ಕಿಚ್ಚ ಸುದೀಪ್ ಅಭಿನಯದ, ಅನೂಪ್ ಭಂಡಾರಿ ನಿರ್ದೇಶಿಸಿರುವ ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ವಿಕ್ರಾಂತ್ ರೋಣ (Vikrant Rona Review) ಒಂದು ಹೊಸ ಪ್ರಪಂಚವನ್ನು ಸೃಷ್ಟಿಸಿದೆ. ಈ ಸಿನಿಮಾ ಹೇಗಿದೆ? ಸಿನಿಮಾದಲ್ಲಿ ಏನೇನಿದೆ ಎಂಬ ವಿಶ್ಲೇಷಣೆ ಇಲ್ಲಿದೆ.
ಚಿತ್ರ: ವಿಕ್ರಾಂತ್ ರೋಣ
ನಿರ್ದೇಶನ: ಅನೂಪ್ ಭಂಡಾರಿ
ನಿರ್ಮಾಪಕ: ಜಾಕ್ ಮಂಜು
ಛಾಯಾಗ್ರಾಹಕ: ವಿಲ್ಲಿಯಮ್ ಡೇವಿಡ್
ಸಂಗೀತ: ಅಜನೀಶ್ ಲೋಕನಾಥ್
ತಾರಾಗಣ: ಕಿಚ್ಚ ಸುದೀಪ್, ನಿರೂಪ್ ಭಂಡಾರಿ, ನೀತಾ ಅಶೋಕ್, ವಜ್ರಧೀರ್ ಜೈನ್, ಜಾಕ್ವೆಲಿನ್ ಫೆರ್ನಾಂಡಿಸ್, ರಂಜನ್ ಶೆಟ್ಟಿ, ರವಿಶಂಕರ್ ಇತರರು
ರೇಟಿಂಗ್: 3/5
ರಂಗಿತರಂಗವನ್ನು ನೆನಪಿಸುವ ಕಥೆ!
ಅನೂಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ ಸಸ್ಪೆನ್ಸ್ ಥ್ರಿಲ್ಲರ್ ಜಾನ್ರ್‌ಗೆ ಸೇರಿದ ಸಿನಿಮಾ. ತಾಯಿ-ಮಗಳು ಕಮರೊಟ್ಟು ಎಂಬ ಗ್ರಾಮಕ್ಕೆ ಹೋಗುತ್ತಿದ್ದಂತೆ ಒಂದು ದುರ್ಘಟನೆ ಸಂಭವಿಸುತ್ತದೆ. ಆ ಮಗು ಕಾಣೆಯಾಗಿಬಿಡುತ್ತದೆ. ಅಲ್ಲಿಂದ ಶುರು ಆಗುವ ರೋಚಕ ಪಯಣ ಇದು. ಈ ರೀತಿ ಅನೇಕ ಮಕ್ಕಳು ಕಾಣೆಯಾಗಿರುತ್ತವೆ ಅಲ್ಲದೆ, ಒಬ್ಬ ಪೊಲೀಸ್ ಅಧಿಕಾರಿಯ ಕೊಲೆ ಕೂಡ ಆಗಿರುತ್ತದೆ. ಈ ಪ್ರಕರಣದ ಜಾಲವನ್ನು ಭೇದಿಸಲು ಆ ಊರಿಗೆ ಬರುವ ಮತ್ತೋರ್ವ ಪೊಲೀಸ್ ಅಧಿಕಾರಿಯೇ ವಿಕ್ರಾಂತ್ ರೋಣ.
ತನಿಖೆಯ ಪ್ರತಿ ಹಂತದಲ್ಲೂ ಹೊಸ ತಿರುವುಗಳು ಕಂಡುಬರುತ್ತವೆ. ಆ ಊರು, ಕಥೆ ಸಾಗುವ ರೀತಿ, ಭಾಷೆ, ಎಲ್ಲವೂ ರಂಗಿತರಂಗವನ್ನು ನೆನಪಿಸುತ್ತದೆ. ಆದರೆ, ಈ ಸಿನಿಮಾ ಬೇರೊಂದು ಲೋಕ ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ. ಈ ಸಿನಿಮಾದಲ್ಲಿ ತಂದೆ ಹಾಗೂ ಮಗಳ ಒಂದು ಪ್ರೀತಿಯ ಬಾಂಧವ್ಯವೂ ಸೇರಿಕೊಂಡಿದೆ. ಮೇಲ್ನೋಟಕ್ಕೆ ರಂಗಿತರಂಗ ಸಿನಿಮಾಗೆ ಅದ್ಧೂರಿಯಾದ ಬಣ್ಣ ಹಚ್ಚಿ ತೆರೆಯ ಮೇಲೆ ತಂದಂತೆ ಕಾಣಿಸುತ್ತದೆ. ಆದರೆ, ಈ ಚಿತ್ರದ ಕ್ಲೈಮ್ಯಾಕ್ಸ್ ಸನ್ನಿವೇಶವೇ ಇದರ ಶಕ್ತಿ.
ಮೇಕಿಂಗ್ ಈ ಚಿತ್ರದ ಶ್ರೀಮಂತಿಕೆ
ಒಂದು ಸಸ್ಪೆನ್ಸ್ ಸಿನಿಮಾ ಎಂದ ಕೂಡಲೆ ಅಲ್ಲೊಂದು ಅನಿಸಿಕೆ ಜೀವ ಪಡೆಯುತ್ತದೆ. ಈ ಸಿನಿಮಾವನ್ನು ಒಂದೇ ಬಾರಿ ನೋಡಲು ಆಗುವುದು ಎಂಬ ಅನಿಸಿಕೆ. ಏಕೆಂದರೆ ಅವಿತುಕೊಂಡಿರುವ ಕಥೆಯ ಎಳೆಯನ್ನು ಆಸ್ವಾದಿಸಿದ ಮೇಲೆ ಮತ್ತೊಮ್ಮೆ ನೋಡುವುದು ಕಷ್ಟ ಆಗಿಬಿಡುತ್ತದೆ. ಇದಕ್ಕೆ ವಿಕ್ರಾಂತ್ ರೋಣ ಕೂಡ ಹೊರತಲ್ಲ. ಮಧ್ಯಂತರದ ಹೊತ್ತಿಗೆ ಒಂದೊಳ್ಳೆ ತಿರುವು ನೀಡಲಾಗಿದ್ದು ಉತ್ತರಾರ್ಧವನ್ನು ನೋಡಲು ಪ್ರೇಕ್ಷಕರನ್ನು ಹಿಡಿಟ್ಟುಕೊಳ್ಳುತ್ತದೆ. ಎರಡನೇ ಅರ್ಧದಲ್ಲಿ ಈ ಸಿನಿಮಾ ಹೊಸ ಹಾದಿಯನ್ನು ಹಿಡಿದು ಸಾಗುತ್ತದೆ. ಕಥೆಯಲ್ಲಿರುವ ರೋಚಕತೆ ಹಾಗೂ ಕುತೂಹಲವನ್ನು ಚಿತ್ರದುದ್ದಕ್ಕೂ ಹಿಡಿದಿಟ್ಟುಕೊಳ್ಳುವಲ್ಲಿ ಅನೂಪ್ ಪಳಗಿದ್ದಾರೆ. ಈ ಹಿಂದೆ ರಂಗಿತರಂಗ ಕೂಡ ಇದೇ ಶಕ್ತಿಯಿಂದ ಗೆದ್ದಿತ್ತು.
ಆದರೆ, ಎಲ್ಲದಕ್ಕಿಂತ ಮುಖ್ಯವಾಗಿ ಈ ಸಿನಿಮಾದ ಅದ್ಧೂರಿಯಾದ ಮೇಕಿಂಗ್ ಹೊಸ ಪ್ರಪಂಚಕ್ಕೆ ಕೊಂಡೊಯ್ಯುವುದಂತೂ ನಿಜ. ಈ ಸಿನಿಮಾ ಪೂರ್ತಿ ಡಾರ್ಕ್ ಶೇಡ್‌ನಲ್ಲಿ ರೂಪಗೊಂಡಿದ್ದು, ಕೆಲವು ಹಾರರ್ ಟಚ್ ಕೂಡ ನೀಡಲಾಗಿದೆ. ಈ ಸಿನಿಮಾದ ಆರ್ಟ್ ನಿರ್ದೇಶಕ ಶಿವಕುಮಾರ್, ಎಡಿಟರ್ ಆಶಿಕ್ ಕುಸುಗೊಳ್ಳಿ, ವಿಎಫ್‌ಎಕ್ಸ್ ನಿರ್ವಹಿಸಿದ ನಿರ್ಮಲ್ ಕುಮಾರ್, ಛಾಯಾಗ್ರಾಹಕ ವಿಲ್ಲಿಯಮ್ ಡೇವಿಡ್ ಹಾಗೂ ಟೆಕ್ನಿಕಲ್ ತಂಡ ಉತ್ತಮ ಕಾರ್ಯ ನಿರ್ವಹಿಸಿದ್ದಾರೆ. 3D ಎಫೆಕ್ಟ್‌ನಲ್ಲಿ ಈ ಸಿನಿಮಾವನ್ನು ನೋಡಿದರೆ ಯಾವುದೇ ಮೋಸ ಇಲ್ಲ.
ಸನ್ನಿವೇಶಕ್ಕೆ ಹೊಂದುವಂಥ ಹಿನ್ನೆಲೆ ಸಂಗೀತ ನೀಡಿದ ಅಜನೀಶ್ ಲೋಕನಾಥ್ ಅಭಿನಂದನಾರ್ಹ. ಕೆಲವೊಂದು ಒನ್ ಲೈನರ್ ಪಂಚಿಂಗ್ ಡೈಲಾಗ್ಸ್ ಕತ್ತಲಲ್ಲಿ ಆಗಾಗ ಕಾಣುವ ಬೆಳಕಿನಂತೆ.
ಕಿಚ್ಚ ಸುದೀಪ್ ಅಬ್ಬರ!
ವಿಕ್ರಾಂತ್ ರೋಣ ಪ್ರಪಂಚದಲ್ಲಿ ಕಂಡು ಬರುವ ಎಲ್ಲ ಪಾತ್ರಗಳೂ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ವಿಕ್ರಾಂತ್ ರೋಣ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸುದೀಪ್ ತಮ್ಮ ಅಭಿನಯದ ಮೂಲಕ ಅಭಿಮಾನಿಗಳಿಗೆ ಮನರಂಜನೆ ನೀಡುವಲ್ಲಿ ಸೋತಿಲ್ಲ. ನಿರೂಪ್ ಭಂಡಾರಿ ಅವರ ಸ್ಕ್ರೀನ್ ಪ್ರೆಸೆನ್ಸ್, ನೀತಾ ಅಶೋಕ್ ಅವರ ಅಭಿನಯ ಹಾಗೂ ಮಾತುಗಾರಿಕೆ ನೆನಪಿನಲ್ಲಿ ಉಳಿಯುವಂಥದ್ದು.
ಕಥೆಯೇ ಚಿತ್ರಕ್ಕೆ ಕೊರತೆಯಾಗಬಹುದೇ?
ಕನ್ನಡ ಚಿತ್ರರಂಗ ವಿಶ್ವಾದ್ಯಂತ ವ್ಯಾಪಿಸುತ್ತಿರುವುದು ಕನ್ನಡಿಗರಿಗೆ ಹೆಮ್ಮಯ ವಿಷಯವಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಕೆಜಿಎಫ್, ಚಾರ್ಲಿ ಸಿನಿಮಾಗಳಿಗೆ ವಿಶ್ವಾದ್ಯಂತ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈಗ ವಿಕ್ರಾಂತ್ ರೋಣ ಸಿನಿಮಾ ಕೂಡ ಅದೇ ಸಾಲಿಗೆ ಸೇರಿದೆ. ಈ ಸಿನಿಮಾ ವಿಶ್ವಾದ್ಯಂತ ಸದ್ದು ಮಾಡಬಹುದು. ಆದರೆ, ಕನ್ನಡಿಗರಿಗೆ ಇದೊಂದು ರಂಗಿತಂಗ ಸಿನಿಮಾದ ನೆರಳಿನಲ್ಲಿ ಬೆಳೆದಂತೆ ಕಾಣಬಹುದು.
ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಮತ್ತೊಂದು ಮುಖ್ಯ ಪಾತ್ರ ಲಾರೆನ್ಸ್ ಪಿಂಟೊ ಎಂಬುದು. ವಜ್ರಧೀರ್ ಜೈನ್ ಈ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಮತ್ತಷ್ಟು ಗಟ್ಟಿಗೊಳಿಸಬಹುದಿತ್ತು. ಕೆಲವು ಆಕ್ಷನ್ ಸೀನ್‌ಗಳು ಸಹಜತೆ ಹಾಗೂ ಅಬ್ಬರದ ನಡುವೆ ಎಲ್ಲೋ ಕಳೆದುಹೋದಂತಿವೆ. ಈ ಸಿನಿಮಾದ ನಿರೀಕ್ಷೆ ಇನ್ನೂ ಹೆಚ್ಚಿದ್ದು ಕತೆಯ ಮಟ್ಟಿಗೆ ಅ ನಿರೀಕ್ಷೆಯನ್ನು ಮುಟ್ಟಿದಂತೆ ಕಾಣುವುದಿಲ್ಲ. ಚಿತ್ರವನ್ನು ಕಥೆ ಮಾತ್ರವಲ್ಲ, ಮೇಕಿಂಗ್ ಹಾಗೂ ನಟನೆಗಾಗಿ ನೋಡುವ ಕಾಲಘಟ್ಟ ಇದು. ಹಾಗಾಗಿ ಕೆಲವು ಕೊರತೆಗಳಿದ್ದರೂ ಈ ಸಿನಿಮಾ ತನ್ನ ಗೌರವವನ್ನು ಕಾಪಾಡಿಕೊಂಡಿದೆ.
ಇದನ್ನೂ ಓದಿ | Movie Review | ರೋಚಕ ಪಯಣದ ಅನುಭವ ನೀಡುವ ವಿಂಡೋ ಸೀಟ್