Site icon Vistara News

Asha Parekh | ಬಾಲಿವುಡ್‌ನ ಸಾರ್ವಕಾಲಿಕ ಪ್ರಭಾವಿ ನಟಿ ಆಶಾ ಪಾರೇಖ್

Asha Parekh

ಆಶಾ ಪಾರೇಖ್(Asha Parekh). ಭಾರತೀಯ ಸಿನಿಮಾದ ಪ್ರಭಾವಿ ನಟಿ. 1960 ಮತ್ತು 70ರ ದಶಕದಲ್ಲಿ ಬಾಲಿವುಡ್‌ನಲ್ಲಿ ಅಕ್ಷರಶಃ ಮಿಂಚಿದ ಬೆಡಗಿ. ಆಗಿನ ಕಾಲಕ್ಕೆ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ಖ್ಯಾತಿ ಅವರದ್ದು. ಆಶಾ ಕೇವಲ ನಟಿಯಾಗಿ ಮಾತ್ರವಲ್ಲದೇ, ನಿರ್ದೇಶಕಿ, ನಿರ್ಮಾಪಕಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. 20 ವರ್ಷಗಳ ಕಾಲ ಯಶಸ್ಸಿನ ಅಲೆಯಲ್ಲಿ ತೇಲಿದರು. ಹಿಂದಿ ಸಿನಿಮಾದ ಸಾರ್ವಕಾಲಿಕ ಪ್ರಭಾವಿ ನಟಿ ಅವರು. ಒಂದು ಪೀಳಿಗೆಯನ್ನು ಸಮ್ಮೋಹನಗೊಳಿಸಿದ ಆಶಾ ಪಾರೇಖ್ ಅವರಿಗೆ ಈಗ 2020ನೇ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸಂದಿದೆ. ಭಾರತೀಯ ಸಿನಿಮಾ ರಂಗದ ಅತ್ಯುನ್ನತ ಪ್ರಶಸ್ತಿ ಇದು.

ಆಶಾ ಪಾರೇಖ್ ಅವರು 1942 ಅಕ್ಟೋಬರ್ 2ರಂದು ಜನಿಸಿದರು. ತಾಯಿ ಸುಧಾ ಅಲಿಯಾಸ್ ಸಲ್ಮಾ ಪಾರೇಖ್. ಬೋಹ್ರಾ ಮುಸ್ಲಿಮ್. ತಂದೆ ಬಚುಭಾಯಿ ಪಾರೇಖ್. ಗುಜರಾತಿ ಹಿಂದು. ನೃತ್ಯದಲ್ಲಿನ ಆಸಕ್ತಿಯನ್ನು ಗುರುತಿಸಿದ ಆಶಾ ಅವರ ತಾಯಿ, ಅವರನ್ನು ಕ್ಲಾಸಿಕಲ್ ಡ್ಯಾನ್ಸ್ ಕ್ಲಾಸ್‌ಗೆ ಸೇರಿಸಿದರು. ಪಂಡಿತ್ ಬನ್ಸಿಲಾಲ್ ಸೇರಿದಂತೆ ಅನೇಕ ಗುರುಗಳ ಬಳಿ ಶಾಸ್ತ್ರೀಯ ನೃತ್ಯ ಕಲಿತಿದ್ದಾರೆ. ಈ ನೃತ್ಯವೇ ಅವರನ್ನು ಸಿನಿಮಾ ರಂಗಕ್ಕೆ ಕರೆ ತಂದಿತು.

ಬಾಲಕಿ ಆಶಾ ಪಾರೇಖ್ ನೃತ್ಯ ಕಾರ್ಯಕ್ರಮವನ್ನು ನೀಡುತ್ತಿದ್ದರು. ಈ ಕಾರ್ಯಕ್ರಮಕ್ಕೆ ಖ್ಯಾತ ನಿರ್ದೇಶಕ ಬಿಮಲ್ ರಾಯ್ ಕೂಡ ಆಗಮಿಸಿದ್ದರು. ಆಶಾ ನೃತ್ಯ ಆಸ್ವಾದಿಸಿದ ನಿರ್ದೇಶಕರು, ತಮ್ಮ ಮಾ ಚಿತ್ರದಲ್ಲೊಂದು ಪಾತ್ರವನ್ನು ನೀಡಿದರು. ಹೀಗೆ ಆಶಾ ಪಾರೇಖ್ ಹತ್ತನೇ ವಯಸ್ಸಿನಲ್ಲೇ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟರು. 1954ರಲ್ಲಿ ತೆರೆ ಕಂಡ ಬಾಪ್ ಬೇಟಿ ಚಿತ್ರದಲ್ಲೂ ಬಾಲ ನಟಿಯಾಗಿ ಕಾಣಿಸಿಕೊಂಡರು. ಆದರೆ, ಈ ಚಿತ್ರ ಸಕ್ಸೆಸ್ ಆಗಲಿಲ್ಲ. ಇದರಿಂದ ಬೇಸರಗೊಂಡರು. ಬಳಿಕ ಒಂದಿಷ್ಟು ಸಿನಿಮಾಗಳಲ್ಲಿ ಬಾಲ ನಟಿಯಾಗಿ ಕಾಣಿಸಿಕೊಂಡರು.

ಮರಳಿ ಸ್ಕೂಲ್‌ಗೆ…
ಕೆಲವು ಸಿನಿಮಾಗಳಲ್ಲಿ ಬಾಲ ನಟಿಯಾಗಿ ಅಭಿನಯಿಸಿದ ಆಶಾ, ತಮ್ಮ ಶಿಕ್ಷಣವನ್ನು ಪೂರೈಸುವುದಕ್ಕೆ ಸಿನಿಮಾದಿಂದ ಬ್ರೇಕ್ ತೆಗೆದುಕೊಂಡರು. ಮುಂದೆ 16ನೇ ವಯಸ್ಸಿನಲ್ಲಿ ಮತ್ತೆ ಸಿನಿಮಾದಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸಲು ಮುಂದಾದರು. 1959ರಲ್ಲಿ ತೆರೆ ಕಂಡ, ಗೂಂಜ್ ಊಟಿ ಶೆಹನಾಯಿ ಚಿತ್ರದಲ್ಲಿ ನಾಯಕಿಯಾಗಿ ಆಶಾ ನಟಿಸಬೇಕಿತ್ತು. ಆದರೆ, ಅವರ ಪಾತ್ರವನ್ನು ಅಮೀತಾ ಅವರಿಗೆ ನೀಡಲಾಯಿತು. ಆಶಾ ಸ್ಟಾರ್ ನಟಿಯಲ್ಲದ್ದರಿಂದ ಅವರಿಗೆ ಪಾತ್ರ ನಿರಾಕರಿಸಲಾಯಿತು. ಇದಾದ 8 ವರ್ಷದ ಬಳಿಕ ನಿರ್ಮಾಪಕ ಸುಬೋಧ ಮುಖರ್ಜಿ ಮತ್ತು ರೈಟರ್-ಡೈರೆಕ್ಟರ್ ನಾಸೀರ್ ಹುಸೇನ್ ಅವರು ತಮ್ಮ ದಿಲ್ ದೇಖೆ ದೇಖೋ(1959) ಚಿತ್ರಕ್ಕೆ ಹೀರೋಯಿನ್ ಆಗಿ ಆಶಾ ಪಾರೇಖ್ ಅವರನ್ನು ಆಯ್ಕೆ ಮಾಡಿಕೊಂಡರು. ಇವರ ಎದುರು ನಾಯಕನಾದವರು ಶಮ್ಮಿ ಕಪೂರ್. ಈ ಸಿನಿಮಾ ಮೂಲಕ ಬಾಲಿವುಡ್‌ನಲ್ಲಿ ಬಹುಬೇಡಿಕೆಯ ನಟಿಯಾಗಿ ಆಶಾ ಬೆಳೆದರು.

ನಾಸೀರ್ ಹುಸೇನ್ ಚಿತ್ರಗಳಲ್ಲಿ
ಹೀರೋಯಿನ್ ಆಗಿ ಚಿತ್ರರಂಗಕ್ಕೆ ಪರಿಚಯಿಸಿದ ನಾಸೀರ್ ಹುಸೇನ್ ಅವರ ಚಿತ್ರಗಳಲ್ಲಿ ಆಶಾ ಪಾರೇಖ್ ನಟಿಸುವುದು ಸಾಮಾನ್ಯವಾಗಿತ್ತು. ಜಬ್ ಪ್ಯಾರ್ ಕಿಸಿ ಸೇ ಹೋತಾ ಹೈ(1961), ಫೀರ್ ವಹೀ ದಿಲ್ ಲಾಯಾ ಹೂಂ(1963), ತೀಸ್ರೀ ಮಂಝೀಲ್ (1966), ಬಹರೋಂಕೆ ಸಪ್ನೆ(1967), ಪ್ಯಾರಾ ಕಾ ಮೌಸಮ್(1969) ಮತ್ತು ಕ್ಯಾರಾವಾನ್(1971) ಹೀಗೆ ಸತತವಾಗಿ ನಾಸೀರ್ ಹುಸೇನ ಅವರ ನಿರ್ದೇಶನದ ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿದರು. ಇಷ್ಟು ಮಾತ್ರವಲ್ಲದೇ, 1984ರಲ್ಲಿ ತೆರೆ ಕಂಡ ಮಂಝೀಲ್ ಮಂಝೀಲ್ ಚಿತ್ರದಲ್ಲಿ ಗೆಸ್ಟ್ ಗೌರವ ನಟಿಯಾಗಿದ್ದರು. ಆಶಾ ಅವರದ್ದು ಬಹುಮಖ ವ್ಯಕ್ತಿತ್ವ. ಬಾಲಿವುಡ್‌ನಲ್ಲಿ ಅವರು ಕೇವಲ ನಟಿಯಾಗಿ ಮಾತ್ರವೇ ಗುರುತಿಸಿಕೊಳ್ಳಲಿಲ್ಲ. ನಿರ್ಮಾಪಕಿಯಾಗಿ, ಹಂಚಿಕೆದಾರರಾಗಿಯೂ ಯಶಸ್ಸು ಕಂಡರು. ಬಹರೋಂಕೆ ಸಪ್ನೆ ಚಿತ್ರದಿಂದ ಹಿಡಿದು 21 ಸಿನಿಮಾಗಳನ್ನು ಹಂಚಿಕೆ ಮಾಡಿದ್ದಾರೆ. ಇದಕ್ಕೆ ನಿರ್ದೇಶಕ ನಾಸೀರ್ ಹುಸೇನ್ ಅವರ ಒತ್ತಾಸೆಯೂ ಕಾರಣವಾಗಿತ್ತು.

ಗ್ಲಾಮರ್ ಗರ್ಲ್
ಬಾಲಿವುಡ್‌ನಲ್ಲಿ ತಮ್ಮದೇ ಛಾಪು ಮೂಡಿಸಿರುವ ಆಶಾ ಪಾರೇಖ್ ಅವರನ್ನು ಸಿನಿರಸಿಕರು, ವಿಮರ್ಶಕರು ಗ್ಲಾಮರ್ ಗರ್ಲ್ ಎಂದೇ ಗುರುತಿಸಿದ್ದಾರೆ. ಇನ್‌ಫ್ಯಾಕ್ಟ್ ಆಶಾ ಅವರನ್ನು ಹುಡುಕಿಕೊಂಡ ಬಂದ ಪಾತ್ರಗಳೂ ಅವೇ ಆಗಿದ್ದವು. ಗ್ಲಾಮರ್ ಗರ್ಲ್, ಡಾನ್ಸರ್ ಮತ್ತು ಗಂಡುಬೀರಿಯ ಪಾತ್ರಗಳಲ್ಲೇ ಹೆಚ್ಚು ಮಿಂಚಿದರು ಅವರು. ಆದರೆ, ಅವರ ಇಮೇಜ್ ಚೇಂಜ್ ಮಾಡಿದವರು ರಾಜ್ ಖೋಸ್ಲಾ. 1966ರಲ್ಲಿ ತೆರೆಕಂಡ ದೋ ಬದನ್, ಚಿರಾಗ್(1969) ಮತ್ತು ಮೈ ತುಳಸಿ ತೇರೇ ಆಂಗನ್ ಕೀ(1978) ಚಿತ್ರದಲ್ಲಿಆಶಾ ದುರಂತ ನಾಯಕಿಯಾಗಿ ನಟಿಸಿ, ಗಮನ ಸೆಳೆದರು. ಪಾಗಲ್ ಕಹೀಂಕಾ(1970), ಕಟಿ ಪತಂಗ್(1970) ಚಿತ್ರಗಳಲ್ಲಿ ಆಶಾ ಡ್ರಾಮೆಟಿಕ್ ಆಗಿರುವ ಪಾತ್ರಗಳನ್ನು ನಿರ್ವಹಿಸಿ ಸೈ ಎನಿಸಿಕೊಂಡರು. ಈ ಸಿನಿಮಾಗಳ ನಿರ್ದೇಶಕರು ಶಕ್ತಿ ಸಮಂತಾ. ಮುಂದೆ ಕಟಿ ಪತಂಗ್ ಚಿತ್ರದ ಅಭಿನಯಕ್ಕಾಗಿ ಪಾರೇಖ್ ಅವರಿಗೆ ಅತ್ಯುತ್ತಮ ನಟಿ ಫಿಲ್ಮ್ ಫೇರ್ ಅವಾರ್ಡ್ ಕೂಡ ಬಂತು.

ನಿರ್ದೇಶಕರ ನಟಿ
ಆಶಾ ಪಾರೇಖ್ ಖ್ಯಾತ ನಿರ್ದೇಶಕ ಫೇವರಿಟ್ ಆಗಿದ್ದರು. ಹಾಗಾಗಿ, ಪದೇ ಪದೇ ಆಶಾ ಅವರನ್ನೇ ಅವರು ತಮ್ಮ ಚಿತ್ರಗಳಿಗೆ ನಟಿಯಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದರು. ವಿಜಯ್ ಆನಂದ್ ಮತ್ತು ಮೋಹನ್ ಸೆಹಗಲ್ ಅವರ ಬಹುತೇಕ ಚಿತ್ರಗಳಲ್ಲಿ ಆಶಾ ನಾಯಕ ನಟಿಯಾಗಿ ಅಭಿನಯಿಸಿದ್ದಾರೆ. ತಮ್ಮ ಮಾತೃಭಾಷೆಯಾದ ಗುಜರಾತಿ ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ. ಹಿಂದಿಯಲ್ಲಿ ಉಚ್ಚ್ರಾಯ ಸ್ಥಿತಿಯಲ್ಲಿರುವಾಗಲೇ ಆಶಾ ಅವರು ಗುಜರಾತಿಯ ಅಖಂಡ ಸೌಭಾಗ್ಯವತಿ(1963) ಸೇರಿ ಒಟ್ಟು ಮೂರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಪಂಜಾಬಿ, ಕನ್ನಡ ಸಿನಿಮಾ
ಗುಜರಾತಿ ಮಾತ್ರವಲ್ಲದೇ ಆಶಾ ಪಾರೇಖ್ ಅವರು ಪಂಜಾಬಿ, ಕನ್ನಡ ಭಾಷೆಯ ಸಿನಿಮಾದಲ್ಲೂ ಅಭಿನಯಿಸಿದ್ದಾರೆ. ಧರ್ಮೇಂದ್ರ ಜತೆಗೆ ಕಂಕನ್ ದೇ ಒಹ್ಲೇ(1971) ಮತ್ತು ದಾರಾ ಸಿಂಗ್ ಜತೆ ಲಂಬಾರ್ದಾರ್ನಿ ಜತೆ ಪಂಜಾಬಿ ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಮಾಜಿ ಸಿಎಂ ಎಸ್ ಬಂಗಾರಪ್ಪ ಅವರ ಪುತ್ರ ಕುಮಾರ್ ಬಂಗಾರಪ್ಪ ಅವರು ನಟಿಸಿದ ಶರವೇಗದ ಸರದಾರ(1989) ಚಿತ್ರದ ಪ್ರಮುಖ ಪಾತ್ರದಲ್ಲಿ ಕೂಡ ಅಭಿನಯಿಸಿದ್ದಾರೆ. ಆಗ ದೇವ್ ಆನಂದ್-ಆಶಾ, ಶಮ್ಮಿ ಕಪೂರ್-ಆಶಾ ಮತ್ತು ರಾಜೇಶ್ ಖನ್ನಾ-ಆಶಾ ಜೋಡಿ ಚಿತ್ರ ರಸಿಕರ ಮನಸೊರೆಗೊಂಡಿತ್ತು.

ಸಪೋರ್ಟಿಂಗ್ ರೋಲ್ಸ್
20 ವರ್ಷಗಳ ಕಾಲ ಲೀಡ್ ಆ್ಯಕ್ಟರ್ ಆಗಿ ಮಿಂಚಿದ್ದ ಆಶಾ ಅವರ ನಂತರ ಪೋಷಕ ಪಾತ್ರಗಳಲ್ಲೂ ಅಭಿನಯಿಸಿ ಸೈ ಎನಿಸಿಕೊಂಡರು. ತಾಯಿ ಮತ್ತು ಅತ್ತಿಗೆ ಪಾತ್ರದಲ್ಲಿ ಮಿಂಚಿದರು. ಅಮಿತಾಭ್ ಬಚ್ಚನ್ ಅವರ ಜತೆ ಕಾಲಿಯಾ ಚಿತ್ರದಲ್ಲಿ ನಟಿಸಿದರು. ಈ ಸಿನಿಮಾ 1981ರಲ್ಲಿ ತೆರೆ ಕಂಡಿತು. ಬಚ್ಚನ್ ಜತೆ ನಟಿಸಿದ ಏಕಮೇವ ಚಿತ್ರವಿದು. ಕೆಲವು ಚಿತ್ರಗಳಲ್ಲಿ ಪೋಷಕ ನಟಿಯಾಗಿ ಅಭಿನಯಿಸಿದ ಬಳಿಕ, ನಟನಾ ವೃತ್ತಿಯನ್ನು ತೊರೆದರು.

ಕಿರುತೆರೆಗೆ ಎಂಟ್ರಿ
1990ರಲ್ಲಿ ಭಾರತದಲ್ಲಿ ಟೆಲಿವಿಷನ್ ಕ್ರಾಂತಿ ಸಂಭವಿಸುತ್ತಿದ್ದ ದಿನಗಳು. ಈ ಅವಕಾಶವನ್ನು ಬಳಸಿಕೊಂಡರು. ತಮ್ಮದೇ ಆದ ನಿರ್ಮಾಣ ಕಂಪನಿ ಆರಂಭಿಸಿದರು. ನಿರ್ದೇಶಕರಾದರು. ಪಲಾಶೇ ಕೇ ಫೂಲ್, ಬಜೇ ಪಾಯಲ್, ಕೋರಾ ಕಾಗಜ್ ಧಾರಾವಾಹಿಗಳನ್ನು ನಿರ್ಮಾಣ ಮಾಡಿ ನಿರ್ದೇಶಿಸಿದರು. ಹಾಸ್ಯ ಧಾರವಾಹಿ ದಾಲ್ ಮೇ ಕಾಲಾ ಕೂಡ ಇವರದ್ದೇ. ಸಿನಿ ಕಲಾವಿದರ ಸಂಘದ ಅಧ್ಯಕ್ಷರೂ ಆಗಿದ್ದರು ಆಶಾ ಪಾರೇಖ್. ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಷನ್(ಸೆನ್ಸಾರ್ ಬೋರ್ಡ್)ನ ಮೊದಲ ಮಹಿಳಾ ಅಧ್ಯಕ್ಷೆ ಎಂಬ ಖ್ಯಾತಿಯೂ ಇವರಿಗಿದೆ.

ಪ್ರಶಸ್ತಿಗಳು
2002ರಲ್ಲಿ ಆಶಾ ಪಾರೇಖ್ ಅವರಿಗೆ ಜೀವಮಾನ ಸಾಧನೆಗಾಗಿ ಫಿಲ್ಮ್ ಅವಾರ್ಡ್ ನೀಡಲಾಯಿತು. 2004ರಲ್ಲಿ ಜೀವಮಾನ ಸಾಧನೆಗಾಗಿಯೇ ಕಲಾಕಾರ್ ಪ್ರಶಸ್ತಿ ಬಂತು. ಇಂಟರ್‌ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಅವಾರ್ಡ್ಸ್, ಪುಣೆ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್(2007), ಫೆಡರೇಷನ್ ಆಫ್ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀ(ಫಿಕ್ಕಿ) ನೀಡುವ ಲಿವಿಂಗ್ ಲೆಜೆಂಡ್ ಅವಾರ್ಡ್ ಕೂಡ ಇವರಿಗೆ ಸಂದಿದೆ. 1992ರಲ್ಲಿ ಭಾರತ ಸರ್ಕಾರವು ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.

ಅವಿವಾಹಿತೆ ಆಶಾ
ಸಿನಿರಸಿಕರ ನಿದ್ದೆ ಕದ್ದಿದ್ದ ಆಶಾ ಅವರು ಅವಿವಾಹಿತೆಯಾಗಿ ಉಳಿದಿದ್ದಾರೆ. ಇದಕ್ಕೆ ಅವರು ಕಾರಣ ಕೂಡ ಕೊಟ್ಟಿದ್ದಾರೆ. ತಾನು ಅನುಭವಿಸುತ್ತಿದ್ದ ಸ್ಟಾರ್‌ಡಮ್‌ನಿಂದಾಗಿ ತನ್ನನ್ನು ಮದುವೆಯಾಗಲು ಗಂಡುಗಳೇ ಬರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಅವರು ತಮ್ಮ ದಿ ಹಿಟ್ ಗರ್ಲ್ ಚಿತ್ರದಲ್ಲಿ, ಡೈರೆಕ್ಟರ್ ನಾಸೀರ್ ಹುಸೇನ್ ಜತೆ ಸಂಪರ್ಕದಲ್ಲಿ ಇದ್ದಿದ್ದಾಗಿ ಒಪ್ಪಿಕೊಂಡಿದ್ದಾರೆ. ನಾಸೀರ್‌ಗೆ ಅದಾಗಲೇ ವಿವಾಹವಾಗಿದ್ದರಿಂದಲೇ ಅವರನ್ನು ಆಶಾ ಅವರು ಮದುವೆಯಾಗಲು ಹೋಗಲಿಲ್ಲ. ಇದಕ್ಕೂ ಮೊದಲು ದೀರ್ಘ ಕಾಲದ ಗೆಳೆಯನೊಂದಿಗೆ ಸಂಬಂಧದಲ್ಲಿದ್ದೇನೆ ಎಂದು ಹೇಳಿಕೊಂಡಿದ್ದರು. ಆದರೆ, ಯಾವುದೇ ವಿವರವನ್ನು ನೀಡಿರಲಿಲ್ಲ. ಒಂದೆರಡು ಪ್ರೇಮ ಸಂಬಂಧಗಳ ಬಳಿಕ ಆಶಾ ಅವರು ಅಮೆರಿಕದಲ್ಲಿ ವಾಸವಾಗಿದ್ದ ಭಾರತೀಯ ಪ್ರೊಫೆಸರ್ ಅವರನ್ನು ಬಹುತೇಕ ಮದುವೆಯಾಗುವ ಹಂತಕ್ಕೆ ತಲುಪಿದ್ದರು. ಆದರೆ, ಪ್ರೊಫೆಸರ್ ಅವರು ತಮ್ಮ ಗೆಳತಿಯನ್ನು ಬಿಟ್ಟು ಬರಲು ಒಪ್ಪದ್ದರಿಂದ ಮದುವೆ ಮುರಿದು ಬಿತ್ತು.

ಆಸ್ಪತ್ರೆಗೆ ಆಶಾ ಹೆಸರು
ಆಶಾ ಪಾರೇಖ್ ಅವರು ಸಾಮಾಜಿಕ ಕಾರ್ಯ ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸದ್ಯ ಅವರು ತಮ್ಮ ಕರ ಭವನ ಡ್ಯಾನ್ಯ್ ಅಕಾಡೆಮಿ ಚಟುವಟಿಕೆಗಳನ್ನು ನೋಡಿಕೊಳ್ಳುತ್ತಿದ್ದಾರೆ. ಆಶಾ ಅವರು ಕೈಗೊಂಡ ಮಾನವೀಯ ಕಾರ್ಯಗಳ ಗೌರವಾರ್ಥವಾಗಿ ಮುಂಬೈನಲ್ಲಿರುವ ಆಸ್ಪತ್ರೆಯೊಂದಕ್ಕೆ ಆಶಾ ಪಾರೇಖ್ ಹಾಸ್ಪಿಟಲ್ ಎಂದು ಹೆಸರಿಸಲಾಗಿದೆ.

ಇದನ್ನೂ ಓದಿ |Dada saheb phalke | ಹಿರಿಯ ನಟಿ ಆಶಾ ಪರೇಖ್‌ಗೆ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ

Exit mobile version