Site icon Vistara News

ವಾರದ ವ್ಯಕ್ತಿಚಿತ್ರ | ಧೈರ್ಯ, ಹುಂಬತನ, ಹುಮ್ಮಸ್ಸು, ಇದೇ ಎಲಾನ್‌ ಮಸ್ಕ್‌ ವರ್ಚಸ್ಸು

Elon Musk

ಬಿ. ಸೋಮಶೇಖರ್‌, ಬೆಂಗಳೂರು

“ಜನ ನಿಮ್ಮನ್ನು ಹುಂಬ, ಹುಚ್ಚ ಎಂದು ಕರೆಯುತ್ತಿಲ್ಲ ಎಂದರೆ ನಿಮ್ಮ ಕನಸು ಬಾವಿಯೊಳಗಿನ ಕಪ್ಪೆಯಷ್ಟೇ ಇದೆ ಅಂತ ಅರ್ಥ” ಎನ್ನುತ್ತಾರೆ ವರ್ಜಿನ್‌ ಸಂಸ್ಥೆ ಮುಖ್ಯಸ್ಥ ರಿಚರ್ಡ್‌ ಬ್ರಾನ್ಸನ್‌. “ಕಲಿಯುವುದಕ್ಕೆ ಹಂಬಲವಿರಲಿ, ರಿಸ್ಕ್‌ ತೆಗೆದುಕೊಳ್ಳಿ, ಬೇರೆಯವರು ಮಾಡಲು ಆಗುವುದಿಲ್ಲ ಎಂದು ಬಿಟ್ಟಿದ್ದನ್ನು ನೀವು ಮಾಡಿ ತೋರಿಸಿ. ಜಗತ್ತನ್ನು ಬದಲಾಯಿಸುತ್ತೇನೆ ಎಂಬ ಹುಚ್ಚುತನ ಯಾರಿಗೆ ಇರುತ್ತದೆಯೋ, ಅವರು ಮಾತ್ರ ಪ್ರಪಂಚವನ್ನು ಬದಲಾಯಿಸಬಲ್ಲರು” ಎಂಬುದು ಆ್ಯಪಲ್‌ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಸ್ಟೀವ್‌ ಜಾಬ್ಸ್‌ ಅವರ ಉಕ್ತಿಯಾಗಿದೆ.

ಸಾಮಾನ್ಯ ಜನರಿಗೆ ಇಂತಹ ಮಾತುಗಳೆಲ್ಲ ದೊಡ್ಡವರ ‘ಬಡಾಯಿ’ ಎನಿಸಿಕೊಳ್ಳುತ್ತವೆ. ಇನ್ನೂ ಕೆಲವರಿಗೆ ಕ್ಷಣ ಮಾತ್ರಕ್ಕೆ ಸ್ಫೂರ್ತಿ ನೀಡುತ್ತವೆ. ಆದರೆ, ಸಾಮಾನ್ಯನಾಗಿದ್ದೂ ಅಸಾಮಾನ್ಯವಾದುದನ್ನು ಸಾಧಿಸಿದವರಿಗೆ ಇಂತಹ ಮಾತುಗಳ ಅರ್ಥ ಆಗುತ್ತದೆ. ಅಷ್ಟಕ್ಕೂ ಹುಚ್ಚು, ಹುಂಬತನ, ಏನನ್ನಾದರೂ ಮಾಡುತ್ತೇನೆ ಎಂಬ ಛಲ, ಒಂದಷ್ಟು ಒಣ ಜಂಭ ಇರದೆ ಯಾರೂ ಸಾಧಿಸಲು ಆಗುವುದಿಲ್ಲ. ಇದಕ್ಕೆ ಇದುವರೆಗಿನ ಸಾಧಕರ ಜೀವನಗಾಥೆಯೇ ಸಾಕ್ಷಿಯಾಗಿದೆ.

ಟೆಸ್ಲಾ ಕಂಪನಿ ಸಿಇಒ ಎಲಾನ್‌ ಮಸ್ಕ್‌ ಅವರು ಕಳೆದ ಏಪ್ರಿಲ್‌ನಲ್ಲಿ ಟ್ವಿಟರ್‌ನ ಶೇ.9.2ರಷ್ಟು ಷೇರುಗಳನ್ನು ಖರೀದಿಸಿದ ಬಳಿಕ ಆಗ ಟ್ವಿಟರ್‌ ಸಿಇಒ ಪರಾಗ್‌ ಅಗ್ರವಾಲ್‌ ಅವರು “ನಾನು ಟ್ವಿಟರ್‌ ಮಂಡಳಿಯನ್ನು ಸೇರುವುದಿಲ್ಲ” ಎಂದು ಹೇಳಿದರು. ಮಸ್ಕ್‌ ವಿರುದ್ಧ ಮಂಡಳಿಯ ಕೆಲ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಆಗ ಮಸ್ಕ್‌ ಅವರಿಗೆ ಏನು ಅನಿಸಿತೋ ಏನೋ, “ನಾನು ಟ್ವಿಟರ್‌ಅನ್ನು ಖರೀದಿಸುತ್ತೇನೆ” ಎಂದರು. ಆಗ ಮಸ್ಕ್‌ ಅವರನ್ನು ಹುಂಬ, ಹುಚ್ಚ, ದಡ್ಡ, “ಸಾವಿರಾರು ಕೋಟಿ ರೂ. ವ್ಯಯಿಸಿ ಟ್ವಿಟರ್‌ ಖರೀದಿಸುವ ಬದಲು ಪ್ಲೇಸ್ಟೋರ್‌ನಲ್ಲಿ ಇನ್‌ಸ್ಟಾಲ್‌ ಮಾಡಿಕೊ” ಎಂದೆಲ್ಲ ವ್ಯಂಗ್ಯ ಮಾಡಿದರು. ಆದರೆ, ಈಗ ಟ್ವಿಟರ್‌ ಮಸ್ಕ್‌ ವಶವಾಗಿದೆ. ಸಿಇಒ ಪರಾಗ್‌ ಅಗ್ರವಾಲ್‌ ಅವರನ್ನು ವಜಾಗೊಳಿಸಿ, ತಾವೇ ಆ ಹುದ್ದೆ ಅಲಂಕರಿಸಲು ಸಿದ್ಧರಾಗಿದ್ದಾರೆ. ಅಷ್ಟರಮಟ್ಟಿಗೆ ಮಸ್ಕ್‌ ಹುಂಬತನ ಗೆದ್ದಿದೆ. ಇದೇ ಕಾರಣಕ್ಕೆ ಎಲಾನ್‌ ಮಸ್ಕ್‌ ಅವರ ಬಗ್ಗೆ ತಿಳಿದುಕೊಳ್ಳಬೇಕು ಎಂಬ ಕುತೂಹಲ ಮೂಡುತ್ತದೆ.

ದಕ್ಷಿಣ ಆಫ್ರಿಕಾದಲ್ಲಿ ಜನನ, ಬದುಕು ಕರೆದಲ್ಲಿಗೆ ಪಯಣ

ಟ್ವಿಟರ್‌ಅನ್ನು ಅನಿರೀಕ್ಷಿತವಾಗಿ ಖರೀದಿಸಿದಂತೆಯೇ ಎಲಾನ್‌ ಮಸ್ಕ್‌ ಅವರ ಜೀವನವೂ ಹತ್ತಾರು ಅನಿರೀಕ್ಷಿತ ತಿರುವುಗಳಿಂದ ಕೂಡಿದೆ. ದಕ್ಷಿಣ ಆಫ್ರಿಕಾದ ಪ್ರಿಟೋರಿಯಾದಲ್ಲಿ 1971ರಂದು ಜನಿಸಿದ ಅವರು ಅಮೆರಿಕಕ್ಕೆ ಬಂದು ನೆಲೆನಿಂತಿದ್ದು ಅನಿರೀಕ್ಷಿತ ಬೆಳವಣಿಗೆಯಾಗಿದೆ. ತಂದೆ ಎಂಜಿನಿಯರ್‌, ತಾಯಿ ರೂಪದರ್ಶಿ ಆಗಿದ್ದರು. ಮಸ್ಕ್‌ ಬಾಲ್ಯವು ಚೆನ್ನಾಗಿಯೇ ಇತ್ತು. ಆದರೆ, 1980ರಲ್ಲಿ ತಂದೆ-ತಾಯಿ ವಿಚ್ಛೇದನ ಬಳಿಕ ಮಸ್ಕ್‌ ಜೀವನ ಹಲವು ತಿರುವುಗಳಿಗೆ ತೆರೆದುಕೊಂಡಿತು. ತಂದೆಯ ಆಶ್ರಯದಲ್ಲಿದ್ದರೂ ಮಸ್ಕ್‌ ಅವರಿಗೆ ಉತ್ತಮ ಪೋಷಣೆ ದೊರೆಯಲಿಲ್ಲ. ಅಲ್ಲದೆ, ದಕ್ಷಿಣ ಆಫ್ರಿಕಾದಲ್ಲಿ ಕಡ್ಡಾಯವಾಗಿ ಸೇನೆಯಲ್ಲಿ ಸೇವೆ ಸಲ್ಲಿಸಬೇಕು ಎಂಬ ನಿಯಮ ಇದ್ದ ಕಾರಣ ಮಹತ್ವಾಕಾಂಕ್ಷೆಯನ್ನು ಹೊತ್ತು ಮಸ್ಕ್‌ 17ನೇ ವಯಸ್ಸಿನಲ್ಲಿಯೇ ಹುಟ್ಟಿದ ದೇಶ ತೊರೆದು, ಕೆನಡಾಗೆ ತೆರಳಿದರು. ತಾಯಿಯ ನೆರವಿನಿಂದ ಕೆನಡಾ ವೀಸಾ ಪಡೆದು, ಕ್ವೀನ್ಸ್‌ ವಿಶ್ವವಿದ್ಯಾಲಯ ಸೇರಿದರು. ಕೆನಡಾದಲ್ಲಿಯೂ ತುಂಬ ದಿನ ಇರದ ಮಸ್ಕ್‌, ಎರಡು ವರ್ಷಗಳ ಬಳಿಕ ಅಮೆರಿಕದ ಪೆನ್ಸಿಲ್ವೇನಿಯಾ ವಿವಿಗೆ ವರ್ಗಾವಣೆ ಪಡೆದರು. ಅಲ್ಲಿಂದಲೂ ಮಸ್ಕ್‌ ಜೀವನದಲ್ಲಿ ಹಲವು ತಿರುವುಗಳು ಎದುರಾದವು.

ಪಿಎಚ್‌.ಡಿಗೆ ಬೈ, ಸಾಫ್ಟ್‌ವೇರ್‌ಗೆ ಜೈ

ಪೆನ್ಸಿಲ್ವೇನಿಯಾ ವಿವಿಯಲ್ಲಿ ಭೌತಶಾಸ್ತ್ರದಲ್ಲಿ ಪದವಿ ಪಡೆದ ಮಸ್ಕ್‌ ತಮ್ಮ 24ನೇ ವಯಸ್ಸಿನಲ್ಲಿ ಪಿಎಚ್‌.ಡಿ ಅಧ್ಯಯನಕ್ಕಾಗಿ ಕ್ಯಾಲಿಫೋರ್ನಿಯಾ ವಿವಿಗೆ ತೆರಳಿದರು. ಭೌತಶಾಸ್ತ್ರ ನೆಚ್ಚಿನ ವಿಷಯ ಎಂಬ ಕಾರಣಕ್ಕಾಗಿಯೇ ಅವರು ಕ್ಯಾಲಿಫೋರ್ನಿಯಾ ವಿವಿಗೆ ತೆರಳಿದರು. ಆದರೆ, ಒಳಮನಸ್ಸು ಬೇರೆಯದ್ದೇ ಹೇಳುತ್ತಿತ್ತು. 10ನೇ ವಯಸ್ಸಿಗೆ ಕಂಪ್ಯೂಟರ್‌ ಕಲಿತು, 12 ವಯಸ್ಸಿಗೆ ವಿಡಿಯೊ ಗೇಮ್‌ ಅಭಿವೃದ್ಧಿಪಡಿಸಿ, ಅದನ್ನು ‘ಪಿಸಿ ಮ್ಯಾಗಜಿನ್‌’ಗೆ 500 ಡಾಲರ್‌ಗೆ ಮಾರಾಟ ಮಾಡಿದ ಮಸ್ಕ್‌ ಮನಸ್ಸು ಸಾಫ್ಟ್‌ವೇರ್‌ನತ್ತ ಸೆಳೆಯಿತು. ಹಾಗಾಗಿ, ಅವರು ಪಿಎಚ್‌.ಡಿ ಅಧ್ಯಯನ ತೊರೆದು, 1995ರಲ್ಲಿ 15 ಸಾವಿರ ಡಾಲರ್‌ ಹೂಡಿಕೆ ಮಾಡಿ, ಜಿಪ್‌2 (Zip2) ಎಂಬ ಸಾಫ್ಟ್‌ವೇರ್‌ ಕಂಪನಿ ಆರಂಭಿಸಿದರು. ಇದು ಮಸ್ಕ್‌ ಜೀವನವನ್ನೇ ಬದಲಾಯಿಸಿತು.

ಮಸ್ಕ್‌ ಏಳಿಗೆ ಮಸ್ತ್‌

ಮಾರುಕಟ್ಟೆಯ ಆಳ-ಅಗಲ ಅರಿತ ಮಸ್ಕ್‌ ಚಾಣಾಕ್ಷ ನಡೆ ಅನುಸರಿಸಿದರು. ಕಾಂಪ್ಯಾಕ್‌ ಕಂಪ್ಯೂಟರ್‌ ಕಾರ್ಪ್‌ಗೆ ಜಿಪ್‌2ಅನ್ನು 341 ದಶಲಕ್ಷ ಡಾಲರ್‌ಗೆ ಮಾರಾಟ ಮಾಡಿದರು. ಇದರ ಹಣದಲ್ಲಿ ಎಕ್ಸ್‌.ಕಾಮ್‌ (X.com) ಸಂಸ್ಥೆ ಹುಟ್ಟುಹಾಕಿದರು. ಇದಾದ ಬಳಿಕ ಎಕ್ಸ್‌.ಕಾಮ್‌ಅನ್ನು ಕನ್ಫಿನಿಟಿ ಎಂಬ ಕಂಪನಿ ಜತೆ ವಿಲೀನಗೊಳಿಸಿದರು. ಇದೇ ಮುಂದೆ ಪೇಪಾಲ್‌ (PayPal) ಆಗಿ ಹೊರಹೊಮ್ಮಿತು. ಅಲ್ಲದೆ, ಪೇಪಾಲ್‌ ಕಂಪನಿಗೆ ಮಸ್ಕ್‌ ಸಿಇಒ ಕೂಡ ಆದರು. ಕಂಪನಿಯ ಶೇ.11.7ರಷ್ಟು ಷೇರುಗಳು ಮಸ್ಕ್‌ ಪಾಲಾಗಿದ್ದವು. ಮಸ್ಕ್‌ ಅದಾಗಲೇ ಶ್ರೀಮಂತರಾಗಿದ್ದರು. ತಲೆಯಲ್ಲಿ ಸಾವಿರಾರು ಐಡಿಯಾಗಳು, ಯೋಜನೆಗಳು ಮೊಳೆದಿದ್ದವು.

ಟೆಸ್ಲಾ ಪ್ರವೇಶ, ವಿಶ್ವದ ಮೊದಲ ಎಲೆಕ್ಟ್ರಿಕ್‌ ಕಾರು ಉತ್ಪಾದನೆ

2004ರಲ್ಲಿಯೇ ಮಸ್ಕ್‌ ತಲೆಯಲ್ಲಿ ವಿದ್ಯುತ್‌ಚಾಲಿತ ವಾಹನಗಳ ಬಗ್ಗೆ ಕನಸು ಟಿಸಿಲೊಡೆದಿತ್ತು. ವಿಶ್ವದ ಮೊದಲ ಎಲೆಕ್ಟ್ರಿಕ್‌ ವಾಹನ ಅಭಿವೃದ್ಧಿಪಡಿಸಲು ಅವರು ಮಾರ್ಟಿನ್‌ ಎಬರ್‌ಹಾರ್ಡ್‌ ಹಾಗೂ ಮಾರ್ಕ್‌ ಟಾರ್ಪನಿಂಗ್‌ ಸೇರಿದರು. ಟೆಸ್ಲಾ ಮೋಟರ್ಸ್‌ನಿಂದ ಜಗತ್ತಿನ ಮೊದಲ ಎಲೆಕ್ಟ್ರಿಕ್‌ ಕಾರು ತಯಾರಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದರು. ಆದರೆ, 2007ರಲ್ಲಿ ಮಸ್ಕ್‌ ಅವರನ್ನು ಎಬರ್‌ಹಾರ್ಡ್‌ ಕೆಲಸದಿಂದ ವಜಾಗೊಳಿಸಿತ್ತು. ಆದರೇನಂತೆ, ಇದೇ ವರ್ಷ ಮಸ್ಕ್‌ ಟೆಸ್ಲಾ ಸಿಇಒ ಆದರು. ಇವರ ನಾಯಕತ್ವದಲ್ಲಿ ಟೆಸ್ಟಾ ಜಗತ್ತಿನ ಪ್ರಮುಖ ಆಟೋಮೊಬೈಲ್‌ ಕಂಪನಿಯಾಗಿ ರೂಪುಗೊಂಡಿತ್ತು. ಹತ್ತಾರು ಕ್ಷೇತ್ರಗಳ ಬಗ್ಗೆ ಒಲವಿದ್ದ ಮಸ್ಕ್‌, ಸ್ಪೇಸ್‌ಎಕ್ಸ್‌, ಸೋಲಾರ್‌ಸಿಟಿಯಂತಹ ಕಂಪನಿಗಳನ್ನು ಸ್ಥಾಪಿಸಿದರು. ರಿಸ್ಕ್‌ ತೆಗೆದುಕೊಳ್ಳುವುದೇ ಮೂಲದ್ರವ್ಯವನ್ನಾಗಿಸಿಕೊಂಡ ಅವರು ಈಗ ಆರು ಕಂಪನಿಗಳ ಮೇಲೆ ಪ್ರಾಬಲ್ಯ ಹೊಂದಿದ್ದಾರೆ. ಎಲೆಕ್ಟ್ರಿಕ್‌ ಕಾರು ಉತ್ಪಾದಿಸುವ ಟೆಸ್ಲಾ, ರಾಕೆಟ್‌ ಉತ್ಪಾದನಾ ಕಂಪನಿ ಸ್ಪೇಸ್‌ಎಕ್ಸ್‌ (Space X), ಸಂಚಾರ ದಟ್ಟಣೆ ನಿಯಂತ್ರಿಸುವ ದಿಸೆಯಲ್ಲಿ ಹಾಗೂ ಸುರಂಗಗಳನ್ನು ಕೊರೆಯಲು ಸ್ಥಾಪಿಸಿದ ನವೋದ್ಯಮವಾದ ಬೋರಿಂಗ್‌ ಕಂಪನಿ, ನ್ಯೂರಾಲಿಂಕ್‌ ಈಗ ಟ್ವಿಟರ್‌ ಸೇರಿ ಆರು ಕಂಪನಿಗಳು ಎಲಾನ್‌ ಮಸ್ಕ್‌ ಸುಪರ್ದಿಯಲ್ಲಿವೆ.

ಹಲವು ಸಂಬಂಧ, ಹತ್ತು ಮಕ್ಕಳ ತಂದೆ

ಎಲಾನ್‌ ಮಸ್ಕ್‌ ಅವರ ವೈಯಕ್ತಿಕ ಜೀವನವೂ ರೋಚಕತೆಯಿಂದ ಕೂಡಿದೆ. ಕೆನಡಾ ವಿವಿಯಲ್ಲಿ ಓದುವಾಗಲೇ ಮಸ್ಕ್‌ಗೆ ಜಸ್ಟಿನ್‌ ವಿಲ್ಸನ್‌ ಜತೆ ಪ್ರೇಮಾಂಕುರವಾಗಿತ್ತು. ಮೊದಲ ಮಡದಿಗೆ ಐದು ಮಕ್ಕಳಾದವು. ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ, 2008ರಲ್ಲಿ ಮಸ್ಕ್‌ ಹಾಗೂ ವಿಲ್ಸನ್‌ ವಿಚ್ಛೇದನ ಪಡೆದರು. ಇದಾದ ಬಳಿಕ ಮಸ್ಕ್‌ ಮತ್ತೊಂದು ಮದುವೆಯಾದರು. ಆ ದಾಂಪತ್ಯವೂ ತುಂಬ ದಿನ ಉಳಿಯಲಿಲ್ಲ. 2018ರಲ್ಲಿ ಗಾಯಕಿ ಗ್ರಿಮ್ಸ್‌ ಜತೆ ಸಂಬಂಧ ಬೆಳೆಸಿದ ಮಸ್ಕ್‌ಗೆ ಮತ್ತೊಬ್ಬ ಮಗನ ಆಗಮನವಾಯಿತು. ಮಸ್ಕ್‌ ಹಾಗೂ ಗ್ರಿಮ್ಸ್‌ ಮಧ್ಯೆ ಬಿರುಕುಂಟಾಗಿ, 2021ರಲ್ಲಿ ಸಂಬಂಧ ಮುರಿದುಬಿತ್ತು. ಮಸ್ಕ್‌ ಒಡೆತನದ್ದೇ ಆದ ನ್ಯೂರಾಲಿಂಕ್‌ನ ಆಪರೇಷನ್ಸ್‌ ಹಾಗೂ ಸ್ಪೆಷಲ್‌ ಪ್ರಾಜೆಕ್ಟ್ಸ್‌ನ ಡೈರೆಕ್ಟರ್‌ ಆಗಿರುವ ಶಿವೋನ್‌ ಜಿಲಿಸ್‌ ಜತೆ ಒಡನಾಟ ಬೆಳೆಸಿದ ಮಸ್ಕ್‌, ಮತ್ತಿಬ್ಬರು ಅವಳಿ ಹೆಣ್ಣುಮಕ್ಕಳ ತಂದೆಯಾದರು. ಸದ್ಯ ಮಸ್ಕ್‌ ಅವರಿಗೆ 10 ಮಕ್ಕಳಿದ್ದಾರೆ ಎಂದು ತಿಳಿದುಬಂದಿದೆ.

ಮಸ್ಕ್‌ ಮುದ್ದಿನ ಮಕ್ಕಳು.

ಟ್ವಿಟರ್‌ ಖರೀದಿಯಿಂದ ಯಶಸ್ಸು ಸಾಧ್ಯವೇ?

ಕಳೆದ ಏಪ್ರಿಲ್‌ನಲ್ಲಿ ನಾನು ಟ್ವಿಟರ್‌ ಖರೀದಿಸುತ್ತೇನೆ ಎಂದು ಎಲಾನ್‌ ಮಸ್ಕ್‌ ಘೋಷಿಸಿದ್ದರು. ಆದರೆ, ಜುಲೈನಲ್ಲಿ ಮನಸ್ಸು ಬದಲಾಯಿಸಿದ ಮಸ್ಕ್‌, ನಾನು ಟ್ವಿಟರ್‌ ಖರೀದಿ ಒಪ್ಪಂದವನ್ನು ರದ್ದುಗೊಳಿಸುತ್ತೇನೆ ಎಂದು ಘೋಷಿಸಿದರು. ಆದರೆ, ಯಾವಾಗ ಟ್ವಿಟರ್‌ ಮಂಡಳಿಯು ಕೋರ್ಟ್‌ ಮೆಟ್ಟಿಲೇರುವುದಾಗಿ ಘೋಷಿಸಿತೋ, ಆಗ ಮಸ್ಕ್‌ ಅವರಿಗೆ ಟ್ವಿಟರ್‌ಅನ್ನು ಖರೀದಿಸುವುದು ಅನಿವಾರ್ಯವಾಯಿತು. ಹೀಗೆ ಅನಿವಾರ್ಯವಾಗಿ ಟ್ವಿಟರ್‌ಅನ್ನು ಖರೀದಿಸಿರುವ ಮಸ್ಕ್‌ ಅವರಿಗೆ ಟ್ವಿಟರ್‌ ಖರೀದಿಯಿಂದ ಯಶಸ್ಸು ಸಾಧ್ಯವೇ ಎಂಬ ಪ್ರಶ್ನೆ ಮೂಡುತ್ತಿದೆ. ಮಾನವತೆಯ ಸಾಕಾರ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಆದ್ಯತೆ ನೀಡುವ ದಿಸೆಯಲ್ಲಿ ಟ್ವಿಟರ್‌ಅನ್ನು ಖರೀದಿಸಿದ್ದೇನೆ ಎಂದು ಹೇಳಿದ್ದಾರಾದರೂ, ಈಗಿರುವ ಸಿಬ್ಬಂದಿಯನ್ನು ವಜಾಗೊಳಿಸಿ ಎಷ್ಟರಮಟ್ಟಿಗೆ ಯಶಸ್ಸು ಸಾಧಿಸುತ್ತಾರೆ ಎಂಬುದಕ್ಕೆ ಕಾಲವೇ ಉತ್ತರಿಸಬೇಕಿದೆ.

ಇದನ್ನೂ ಓದಿ | ವಾರದ ವ್ಯಕ್ತಿಚಿತ್ರ | ಮುಸೋಲಿನಿ ಅಭಿಮಾನಿ ಮೆಲೋನಿ ಇಟಲಿಯ ಪ್ರಧಾನಿ

Exit mobile version