Site icon Vistara News

Ambedkar Jayanti: ನ್ಯಾಯವಾದಿಯಾಗಿ ಡಾ. ಬಿ.ಆರ್‌. ಅಂಬೇಡ್ಕರರ ಸಾಮಾಜಿಕ ಸೇವೆ ಎಷ್ಟು ಜನರಿಗೆ ತಿಳಿದಿದೆ?

ambedkar jayanti Ambedkar social service as an advocate

#image_title

ರಾಹುಲ್ ಸಿಂಹ ಎನ್., ಬೆಂಗಳೂರು
ಅನೇಕ ಮಹಾಪುರುಷರಿಗೆ ಜನ್ಮ‌ ನೀಡಿದ ಪುಣ್ಯಭೂಮಿ ಭಾರತ. ಮಹಾನ್ ಋಷಿ ಮುನಿಗಳು, ಯೋಧರು, ವಿಜ್ಞಾನಿಗಳು, ಸಮಾಜ ಸುಧಾರಕರು ಈ ಪುಣ್ಯ ಭೂಮಿಯಲ್ಲಿ ಜನ್ಮತಾಳಿದ್ದಾರೆ. 20ನೇ ಶತಮಾನದಲ್ಲಿ ಸಾಮಾಜಿಕ ಅಸಮಾನತೆಯನ್ನು ಮೆಟ್ಟಿ ನಿಂತು ಕ್ರಾಂತಿ ಸೂರ್ಯನಂತೆ ಸಮಾಜವನ್ನು ಸುಧಾರಿಸಿದ ಮಹಾಪುರುಷ‌ ಬಾಬಾ ಸಾಹೇಬ್ ಡಾ. ಭೀಮ್ ರಾವ್ ಅಂಬೇಡ್ಕರ್.

ತಮಗಾದ ಎಲ್ಲ ಅಪಮಾನಗಳನ್ನು ದಿಟ್ಟವಾಗಿ ಎದುರಿಸಿದ ಬಾಬಾ ಸಾಹೇಬರು, ಅರ್ಥಶಾಸ್ತ್ರಜ್ಞನಾಗಿ, ನ್ಯಾಯವಾದಿಯಾಗಿ, ವಕೀಲನಾಗಿ, ಸಮಾಜ ಸುಧಾರಕನಾಗಿ ಅನೇಕ ಸಾಧನೆಗಳನ್ನು ಮಾಡಿದರು. ಸಮಾಜ ಸುಧಾರಕರಾಗಿ ಅಂಬೇಡ್ಕರ್ ಅವರ ಸಾಧನೆ ನಮಗೆಲ್ಲಾ ಚಿರಪರಿಚಿತವಾಗಿದೆ. ನ್ಯಾಯಶಾಸ್ತ್ರಜ್ಞನಾಗಿ, ವಕೀಲರಾಗಿ, ನ್ಯಾಯವಾದಿಯಾಗಿ ಬಾಬಾ ಸಾಹೇಬರು ಮೂಡಿಸಿದ ಸಾಮಾಜಿಕ ಬದಲಾವಣೆಯ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ.

ವಕೀಲರಾಗಿ ಅಂಬೇಡ್ಕರ್
1923ರಲ್ಲಿ ಅಂಬೇಡ್ಕರ್ ಅವರು ತಮ್ಮ ಅರ್ಥಶಾಸ್ತ್ರ ಮತ್ತು ಕಾನೂನು ಅಧ್ಯಯನವನ್ನು ಜೊತೆ‌ಜೊತೆಗೆ ಮಾಡುತ್ತಿದದರು. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಭಾರತದ ರೂಪಾಯಿಯ ಕುರಿತು ತಮ್ಮ ಪ್ರಬಂಧವನ್ನು ಮಂಡಿಸಿ, ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದರು. ಇದೇ ವರ್ಷ ಕಾನೂನು ಪದವಿಯನ್ನು ಪಡೆದುಕೊಂಡು, ಬ್ರಿಟನ್ನಿನ ಪ್ರಖ್ಯಾತ ಗ್ರೇಸ್ ಇನ್‌ನಲ್ಲಿ ವಕೀಲರಾಗಿ ಸೇರಿದರು. ನಂತರ ಭಾರತಕ್ಕೆ ಬಂದ ಬಾಬಾ ಸಾಹೇಬರು ತಮ್ಮ ವಕೀಲಿ ವೃತ್ತಿಯನ್ನು ಆರಂಭಿಸಿದರು. ವಕೀಲರಾಗಿ ಅಂಬೇಡ್ಕರ್ ಅವರು ಬಡವರು, ವಂಚಿತರು ಮತ್ತು ಶೋಷಿತರ ಪರವಾಗಿ ನ್ಯಾಯಾಲಯದಲ್ಲಿ ಉಚಿತವಾಗಿ ವಾದ ಮಂಡಿಸುತ್ತಿದ್ದರು. ಕಮ್ಯುನಿಸ್ಟರ ಸಿದ್ಧಾಂತವನ್ನು ವ್ಯಕ್ತಿಗತವಾಗಿ ಒಪ್ಪದಿದ್ದರು ಸಹ, ಅಂಬೇಡ್ಕರ್ ಅವರು ಕಾರ್ಮಿಕ ಸಂಘಗಳನ್ನು ಅನೇಕ ಪ್ರಕರಣಗಳಲ್ಲಿ ವಕೀಲರಾಗಿ ಪ್ರತಿನಿಧಿಸಿದ್ದರು.

ಬಾಬಾ ಸಾಹೇಬರ ವಕೀಲ ವೃತ್ತಿಯ ಪ್ರಮುಖ ಪ್ರಕರಣವೆಂದರೆ ಫಿಲಿಪ್ ಸ್ಪರಾಟ್ ರಾಜದ್ರೋಹದ ಪ್ರಕರಣ. ಫಿಲಿಪ್ ಸ್ಪರಾಟ್ ಕಮ್ಯುನಿಸ್ಟ್ ಸಿದ್ಧಾಂತವನ್ನು ಭಾರತದಲ್ಲಿ ಪಸರಿಸಲು ಬಂದಿದ್ದ ಬರಹಗಾರ. ಈತ ಬರೆದಿದ್ದ India-China ಎಂಬ ಕಿರು ಪುಸ್ತಕವನ್ನು ಬ್ರಿಟಿಷರು ನಿಷೇಧಿಸಿ, ಸ್ಪರಾಟ್‌ನನ್ನು ರಾಜದ್ರೋಹದ ಪ್ರಕರಣ ದಾಖಲಿಸಿ ಬಂಧಿಸಿದರು. ಬಾಬಾ ಸಾಹೇಬರು ಸ್ಪರಾಟ್ ಪರ  ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸಿ ಆತನನ್ನು ನಿರಪರಾಧಿಯಾಗಿ ಸಾಬೀತು ಪಡಿಸಲು ಯಶಸ್ವಿಯಾದರು.

“ದೇಶಾಂಚೆ ದುಷ್ಮನ್” ಎಂಬ ಪುಸ್ತಕದ ಪ್ರಕಾಶಕರ ವಿರುದ್ಧ ಮಾನಹಾನಿ ಪ್ರಕರಣ ದಾಖಲಾದಾಗ ಅವರ ಪರವಾಗಿಯೂ ಅಂಬೇಡ್ಕರ್ ಅವರು ವಾದ ಮಂಡಿಸಿದರು. ಬಾಲ ಗಂಗಾಧರ ತಿಲಕ್ ಮತ್ತು ವಿಷ್ಣು ಶಾಸ್ತ್ರಿ ಚಿಪ್ಳೂಣ್ಕರ್ ಅವರನ್ನು ಈ ಪುಸ್ತಕದಲ್ಲಿ ದೇಶದ ಶತೃಗಳು ಎಂದು ಬಣ್ಣಿಸಲಾಗಿದೆಯೆಂದು ಪ್ರಕಾಶಕರ ವಿರುದ್ಧ ಮಾನಹಾನಿ ಪ್ರಕರಣ ದಾಖಲಾಗಿತ್ತು. ತಮ್ಮ ಕಕ್ಷಿದಾರರ ಪರವಾಗಿ ವಾದ ಮಂಡಿಸಿದ ಅಂಬೇಡ್ಕರ್ ಅವರು, ಪುಸ್ತಕದ ಪ್ರಕಾಶಕರನ್ನು ನಿರ್ದೋಷಿ ಎಂದು ನ್ಯಾಯಾಲಯದಲ್ಲಿ ಸಾಬೀತು ಪಡಿಸಿದರು.

ಕಾರ್ಮಿಕರ ಪಾಲಿನ ಆಶಾಕಿರಣ
ಕಾರ್ಮಿಕರ ಶೋಷಣೆಯ ವಿರುದ್ಧ ದನಿ ಎತ್ತಿ, ಕಾರ್ಮಿಕರ ಕಾನೂನುಗಳ  ತಿದ್ದುಪಡಿ ತರುವ ಮೂಲಕ ಬಾಬಾ ಸಾಹೇಬರು ಕಾರ್ಮಿಕರ ಪಾಲಿನ ಆಶಾಕಿರಣವಾದರು. 1942ರಲ್ಲಿ ವೈಸ್ರಾಯ್ ಎಕ್ಸಿಕ್ಯೂಟಿವ್ ಮಂಡಳಿಯ ಸದಸ್ಯರಾದರು. ಮಂಡಳಿಯಲ್ಲಿ ಕಾರ್ಮಿಕ ಖಾತೆಯ ಜವಾಬ್ದಾರಿಯನ್ನು ಅವರಿಗೆ ನೀಡಲಾಯಿತು‌.

1946ರಲ್ಲಿ ಸಂಸತ್ತಿನಲ್ಲಿ ಕಾರ್ಮಿಕರಿಗೆ ಕನಿಷ್ಠ ವೇತನ ನೀಡುವ ಬಿಲ್ಲನ್ನು ಮಂಡಿಸಿದದರು. ಇದರ ಅನ್ವಯ ಕನಿಷ್ಠ ವೇತನಕ್ಕಿಂತ ಕಡಿಮೆ ವೇತನ ನೀಡುವುದು ಕಾನೂನು ಬಾಹಿರವಾಗಿತ್ತು. 1948 ರಲ್ಲಿ ಇದೇ Minimum Wages Act, 1948 ರೂಪದಲ್ಲಿ ಜಾರಿಗೆ ಬಂತು. Factories Act ಗೆ ತಿದ್ದುಪಡಿ ತಂದು ಕಾರ್ಮಿಕರ ಕೆಲಸದ ಅವಧಿಯನ್ನು 14 ಗಂಟೆಯಿಂದ 8 ಗಂಟೆಗೆ ಇಳಿಸಿದರು. ವರ್ಷದಲ್ಲಿ 16 ಪಾವತಿಸಿದ ರಜೆಗಳನ್ನು ಕಾರ್ಮಿಕರಿಗೆ ನೀಡಲಾಯಿತು.

ಕಾರ್ಮಿಕರ ಕಲ್ಯಾಣದ ಸಲುವಾಗಿ ಕಾರ್ಮಿಕ ಕಲ್ಯಾಣ ನಿಧಿಯನ್ನು (Labour Welfare Fund) ಅಂಬೇಡ್ಕರ್ ಅವರು ಸ್ಥಾಪಿಸಿದರು. ಕಾರ್ಮಿಕರಿಗೆ ಮೂಲಭೂತ ಸೌಕರ್ಯಗಳಾದ ಶಿಕ್ಷಣ, ಆರೋಗ್ಯ, ಗೃಹನಿರ್ಮಾಣ ಮುಂತಾದವುಗಳನ್ನು ಕಲ್ಪಿಸಲು ಈ ನಿಧಿಯನ್ನು ಉಪಯುಕ್ತವಾಗುತ್ತಿತ್ತು. ESI – Employees State Insurance ಕಾರ್ಮಿಕರ ವಿಮಾ ಯೋಜನೆಯನ್ನು ಪ್ರಾರಂಭಿಸಿದ್ದು ಡಾ. ಅಂಬೇಡ್ಕರ್. ದೇಶದ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ಬಹುಮುಖ್ಯ ಎಂದು ಅಂಬೇಡ್ಕರ್ ಅವರು ಬಲವಾಗಿ ನಂಬಿದ್ದರು‌. ಮಹಿಳಾ ಕಾರ್ಮಿಕರ ಹಿತಾಸಕ್ತಿಯ ದೃಷ್ಟಿಯಿಂದ Mines Maternity Benifit Act, 1941ಗೆ ತಿದ್ದುಪಡಿ ತಂದ ಅಂಬೇಡ್ಕರ್ ಅವರು, ಗರ್ಭಿಣಿ ಮಹಿಳಾ ಕಾರ್ಮಿಕರಿಗೆ 16 ವಾರಗಳ ಹೆರಿಗೆ ರಜೆ ನೀಡಿದರು. ಪ್ರಸ್ತುತ ಚಾಲ್ತಿಯಲ್ಲಿರುವ ಕಾರ್ಮಿಕ ಕಾನೂನುಗಳಲ್ಲಿ ಬಹುತೇಕ ಜಾರಿಗೆ ತಂದಿದ್ದು ಡಾ. ಅಂಬೇಡ್ಕರ್. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ದೂರದೃಷ್ಟಿಯ ಪರಿಣಾಮ ಶೋಷಿತ ಕಾರ್ಮಿಕರ ಜೀವನದಲ್ಲಿ ಬದಲಾವಣೆ ತರಲು ಸಾಧ್ಯವಾಯಿತು.

ಸಂವಿಧಾನದ ಮುಖಾಂತರ ಸಮಾಜ ಸುಧಾರಣೆ
1946 ರಲ್ಲಿ ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದರು. ವಿವಿಧ ದೇಶಗಳ ಸಂವಿಧಾನಗಳ ಸುದೀರ್ಘ ಅಧ್ಯಯನ ಮಾಡಿ, ಆ ಎಲ್ಲಾ ಸಂವಿಧಾನಗಳ ಒಳ್ಳೆಯ ಅಂಶಗಳನ್ನು ನಮ್ಮ ಸಂವಿಧಾನಕ್ಕೆ ಅಳವಡಿಸಿದರು. ವಿಶ್ವದ ಅತಿ ದೊಡ್ಡದಾದ ಸಂವಿಧಾನ ಭಾರತದ‌ ಸಂವಿಧಾನ. ಈ ಸಂವಿಧಾನ 20 ವರ್ಷವೂ ಸಹ ಉಳಿಯುವುದಿಲ್ಲ ಎಂದು ಹಲವರು ಲೇವಡಿ ಮಾಡಿದರು. ಸಂವಿಧಾನದಕ್ಕೆ ಬಾಬಾ ಸಾಹೇಬರು ಹಾಕಿದ ಭದ್ರ ಬುನಾದಿಯ ಪರಿಣಾಮ ಇಂದಿಗೂ ನಮ್ಮ ಸಂವಿಧಾನ ಗಟ್ಟಿಯಾಗಿದೆ.

ಅಂಬೇಡ್ಕರ್ ಅವರೇ ಹೇಳುವಂತೆ ಸಂವಿಧಾನ ಒಂದು ವಕೀಲರ ದಾಸ್ತಾವೇಜು ಆಗಬಾರದು, ಅದು ದೇಶದ ಪ್ರಗತಿಯ ವಾಹನವಾಗಬೇಕು. ಸಂವಿಧಾನ ಸಮಾಜ ಬದಲಾವಣೆಗೆ ಪೂರಕವಾಗಬೇಕೆಂದು ಮೂಲಭೂತ ಹಕ್ಕುಗಳಲ್ಲಿ ಸಮಾನತೆಯನ್ನು ಸಾರುವ ಪ್ರಯತ್ನ ಮಾಡಿದ್ದಾರೆ ಡಾ. ಅಂಬೇಡ್ಕರ್.

ವಿಧಿ 12 ರಿಂದ 18 ನಾಗರಿಕರಿಗೆ ಸಮಾನತೆ ಹಕ್ಕನ್ನು ಖಾತ್ರಿ ಪಡಿಸುತ್ತದೆ‌. ಭಾರತದ ನಾಗರಿಕರು ಎಲ್ಲರೂ ಸಮಾನರು ಮತ್ತು ರಾಜ್ಯ ಇವರನ್ನು ಜಾತಿ ಮತ ಪಂಥ ಧರ್ಮ ಜನ್ಮ ಸ್ಥಳದ ಆಧಾರದ ಮೇಲೆ ತಾರತಮ್ಯ ಮಾಡಬಾರದು ಎಂದು ವಿಧಿ 14 ಮತ್ತು 15 ಸಾರಿ ಹೇಳುತ್ತದೆ‌. ಅಸ್ಪೃಶ್ಯತೆ ಎಂಬ ಅನಿಷ್ಟ ಪದ್ಧತಿಯನ್ನು ವಿಧಿ 17 ರದ್ದು ಮಾಡಿತು.

ತಮಗಾದ ಅಪಮಾನಗಳು, ತಾವು ಜಾತಿಯ ಕಾರಣಕ್ಕೆ ಎದುರಿಸಿದ ತಾರತಮ್ಯ ಮುಂದಿನ ಪೀಳಿಗೆ ಎದುರಿಸಬಾರದೆಂದು ಈ ಎಲ್ಲಾ ಹಕ್ಕುಗಳನ್ನು ಸಂವಿಧಾನದಲ್ಲಿ ಮೂಲಭೂತವಾಗಿ ಅಡಕ ಮಾಡಿದರು.‌

ಸಾಮಾಜಿಕ ಬದಲಾವಣೆಗೆ ಕಾನೂನು ಅತ್ಯಂತ ಶಕ್ತಿಶಾಲಿಯಾದ ಅಸ್ತ್ರ ಎನ್ನುವುದಕ್ಕೆ ಬಾಬಾ ಸಾಹೇಬರ ಜೀವನವೇ ಸಾಕ್ಷಿ‌. ನ್ಯಾಯಶಾಸ್ತ್ರಜ್ಞರಾಗಿ, ವಕೀಲರಾಗಿ ಕಾರ್ಮಿಕರ ಮತ್ತು ದೀನ-ದಲಿತರ ದಿನಿಯಾದ ಮಹಾನ್ ಚೇತನ ಡಾ. ಭೀಮ್ ರಾವ್ ಅಂಬೇಡ್ಕರ್ ಅವರ ಜನ್ಮಜಯಂತಿಯಂದು ಶತ ಶತ ನಮನಗಳು.

(ಲೇಖಕರು: ವಕೀಲ ಮತ್ತು ಹವ್ಯಾಸಿ ಲೇಖಕ)

ಇದನ್ನೂ ಓದಿ: Ambedkar Jayanti: ಸಾಮಾಜಿಕ ಅಸಮತೆಯನ್ನು ಕಾರ್ಲ್‌ ಮಾರ್ಕ್ಸ್‌ಗಿಂತ ವಿಭಿನ್ನವಾಗಿ ನೋಡಿದವರು ಡಾ. ಬಿ.ಆರ್‌. ಅಂಬೇಡ್ಕರ್

Exit mobile version