| ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ
ಭಾರತದ ರಕ್ಷಣಾ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ, ತಮ್ಮ ಛಾಪು ಮೂಡಿಸಿದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ (Atal Bihari Vajpayee Birth Day ) ಇಂದು. ಭಾರತ ಅವರ ಜನ್ಮದಿನ ಮತ್ತು ಅವರ ಕೊಡುಗೆಗಳನ್ನು ಸ್ಮರಿಸುತ್ತಿರುವ ಈ ಸಂದರ್ಭದಲ್ಲಿ, ದೇಶದ ರಕ್ಷಣಾ ವಲಯಕ್ಕೆ ಅವರು ನೀಡಿದ ಪ್ರಮುಖ ಕೊಡುಗೆಗಳನ್ನು ಗಮನಿಸಬೇಕು. 1998ರಲ್ಲಿ ಅಣ್ವಸ್ತ್ರ ಪರೀಕ್ಷೆ ಮತ್ತು 1999ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಭಾರತವನ್ನು ಮುನ್ನಡೆಸಿದ್ದು, ಕಾಶ್ಮೀರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯ ಸ್ಥಾಪನೆಗೆ ಪ್ರಯತ್ನಿಸಿದ್ದರ ಮೂಲಕ ವಾಜಪೇಯಿಯವರು ಭಾರತದ ರಕ್ಷಣಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅವರ ಸಾಧನೆಗಳನ್ನು ಗಮನಿಸುತ್ತಾ, ಅವರು ಟೀಕೆಗಳನ್ನೂ ಸಹ ಸ್ಥಿರವಾಗಿ ಎದುರಿಸಿದ್ದರು ಎಂಬುದನ್ನು ನೆನೆಯಬೇಕು. ಅವರು ಇಂದಿಗೂ ದೃಢತೆ ಮತ್ತು ನಾಯಕತ್ವದ ಸಂಕೇತವಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್‌ಗಳ ಮಧ್ಯದಲ್ಲಿ ಮರೆತು ಹೋಗಿರುವ ಅಟಲ್ ಬಿಹಾರಿ ವಾಜಪೇಯಿಯವರ ಕೊಡುಗೆಗಳನ್ನು ಅವರ ಸಾಧನೆಗಳ ನೆನಪನ್ನು ಮರಳಿ ಮೆಲುಕು ಹಾಕಲು ನೆನೆಯಬೇಕಿದೆ.
ಭಾರತದ ಭದ್ರತೆಗೆ ವಾಜಪೇಯಿಯವರ ಕೊಡುಗೆಗಳು ರಾಷ್ಟ್ರ ನಿರ್ಮಾಣದಲ್ಲಿ ಅವರ ಅತ್ಯಂತ ಪ್ರಮುಖ ಸಾಧನೆಗಳಾಗಿವೆ. ಅವರ ಪ್ರಮುಖ ಐದು ಸಾಧನೆಗಳ ಕುರಿತ ಒಂದು ಅವಲೋಕನ 1998ರ ಅಣ್ವಸ್ತ್ರ ಪರೀಕ್ಷೆಯ ನಂತರ ಪ್ರಪಂಚದ ಎಲ್ಲ ಮೂಲೆಗಳಿಂದಲೂ ಟೀಕೆಗಳನ್ನು ಎದುರಿಸಿದ, ಕಾರ್ಗಿಲ್ ಯುದ್ಧದ ಸಂದರ್ಭದಲ್ಲೂ ಸ್ಥಿರವಾಗಿ ನಿಂತು ದೇಶಕ್ಕೆ ದೃಢ ನಾಯಕತ್ವ ಒದಗಿಸಿದ ವಾಜಪೇಯಿಯವರ ಕುರಿತು ಇನ್ನಷ್ಟು ಅರ್ಥ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ.
ಅಣ್ವಸ್ತ್ರ ಪರೀಕ್ಷೆಗಳು
ಭಾರತ ಇಂದು ಜಾಗತಿಕವಾಗಿ ಹೊಂದಿರುವ ಸ್ಥಾನವನ್ನು ಸಂಪಾದಿಸುವಲ್ಲಿ ಹಲವು ವಿಚಾರಗಳು ಸಹಕಾರಿಯಾಗಿವೆ. ಅವುಗಳಲ್ಲಿ 1998ರ ಬಳಿಕ ಭಾರತ, ಜವಾಬ್ದಾರಿಯುತ ಹಾಗೂ ನಂಬಿಕರ್ಹ ಅಣ್ವಸ್ತ್ರ ರಾಷ್ಟ್ರವಾಗಿ ರೂಪುಗೊಂಡಿದ್ದು ಪ್ರಮುಖವಾಗಿದೆ.
ಸಣ್ಣ ಅವಧಿಯದಾಗಿದ್ದ, ಎನ್‌ಡಿಎ ಮೊದಲ ಸರ್ಕಾರದ ಅವಧಿಯಲ್ಲಿ ವಾಜಪೇಯಿಯವರು ಪೋಖ್ರಾನ್‌ನಲ್ಲಿ ಐದು ಅಣ್ವಸ್ತ್ರ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಿದರು. ಇದು ಜಾಗತಿಕವಾಗಿ ಭಾರತದ ಸ್ಥಾನವನ್ನು ಸಮರ್ಥಿಸಿಕೊಳ್ಳಲು ರಾಜತಾಂತ್ರಿಕವಾಗಿ ಅತ್ಯಂತ ಕಷ್ಟಕರ ಹಾದಿಯನ್ನು ಎದುರಿಸುವಂತೆ ಮಾಡಿತು. ಭಾರತದ ಯಶಸ್ಸನ್ನು ಅಣ್ವಸ್ತ್ರ ಪರೀಕ್ಷೆಯ ಕೆಲ ಸಮಯದ ಬಳಿಕ ಭಾರತ ಮತ್ತು ಅಮೇರಿಕಾದ ಸಂದರ್ಭದ ಬದಲಾವಣೆಯ ಮೂಲಕವೂ ಅಳೆಯಬಹುದು. ಅದಕ್ಕೆ ಸಾಕ್ಷಿಯೆಂಬಂತೆ ಅಮೆರಿಕದ ಆಗಿನ ಅಧ್ಯಕ್ಷ ಬಿಲ್ ಕ್ಲಿಂಟನ್ 2000ನೇ ಇಸವಿಯಲ್ಲಿ ಭಾರತಕ್ಕೆ ಭೇಟಿ ನೀಡಿದರು. ಬಳಿಕ ರಚಿಸಲಾದ ಅಣ್ವಸ್ತ್ರ ನೀತಿ ವಾಜಪೇಯಿಯವರ ಪ್ರಬುದ್ಧತೆಯನ್ನು ಇನ್ನಷ್ಟು ದೃಢಪಡಿಸಿತು. ಇದೇ ಅಣ್ವಸ್ತ್ರ ನೀತಿಯನ್ನೇ ಇಂದಿಗೂ ಭಾರತ ಪಾಲಿಸುತ್ತ ಬಂದಿದೆ.
ಲಾಹೋರ್ ಬಸ್ ಯಾತ್ರೆ
ಹಲವರಿಗೆ 1999ರಲ್ಲಿ ವಾಜಪೇಯಿಯವರು ಲಾಹೋರ್‌ಗೆ ತೆರಳಿ, ಶಾಂತಿ ಸ್ಥಾಪನೆಗೆ ಪ್ರಯತ್ನಿಸಿದ್ದು ಒಂದು ಅನಗತ್ಯ ಪ್ರಯೋಗದಂತೆ ತೋರಬಹುದು. ಏಕೆಂದರೆ ವಾಜಪೇಯಿಯವರ ಶಾಂತಿ ಪ್ರಯತ್ನಕ್ಕೆ ಪಾಕಿಸ್ತಾನ ಕಾರ್ಗಿಲ್ ಯುದ್ಧದ ಮೂಲಕ ಪ್ರತಿಕ್ರಿಯಿಸಿತು. ಆದರೆ ವಾಜಪೇಯಿಯವರು ಸಾಂಕೇತಿಕವಾಗಿ ಪ್ರಮುಖವಾದ ಮಿನಾರ್-ಇ-ಪಾಕಿಸ್ತಾನ್‌ಗೆ ಭೇಟಿ ನೀಡಿದ್ದು ಪಾಕಿಸ್ತಾನದ ಸಾರ್ವಭೌಮತೆಯ ಕುರಿತು ಭಾರತದ ನಿಲುವನ್ನು ಸ್ಪಷ್ಟಪಡಿಸಿತ್ತು. ಹಾಗೆ ಮಾಡುವ ಮೂಲಕ ಭಾರತದ ಉದ್ದೇಶಗಳ ಕುರಿತು ಪಾಕಿಸ್ತಾನದ ಸಾಮಾನ್ಯ ಜನತೆಗೆ ಭಾರತದ ಕುರಿತಾಗಿ ಇದ್ದ ಅನುಮಾನಗಳಿಗೆ ವಾಜಪೇಯಿ ಸೂಕ್ತ ಉತ್ತರ ನೀಡಿದ್ದರು.
ಅದೆಷ್ಟೇ ಕಷ್ಟಕರವಾದರೂ, ಭಾರತದ ಅಂತಿಮ ಉದ್ದೇಶ ಶಾಂತಿ ಎಂಬುದನ್ನು ವಾಜಪೇಯಿ ಪುನರುಚ್ಚರಿಸಿದ್ದರು. ಲಾಹೋರ್ ಭೇಟಿಯ ಮೂಲಕ ವಾಜಪೇಯಿ ವೈಯಕ್ತಿಕ ಅಪಾಯಗಳಿಗೂ ತಾನು ಹೆದರುವ ನಾಯಕನಲ್ಲ ಎಂದು ಸಾಬೀತುಪಡಿಸಿದರು.
ಕಾರ್ಗಿಲ್ ಯುದ್ಧ – 1999
ಮೇ 1999 ಭಾರತಕ್ಕೆ ಮಾತ್ರವಲ್ಲದೆ, ಜಗತ್ತಿಗೇ ಆಘಾತಕರವಾಗಿತ್ತು. ಅದರಲ್ಲೂ ವಾಜಪೇಯಿಯವರಿಗೆ ಅದು ಬಹುದೊಡ್ಡ ಆಘಾತವಾಗಿತ್ತು. ಪಾಕಿಸ್ತಾನದ ನಾಯಕತ್ವದ ಮೇಲೆ ವಾಜಪೇಯಿಯವರು ಇಟ್ಟಿದ್ದ ನಂಬಿಕೆಗೆ ಅದು ದ್ರೋಹವಾಗಿತ್ತು. ಈ ನಿರಾಸೆಯನ್ನು ಬದಿಗಿಟ್ಟು, ವಾಜಪೇಯಿ ಭಾರತವನ್ನು ಯುದ್ಧದಲ್ಲಿ ಪಾಕಿಸ್ತಾನದಿಂದ ಹಿಮ ಪರ್ವತಗಳನ್ನು ಮರಳಿ ಗೆಲ್ಲಲು ಮುನ್ನಡೆಸಿದರು. ವಾಜಪೇಯಿಯವರಿಗೆ ಈ ಯುದ್ಧವನ್ನು ಕೇವಲ ಕಾರ್ಗಿಲ್‌ಗೆ ಸೀಮಿತಗೊಳಿಸುವ ದೂರದೃಷ್ಟಿ ಮತ್ತು ಅದರೊಡನೆ ಶತ್ರುವನ್ನು ಹೊಡೆದೋಡಿಸಲು ಮಾಡಬೇಕಾದ ಎಲ್ಲ ಕೆಲಸಗಳ ಕುರಿತಾದ ದೃಢ ನಿಶ್ಚಯವೂ ಇತ್ತು.
ಭಾರತೀಯ ಸೇನಾಪಡೆಗಳ ಅಪರಿಮಿತ ಸಾಧನೆಗಳು ಪ್ರಧಾನಿ ವಾಜಪೇಯಿಯವರ ನಾಯಕತ್ವದಡಿ ರೂಪಿಸಲಾದ ಯುದ್ಧ ನೀತಿಯಿಂದಾಗಿ ಯಶಸ್ವಿಯಾಗಿದ್ದವು. ಭಾರತ ಅನುಸರಿಸಿದ ವಿಧಾನ ಅವರ ಹೆಸರಿನ ‘ಅಟಲ್’ ಎಂಬುದರ ಅರ್ಥವಾದ ದೃಢವೇ ಆಗಿತ್ತು.
ಕಾಶ್ಮೀರ
ಕಾರ್ಗಿಲ್ ಯುದ್ಧಾನಂತರದ ಅವಧಿ ಜಮ್ಮು ಕಾಶ್ಮೀರದಲ್ಲಿ ಭಾರತಕ್ಕೆ ನಿಜಕ್ಕೂ ಒಂದು ಪರೀಕ್ಷೆಯ ಅವಧಿಯಾಗಿತ್ತು. ಭಾರತ ಎದುರಿಸುತ್ತಿದ್ದ ರಕ್ಷಣಾ ಸವಾಲುಗಳು ಈ ಅವಧಿಯಲ್ಲಿ ಅಪಾರವಾಗಿ ಹೆಚ್ಚಾದವು. ವಾಜಪೇಯಿಯವರು ಇಲ್ಲಿ ಅಗತ್ಯವಿದ್ದ ನೈತಿಕ ಮತ್ತು ರಕ್ಷಣಾ ಸ್ಥಿರತೆಯನ್ನು ಅರ್ಥಮಾಡಿಕೊಂಡಿದ್ದರು. ಅವರು ಕಾಶ್ಮೀರದಲ್ಲಿ ಸ್ವತಂತ್ರ ಮತ್ತು ನ್ಯಾಯಯುತ ಚುನಾವಣೆಗಳಿಗೆ ಅನುವು ಮಾಡಿಕೊಟ್ಟರು. ಇದನ್ನು ಪ್ರತಿಯೊಬ್ಬ ಸ್ವತಂತ್ರ ವೀಕ್ಷಕರೂ ಒಪ್ಪಿಕೊಂಡಿದ್ದರು. ಇದರೊಡನೆ ವಾಜಪೇಯಿಯವರು ಕಾಶ್ಮೀರದ ನಾಗರಿಕರನ್ನು ತಲುಪುವ ಯೋಜನೆಗಳನ್ನು ಹಮ್ಮಿಕೊಂಡರು.
ಆ ಬಳಿಕ ವಾಜಪೇಯಿಯವರು ಪ್ರತಿಪಾದಿಸಿದ ಕಾಶ್ಮೀರಿಯತ್, ಇನ್ಸಾನಿಯತ್ ಹಾಗೂ ಜಮ್ಮೂರಿಯತ್ ಎಂಬುದು ಅಂದಿನಿಂದ ಆಡಳಿತದಿಂದ ದೂರವಾಗಿದ್ದ ಜನರನ್ನು ತಲುಪುವ, ಅವರೊಡನೆ ಸೇತುವೆ ನಿರ್ಮಿಸುವ ವಿಧಾನವಾಗಿ ರೂಪುಗೊಂಡಿತು. ಅಂದಿನಿಂದ ಇಂದಿನವರೆಗೆ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಕಾಶ್ಮೀರ ಶ್ಲಾಘಿಸುತ್ತ ಬಂದಿದೆ.
ರಕ್ಷಣಾ ಸುಧಾರಣೆಗಳು
ಕಾರ್ಗಿಲ್ ಯುದ್ಧ ಕೊನೆಗಂಡ ಬಳಿಕ ಶೀಘ್ರವಾಗಿ ಕಾರ್ಗಿಲ್ ರಿವ್ಯೂ ಕಮಿಟಿಯನ್ನು ಸ್ಥಾಪಿಸಲಾಯಿತು. ಸಮಿತಿಯ ಅಧ್ಯಕ್ಷರಾದ ಕೆ. ಸುಬ್ರಹ್ಮಣ್ಯಂ ಅವರ ನೇತೃತ್ವದಲ್ಲಿ ಸಮಿತಿ ಯುದ್ಧದ ಕುರಿತಾದ ಕೂಲಂಕಷ ಅಧ್ಯಯನ ನಡೆಸಿತು. ಈ ಸಮಿತಿ ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಹಲವು ವಿಚಾರಗಳಲ್ಲಿ ಎಲ್ಲ ಕ್ಷೇತ್ರಗಳನ್ನು ಒಳಗೊಂಡ ಶಿಫಾರಸುಗಳನ್ನು ನೀಡಿತು. ಈ ವಿಶೇಷವಾದ ವರದಿಯನ್ನು ಸರ್ಕಾರ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿತು. ಇದು ಹಿಂದಿನ ಸರ್ಕಾರಗಳ ವಿಧಾನಕ್ಕಿಂತ ಸಾಕಷ್ಟು ಭಿನ್ನವಾಗಿತ್ತು, ಪಾರದರ್ಶಕವಾಗಿತ್ತು. ಇದರ ಬಳಿಕ ಕೇಂದ್ರ ಸಚಿವರ ತಂಡವೂ ಒಂದಷ್ಟು ಶಿಫಾರಸುಗಳನ್ನು ಮಾಡಿತು. ಈ ಎರಡು ಶಿಫಾರಸುಗಳ ಆಧಾರದಲ್ಲಿ ಭಾರತ ತನ್ನ ರಕ್ಷಣಾ ಮೂಲಸೌಕರ್ಯಗಳ ಅಭಿವೃದ್ಧಿ, ರಕ್ಷಣಾ ತಯಾರಿ, ಹಾಗೂ ಆಯುಧಗಳ ಅಭಿವೃದ್ಧಿಯ ಕುರಿತು ಹಲವು ಕ್ರಮಗಳನ್ನು ಕೈಗೊಂಡಿತು. ಈ ಸುಧಾರಣೆಗಳು ಭಾರತದ ರಾಷ್ಟ್ರೀಯ ಭದ್ರತೆಯ ತಳಪಾಯ ಹಾಗೂ ಈ ವಿಚಾರದಲ್ಲಿ ಇನ್ನಷ್ಟು ಕ್ರಾಂತಿಗೆ ಹಾದಿಯಾಗಿ ರೂಪುಗೊಂಡವು.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ತನ್ನ ಯೋಚನೆಗಳನ್ನು ಕವನಗಳ ಮೂಲಕ ಹೊರಹಾಕಿ, ಭಾಷಣಗಳ ಮೂಲಕ ಜನರಿಗೆ ವಿವರಿಸಿದರು. ಎಲ್ಲಕ್ಕಿಂತ ಮಿಗಿಲಾಗಿ, ವಾಜಪೇಯಿ ಓರ್ವ ನೈಜ ರಾಷ್ಟ್ರಭಕ್ತನಾಗಿ ಕಾಣಿಸುತ್ತಾರೆ. ಅವರು ಎಲ್ಲ ಭಿನ್ನಾಭಿಪ್ರಾಯಗಳ ಮಧ್ಯ ಸೇತುವೆ ನಿರ್ಮಿಸುವ, ಜನರಲ್ಲಿ ಪ್ರಜ್ಞೆ ಮೂಡಿಸುವ, ರಾಷ್ಟ್ರೀಯ ಭದ್ರತಾ ವಿಚಾರದಲ್ಲಿ ಮೂಲಭೂತ ಮಾರ್ಗಸೂಚಿಯಾಗಿ ಉಳಿದಿದ್ದಾರೆ.
ಇದನ್ನೂ ಓದಿ | Main Atal Hoon | ಅಟಲ್ ಜೀ ಜನುಮ ದಿನ: ʻಮೈ ಅಟಲ್ ಹೂಂʼ ಚಿತ್ರದ ಫಸ್ಟ್ ಲುಕ್ ಔಟ್