಿಕೆʼ, ಲಿಖಿತ್ ಶೆಟ್ಟಿ, ಅಮೃತ ಅಯ್ಯoಗಾರ್ ಫನ್ ಎಂಟರ್ಟೈನ್ಮೆಂಟ್ ಸಿನಿಮಾ ʻಅಬ್ಬಬ್ಬʼ ಹಾಗೂ ಉಪೇಂದ್ರ ಮನೆತನದ ಕುಡಿ ನಿರಂಜನ್ ನಟನೆಯ ʻನಮ್ಮ ಹುಡುಗರುʼ ಈ ಎಲ್ಲಾ ಸಿನಿಮಾಗಳು ಜುಲೈ 8ಕ್ಕೆ ತೆರೆಗೆ ಬರಲಿವೆ.
ಇದನ್ನೂ ಓದಿ | Vikram Film | ಒಟಿಟಿಗೆ ಬರಲಿದೆ ವಿಕ್ರಮ್ ಸಿನಿಮಾ: ಪಂಚ ಭಾಷೆಗಳಲ್ಲಿ ವೀಕ್ಷಣೆಗೆ ಲಭ್ಯ
1. ಹೋಪ್ (Hope)
ಪ್ರಾಮಾಣಿಕ ಅಧಿಕಾರಿಯ ವರ್ಗಾವಣೆ ಮತ್ತು ಅದರ ಸುತ್ತ ನಡೆಯುವ ರಾಜಕೀಯ ಆಟ, ಕಾನೂನು ಹೋರಾಟದ ಕಥಾಹಂದರವನ್ನು ಈ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಸುಮಲತಾ ಅಂಬರೀಷ್, ಶ್ವೇತಾ ಶ್ರೀವಾಸ್ತವ್, ಪ್ರಮೋದ್ ಶೆಟ್ಟಿ, ಗೋಪಾಲ ಪಾಂಡೆ, ಪ್ರಕಾಶ್ ಬೆಳವಾಡಿ, ಸಿರಿ ಸೇರಿದಂತೆ ಅನೇಕ ಕಲಾವಿದರು ಚಿತ್ರದಲ್ಲಿದ್ದಾರೆ. ಖ್ಯಾತ ಸ್ನೂಕರ್ ಆಟಗಾರ್ತಿ ವರ್ಷ ಸಂಜೀವ್ ಹೋಪ್ ಸಿನಿಮಾಗೆ ಕಥೆ ಬರೆದು ನಿರ್ಮಾಣ ಮಾಡಿದ್ದಾರೆ.
2. ತೂತು ಮಡಿಕೆ(Tootu MadikeFilm)
ಪೋಸ್ಟರ್, ಟ್ರೈಲರ್ ಮತ್ತು ಹಾಡುಗಳ ಮೂಲಕ ನಿರೀಕ್ಷೆಗಳ ಭಾರ ಹೊತ್ತಿರುವ ‘ತೂತು ಮಡಿಕೆ’ ರಾಜ್ಯಾದ್ಯಂತ 80 ಥಿಯೇಟರ್‌ಗಳಲ್ಲಿ ಜುಲೈ 8ರಂದು ರಿಲೀಸ್ ಆಗಲಿದೆ. ಕನ್ನಡದಲ್ಲಿ ವಿಭಿನ್ನ ಶಿರ್ಷಿಕೆ ಅಡಿ, ಟ್ರೆಂಡಿಂಗ್ ಕಥೆಯನ್ನು ಹಿಡಿದು ಬರುವ ಹೊಸಬರ ತಂಡಗಳು ಸಾಕಷ್ಟು ಯಶಸ್ಸು ಗಳಿಸುತ್ತಿದ್ದು, ಸದ್ಯ ‘ತೂತು ಮಡಿಕೆ’ ಕೂಡ ಅದೇ ರೀತಿ ಗಮನ ಸೆಳೆಯುತ್ತಿದೆ. ‘ತೂತು ಮಡಿಕೆ’ ಮೂಲಕ ರಂಗಭೂಮಿ ಕಲಾವಿದ ಚಂದ್ರಕೀರ್ತಿ ನಿರ್ದೇಶಕರಾಗಲಿದ್ದಾರೆ. ಜತೆಗೆ ಹೀರೋ ಆಗಿಯೂ ಪ್ರೇಕ್ಷಕರ ಮುಂದೆ ಹಾಜರಾಗಲಿದ್ದಾರೆ.
‘ತೂತು ಮಡಿಕೆ’ ಸಿನಿಮಾ ಹೊಸಬರ ಹೊಸ ಪ್ರಯತ್ನವಾಗಿದ್ದರೂ, ಚಿತ್ರಕ್ಕೆ ದೊಡ್ಡ ತಾರಾಬಳಗವೇ ಸಾಥ್ ನೀಡಿದೆ. ‘ತೂತು ಮಡಿಕೆ’ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆಯನ್ನು ಚಂದ್ರಕೀರ್ತಿ ಅವರೇ ಬರೆದಿದ್ದಾರೆ. ಇನ್ನು ಚಂದ್ರಕೀರ್ತಿಗೆ ಜೋಡಿಯಾಗಿ ಗೊಂಬೆಗಳ ಲವ್ ಖ್ಯಾತಿಯ ಪಾವನಾ ಗೌಡ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಪ್ರಮೋದ್ ಶೆಟ್ಟಿ, ಉಗ್ರಂ ಮಂಜು, ಗಿರೀಶ್ ಶಿವಣ್ಣ, ಶಂಕರ್ ಅಶ್ವತ್ಥ್, ಸಿತಾರಾ ನರೇಶ್ ಭಟ್ ಸೇರಿದಂತೆ ದೊಡ್ಡ ತಾರಾಬಳಗ ಈ ಚಿತ್ರದಲ್ಲಿದೆ.
3. ಅಬ್ಬಬ್ಬಾ
ಲಿಖಿತ್ ಶೆಟ್ಟಿ ಹಾಗೂ ಅಮೃತ ಅಯ್ಯoಗಾರ್ ಮುಖ್ಯ ಭೂಮಿಕೆಯಲ್ಲಿ ಮೂಡಿ ಬಂದಿರುವ ಸಿನಿಮಾ. ಈ ಸಿನಿಮಾಗೆ ಕೆ.ಎಂ ಚೈತನ್ಯ ನಿರ್ದೇಶನ ಮಾಡುತ್ತಿದ್ದಾರೆ. 2013ರಲ್ಲಿ ಪರಾರಿ ಸಿನಿಮಾ ಮಾಡಿದ್ದ ಚೈತನ್ಯ ಇದೀಗ ಅಬ್ಬಬ್ಬಾ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ಹಾಸ್ಟೆಲ್ ಜೀವನ ಹಾಗೂ ಸ್ಟೂಡೆಂಟ್ ಲೈಫ್ ಕುರಿತ ಕಥಾ ಹಂದರವನ್ನು ಹೊಂದಿರುವ ಈ ಸಿನಿಮಾ ಹೇಗೆ ರಂಜಿಸಲಿದೆ ಎನ್ನುವುದು ನೋಡಬೇಕಿದೆ.
4. ಶುಗರ್‌ಲೆಸ್
ಪ್ರಥ್ವಿ ಅಂಬಾರ್ ಹಾಗೂ ಪ್ರಿಯಾಂಕ ತಿಮ್ಮೇಶ್ ಅಭಿನಯದ ಸಿನಿಮಾ ಶುಗರ್‌ಲೆಸ್ ನಿರ್ದೇಶಕ ಕೆ.ಎಂ ಶಶಿಧರ್ ಅವರ ಚೊಚ್ಚಲ ಚಿತ್ರವಾಗಿದ್ದು, ಕಾಯಿಲೆ ಇರುವ ಯುವಕನೊಬ್ಬ ಮನಸಿನ ತಳಮಳಗಳು, ಸಂಕಟವನ್ನು ತೆರೆದಿಡುವುದು ಜತೆಗೆ ಸಕ್ಕರೆ ಕಾಯಿಲೆ ಇದ್ದರೂ ಹೇಗೆ ಸುಖಮಯ ಜೀವನ ನಡೆಸುತ್ತಾನೆ ಎಂಬ ಕಥಾ ಹಂದರ ಈ ಸಿನಿಮಾ ಹೊಂದಿದೆ.
೫. ನಮ್ಮ ಹುಡುಗರು
ರಿಯಲ್ ಸ್ಟಾರ್ ಉಪೇಂದ್ರ ಕುಟುಂಬದ ಕುಡಿ ನಿರಂಜನ್ ಸುಧೀಂದ್ರ ನಾಯಕನಾಗಿ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ನಮ್ಮ ಹುಡುಗರು ಚಿತ್ರದಲ್ಲಿ (Namma Hudugaru Movie ) ಪ್ರಮುಖ ಪಾತ್ರದಲ್ಲಿ ನಿರಂಜನ್ ಸುಧೀಂದ್ರ ಅಭಿನಯಿಸಿದ್ದಾರೆ.
6. ವೆಡ್ಡಿಂಗ್ ಗಿಫ್ಟ್
ಲಾಯರ್ ಪಾತ್ರದ ಮೂಲಕ ನಟಿ ಪ್ರೇಮ ಈ ಸಿನಿಮಾ ಮೂಲಕ ಮತ್ತೆ ಬಣ್ಣದ ಲೋಕಕ್ಕೆ ಮುಖ ಮಾಡಿದ್ದಾರೆ. ವಿಕ್ರಂ ಪ್ರಭು ನಿರ್ದೇಶನದ ಈ ಚೊಚ್ಚಲ ಸಿನಿಮಾದಲ್ಲಿ ಸಮಾಜಕ್ಕೆ ಸಂದೇಶವನ್ನು ಕೊಡಲು ಮುಂದಾಗಿದ್ದಾರೆ. ದುರಾಸೆಗೆ ಒಳಗಾದ ಹೆಣ್ಣು ಮಗಳೊಬ್ಬಳು ಕಾನೂನಿನ ದುರ್ಬಳಕೆಗೆ ಒಳಗಾಗುವ, ಇದರಿಂದ ಸಾಂಸಾರಿಕ ಜೀವನದಲ್ಲಿ ಘಟಿಸಬಹುದಾದ ಏರಿಳಿತಗಳ ಬಗ್ಗೆ ಈ ಸಿನಿಮಾವಿದೆ. ಸೋನು ಗೌಡ ನಾಯಕಿಯಾಗಿ ನಟಿಸಿದ್ದು, ನಿಶಾಂತ್ ನಾಣಯ್ಯ ನಾಯಕನಾಗಿ ನಟಿಸಿದ್ದಾರೆ.
ವರದಕ್ಷಿಣೆ ಕಿರುಕುಳ ಪ್ರಕರಣಗಳನ್ನು ಎದುರಿಸಲು 1983ರಲ್ಲಿ ಕಾನೂನು ಜಾರಿಗೆ ಬಂದಿತು. ಆದರೆ, ಇದನ್ನು ಕೆಲವು ಮಹಿಳೆಯರು ದುರುಪಯೋಗಪಡಿಸಿಕೊಂಡು ಹಣ ಕೀಳಲು ಅಥವಾ ಬ್ಲ್ಯಾಕ್ ಮೇಲ್ ಮಾಡಿದ ಪ್ರಕರಣಗಳು ಇವೆ. ಅಂತಹ ಒಂದು ಕಥೆ ವೆಡ್ಡಿಂಗ್ ಗಿಫ್ಟ್.
ಅಂದಹಾಗೆ 6 ತಿಂಗಳಲ್ಲಿ ಸುಮಾರು 50 ಕನ್ನಡ ಚಿತ್ರಗಳು ತೆರೆಕಂಡಿವೆ. ಏಕ್ ಲವ್ ಯಾ, ಬೈ ಟು ಲವ್, ಹೋಮ್ ಮಿನಿಸ್ಟರ್, ಹರಿಕಥೆ ಅಲ್ಲ ಗಿರಿ ಕಥೆ, ಅವತಾರ ಪುರುಷ, ತಲೆದಂಡ ಸೇರಿದಂತೆ ಅನೇಕ ಸಿನಿಮಾಗಳು ತೆರೆಕಂಡಿವೆ. ಇವುಗಳಲ್ಲಿ ಕೆಲವು ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡಿದ್ದರೆ ಇನ್ನು ಕೆಲವು ಪ್ರೇಕ್ಷಕರ ಮನ ಗೆಲ್ಲುವಲ್ಲಿ ವಿಫಲವಾಗಿವೆ.
ಇದನ್ನೂ ಓದಿ | Kantara Movie | ಇದೀಗ ಶೆಟ್ರು ಹರಿ ಅಲ್ಲ, ಶಿವ: ರಿಷಬ್ ಶೆಟ್ಟಿ ಅವರ ಫೈರಿ ಲುಕ್ ಹಂಚಿಕೊಂಡ ಹೊಂಬಾಳೆ ಫಿಲ್ಮ್ಸ್