ಹಿಂದೂ ಪ್ರತ್ಯಾಘಾತದ ಐತಿಹಾಸಿಕ ದಿನ ಡಿ.6
ಈ ಅಂಕಣವನ್ನು ಇಲ್ಲಿ ಆಲಿಸಬಹುದು:
ಭಾರತದ ಅಸ್ಮಿತೆಗೇ ಕಳಂಕವಾಗಿದ್ದ ಬಾಬರಿ ಮಸೀದಿಯು ಧ್ವಂಸವಾಗಿ ಮೂವತ್ತು ವರ್ಷಗಳಾಗಿವೆ. ಹಾಗೆ ನೋಡಿದರೆ ಇದು ಕೇವಲ ಒಂದು ಮಸೀದಿಯನ್ನು ಉರುಳಿಸಿದ ಘಟನೆ ಅಲ್ಲ. ಎರಡು ಸಾವಿರ ವರ್ಷಗಳ ಇತಿಹಾಸದಲ್ಲಿ ಹಿಂದೂಗಳು ಅನ್ಯಮತದ ಪವಿತ್ರ ತಾಣಗಳನ್ನು ಹಾನಿ ಮಾಡಿದ, ಧ್ವಂಸ ಮಾಡಿದ ಒಂದೇ ಒಂದು ಪ್ರಕರಣವೂ ಇಲ್ಲ. ಅನಿವಾರ್ಯವಾಗಿ ಹೀಗೆ ಮಾಡಲು ಹಿಂದೂ ಸಮುದಾಯವನ್ನು ಮೂಲೆಗೆ ತಳ್ಳಿದ “ಕೀರ್ತಿ” ಮೆಕಾಲೆವಾದಿಗಳಿಗೆ, ಜಿಹಾದಿಗಳಿಗೆ, ಕಮ್ಯೂನಿಸ್ಟರಿಗೆ ಮತ್ತು “ಬ್ರಿಟಿಷರ ಪ್ರೀತಿಪಾತ್ರ”ರಿಗೆ ಸಲ್ಲುತ್ತದೆ.”…ಆ ತಾಣದಲ್ಲಿ ರಾಮನ ದೇವಾಲಯವಿರಲಿ, ಯಾವುದೇ ದೇವಾಲಯವಿರಲಿಲ್ಲ. ಅದು ರಾಮಜನ್ಮಭೂಮಿ ಎಂಬುದಕ್ಕೆ ಯಾವ ಆಧಾರವೂ ಇಲ್ಲ. ಇದು ಮುಸ್ಲಿಂ-ವಿರೋಧಿ ಬ್ರಿಟಿಷರ ಕಟ್ಟುಕಥೆ. ಅಷ್ಟು ಮಾತ್ರ ಅಲ್ಲ, ಅಸಲಿಗೆ “ಹಿಂದೂ” ಎಂಬುದೇ ಬ್ರಿಟಿಷ್ ಸೃಷ್ಟಿ…..” ಹೀಗೆಲ್ಲಾ ಅನೃತಮಯವಾದ ವಿಷದ ಪ್ರವಾಹವನ್ನೇ ಈ ಮಾಫಿಯಾ ತಂಡದವರು ಹರಿಸಿದರು.
1857ರ ಸ್ವಾತಂತ್ರ್ಯ ಸಂಗ್ರಾಮದ ಅನಂತರ ಬ್ರಿಟಿಷರು, ಭಾರತಾದ್ಯಂತ ಹಿಂದೂಗಳನ್ನು ನಿಶ್ಶಸ್ತ್ರರನ್ನಾಗಿ ಮಾಡುವ, ಜಾತಿಜಾತಿಗಳನ್ನು ಎತ್ತಿಕಟ್ಟುವ, ಹಿಂದೂ ಸಮಾಜವನ್ನು ಒಡೆದುಹಾಕುವ, ಭಾಷೆಗಳ ಹೆಸರಿನಲ್ಲಿ ಬೇರೆ ಬೇರೆ ಮಾಡುವ ಕುಟಿಲ ತಂತ್ರವನ್ನು ಯಥೇಚ್ಛವಾಗಿ ಮಾಡಿದರು. ದೆಹಲಿಯಲ್ಲಿದ್ದ ಮೊಘಲ್ ಪರಂಪರೆಯ ಬಹದ್ದೂರ್ ಷಾ ಝಫರ್ ಎಂಬ ದುರ್ಬಲ ಬಾದಷಹನನ್ನು (?) ಬ್ರಿಟಿಷರು ಬಡಿದು ಹಾಕಿದರಾದರೂ, ಮುಸ್ಲಿಮರನ್ನು ಹಿಂದೂಗಳ ಮೇಲೆ ಎತ್ತಿಕಟ್ಟುವ ಮತ್ತು ಇನ್ನಿಲ್ಲದಂತೆ ಓಲೈಕೆ ಮಾಡುವ ಕಾರ್ಯತಂತ್ರವನ್ನೂ ಮಾಡಿದರು. 1915ರ ಅನಂತರದ ಕುತಂತ್ರದ ಯೋಜನೆಯಂತೆ ಹಿಂದೂಗಳಿಗೆ ಮಾತ್ರ ಅಹಿಂಸೆಯ ಬೋಧನೆಯಾಯಿತು. ಬಂದೂಕು ಇರಲಿ, ಚಾಕು ಸಹ ಮುಟ್ಟದಂತೆ ಕಾರಸ್ಥಾನವನ್ನು ರಚಿಸಲಾಯಿತು. ಬದಲಿಗೆ, ಒಂದೇ ಒಂದು ಮಸೀದಿಯ ನಿಶ್ಶಸ್ತ್ರೀಕರಣವೂ ಆಗಲಿಲ್ಲ (ಇಂದಿಗೂ ಆಗಿಲ್ಲ). ಶತ್ರು ಒಂದು ಕೆನ್ನೆಗೆ ಪೆಟ್ಟು ಕೊಟ್ಟರೆ, ಹಿಂದೂ ಮಾತ್ರ ತನ್ನ ಇನ್ನೊಂದು ಕೆನ್ನೆ ಚಾಚಬೇಕು, ಎಂದು ಬಿಟ್ಟಿ ಉಪದೇಶ ಮಾಡಲಾಯಿತು.
ಕಳೆದ ನೂರು ವರ್ಷಗಳಲ್ಲಿ ನಮ್ಮ ಎಲ್ಲ ಪಠ್ಯಪುಸ್ತಕಗಳಲ್ಲಿ ವಿಕೃತ ಇತಿಹಾಸವನ್ನೇ ತುಂಬಲಾಯಿತು. ಇಸ್ಲಾಮಿನ ಮತ-ತತ್ತ್ವದ (Doctrine) ಅನುಸಾರವಾಗಿಯೇ, ಹಿಂದೂ – ಜೈನ – ಬೌದ್ಧ ದೇವಾಲಯಗಳ ಮತ್ತು ಆರಾಧನಾ ಮಂದಿರಗಳ ಧ್ವಂಸ ಮಾಡಿದ್ದೇವೆಂದು ಸ್ವತಃ ಇಸ್ಲಾಮೀ ಆಸ್ಥಾನ ಇತಿಹಾಸಕಾರರೇ ಸಾವಿರಾರು ದಾಖಲೆಗಳನ್ನು ಬರೆದಿಟ್ಟಿದ್ದರೂ, ಧ್ವಂಸ ಮಾಡಿದ ಸೇನಾಪತಿಗಳಿಗೆ ಸುಲ್ತಾನರು ಬಡ್ತಿ – ಬಹುಮಾನ ನೀಡಿದುದನ್ನು ಸಹ ಅವರೇ ದಾಖಲಿಸಿದ್ದರೂ, ಇದು ಕೇವಲ ದೇವಾಲಯಗಳಲ್ಲಿದ್ದ ಕಣ್ಣುಕುಕ್ಕುವಂತಹ ಐಶ್ವರ್ಯದ ಲೂಟಿಗಾಗಿ ನಡೆದುದು, ಎಂದೇ ಈ ದೇಶದ್ರೋಹಿ ಇತಿಹಾಸಕಾರರು ಬರೆದಿಟ್ಟರು.
ಆದರೆ, ಇಸ್ಲಾಮೀ ಆಸ್ಥಾನ ಇತಿಹಾಸಕಾರರ, ಮುಸ್ಲಿಂ ಕಥನಕಾರರ ಹೇಳಿಕೆಗಳು ನಿಸ್ಸಂದಿಗ್ಧವಾಗಿವೆ. ಈ ಪುರಾವೆಗಳಲ್ಲಿ ರಾಮನ ಮತ್ತು ಕೃಷ್ಣನ ದೇವಾಲಯಗಳನ್ನು ಧ್ವಂಸ ಮಾಡಿ ಮಸೀದಿ ಕಟ್ಟಿರುವ ಬಗೆಗಿನ ಔರಂಗಜೇಬನ ಮೊಮ್ಮಗಳ ಪತ್ರದ ಆಧಾರವೂ ಇದೆ.
ಇದನ್ನೂ ಓದಿ | ನನ್ನ ದೇಶ ನನ್ನ ದನಿ | ಪ್ರಾಚೀನ ಭಾರತದಲ್ಲಿ ಬೇಹುಗಾರಿಕೆಯ ಹೆಜ್ಜೆಗುರುತುಗಳು
ದಾಖಲೆಗಳಲ್ಲಿ ಐರೋಪ್ಯ ಪ್ರವಾಸಿಗಳ ಕಥಾನಕಗಳೂ ಇವೆ. ಅಂತೆಯೇ ಬ್ರಿಟಿಷರ ಆಡಳಿತಾವಧಿಯ ಅಧಿಕೃತ ಪ್ರಕಟಣೆಗಳೂ ಇವೆ. 1854, 1877, 1881, 1892, 1905 ಈ ವರ್ಷಗಳ ಭೂವಿವರ ದೇಶವಿಷಯಕ ವಿಶ್ವಕೋಶಗಳೂ (Gazetteers) ಇವೆ. ವಸಾಹತುಗಳು ತಮ್ಮ ವಸಾಹತುಶಾಹಿ ಬ್ರಿಟಿಷ್ ಪ್ರಭುಗಳಿಗೆ ಕಳುಹಿಸುತ್ತಿದ್ದ 1880ರ ಸೆಟ್ಲ್‌ಮೆಂಟ್ ರಿಪೋರ್ಟುಗಳಿವೆ. 1938ರ ಮೋಜಣಿದಾರರ ವರದಿಯಿದೆ. 1891 ಮತ್ತು 1934ರ ಪುರಾತತ್ತ್ವಶಾಸ್ತ್ರಜ್ಞರ ವರದಿಗಳಿವೆ. ಇವೆಲ್ಲವೂ ಮುಸ್ಲಿಂ ಇತಿಹಾಸಕಾರರು ದಾಖಲಿಸಿರುವುದನ್ನೇ ಪುನರ್ ದೃಢೀಕರಿಸುತ್ತವೆ. ಈ ಎಲ್ಲ ದಾಖಲೆಗಳೂ ಹೇಳುವುದು ದೇವಾಲಯವನ್ನು ನಾಶ ಮಾಡಿ ಮಸೀದಿ ಕಟ್ಟಲಾಗಿದೆ ಎಂದೇ. ಧ್ವಂಸಗೊಂಡ ದೇವಾಲಯಗಳ ಸ್ತಂಭಗಳು ಈಗಲೂ ಮಸೀದಿಯ ಕಂಬಗಳಾಗಿವೆ. ಹಿಂದೂಗಳು ಈ ಪವಿತ್ರ ತಾಣವನ್ನು ನಿರಂತರವಾಗಿ ಆರಾಧಿಸಿಕೊಂಡೇ ಬಂದಿದ್ದಾರೆ ಹಾಗೂ ಈ ತಾಣದ ಮೇಲಿನ ನಿಯಂತ್ರಣವನ್ನು ಮತ್ತೆ ಸಾಧಿಸಲು ಹಿಂದೂಗಳು ಶತಶತಮಾನಗಳಿಂದ ಅವಿಶ್ರಾಂತವಾಗಿ ಹೋರಾಟ ಮಾಡುತ್ತಿದ್ದಾರೆ, ಎಂಬುದನ್ನೇ ಇವು ಹೇಳುತ್ತವೆ. ನೂರು ವರ್ಷಗಳ ಕಾಲಾವಧಿಗೆ ಸೇರುವ ಕಂದಾಯ ಇಲಾಖೆಯ ದಾಖಲೆಗಳಿವೆ. ಇವೆಲ್ಲವೂ ಈ ತಾಣವನ್ನು “ಜನ್ಮಸ್ಥಾನ್” ಎಂದೇ ನಮೂದಿಸುತ್ತವೆ ಮತ್ತು ಈ ಆಸ್ತಿಯು ಮಹಂತರಿಗೆ ಸೇರುತ್ತದೆ ಎಂದೂ ದಾಖಲಿಸಿವೆ. ಈ ಕಂದಾಯ ಇಲಾಖೆಯ ದಾಖಲೆಗಳಲ್ಲಿ “ಜನ್ಮಸ್ಥಾನ್-ಮಸೀದಿ” ಎಂದೇ ಬರೆಯಲಾಗಿದೆ. ಜನ್ಮಸ್ಥಾನವೇ ಅಲ್ಲದಿದ್ದರೆ, “ಜನ್ಮಸ್ಥಾನ್-ಮಸೀದಿ” ಎಂಬ ಹೆಸರಾದರೂ ಹೇಗೆ ಹುಟ್ಟುತ್ತಿತ್ತು, ಎಂಬುದು ಸರಳವಾದ ತಿಳಿವಳಿಕೆಯ ಸಂಗತಿ.
ಭಾರತೀಯರಿಗೆ ಪವಿತ್ರ ತಾಣಗಳು ಅಪಾರ ಶ್ರದ್ಧೆಯ ಕೇಂದ್ರಗಳು. ವಿಧ್ವಂಸಕರು ಆ ತಾಣಗಳಲ್ಲಿನ ದೇವಾಲಯಗಳನ್ನು ನಾಶ ಮಾಡಿದರೂ, ಅದೇ ತಾಣದಲ್ಲಿ ಅವರು ತಮ್ಮ ಪೂಜೆ – ಉತ್ಸವಗಳನ್ನು ಮಾಡಿಯೇ ತೀರುವವರು. ರಾಮ ಜನ್ಮಭೂಮಿಯಿರಲಿ, ಕೃಷ್ಣ ಜನ್ಮಸ್ಥಾನವಿರಲಿ ಆ ತಾಣಗಳು ಬದಲಾಗುವಂತಹುವಲ್ಲವಲ್ಲ.
ಐರೋಪ್ಯರ ದಾಖಲೆಗಳಲ್ಲಿ ಪ್ರಾಯಶಃ ಅತ್ಯಂತ ಮಹತ್ತ್ವದ್ದು ಎಂದರೆ, ಆಸ್ಟ್ರಿಯಾ ದೇಶದ ಮೂಲದ 18ನೆಯ ಶತಮಾನದ ಪ್ರವಾಸಿ ಜೋಸೆಫ್ ಟೀಫೆನ್‌ಟಾಲರ್‌ನದ್ದು. ಬಾಬರಿ ಮಸೀದಿಯ ಅಂಗಳದಲ್ಲಿ ಹಿಂದೂಗಳು ಹೇಗೆಲ್ಲಾ ಪೂಜೆ ಮಾಡುತ್ತಿದ್ದರು, ಅದೆಷ್ಟು ಸಂಭ್ರಮದಿಂದ ರಾಮನವಮಿ ಆಚರಿಸುತ್ತಿದ್ದರು, ರಾಮಜನ್ಮಭೂಮಿ ದೇವಾಲಯವನ್ನು ಧ್ವಂಸ ಮಾಡಿ ಮಸೀದಿಯನ್ನು ಬಲವಂತದಿಂದ ನಿರ್ಮಿಸಿದ್ದಾರೆ ಎಂದು ಅವರಲ್ಲಿ ಪ್ರತಿಯೊಬ್ಬರೂ ಹೇಗೆಲ್ಲಾ ನಂಬಿದ್ದರು ಎಂಬ ವಿವರಗಳಿವೆ. ಈ ಧ್ವಂಸ ನಡೆದುದರ ಬಗ್ಗೆ, ಈ ಟೀಫೆನ್‌ಟಾಲರ್‌ನ ದಾಖಲೆಗಳಲ್ಲಿ ವಿವರವಾದ ಚಿತ್ರಣವಿದೆ.
ಇದನ್ನೂ ಓದಿ | ನನ್ನ ದೇಶ ನನ್ನ ದನಿ | ಕನ್ನಡ ಸಂಸ್ಕೃತಿಯನ್ನು ಉಳಿಸಿದ- ಬೆಳೆಸಿದ ಮೈಸೂರು ಒಡೆಯರ್ ರಾಜವಂಶ
1975ರಿಂದ 1980ರ ಅವಧಿಯಲ್ಲಿ ನಡೆದ ಪುರಾತತ್ತ್ವಶಾಸ್ತ್ರೀಯ ಉತ್ಖನನಗಳಲ್ಲಿ ಬಹಳ ಮುಖ್ಯವಾದ ವಿವರಗಳಿವೆ ಮತ್ತು ಅವು ನಿರ್ಣಾಯಕವಾಗಿವೆ. ಸ್ತಂಭಗಳ ಅಡಿಯ ಆಧಾರಗಳು, ಸ್ತಂಭಗಳು, ಬಾಗಿಲು ಚೌಕಟ್ಟುಗಳು, ಅವುಗಳ ವಿವಿಧ ಸ್ತರಗಳ ಕಾಲಾವಧಿ ನಿರ್ಣಯಗಳು, ಸ್ತಂಭಗಳ ಆಧಾರಗಳ ಜೋಡಣೆ ಮತ್ತು ಸ್ತಂಭಗಳಿಗಾಗಿ ಉಪಯೋಗಿಸಿರುವ ಶಿಲೆಗಳ ಕಾಲಾವಧಿ ನಿರ್ಣಯಗಳು ಎಲ್ಲವೂ ಸುಸಂಬದ್ಧವಾಗಿ ತಾಳೆಯಾಗುತ್ತವೆ, ಹೊಂದಿಕೊಳ್ಳುತ್ತವೆ.
ಆದರೇನು, ಮೂರ್ನಾಲ್ಕು ದಶಕಗಳ ಹಿಂದೆಯೂ, ಹಿಂದೂ ವಿರೋಧೀ ಶಕ್ತಿಗಳ ಅಟ್ಟಹಾಸ, ಷಡ್ಯಂತ್ರಗಳಿಗೆ ಇತಿಮಿತಿ ಇರಲಿಲ್ಲ. ಪರಮತಗಳನ್ನು ಗೌರವಿಸುವ, ಆದರಿಸುವ ಭಾರತೀಯರು ಅನಿರ್ವಾಹವಾಗಿ ಧ್ವಂಸಕ್ಕೆ ಇಳಿದುದು ಇತಿಹಾಸದ ಅಭೂತಪೂರ್ವ ತಿರುವು. ದಿಕ್ಕುಗೆಡಿಸುವ ಮೆಕಾಲೆವಾದೀ ದುಷ್ಪ್ರಚಾರಕ್ಕೆ ಜನಸ್ತೋಮವು ಅಂದು ತಲೆಕೆಡಿಸಿಕೊಳ್ಳಲಿಲ್ಲ. ರಾಷ್ಟ್ರೀಯ ವಿಚಾರಧಾರೆಯು ವಿಶ್ವಹಿಂದೂ ಪರಿಷತ್ತಿನ ನೇತೃತ್ವದಲ್ಲಿ ಇಡೀ ದೇಶದಲ್ಲಿ ಮೂಡಿಸಿದ ಸಂಚಲನ ಅಭೂತಪೂರ್ವವಾದುದು. ಆ ಕಾಲಘಟ್ಟವನ್ನು ನೆನಪಿಸಿಕೊಂಡರೆ ರೋಮಾಂಚನವಾಗುತ್ತದೆ. ಜಡತ್ವವನ್ನು ಕೊಡವಿಕೊಂಡು ಅಂದು ಶತಮಾನಗಳ ಸುಷುಪ್ತಿಯ ಅನಂತರ ಹಿಂದೂ ಘರ್ಜಿಸತೊಡಗಿದ್ದ. ಮುಲಾಯಂ ಸಿಂಗ್ ಯಾದವ್ ಅವರ ಗೋಲೀಬಾರಿಗೂ ಹೆದರದೆ, ನಿಷೇಧಾಜ್ಞೆ ಕರ್ಫ್ಯೂಗಳಿಗೂ ಹೆದರದೆ ಮುನ್ನುಗ್ಗಿ “ಭಾರತೀಯರದ್ದು ವೀರಪರಂಪರೆ, ಹೇಡಿಗಳ ಪರಂಪರೆ ಅಲ್ಲ” ಎಂಬ ಪ್ರಥೆಯನ್ನು ಮತ್ತೊಮ್ಮೆ ರುಜುವಾತುಪಡಿಸಿದ ಆ ಮಹಾನ್ ಯೋಧರ ಬಲಿದಾನವನ್ನು ಇಂದು ಗೌರವಪೂರ್ವಕವಾಗಿ ಸ್ಮರಿಸಬೇಕಾಗಿದೆ.
ಅಯೋಧ್ಯೆಯ ಆ ಪರಮಪವಿತ್ರ ತಾಣದಲ್ಲಿಯೇ ಭವ್ಯವಾಗಿ ನಿರ್ಮಾಣವಾಗುತ್ತಿರುವ ರಾಮಜನ್ಮಭೂಮಿ ದೇವಾಲಯವು ಆ ಯೋಧರ ಬಲಿದಾನದ ಸಾರ್ಥಕ್ಯದ ಸಂಕೇತ.