ಸುಂದರ ಪಿಚೈ ಯಾರಿಗೆ ಗೊತ್ತಿಲ್ಲ ಹೇಳಿ? ಗೂಗಲ್ ಕಂಪೆನಿಯ ಸಿಇಓ ಆಗಿ ಆ ಕಂಪನಿಯನ್ನು ಭಾರಿ ಎತ್ತರಕ್ಕೆ ಬೆಳೆಸಿದವರು. ಅವರ ಬದುಕಿನಲ್ಲಿ ನಡೆದ ಒಂದು ಘಟನೆಯು ಒಂದು ಮಹಾನ್ ಸಂಶೋಧನೆಗೆ ಕಾರಣ ಆಯಿತು ಅಂದರೆ ನಂಬಲೇ ಬೇಕು.
2004ರ ಹೊತ್ತಿಗೆ ಸುಂದರ ಪಿಚೈ ಅವರನ್ನು ಅವರ ಫ್ರೆಂಡ್ ಒಬ್ಬರು ಒಂದು ರಾತ್ರಿಯ ಊಟಕ್ಕೆ ಕುಟುಂಬ ಸಮೇತ ಬರುವಂತೆ ಮನೆಗೆ ಕರೆದಿದ್ದರು. ಸುಂದರ ಪಿಚೈ ಅವರಿಗೆ ಆಫೀಸಲ್ಲಿ ತುರ್ತು ಕೆಲಸ ಇದ್ದ ಕಾರಣ ತನ್ನ ಹೆಂಡತಿ ಅಂಜಲಿ ಪಿಚೈ ಅವರಿಗೆ ಸಂಜೆ ಮುಂಚಿತವಾಗಿ ಹೋಗಲು ಹೇಳಿ ತಾನು ಸ್ವಲ್ಪ ತಡವಾಗಿ ಹೊರಟರು. ಸಮಯಕ್ಕೆ ಬಹಳ ಪ್ರಾಶಸ್ತ್ಯವನ್ನು ಕೊಡುತ್ತಿದ್ದ ಅವರಿಗೆ ಅಂದು ದಾರಿ ತಪ್ಪಿತು.
ಅಮೆರಿಕದ ಅಡ್ಡಡ್ಡ ರಸ್ತೆಗಳಲ್ಲಿ ದಾರಿ ತಪ್ಪಿದ ಅವರು ಫ್ರೆಂಡ್ ಮನೆಗೆ ತಲುಪಿದಾಗ ರಾತ್ರಿ ಹತ್ತು ಗಂಟೆ ದಾಟಿತ್ತು! ಊಟ ಮುಗಿಸಿ ಎಲ್ಲ ಅತಿಥಿಗಳು ಮನೆಗೆ ಹೋಗಿ ಆಗಿತ್ತು. ಅವರ ಹೆಂಡತಿ ಅಂಜಲಿ ಕೂಡಾ ಊಟ ಮುಗಿಸಿ ಹೋಗಿ ಆಗಿತ್ತು. ಪಾತ್ರೆಗಳು ಖಾಲಿ ಖಾಲಿ. ಹಸಿದ ಹೊಟ್ಟೆಯಲ್ಲಿ ಸುಂದರ್ ಮನೆಗೆ ಬಂದಾಗ ಹೆಂಡತಿ ಮನೆಯ ಪಾತ್ರೆ ತೊಳೆದು ಆಗಿತ್ತು.
ಹೆಂಡತಿಗೆ ಸಿಟ್ಟು ಬಂದು ಮುಖ ತಿರುಗಿಸಿ ಮಲಗಿ ಆಗಿತ್ತು. ಅವರನ್ನು ಎಬ್ಬಿಸಲು ಸುಂದರ್ ಅವರಿಗೆ ಮನಸ್ಸು ಆಗಲಿಲ್ಲ. ಪರಿಣಾಮವಾಗಿ ಸುಂದರ್ ಜೀವನದಲ್ಲಿ ಮೊದಲ ಬಾರಿಗೆ ಊಟವಿಲ್ಲದೆ ಕಳೆಯಬೇಕಾಯಿತು. ಅವರಿಗೆ ನಿದ್ದೆ ಬರಲಿಲ್ಲ. ಮಧ್ಯರಾತ್ರಿ ಆಫೀಸಿಗೆ ಸ್ವತಃ ಕಾರ್ ಡ್ರೈವ್ ಮಾಡಿಕೊಂಡು ಆಫೀಸಿಗೆ ಬಂದರು.
ಬೆಳಿಗ್ಗೆಯ ತನಕ ಯೋಚನೆ ಮಾಡುತ್ತ ಕಳೆದರು. ಹೆಂಡತಿಯನ್ನು ತುಂಬಾ ಪ್ರೀತಿ ಮಾಡುತ್ತಿದ್ದ ಸುಂದರ್ ಅಂದು ರಾತ್ರಿ ಹೆಂಡತಿಯ ಮುನಿಸಿನಿಂದ ತುಂಬಾ ಡಿಸ್ಟರ್ಬ್ ಆಗಿದ್ದರು. ನಾನು ಹೋಗಬೇಕಾಗಿದ್ದ ಫ್ರೆಂಡ್ ಮನೆಯ ಅಡ್ರೆಸ್ ಸರಿ ಇದ್ದು ಹೋಗಬೇಕಾದ ರೂಟ್ ಸರಿಯಾಗಿ ಗೊತ್ತಿದ್ದರೆ ಆ ಕಷ್ಟ ಪಡುವ ಅಗತ್ಯ ಇರಲಿಲ್ಲ ಎಂಬ ಯೋಚನೆಯು ಅವರ ಮನದಲ್ಲಿ ಕೊರೆಯುತ್ತಿತ್ತು.
ಮರುದಿನ ಅವರು ತನ್ನ ಗೂಗಲ್ ಸಂಸ್ಥೆಯ ಹಿರಿಯ ತಂತ್ರಜ್ಞರ ತುರ್ತು ಸಭೆ ಕರೆದರು. ಜಗತ್ತಿನ ಎಲ್ಲ ಸ್ಥಳಗಳಿಗೆ ದಾರಿಯನ್ನು ತೋರಿಸುವ ಒಂದು ತಂತ್ರಜ್ಞಾನದ ಅಗತ್ಯವನ್ನು ಅವರ ಮುಂದೆ ಇಟ್ಟರು. ಎರಡೆರಡು ದಿನ ಮೀಟಿಂಗ್ ಮುಂದುವರಿಯಿತು. ಕೊನೆಗೂ ಸುಂದರ್ ಪಿಚೈ ಅವರ ಹೆಂಡತಿಯ ಪ್ರೀತಿ ಗೆದ್ದಿತು. ಗೂಗಲ್ ಕಂಪೆನಿಯ ಎಲ್ಲ ತಂತ್ರಜ್ಞರು ಸಮರೋಪಾದಿಯಲ್ಲಿ ಕೆಲಸ ಮಾಡಿದರು. ಆಗ ಹುಟ್ಟಿದ್ದೇ ಗೂಗಲ್ ಮ್ಯಾಪ್!
ಗೂಗಲ್ ಮ್ಯಾಪ್ 2005ರಲ್ಲಿ ಅಮೆರಿಕದಲ್ಲಿ ಜನಪ್ರಿಯ ಆಯಿತು. ಮುಂದಿನ ವರ್ಷ ಇಂಗ್ಲೆಂಡಿಗೆ ಹೋಯಿತು. 2008ರಲ್ಲಿ ಭಾರತಕ್ಕೂ ಬಂದಿತು. ಕೇವಲ ಒಂದೆರಡು ವರ್ಷಗಳಲ್ಲಿ ಗೂಗಲ್ ಮ್ಯಾಪ್ ಇಡೀ ಜಗತ್ತು ತಲುಪಿತು. ಉಪಗ್ರಹಗಳ ಸಹಾಯ ಪಡೆದು ಇಡೀ ಜಗತ್ತಿನ ನಕ್ಷೆಯ ರಚನೆ ಮಾಡಿ ಗೂಗಲ್ ಮ್ಯಾಪ್ ಕೆಲಸ ಆರಂಭಿಸಿತು. ಅದು ಸಾರಿಗೆ ಉದ್ಯಮದಲ್ಲಿ ಕ್ರಾಂತಿಯನ್ನೇ ಮಾಡಿತು.
ಒಬ್ಬ ಕ್ಯಾಬ್ ಡ್ರೈವರ್ ತನ್ನ ಮೊಬೈಲನಲ್ಲಿ ಗೂಗಲ್ ಮ್ಯಾಪ್ ತೆರೆದಿಟ್ಟು ನಿಮ್ಮನ್ನು ತಲುಪಬೇಕಾದ ಗಮ್ಯಕ್ಕೆ ತಲುಪಿಸುವ ತಂತ್ರಜ್ಞಾನವೇ ಗೂಗಲ್ ಮ್ಯಾಪ್! ಇಂದು ಜಗತ್ತಿನ ಏಳು ಜನರಲ್ಲಿ ಒಬ್ಬರು ಗೂಗಲ್ ಮ್ಯಾಪ್ ಉಪಯೋಗ ಮಾಡುತ್ತಿದ್ದಾರೆ. ಭೂಮಾರ್ಗ, ಜಲ ಮಾರ್ಗ, ವಾಯುಮಾರ್ಗ ಎಲ್ಲ ಕಡೆ ಇಂದು ಗೂಗಲ್ ಮ್ಯಾಪ್ ಸಹಾಯ ಮಾಡುತ್ತಿದೆ.
ಈ ಸಂಶೋಧನೆಗೆ ಸ್ಫೂರ್ತಿ ಯಾವುದು? ಎಂದು ಸುಂದರ ಪಿಚೈ ಅವರನ್ನು ಕೇಳಿದಾಗ ಅವರು ಹೇಳಿದ್ದು ಒಂದೇ ವಾಕ್ಯ – ತುಂಬಾ ಪ್ರೀತಿಸುವ ಹೆಂಡತಿಯ ಮುನಿಸು!
ಇದನ್ನೂ ಓದಿ| ರಾಜ ಮಾರ್ಗ ಅಂಕಣ|ವಾಘಾ ಬಾರ್ಡರಿನ ಸೈನಿಕನ ಖಡಕ್ ಮಾತು! ‘ನೇಶನ್ ಫಸ್ಟ್’ ಎಂದದ್ದು ಯಾಕೆ?