ಬೆಂಗಳೂರು: ಪದ್ಮಶ್ರೀ ಡಾ. ವಿಜಯ ಸಂಕೇಶ್ವರ ಅವರ ಜೀವನಾಧಾರಿತ ‘ವಿಜಯಾನಂದ’ (Vijayananda Film) ಚಿತ್ರವು ಪ್ರಾರಂಭದಿಂದಲೂ ಸ್ಟಾರ್ ಕಾಸ್ಟ್, ಕಲಾವಿದರ ಲುಕ್, ಮೇಕಿಂಗ್, ಕುತೂಹಲ ಮೂಡಿಸುವ ಟೀಸರ್, ಬಹುಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಬಿಡುಗಡೆ ಯೋಜನೆ ಸೇರಿ ಹಲವು ಕಾರಣಕ್ಕೆ ಸುದ್ದಿ ಮಾಡುತ್ತಿದೆ. ಈಗ ಸಿನಿಮಾ ಕುರಿತು ಮತ್ತೊಂದು ಅಪ್‌ಡೇಟ್ ಸಿಕ್ಕಿದ್ದು, ‘ವಿಜಯಾನಂದ’ ಚಿತ್ರದ ಆಡಿಯೊ ನವೆಂಬರ್ 6ರಂದು ಸಂಜೆ 6 ಗಂಟೆಗೆ ಬಿಡುಗಡೆಯಾಗಲಿದೆ. ‘ಹಾಗೆ ಆದ ಆಲಿಂಗನ’ ಎಂದು ಸಾಗುವ ರೊಮ್ಯಾಂಟಿಕ್ ಸಾಂಗ್ಅನ್ನು ಬಿಡುಗಡೆ ಮಾಡಲಾಗುತ್ತಿದೆ.
ನಿಹಾಲ್ ನಾಯಕನಾಗಿ, ಸಿರಿ ಪ್ರಹ್ಲಾದ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಚಿಕ್ಕಮಗಳೂರಿನ ಸುಂದರ ತಾಣಗಳಲ್ಲಿ, ಹಳೇಬೀಡು, ಬೇಲೂರು ಸೇರಿದಂತೆ 10ಕ್ಕೂ ಹೆಚ್ಚು ಪ್ರೇಕ್ಷಣೀಯ ಸ್ಥಳಗಳಲ್ಲಿ ಹಾಡಿನ ಚಿತ್ರೀಕರಣ ಮಾಡಲಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.
ಹೆಸರಾಂತ ಸಂಗೀತ ನಿರ್ದೇಶಕ ಗೋಪಿ ಸುಂದರ್ ಸಂಗೀತ ಸಂಯೋಜಿಸಿರುವ ಈ ಹಾಡಿಗೆ ಧನಂಜಯ್ ರಂಜನ್ ಸಾಹಿತ್ಯ ರಚಿಸಿದ್ದಾರೆ. ಒರಾಯನ್ ಮಾಲ್‌ನಲ್ಲಿ ನಡೆಯಲಿರುವ ಆಡಿಯೊ ಬಿಡುಗಡೆ ಕಾರ್ಯಕ್ರಮದಲ್ಲಿ ಗೋಪಿ ಸುಂದರ್ ಹಾಡಿನ ಪ್ರದರ್ಶನ ನೀಡಲಿದ್ದಾರೆ. ಶರಣ್, ಹರ್ಷಿಕಾ ಪೂಣಚ್ಚ ಸೇರಿ ಸ್ಯಾಂಡಲ್‌ವುಡ್‌ನ ನಟ, ನಟಿಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಯಶಸ್ವಿ ಮತ್ತು ಮಾದರಿ ಉದ್ಯಮಿ ಡಾ. ವಿಜಯ ಸಂಕೇಶ್ವರ ಅವರ ಕುರಿತ ‘ವಿಜಯಾನಂದ’ ಚಿತ್ರವನ್ನು ವೀಕ್ಷಿಸಲು ನಾಡಿನ ಜನ ಕಾತರದಿಂದ ಕಾಯುತ್ತಿದ್ದಾರೆ. ಭಾನುವಾರ ಇದರ ಹಾಡುಗಳ ಆಡಿಯೊ ಬಿಡುಗಡೆ ಆಗುತ್ತಿರುವುದು ಸಂತಸದ ಸಂಗತಿ. ಈ ಚಿತ್ರದ ಟ್ರೇಲರ್ ಸೂಪರ್ ಹಿಟ್ ಆದಂತೆ, ಹಾಡುಗಳೂ ಜನ ಮೆಚ್ಚುಗೆ ಗಳಿಸಲಿವೆ.
–ಹರಿಪ್ರಕಾಶ್ ಕೋಣೆಮನೆ, ಸಿಇಒ ಮತ್ತು ಪ್ರಧಾನ ಸಂಪಾದಕ, ವಿಸ್ತಾರ ನ್ಯೂಸ್
ಇದನ್ನೂ ಓದಿ | ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ 2ನೇ ಮದುವೆ ಚರ್ಚೆ ಜೋರು; ನಟಿ ಜತೆಗಿನ ಫೋಟೋ ವೈರಲ್
ಪದ್ಮಶ್ರೀ ಡಾ. ವಿಜಯ ಸಂಕೇಶ್ವರರ ಬಯೋಪಿಕ್‌ಅನ್ನು ವಿಆರ್‌ಎಲ್ ಫಿಲಂ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಡಾ. ಆನಂದ ಸಂಕೇಶ್ವರ ನಿರ್ಮಿಸುತ್ತಿದ್ದಾರೆ. ‘ಟ್ರಂಕ್’ ಖ್ಯಾತಿಯ ನಿರ್ದೇಶಕಿ ರಿಷಿಕಾ ಶರ್ಮಾ ನಿರ್ದೇಶಿಸುತ್ತಿದ್ದಾರೆ. ಡಾ. ವಿಜಯ ಸಂಕೇಶ್ವರರ ಪಾತ್ರದಲ್ಲಿ ನಿಹಾಲ್ ರಜಪೂತ್, ಶ್ರೀಮತಿ ಲಲಿತಾ ಸಂಕೇಶ್ವರರ ಪಾತ್ರದಲ್ಲಿ ಸಿರಿ ಪ್ರಹ್ಲಾದ್, ಡಾ. ವಿಜಯ ಸಂಕೇಶ್ವರರ ತಂದೆ ಬಿ.ಜಿ. ಸಂಕೇಶ್ವರರ ಪಾತ್ರದಲ್ಲಿ ಹಿರಿಯ ನಟ ಅನಂತ್ ನಾಗ್, ಡಾ. ಆನಂದ ಸಂಕೇಶ್ವರರ ಪಾತ್ರದಲ್ಲಿ ಭರತ್ ಬೋಪಣ್ಣ ಹಾಗೂ ವಿಜಯ ಸಂಕೇಶ್ವರರ ಗುರುಗಳ ಪಾತ್ರದಲ್ಲಿ ರವಿಚಂದ್ರನ್ ನಟಿಸುತ್ತಿದ್ದಾರೆ.
ಡಾ. ವಿಜಯ ಸಂಕೇಶ್ವರ ಅವರ ಜೀವನ ಮತ್ತು ಸಾಧನೆಯ ಕತೆ ಎಲ್ಲರಿಗೂ ಪ್ರೇರಣಾದಾಯಕ. ಶೀಘ್ರವೇ ಬಿಡುಗಡೆ ಆಗಲಿರುವ ‘ವಿಜಯಾನಂದ’ ಚಿತ್ರ ಸ್ಫೂರ್ತಿದಾಯಕ ಆಗಲಿದೆ. ಭಾನುವಾರ ನ.6ರಂದು ಬಿಡುಗಡೆ ಆಗಲಿರುವ ಈ ಚಿತ್ರದ ಹಾಡುಗಳು ಸೂಪರ್ ಹಿಟ್ ಆಗಲಿ.
-ಎಚ್ ವಿ ಧರ್ಮೇಶ್, ಚೇರ್ಮನ್ ಮತ್ತು ಎಂಡಿ, ವಿಸ್ತಾರ ನ್ಯೂಸ್ ಪ್ರೈ.ಲಿ.
‘ವಿಜಯಾನಂದ’ ಚಿತ್ರ ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ.
ಇದನ್ನೂ ಓದಿ | Vijay Sankeshwar | ಇತಿಹಾಸ ಸೃಷ್ಟಿಸಿದವರೆಲ್ಲರೂ ಅಪ್ಪನ ವಿರುದ್ಧ ಹೋದವರು!: ವಿಜಯಾನಂದ ಟೀಸರ್ ವೈರಲ್