ಈ ಬಾರಿ ಬಾಲಿವುಡ್ ನಟ ಆಮಿರ್ ಖಾನ್ ತಮ್ಮ ಮಹತ್ವಾಕಾಂಕ್ಷೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾ ಹೊರತರುವ ಮುನ್ನವೇ ವಿವಾದ ಅವರ ಬೆನ್ನು ಹತ್ತಿತ್ತು. ಟ್ವಿಟರ್‌ನಲ್ಲಿ ʼಬಾಯ್ಕಾಟ್ ಲಾಲ್ ಸಿಂಗ್ ಚಡ್ಡಾʼ ಎಂಬುದು ಟ್ರೆಂಡ್ ಆಗಿತ್ತು. ಭರ್ತಿ ನಾಲ್ಕು ವರ್ಷಗಳ ಬಳಿಕ ಅವರ ನಟನೆಯ ಸಿನಿಮಾ ಬೆಳ್ಳಿ ತೆರೆಗೆ ಬರುತ್ತಿದೆ. ಇದರಲ್ಲಿ ಆಮಿರ್ ನಾಯಕ, ಕರೀನಾ ಕಪೂರ್ ನಾಯಕಿ. ದಕ್ಷಿಣ ಭಾರತದ ನಟ ನಾಗಚೈತನ್ಯ ಕೂಡ ಇದರಲ್ಲಿದ್ದಾರೆ. ಅದ್ವೈತ್ ಚಂದನ್ ನಿರ್ದೇಶನ. ಹಾಲಿವುಡ್‌ನ ಟಾಮ್ ಹ್ಯಾಂಕ್ ನಟನೆಯ “ಫಾರೆಸ್ಟ್ ಗಂಪ್ʼ ಸಿನಿಮಾದ ಅಧಿಕೃತ ರಿಮೇಕ್ ಇದು.
ಕೆಲ ದಿನಗಳ ಹಿಂದೆ ಆಮಿರ್ ಮಾತನಾಡುತ್ತ ʼʼನಾನು ಭಾರತವನ್ನು ಇಷ್ಟಪಡುವವನಲ್ಲ ಎಂದು ಕೆಲವು ಭಾವಿಸಿದ್ದಾರೆ. ಆದರೆ ಅದು ನಿಜವಲ್ಲ. ನನ್ನ ಸಿನಿಮಾವನ್ನು ಬಹಿಷ್ಕರಿಸಬೇಡಿ, ನೋಡಿ ಎಂದು ಕೇಳಿಕೊಳ್ಳುತ್ತೇನೆʼʼ ಎಂದು ಮನವಿ ಮಾಡಿದ್ದರು. ಆಗಲೂ, ಬಾಯ್ಕಾಟ್ ಲಾಲ್ ಸಿಂಗ್ ಚಡ್ಡಾ ಟ್ರೆಂಡ್ ಇಷ್ಟೊಂದು ಪ್ರಮಾಣದಲ್ಲಿರಬಹುದು ಎಂದು ಐಡಿಯಾ ಅವರಿಗೆ ಇದ್ದಿರಲಿಕ್ಕಿಲ್ಲ ಅನಿಸುತ್ತದೆ. ಆದರೆ ಫಿಲಂ ಬಿಡುಗಡೆಯ ಹಿಂದಿನ ದಿನ ಅದರ ಬಿಸಿ ಮುಟ್ಟಿತೆಂದು ಕಾಣುತ್ತದೆ. ʼʼನಾನು ಕೈಮುಗಿದು ದೇವರ ಮುಂದೆ ನಿಂತಿದ್ದೇನೆ. ನನ್ನ ವೀಕ್ಷಕರ ಬಗ್ಗೆ ನನಗೆ ವಿಶ್ವಾಸವಿದೆ. ನಾನು ಯಾರ ಭಾವನೆಗಳಿಗಾದರೂ ತಿಳಿಯದೆ ನೋವುಂಟು ಮಾಡಿದ್ದರೆ ಅದಕ್ಕಾಗಿ ವಿಷಾದಿಸುತ್ತೇನೆ. ನಾನು ಯಾರನ್ನೂ ನೋಯಿಸಬಯಸುವುದಿಲ್ಲ. ನನ್ನ ಸಿನಿಮಾ ನೋಡಲು ಇಷ್ಟಪಡದವರು ಇದ್ದರೆ, ಅವರ ಅಭಿಪ್ರಾಯವನ್ನು ನಾನು ಗೌರವಿಸುತ್ತೇನೆʼʼ ಎಂದಿದ್ದರು. ʼʼಸಿನಿಮಾದಲ್ಲಿ ನಾನೊಬ್ಬನೇ ಇರುವುದಲ್ಲ. ನೂರಾರು ಜನ ಅದಕ್ಕಾಗಿ ಶ್ರಮ ಹಾಕಿದ್ದಾರೆ. ಜನ ಇಷ್ಟಪಡಬಹುದು ಎಂದುಕೊಂಡಿದ್ದೇನೆʼʼ ಎಂದಿದ್ದರು.
ಲಾಲ್ ಸಿಂಗ್ ಚಡ್ಡಾ ಬಹಿಷ್ಕಾರಕ್ಕೆ ಕಾರಣವೇನು?
ಲಾಲ್ ಸಿಂಗ್ ಚಡ್ಡಾ ಸಿನಿಮಾವನ್ನು ಬಹಿಷ್ಕರಿಸುತ್ತಿರುವವರ ಮನದಲ್ಲಿ ಆಮಿರ್ ಖಾನ್ ಅವರ ಈ ಹಿಂದಿನ ಕೆಲವು ವರ್ತನೆಗಳ ಬಗ್ಗೆ ಕೋಪವಿದೆ. ಮುಖ್ಯವಾಗಿ ʼʼಈ ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆʼʼ ಎಂದದ್ದು. ಇದಲ್ಲದೇ ಈ ಹಿಂದಿನ ಹಲವು ಸಂದರ್ಭಗಳಲ್ಲಿ ಆಮಿರ್ ತೋರಿದ ವರ್ತನೆಯನ್ನೂ ಈಗ ಮುನ್ನೆಲೆಗೆ ತರಲಾಗಿದ್ದು, ಇದೆಲ್ಲವೂ ಕ್ರೋಡೀಕರಿಸಿ ಈಗ ʼಬಾಯ್ಕಾಟ್ ಲಾಲ್‌ಸಿಂಗ್ ಚಡ್ಡಾʼ ರೂಪ ಪಡೆದಿದೆ.
ಲಾಲ್ ಸಿಂಗ್ ಚಡ್ಡಾ ಚಿತ್ರದಲ್ಲಿ ಆಮಿರ್ ಖಾನ್ ಕಡಿಮೆ ಐಕ್ಯೂ ಹೊಂದಿರುವ ವ್ಯಕ್ತಿಯ ಪಾತ್ರದಲ್ಲಿ ನಟಿಸಿದ್ದಾರೆ. ಇಂಥ ಲಾಲ್ ಸಿಂಗ್ ಪಾತ್ರದ ಮೂಲಕ ಸಿಖ್ ಸಮುದಾಯವನ್ನು ಅವಹೇಳನ ಮಾಡಿದ್ದಾರೆ. ಹಾಗೂ ಇಂಥ ವ್ಯಕ್ತಿ ಭಾರತೀಯ ಸೈನ್ಯಕ್ಕೆ ಸೇರುವಂತೆ ಚಿತ್ರಿಸುವ ಮೂಲಕ, ಸೈನ್ಯಕ್ಕೂ ಅವಮಾನ ಮಾಡಲಾಗಿದೆ ಎಂದು ಈ ಬಾಯ್ಕಾಟ್ ಪಡೆ ಹೇಳುತ್ತಿದೆ.
ಅಸಹಿಷ್ಣುತೆ ಹೇಳಿಕೆ
2014ರಲ್ಲಿ ಮೋದಿ ಪ್ರಧಾನಿಯಾದರು ಹಾಗೂ 2015ರಲ್ಲಿ ಗೋಮಾಂಸದ ಹಿನ್ನೆಲೆಯಲ್ಲಿ ಕೆಲವು ಲಿಂಚಿಂಗ್ ಪ್ರಕರಣಗಳು ನಡೆದವು ಈ ಸಂದರ್ಭದಲ್ಲಿ, ಒಂದು ಸಂದರ್ಶನದಲ್ಲಿ ಆಮಿರ್ ಖಾನ್ ಮಾತನಾಡುತ್ತ ʼʼದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ನನಗೆ ಅನಿಸುತ್ತಿದೆ. ನಮ್ಮ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ನಾವು ಈ ದೇಶ ತೊರೆಯುಬೇಕೆಂದು ನಿನಗೆ ಅನಿಸುತ್ತದೆಯೇ ಎಂದು ನನ್ನ ಪತ್ನಿ ಕಿರಣ್ ರಾವ್ ಕೇಳಿದ್ದಳುʼʼ ಎಂದು ಹೇಳಿದ್ದರು. ಇದರಿಂದ ಆಮಿರ್ ಬಗ್ಗೆ ಸಿಟ್ಟಿನ ಅಲೆಗಳು ದೇಶದಲ್ಲಿ ಎದ್ದಿದ್ದವು.
ಈ ಸಂದರ್ಭದಲ್ಲಿ ಆಮಿರ್ ಅವರು ಇ- ಕಾಮರ್ಸ್ ಸ್ನ್ಯಾಪ್‌ಡೀಲ್‌ನ ಬ್ರಾಂಡ್ ರಾಯಭಾರಿ ಆಗಿದ್ದರು. ನೆಟಿಜನ್‌ಗಳ ಸಿಟ್ಟು ಸ್ನ್ಯಾಪ್‌ಡೀಲ್ ಆ್ಯಪ್‌ನ ವಿರುದ್ಧ ತಿರುಗಿತ್ತು. ಸ್ನ್ಯಾಪ್‌ಡೀಲನ್ನು ಬಹಿಷ್ಕರಿಸುವ ಅಭಿಯಾನ ನಡೆಯಿತು. ಗೂಗಲ್ ಪ್ಲೇಸ್ಟೋರ್‌ನಲ್ಲಿ ಭಾರಿ ಹಿನ್ನಡೆ ಅನುಭವಿಸಿದ ಸ್ನ್ಯಾಪ್‌ಡೀಲ್, ಮೂರು ತಿಂಗಳಲ್ಲಿ ಆಮಿರ್ ಅವರನ್ನು ತನ್ನ ಕಾಂಟ್ರಾಕ್ಟ್‌ನಿಂದ ಕೈಬಿಟ್ಟಿತ್ತು.
ಪಿಕೆ ಸಿನಿಮಾ ವಿವಾದ
ಆಮಿರ್ ಖಾನ್ ವಿರುದ್ಧ ಇನ್ನಷ್ಟು ವಿವಾದದ ಬಿಸಿ ಸೃಷ್ಟಿಸಿದ ಸಿನಿಮಾ ಪಿಕೆ. ಇದರಲ್ಲಿ ಆಮಿರ್ ಖಾನ್ ಏಲಿಯನ್ ಆಗಿ ನಟಿಸಿದ್ದರು. ಸಿನಿಮಾದಲ್ಲಿ ಹಿಂದೂ ಧಾರ್ಮಿಕ ತಾಣಗಳಿಗೆ ನುಗ್ಗಿ ಅಲ್ಲಿನ ಆಚರಣೆಗಳನ್ನು ಪ್ರಶ್ನಿಸುವ, ಶಿವ ಮುಂತಾದ ದೇವತೆಗಳನ್ನು ಗೇಲಿ ಮಾಡುವ ಕೆಲವು ಚಿತ್ರಣಗಳನ್ನು ತೋರಿಸಲಾಗಿತ್ತು. ಇದರಿಂದ ರೊಚ್ಚಿಗೆದ್ದ ಹಿಂದೂಪರ ಸಂಘಟನೆಗಳವರು ಪಿಕೆ ಸಿನಿಮಾದ ವಿರುದ್ಧ ಅಭಿಯಾನ ನಡೆಸಿದ್ದರು.
ಇನ್ನು ಪಿಕೆ ಸಿನಿಮಾದ ಪೋಸ್ಟರ್‌ನಲ್ಲಿ ಕೇವಲ ಒಂದು ರೇಡಿಯೋದ ಮೂಲಕ ಮಾನ ಮುಚ್ಚಿಕೊಂಡಿದ್ದ ಆಮಿರ್ ಫೋಟೋ ಕೂಡ ʼಅಶ್ಲೀಲತೆʼಯ ಕೂಗನ್ನು ಎಬ್ಬಿಸಿತ್ತು. ಕೆಲವರು ಕೋರ್ಟಿಗೂ ಹೋಗಿದ್ದರು. ಆದರೆ ಕೋರ್ಟ್ ಇದರಲ್ಲಿ ಮಧ್ಯ ಪ್ರವೇಶಿಸಲು ನಿರಾಕರಿಸಿತ್ತು.
ಸೆಲ್ಯೂಟ್ ಮಾಡಲು ನಿರಾಕರಿಸಿದರೇ?
ಇತ್ತೀಚೆಗೆ ಹೊಸದೊಂದು ವಿವಾದವೊಂದು ಆಮರ್ ಕೊರಳಿಗೆ ಸುತ್ತಿಕೊಳ್ಳತೊಡಗಿದೆ. ಇದು ʼಕೌನ್ ಬನೇಗಾ ಕರೋಡ್‌ಪತಿʼ ಕಾರ್ಯಕ್ರಮದ ಒಂದು ಎಪಿಸೋಡ್‌ಗೆ ಸಂಬಂಧಿಸಿದ್ದು. ಇದರಲ್ಲಿ ಕರ್ನಲ್ ಮಿಥಾಲಿ ಮಧುಮಿತಾ ಹಾಗೂ ಆಮಿರ್ ಖಾನ್ ಅತಿಥಿಗಳಾಗಿದ್ದರು. ಗುಂಡಿನ ಚಕಮಕಿಯ ನಡುವೆ ಜನರನ್ನು ರಕ್ಷಿಸಿದ ತಮ್ಮ ಕತೆಯನ್ನು ಮಿಥಾಲಿ ಹೇಳಿಕೊಂಡರು. ಆಗ ಅಮಿತಾಭ್ ಬಚ್ಚನ್ ಅವರು ʼʼನಾವೆಲ್ಲರೂ ಇವರಿಗೆ ಎದ್ದುನಿಂತು ಸೆಲ್ಯೂಟ್ ಸಲ್ಲಿಸೋಣʼʼ ಎಂದರು. ಹಿನ್ನೆಲೆಯಲ್ಲಿ ವಂದೇಮಾತರಂ ನುಡಿಸುತ್ತಿರುವಂತೆ ಎಲ್ಲರೂ ಎದ್ದುನಿಂತು ಸೆಲ್ಯೂಟ್ ನೀಡಿದರು.
ಈ ವಿಡಿಯೋದಲ್ಲಿ ಆಮಿರ್ ಖಾನ್ ಅವರ ಒಂದು ಮಗ್ಗುಲಿನ ನೋಟವನ್ನು ಮಾತ್ರ ತೋರಿಸುತ್ತಿದ್ದು, ಆಮಿರ್ ಇದರಲ್ಲಿ ಸೆಲ್ಯೂಟ್ ಹೊಡೆದದ್ದು ಕಾಣಿಸುವುದಿಲ್ಲ. ಈ ಕುರಿತು ಪತ್ರಕರ್ತರೊಬ್ಬರು ಪ್ರಶ್ನಿಸಿದಾಗ, ʼʼನನಗೆ ಈ ಘಟನೆ ನೆನಪಾಗುತ್ತಿಲ್ಲʼʼ ಎಂದು ಆಮಿರ್ ಹೇಳಿದ್ದರು. ಪ್ರಸ್ತುತ ಬಾಯ್ಕಾಟ್ ಪಡೆ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು, ʼʼಆಮಿರ್ ಖಾನ್‌ಗೆ ದೇಶದ ಬಗ್ಗೆ, ಸೈನಿಕರ ಬಗ್ಗೆ ಗೌರವವಿಲ್ಲʼʼ ಎಂದು ಟ್ರೋಲ್ ಮಾಡುತ್ತಿದೆ.
ಟರ್ಕಿಯ ಲೇಡಿಯ ಭೇಟಿ
2020ರಲ್ಲಿ ಟರ್ಕಿಯಲ್ಲಿ ಶೂಟಿಂಗ್ ನಿರತರಾಗಿದ್ದ ಆಮಿರ್ ಖಾನ್, ಅಲ್ಲಿನ ಫಸ್ಟ್ ಲೇಡಿ ಎಮಿನೆ ಎರ್ದೋಗನ್ ಅವರನ್ನು ಭೇಟಿಯಾದರು. ಈ ಚಿತ್ರ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತು. ಇದೇ ಹೊತ್ತಿಗೆ, ಅಲ್ಲಿನ ಅಧ್ಯಕ್ಷ ತಯ್ಯಪ್ ಎರ್ದೋಗನ್ ಅವರು ಭಾರತ- ವಿರೋಧಿ ನಿಲುವುಗಳಲ್ಲಿ ಮಗ್ನರಾಗಿದ್ದರು. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪಾಕಿಸ್ತಾನವನ್ನು ಬೆಂಬಲಿಸುತ್ತಿದ್ದರು. ʼʼಈ ಭೇಟಿಯ ಮೂಲಕ ಆಮಿರ್ ಪಾಕ್ ಪರ, ಭಾರತ ವಿರೋಧಿ ಎಂಬುದು ರುಜುವಾತಾಗಿದೆʼʼ ಎಂದು ಟ್ರೋಲ್ ಪಡೆ ಕಟುವಾಗಿ ಟೀಕಿಸಿತು.
ಫನಾ ನಿಷೇಧ
ಹಾಗೆ ನೋಡಿದರೆ ಆಮಿರ್ ಅವರ ಹೆಚ್ಚಿನ ಸಿನಿಮಾಗಳು ಬಂದಾಗಲೂ ವಿವಾದ ಎಬ್ಬಿಸಿರುವುದು ಕಾಣಿಸುತ್ತದೆ. ʼಫನಾʼ ಫಿಲಂನಲ್ಲಿ ಆಮಿರ್ ಖಾನ್ ಅವರು ಉಗ್ರಗಾಮಿಯೊಬ್ಬನ ಪಾತ್ರ ನಿರ್ವಹಿಸಿದ್ದರು. 2006ರಲ್ಲಿ ಇದು ಬಂತು. ಅದೇ ಸಂದರ್ಭದಲ್ಲಿ ಆಮರ್ ಅವರು ನರ್ಮದಾ ಬಚಾವೊ ಆಂದೋಲನದಲ್ಲಿ ಭಾಗವಹಿಸಿದ್ದರು. ಮೇಧಾ ಪಾಟ್ಕರ್ ಅವರ ಪರ, ಗುಜರಾತಿನ ಆಗಿನ ಮುಖ್ಯಮಂತ್ರಿ ಮೋದಿ ಆಡಳಿತದ ವಿರುದ್ಧ ಟೀಕೆ ಮಾಡಿದ್ದರು. ಇದನ್ನನುಸರಿಸಿ ಗುಜರಾತ್‌ನಲ್ಲಿ ʼಫನಾʼ ಸಿನಿಮಾವನ್ನು ನಿಷೇಧಿಸಲಾಯಿತು.
ರಂಗ್ ದೇ ಬಸಂತಿ ವಿವಾದ
ʼರಂಗ್ ದೇ ಬಸಂತಿʼ ಸಿನಿಮಾವು, ಮೃತ ಇಂಡಿಯನ್ ಏರ್‌ಫೋರ್ಸ್ ಪೈಲಟ್ ಅಭಿಜಿತ್ ಗಾಡ್ಗೀಳ್ ಅವರ ಜೀವನ ಕತೆಯನ್ನು ಸ್ಥೂಲವಾಗಿ ಆಧರಿಸಿತ್ತು. ಆದರೆ ಈ ಚಿತ್ರವನ್ನು ತಮಗೆ ಮೊದಲೇ ತೋರಿಸಲಿಲ್ಲ ಎಂದು ಗಾಡ್ಗೀಳ್ ಅವರ ತಾಯಿ ಕವಿತಾ ಗಾಡ್ಗೀಳ್ ಅವರು ವಿವಾದ ಎಬ್ಬಿಸಿದ್ದರು. ವಾಯುಪಡೆಯನ್ನು ಕೂಡ ಕೆಟ್ಟದಾಗಿ ಚಿತ್ರಿಸಲಾಗಿದೆ ಎಂದು ಕೂಡ ಕೆಲವರು ದೂರಿದ್ದರು. ಇನ್ನು ʼತ್ರಿ ಈಡಿಯಟ್ಸ್ʼ ಬಂದಾಗ, ತಮಗೆ ಕ್ರೆಡಿಟ್ ಕೊಡಲಿಲ್ಲ ಎಂದು ಚಿತ್ರದ ಮೂಲಕತೆಗಾರ ಚೇತನ್ ಭಗತ್ ಹೇಳಿದ್ದರು.