Site icon Vistara News

ವಾರದ ವ್ಯಕ್ತಿಚಿತ್ರ | ಗಾಡ್​ಫಾದರ್​ಗಳಿದ್ದರೂ ಪರಿಶ್ರಮದಿಂದ ಗಮನ ಸೆಳೆಯುತ್ತಿದ್ದಾರೆ ಸಚಿನ್​ ತೆಂಡೂಲ್ಕರ್​ ಪುತ್ರ ಅರ್ಜುನ್​

arjun tendulkar

ಸುಖೇಶ ಪಡಿಬಾಗಿಲು ಬೆಂಗಳೂರು

ಐಪಿಎಲ್​ 15ನೇ ಆವೃತ್ತಿಯಲ್ಲಿ ಅಂಕಪಟ್ಟಿಯಲ್ಲಿ ಮುಂಬಯಿ ಇಂಡಿಯನ್ಸ್​ ತಂಡಕ್ಕೆ 10ನೇ ಸ್ಥಾನ ಸಿಕ್ಕಿತ್ತು. ಅಂದರೆ 10 ತಂಡಗಳಿರುವ ಟೂರ್ನಿಯಲ್ಲಿ ಕೊನೇ ಸ್ಥಾನ. ಒಟ್ಟಾರೆ ಆಡಿರುವ 14 ಪಂದ್ಯಗಳಲ್ಲಿ ಗೆದ್ದಿದ್ದು 4ರಲ್ಲಿ ಮಾತ್ರ. ಏತನ್ಮಧ್ಯೆ, ಮುಂಬಯಿ ಇಂಡಿಯನ್ಸ್​ ತಂಡಕ್ಕೆ ನಾಕೌಟ್​​ ಅವಕಾಶಗಳು ಸಿಗುವುದೇ ಇಲ್ಲ ಎಂಬ ಸ್ಥಿತಿಯಿದ್ದಾಗ ಆ ತಂಡದಲ್ಲಿ ಎರಡು ವರ್ಷಗಳಿಂದ ಬೆಂಚು ಕಾಯುತ್ತಿದ್ದ ಆಲ್​ರೌಂಡರ್ ಒಬ್ಬರನ್ನು ಆಡಿಸಿ ಎಂಬ ಒತ್ತಾಯ ಕ್ರಿಕೆಟ್​ ಕಾರಿಡಾರ್​ನಲ್ಲಿ ಜೋರಾಗಿ ಕೇಳಿ ಬಂತು. ಯುವ ಆಟಗಾರನಿಗೆ ಅವಕಾಶ ನೀಡಿದರೆ ಅವರ ಕ್ರಿಕೆಟ್​ ಭವಿಷ್ಯ ಉಜ್ವಲವಾಗಬಹುದು ಎಂಬುದು ಅವರೆಲ್ಲರ ಅಭಿಪ್ರಾಯವಾಗಿತ್ತು. ಆದರೆ, ಮುಂಬಯಿ ಇಂಡಿಯನ್ಸ್​ ಮ್ಯಾನೇಜ್ಮೆಂಟ್ ಹೊರಗಿನ ಒತ್ತಡಕ್ಕೆ ಬೆಲೆಕೊಡಲಿಲ್ಲ. ಯುವ ಆಟಗಾರನಿಗೆ ಕ್ರಿಕೆಟ್​ ಕ್ಷೇತ್ರದಲ್ಲಿರುವ ಪ್ರಭಾವವನ್ನೂ ಪರಿಗಣಿಸಲಿಲ್ಲ. ಕೊನೇವರೆಗೂ ಒಂದೇ ಒಂದು ಮ್ಯಾಚ್​​ನಲ್ಲಿ ಆಡಲು ಬಿಡಲಿಲ್ಲ. ಹೀಗೆ ಎರಡು ಆವೃತ್ತಿಯಲ್ಲಿ ಆ ಕ್ರಿಕೆಟಿಗ ಮುಂಬಯಿ ಇಂಡಿಯನ್ಸ್ ತಂಡದ ಡ್ರೆಸಿಂಗ್ ರೂಮ್​ನಲ್ಲೇ ಕಾಲ ಕಳೆದ.

ಅವಕಾಶವೇ ಸಿಗದೆ ನಿರಾಸೆ ಎದುರಿಸಿದ ಕ್ರಿಕೆಟಿಗ ಮತ್ಯಾರೂ ಅಲ್ಲ. ಎರಡು ದಶಕಗಳ ಕಾಲ ಭಾರತ ಕ್ರಿಕೆಟ್​ ಕ್ಷೇತ್ರದ ಆರಾಧ್ಯ ದೈವವಾಗಿದ್ದ ಸಚಿನ್​ ತೆಂಡೂಲ್ಕರ್ ಅವರ ಪುತ್ರ ಅರ್ಜುನ್​ ತೆಂಡೂಲ್ಕರ್​. 2021ನೇ ಆವೃತ್ತಿಯಲ್ಲಿ ಮುಂಬಯಿ ಇಂಡಿಯನ್ಸ್​ ತಂಡದ ಪಾಲಾಗಿದ್ದ ಅವರು ಸತತವಾಗಿ 2 ವರ್ಷ ವರ್ಣ ರಂಜಿತ ಐಪಿಎಲ್​ನಲ್ಲಿ ಆಡುವ ಅವಕಾಶ ದಕ್ಕಿಸಿಕೊಳ್ಳಲಿಲ್ಲ. ಇದರೊಂದಿಗೆ ಸ್ಟಾರ್​ಗಳ ಮಕ್ಕಳಿಗೆ ಅವಕಾಶಗಳ ಬಾಗಿಲು ತನ್ನಿಂತಾನೆ ತೆರೆದುಕೊಳ್ಳುತ್ತದೆ ಎಂಬ ಮಾತು ಅರ್ಜುನ್​ತೆಂಡೂಲ್ಕರ್​ ಅವರ ವಿಷಯದಲ್ಲಿ ಸುಳ್ಳಾಯಿತು.

2022-23ನೇ ರಣಜಿ ಋತು ಕೆಲ ದಿನಗಳ ಹಿಂದೆ ಆರಂಭಗೊಂಡಿದೆ. ಎರಡನೇ ದಿನ ಭಾರತದ ಕ್ರಿಕೆಟ್​ ಇತಿಹಾಸ ನೆನಪಿಟ್ಟುಕೊಳ್ಳುವಂಥ ಪ್ರಸಂಗ ನಡೆಯಿತು. ಗೋವಾ ತಂಡದ ಪರ ಆಡುತ್ತಿರುವ ಅರ್ಜುನ್​ ತೆಂಡೂಲ್ಕರ್​ ರಾಜಸ್ಥಾನ್​ ವಿರುದ್ಧ ಶತಕ ಬಾರಿಸಿದರು. ಈ ಮೂಲಕ 34 ವರ್ಷದ ಹಿಂದೆ ತಮ್ಮ ತಂದೆ ಮಾಡಿದ್ದ ಸಾಧನೆಯನ್ನು ಪುನರಾವರ್ತಿಸಿದರು. ಆ ಸಾಧನೆ ಏನು ಗೊತ್ತೇ? ರಣಜಿ ಟ್ರೋಫಿಯ ಚೊಚ್ಚಲ ಪಂದ್ಯದಲ್ಲಿಯೇ ಶತಕ ಬಾರಿಸುವುದು. 1988ರ ಡಿಸೆಂಬರ್​ 11ರಂದು ಸಚಿನ್​ ತೆಂಡೂಲ್ಕರ್​ ಅವರು ರಣಜಿ ಟ್ರೋಫಿಯಲ್ಲಿ ಮುಂಬಯಿ ಪರ ಗುಜರಾತ್​ ವಿರುದ್ಧ ಅಜೇಯ 100 ರನ್​ ಬಾರಿಸಿದ್ದರು. ಅಪ್ಪನಂತೆ ಚೊಚ್ಚಲ ಪಂದ್ಯದಲ್ಲಿ ಶತಕದ ಸಾಧನೆ ಮಾಡಿದ್ದಾರೆ ಅರ್ಜುನ್​. ಶತಕದ ಗಡಿ ದಾಟಿದ ಅರ್ಜುನ್​ ತೆಂಡೂಲ್ಕರ್ ಅತೀವ ಸಂಭ್ರಮದಲ್ಲಿದ್ದರು. ಆ ವೇಳೆ ಯಾವುದೇ ಗಾಡ್​ ಫಾದರ್​ಗಳು ಇಲ್ಲದೇ ಗುರಿ ಭೇದಿಸಿದ ಖುಷಿ ಅರ್ಜುನ್​ಗೆ ಆಗಿರುವುದು ಸುಳ್ಳಲ್ಲ.

ಸಚಿನ್​ ತೆಂಡೂಲ್ಕರ್ ಅವರು ಗೋವಾ ಪರ ಮಿಂಚಿದ್ದು ಬ್ಯಾಟಿಂಗ್​ ಮೂಲಕ. ಆದರೆ, ಅರ್ಜುನ್​ ತೆಂಡೂಲ್ಕರ್​ ಪೂರ್ಣ ಪ್ರಮಾಣದ ಆಲ್​ರೌಂಡರ್​. ಎಡಗೈ ಮಧ್ಯಮ ವೇಗಿ ಹಾಗೂ ಎಡಗೈ ಬ್ಯಾಟರ್​. ಆ ಪಂದ್ಯದಲ್ಲಿ ಅವರು ಏಳನೇ ಕ್ರಮಾಂಕದಲ್ಲಿ ಬ್ಯಾಟ್​ ಮಾಡಲು ಇಳಿದು ಅಪೂರ್ವ ಸಾಧನೆ ಮಾಡಿದ್ದರು. ಬೌಲಿಂಗ್​ನಲ್ಲಿ ಮೂರು ವಿಕೆಟ್​ ಕೂಡ ಕಬಳಿಸಿದ್ದಾರೆ. ಪಂದ್ಯ ಡ್ರಾದಲ್ಲಿ ಮುಕ್ತಾಯಗೊಂಡಿದೆ. ಅರ್ಜುನ್​ ತೆಂಡೂಲ್ಕರ್​ಗೆ ಈಗ 23 ವರ್ಷ. ಮುಂದೆ ಅವಕಾಶಕ್ಕಾಗಿ ಟೀಮ್​ ಇಂಡಿಯಾ ಬಾಗಿಲು ಬಡಿಯುವುದರಲ್ಲಿ ಯಾವುದೇ ಅನುಮಾನ ಇಲ್ಲ. ಆದರೆ, ಅವಕಾಶ ಸಿಕ್ಕಾಗ ಸಚಿನ್ ಮಗ ಎಂಬ ಕಾರಣಕ್ಕೆ ಅವಕಾಶ ಸಿಕ್ಕಿತು ಎಂದು ಯಾರೂ ಹೇಳುವಂತಿಲ್ಲ. ಉತ್ತಮ ಪ್ರದರ್ಶನ ನೀಡಿ ಅವಕಾಶ ಪಡೆದುಕೊಂಡರು ಎನ್ನಬೇಕು ಎಂಬ ಸ್ಥಿತಿ ಸೃಷ್ಟಿ ಮಾಡಿಕೊಳ್ಳಲು ಮುಂದಾಗಿದ್ದಾರೆ.

ಶ್ರಮದಿಂದಲೇ ಗೆಲ್ಲು ಎಂದಿದ್ದಾರೆ ಅಪ್ಪ

ಸಚಿನ್​ ಅವರ ಪುತ್ರ ಅರ್ಜುನ್​ ತೆಂಡೂಲ್ಕರ್​ ಕ್ರಿಕೆಟ್ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಂಡಾಗ ಅವರ ರಂಗ ಪ್ರವೇಶ ಸಲೀಸು ಎಂದು ಎಲ್ಲರೂ ಮಾತನಾಡಿಕೊಂಡಿದ್ದರು. ಆದರೆ, ಈ ಮಾತುಗಳು ಪೂರ್ಣ ಸತ್ಯವಲ್ಲ​. ಯಾಕೆಂದರೆ, ಅರ್ಜುನ್​ ಗೋವಾ ರಣಜಿ ತಂಡ ಸೇರಿಕೊಳ್ಳುವುದರ ಹಿಂದೆ ನಿರಾಸೆಯ ಕತೆಗಳಿವೆ. ಸೌಕರ್ಯದ ಹೊರತಾಗಿಯೂ ಆಯ್ಕೆಗಾಗಿ ಪೇಚಾಡಿದ್ದಾರೆ. ಅವಕಾಶ ಸಿಗದೇ ಇರುವಾಗ ಕೈಕೈ ಹಿಸುಕಿಕೊಂಡಿದ್ದಾರೆ. ಸ್ಟಾರ್​ಗಳ ಮಕ್ಕಳು ಅಪ್ಪನದ್ದೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಾಗ ಎದುರಿಸುವ ಎಲ್ಲ ಸವಾಲುಗಳೂ ಅವರಿಗೆ ಎದುರಾಗಿವೆ.

ಎಳವೆಯಿಂದಲೇ ಅಪ್ಪನನ್ನೇ ನೋಡಿ ಕ್ರಿಕೆಟ್​ ಕಲಿತಿದ್ದ ಅರ್ಜುನ್​ ತೆಂಡೂಲ್ಕರ್​ಗೆ ಅದು ಅಭಿರುಚಿಯಾಯಿತು. ಹೀಗಾಗಿ ಇತರ ಅವಕಾಶಗಳ ನಡುವೆಯೂ ಅವರು ಕ್ರಿಕೆಟ್ ಅನ್ನು ಅಪ್ಪಿಕೊಂಡರು. ಇಷ್ಟೆಲ್ಲ ಆದರೂ ಮಿಂಚಬೇಕಿದ್ದರೆ ತಂಡವೊಂದರಲ್ಲಿ ಅವಕಾಶ ಸಿಗಬೇಕಲ್ಲವೇ? ಅದು ಸುಮ್ಮನೇ ಸಿಗುವುದಿಲ್ಲ ಕೂಡ. ಅಪ್ಪನ ಹೆಸರು ಹೇಳಿಕೊಂಡು ಅವಕಾಶ ಪಡೆದರೆ ಹೆಚ್ಚು ವರ್ಷ ಬಾಳಿಕೆ ಬಾರದು ಹಾಗೂ ಮಂದಿಯ ಬಾಯಿಗೆ ಆಹಾರವಾಗುವುದು ನಿಶ್ಚಿತ. ಪ್ರದರ್ಶನದ ಮೂಲಕ ಗೆಲ್ಲುವುದೇ ಆಯ್ಕೆಯಾಯಿತು . ಸಾಮರ್ಥ್ಯ ಸಾಬೀತು ಮಾಡಲು ಅವಕಾಶವೊಂದು ಅರ್ಜುನ್​ಗೆ ಬೇಕಾಗಿತ್ತು. ಅದು ಸುಲಭವಿರಲಿಲ್ಲ. ಜಂಟಲ್​ಮ್ಯಾನ್​ ಕ್ರೀಡೆಯ ಜಂಟಲ್​ಮ್ಯಾನ್​ ಆಟಗಾರನಾಗಿದ್ದ ಸಚಿನ್​ ತೆಂಡೂಲ್ಕರ್​ ಪುತ್ರನ ಶ್ರೇಯಸ್ಸಿಗೋಸ್ಕರ ಪ್ರಭಾವ ಬೀರಲಿಲ್ಲ. ಹಾಗೊಂದು ವೇಳೆ ಮಾಡಿದ್ದರೆ ಮುಂಬಯಿ ತಂಡದ ಪರವಾಗಿ ಅವರು ಆಡಬೇಕಿತ್ತು. ಬದಲಾಗಿ ಶ್ರಮದಿಂದಲೇ ಗೆಲ್ಲು ಎಂದು ಮಗನಿಗೆ ಕಿವಿ ಮಾತು ಹೇಳಿದರು.

ಗೋವಾ ಫ್ಲೈಟ್​ ಹತ್ತಿದ ಅರ್ಜುನ್​

ಐಪಿಎಲ್​ನಲ್ಲಿ ಅವಕಾಶವಿಲ್ಲ, ರಣಜಿ ಟ್ರೋಫಿಯಲ್ಲಿ ಚಾನ್ಸ್ ಇಲ್ಲ. ಹಾಗಾದರೆ ಶಕ್ತಿ ಪ್ರದರ್ಶನ ಮಾಡೋದು ಹೇಗೆ? ಅದಕ್ಕಾಗಿ ಅವರು ಹುಡುಕಿದ್ದು ಗೋವಾ ಕ್ರಿಕೆಟ್ ಸಂಸ್ಥೆ. ಫುಟ್ಬಾಲ್​ ಪ್ರೇಮಿಗಳು ಹೆಚ್ಚಿರುವ ಗೋವಾದಲ್ಲಿ ಕ್ರಿಕೆಟ್​ ತಂಡಕ್ಕೆ ಸೇರಲು ಪೈಪೋಟಿ ಕೊಂಚ ಕಡಿಮೆ. ಹೀಗಾಗಿ ಮುಂಬಯಿ ಕ್ರಿಕೆಟ್​ ಸಂಸ್ಥೆ ಅನುಮತಿ ಪಡೆದುಕೊಂಡು ಗೋವಾ ಕ್ರಿಕೆಟ್​ ಸಂಸ್ಥೆ ಸೇರಿಕೊಂಡರು. ಮೊದಲ ಆವೃತ್ತಿಯ ರಣಜಿ ತಂಡದಲ್ಲಿ ಅವಕಾಶ ಪಡೆದು ಶತಕದ ಸಾಧನೆ ಮಾಡಿದರು. ಇನ್ನೀಗ ಅರ್ಜುನನದ್ದೇ ಸಾಮ್ರಾಜ್ಯ. ಶಕ್ತಿ ಪ್ರದರ್ಶನಕ್ಕೆ ವೇದಿಕೆ ಲಭಿಸಿದೆ. ಗೆದ್ದು ತೋರಿಸುವುದೊಂದೇ ಬಾಕಿ.

ಸವಾಲಿನ ಹಾದಿ

ಭಾರತೀಯ ಕ್ರಿಕೆಟ್​ ಕ್ಷೇತ್ರಕ್ಕೆ ಸಣ್ಣ ವಯಸ್ಸಿನಲ್ಲಿ ಎಂಟ್ರಿ ಪಡೆದಷ್ಟೂ ಸಾಧನೆ ಮಾಡುವುದು ಸುಲಭ. ಆದರೆ, ಅರ್ಜುನ್​ ತೆಂಡೂಲ್ಕರ್ ಅವರಿಗೆ 23ನೇ ವಯಸ್ಸಿನ ಬಳಿಕ ರಣಜಿ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಅದಕ್ಕೆ ಮೊದಲು ಮುಂಬಯಿ 14 ವಯೋಮಿತಿ, 16ರ ವಯೋಮಿತಿ ಹಾಗೂ 19ರ ವಯೋಮಿತಿಯ ತಂಡದಲ್ಲಿ ಸ್ಥಾನ ಆಡಿದ್ದರೂ ಕಾಯಂ ಸ್ಥಾನ ಸಿಗಲಿಲ್ಲ. ಸೈಯದ್​ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮುಂಬಯಿ ಪರ ಟಿ20 ಆಡಿದ್ದರೂ ಅವರಿಗೆ ಅಲ್ಲಿ ಹೆಚ್ಚು ಸ್ಪರ್ಧೆಯಿತ್ತು. ಐಪಿಎಲ್​ನಲ್ಲಿ ಮುಂಬಯಿ ಇಂಡಿಯನ್ಸ್ ತಂಡ 20 ಲಕ್ಷ ರೂಪಾಯಿ ಮೂಲ ಬೆಲೆಗೆ ಖರೀದಿ ಮಾಡಿದ್ದರೂ ಒಂದೇ ಒಂದು ಪಂದ್ಯದಲ್ಲಿ ಆಡಲು ಅವಕಾಶ ಕೊಡಲಿಲ್ಲ. ಕೇವಲ ಅಭ್ಯಾಸ ಹಾಗೂ ನೆಟ್​ ಬೌಲಿಂಗ್​ಗೆ ಸೀಮಿತಗೊಂಡರು.

ಇಷ್ಟೆಲ್ಲ ಸಮಸ್ಯೆಗಳ ನಡುವೆ ಹಿರಿಯರ ಸಲಹೆಯಂತೆ ಗೋವಾ ಕ್ರಿಕೆಟ್​ ಸಂಸ್ಥೆ ಸೇರುವುದು ಅನಿವಾರ್ಯವಾಯಿತು. ಎಲ್ಲವೂ ಅಂದುಕೊಂಡಂತೆ ಆಗಿದೆ. ಹೀಗಾಗಿ ಹಾಲಿ ಋತುವಿನಲ್ಲಿ ಅವರೇನಾದರೂ ಉತ್ತಮ ಪ್ರದರ್ಶನ ನೀಡಿದರೆ ಅವರ ಕ್ರಿಕೆಟ್​ ಬದುಕು ಸಂಪೂರ್ಣವಾಗಿ ತೆರೆದುಕೊಳ್ಳಬಹುದು.

ಗೋವಾ ತಂಡ ಸೇರಿಕೊಳ್ಳುವ ಮೊದಲು ಅವರು ಇಂಗ್ಲೆಂಡ್​ಗೆ ಹೋಗಿ ತರಬೇತಿ ಪಡೆದುಕೊಂಡಿದ್ದಾರೆ. ಆಸ್ಟ್ರೇಲಿಯಾದಲ್ಲಿ ಮೆರಿಲ್​ಬೋನ್ ಕ್ರಿಕೆಟ್​ ಕ್ಲಬ್​ ಯಂಗ್​ ಕ್ರಿಕೆಟರ್ಸ್​ ತಂಡದ ಪರವಾಗಿ ಆಡಿದ್ದಾರೆ. ಏಲಿಂಗ್​ ತಂಡದ ಪರವಾಗಿಯೂ ಆಡಿದ್ದಾರೆ. ಅದೂ ಅಲ್ಲದೆ, ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್​ ಸಿಂಗ್​ ಅವರಿಂದಲೂ ಕೋಚಿಂಗ್​ ಪಡೆದುಕೊಂಡಿದ್ದಾರೆ.

ಪುತ್ರ ಶತಕ ಬಾರಿಸಿರುವುದಕ್ಕೆ ಸಚಿನ್​ ತೆಂಡೂಲ್ಕರ್​ ಕೂಡ ಖುಷಿಯಾಗಿದ್ದಾರೆ. ನನ್ನ ಪೋಷಕರು ನನಗೆ ಅವಕಾಶಗಳನ್ನು ಬಳಸಿಕೊಳ್ಳುವ ಎಲ್ಲ ಸ್ವಾತಂತ್ರ್ಯ ಕೊಟ್ಟರು. ಅದೇ ಸ್ವಾತಂತ್ರ್ಯ ನಾನು ನನ್ನ ಮಗನಿಗೂ ಕೊಟ್ಟಿದ್ದೇನೆ. ಆತ ಸಾಧಿಸಿ ತೋರಿಸಿದ್ದಾನೆ, ಎಂಬುದಾಗಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಬೆಳವಣಿಗೆಯ ಹಾದಿ

ಅರ್ಜುನ್​ ತೆಂಡೂಲ್ಕರ್​ ತಮಗೆ 14 ವರ್ಷವಿದ್ದಾಗ ಎಮ್​ಆರ್​ಎಫ್​ ಪೇಸ್​ ಅಕಾಡೆಮಿಯಲ್ಲಿ ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್​ ಡೆನಿಸ್​ ಲಿಲ್ಲಿ ಅವರ ತರಬೇತಿಯಲ್ಲಿ ಬೌಲಿಂಗ್​ ಅಭ್ಯಾಸ ಆರಂಭಿಸಿದ್ದರು. ನೀಳ ಕಾಯದ ಅವರು ಎಡಗೈ ಬೌಲರ್​ ಆಗುವ ಕಡೆಗಿನ ಮೊದಲ ಹೆಜ್ಜೆಯಿಟ್ಟಿದ್ದು ಇಲ್ಲಿಂದಲೇ. ಮುಂದೆ ಅವರು ಬಯೋಮೆಕಾನಿಕ್​ ಹಾಗೂ ವೇಗದ ಬೌಲಿಂಗ್​ನ ಏರೂಡೈನಾಮಿಕ್​ ತಜ್ಱ ಅತುಲ್​ ಗಾಯಕ್ವಾಡ್​ ಅವರಿಂದ ತರಬೇತಿ ಪಡೆದರು. ಜತೆಗೆ ತಂದೆಯ ಗೆಳೆಯ ಸುಬ್ರತೊ ಬ್ಯಾನರ್ಜಿ ಅವರ ಬಳಿಯಿಂದಲೂ ತರಬೇತಿ ಪಡೆಯಲು ಆರಂಭಿಸಿದರು. ಏತನ್ಮಧ್ಯೆ ಟೀಮ್​ ಇಂಡಿಯಾದ ಅಭ್ಯಾಸ ನಡೆಸುವ ವೇಳೆ ನೆಟ್​ನಲ್ಲಿ ಬೌಲಿಂಗ್ ಮಾಡಲು ಅವಕಾಶ ಗಿಟ್ಟಿಸಿಕೊಂಡರು. ವಿಶ್ವದ ಬಲಿಷ್ಠ ತಂಡವೊಂದರ ಬ್ಯಾಟ್ಸ್​ಮನ್​ಗಳಿಗೆ ಚೆಂಡೆಸೆಯುವ ಮೂಲಕ ತಮ್ಮ ಅನುಭವ ಹೆಚ್ಚಿಸಿಕೊಂಡರು.

ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್​ ಅಕಾಡೆಮಿಯಲ್ಲಿ ತರಬೇತಿ ಪಡೆದ ಅವರು ವಿವಿ ರಮಣ್​ ಅವರಿಂದಲೂ ಕ್ರಿಕೆಟ್​ ಪಾಠ ಹೇಳಿಸಿಕೊಂಡಿದ್ದಾರೆ. ಬ್ರಾಡ್ಮನ್​ ಓವಲ್​ನಲ್ಲಿ ಸಿಸಿಐ ತಂಡದ ಪರ ಆಡಿರುವ ಅರ್ಜುನ್​, ಮುಂಬಯಿ ಪರ ಕೂಚ್​ ಬೆಹರ್​ ಟ್ರೋಫಿಯಲ್ಲೂ ಪಾಲ್ಗೊಂಡಿದ್ದಾರೆ. ನಮೀಬಿಯಾ 19 ತಂಡದ ವಿರುದ್ಧ ಎಮ್​ಸಿಸಿ ತಂಡ ಪರವಾಗಿ ಕಣಕ್ಕಿಳಿದಿದ್ದರು. 2018ರಲ್ಲಿ ಶ್ರೀಲಂಕಾದಲ್ಲಿ ನಡೆದ ಯೂತ್​ ಟೆಸ್ಟ್​ ಕ್ರಿಕೆಟ್​ ಟೂರ್ನಿಯಲ್ಲೂ ಪಾಲ್ಗೊಂಡು ಯಶಸ್ಸು ಸಾಧಿಸಿದ್ದಾರೆ.

ತಂದೆ ಸಚಿನ್​ ತೆಂಡೂಲ್ಕರ್​ ಪ್ರಸ್ತುತ ನಿವೃತ್ತ ಕ್ರಿಕೆಟಿಗ, ತಾಯಿ ಅಂಜಲಿ ತೆಂಡೂಲ್ಕರ್​ ವೈದ್ಯೆ, ಸಹೋದರಿ ಸಾರಾ ತೆಂಡೂಲ್ಕರ್​ ಬಾಲಿವುಡ್​ಗೆ ಎಂಟ್ರಿಯಾಗುವ ಸೂಚನೆ ಕೊಟ್ಟಿದ್ದಾರೆ.

ಇದನ್ನೂ ಓದಿ | Arjun Tendulkar | ಅಪ್ಪನಂತೆ ಚೊಚ್ಚಲ ರಣಜಿ ಪಂದ್ಯದಲ್ಲೇ ಶತಕ ಸಿಡಿಸಿದ ಅರ್ಜುನ್​ ತೆಂಡೂಲ್ಕರ್​!

Exit mobile version